ಯತಿ ಸ್ವಂತೀ -123


03-05-2018

ನಮ್ಮ ಅಯ್ಯ ಬೆಳಗ್ಗೆ 6.50ಕ್ಕೆ ಮನೆ ಬಿಡುತ್ತಿದ್ದರು. ಅಷ್ಟರಲ್ಲಿ ತಿಂಡಿ ತಿಂದು ಊಟದ ಬುತ್ತಿ ತಗೊಂಡು ಹೊರಡುತ್ತಿದ್ದರು.
ಮನೆಗೆ ಜೋರಾಗಿ ಕೇಳಿಸುತ್ತಿತ್ತು ಸೈರನ್. ಅದು ದಿನಕ್ಕೆ ಎರಡು ಸಲ ಕೂಗುತ್ತಿತ್ತು. ಬೆಳಗ್ಗೆ ಏಳು ಮತ್ತು ಸಂಜೆ ಐದು ಗಂಟೆ. ಇದರ ನೈಜ ಉಪಯೋಗ ಯಾವುದಾದರೂ ರೈಲು ಅಪಘಾತ ಆದಾಗ. ಏಕೆಂದರೆ ರೈಲುಗಳಿಗೆ ಸಂಬಂಧ ಪಟ್ಟವರೆಲ್ಲ ಅಪಘಾತದ ಸ್ಥಳ ತಲುಪಲು ಮನೆಯಿಂದ ರೈಲ್ವೇ ನಿಲ್ದಾಣಕ್ಕೆ ಧಾವಿಸುತ್ತಿದ್ದರು. ಜನರಿದ್ದ ರೈಲಿಗೆ ಅಪಘಾತವಾದರೆ ಒಂಬತ್ತು ಸಲ ಮತ್ತು ಗೂಡ್ಸ್ ರೈಲಾದರೆ ಏಳು ಸಲ ಕೂಗುತ್ತಿತ್ತು. ಆದರೆ ಬಳಸದೇ ಬಳಸದೇ ಅದಕ್ಕೆ 'ಗಂಟಲು' ಕಟ್ಟಿ ತುರ್ತು ಸಮಯದಲ್ಲಿ ಒಮ್ಮೆ ಕೂಗಲಿಲ್ಲ. ಅದಕ್ಕೇ 7 ಮತ್ತು 5 ಗಂಟೆಗೆ ಕೂಗಿಸುವ ಪರಿಪಾಠ ಆರಂಭವಾಗಿತ್ತು.
ಅಯ್ಯ ಅವರ ರೈಲು ಏಳು ಗಂಟೆಗೆ ಹೊರಡುತ್ತಿತ್ತು. ಅದೊಂದು ವಿಶೇಷ ರೈಲು. ಮೈಸೂರು, ಚಾಮರಾಜಪುರಂ ಆದ ನಂತರ ಅಶೋಕಪುರಂ. ಅಲ್ಲಿ ಇದ್ದ ವರ್ಕ್‌ಶಾಪ್‌ನಲ್ಲಿ ನಮ್ಮ ಅಯ್ಯ ಎಲೆಕ್ಟ್ರಿಕಲ್ ಛಾರ್ಜ್‌ಮನ್ ಆಗಿದ್ದರು. ಇಂಟರ್‍‌ನಲ್ಲಿ (ಪಿಯುಸಿ)ಬಾಟನಿ ಓದಿದ ಅಯ್ಯ ಎಲೆಕ್ಟ್ರಿಕಲ್ ಕೆಲಸ ಕಲಿತು ಉದ್ಯೋಗಕ್ಕೆ ಸೇರಿದ್ದರು.
ನನ್ನ ಅಯ್ಯ ಅವರ ಅಯ್ಯ ರಾಮಾನುಜಂ ವೀರಾಂಬುಧಿ. ಅವರ ಹೆಸರೇ ನನ್ನದು. ನನ್ನ ಜನ್ಮ ನಾಮ. ಆಮೇಲೆ  ರಾಮಾನುಜಾಚಾರ್ಯರ (ನಮ್ಮ ಗುರುಗಳು) ಮತ್ತೊಂದು ಹೆಸರಾದ ಯತಿರಾಜ್ ಎಂದು ಇಟ್ಟರು.
ಇತ್ತೀಚೆಗೆ ರಾಮಾನುಜಾಚಾರ್ಯರ ಸಾವಿರ ವರ್ಷಗಳ ಸಂಭ್ರಮದಲ್ಲಿ 'ಭಜ ಯತಿರಾಜಂ' ಹಾಡು ಕಿವಿಗೆ ಬಿದ್ದಿತ್ತು.
ಯತಿರಾಜ್ ಎಂದು ತಮಿಳುನಾಡು ಕಡೆ ಹೆಂಗಸರ ಹೆಸರೂ ಇದೆಯಂತೆ. ಚೆನ್ನೈನಲ್ಲಿ ಒಂದು ಕಾಲೇಜಿನ ಹೆಸರು ಕೂಡ ಎತಿರಾಜ್ ಕಾಲೇಜ್...
ನಾನು, ನನ್ನ ದೊಡ್ಡ ತಂಗಿ ಶಾಲೆಗೆ ಸಿದ್ಧವಾಗುತ್ತಿದ್ದೆವು. ವಯಸ್ಸು ಇಬ್ಬರ ನಡುವೆ 20 ತಿಂಗಳುಗಳೇ ಆಗಿದ್ದರಿಂದ ಸಿಬ್ಲಿಂಗ್ ರೈವಲ್ರೀ ಇತ್ತು. ಆ ಪದ ಗೊತ್ತಿರಲಿಲ್ಲ. ಆದರೆ ಪಾಪ.. ಅವಳನ್ನು ಪರಚಿ, ಹೊಡೆದು, ಅವಳ ತಲೆಯನ್ನು ಗೋಡೆಗೆ ಗುದ್ದಿ... ಎಲ್ಲವನ್ನೂ ಮಾಡಿದ್ದೇನೆ.
ಅಯ್ಯನ ಬಳಿ ಸ್ವಲ್ಪ ಭಯ ಇತ್ತು. ತಂಗಿಯನ್ನು ಬಹಳ ಗೋಳು ಹುಯ್ದುಕೊಡಾಗ ಅಯ್ಯನ ಬಳಿ ಪೆಟ್ಟು ತಿಂದ ನೆನಪಿದೆ.
ಕೋಪ ನಮ್ಮ ಅಯ್ಯನಿಗೆ ಕಡಿಮೆ. ನನಗೆ ನನ್ನ ತಾತನ ಬಳುವಳಿ ಆಗಿತ್ತು ಈ ಕೋಪ.
1952ರಲ್ಲಿ ನನ್ನ ಅಮ್ಮ ಅಯ್ಯನ ಮದುವೆ ಆಗಿತ್ತು. ನನ್ನ ಜನನ 1957.
ನಾನು ಹುಟ್ಟುವೆ ಎಂಬ ಸುದ್ದಿ ಕಿವಿಗೆ ಬಿದ್ದೊಡನೆ ನನ್ನ ತಾತ ರಾಮಾನುಜಂ ತೀರಿಕೊಂಡರಂತೆ. ನನ್ನ ಸ್ವಭಾವ ನೋಡಿದ ಅವರ ಪತ್ನಿ ನನ್ನ ಅಜ್ಜಿ ವೇಂಗಡಮ್ಮ ನೀನು ತಾತನನ್ನೇ ಹೋಲುತ್ತೀ ನಿನ್ನ ಸ್ವಭಾವದಲ್ಲಿ. ಎಲ್ಲೋ ಅವರೇ ಮತ್ತೆ ಹುಟ್ಟಿ ಬಂದಿದ್ದಾರೇನ್ಸುತ್ತೆ ಎನ್ನುತ್ತಿದ್ದರು.
ನನ್ನ ಅಮ್ಮ ಕೂಡ ಅಬ್ಬಾ ತಾತನ ಅಪರಾವತಾರ ಅಂದಿದ್ದ ನೆನಪಿದೆ.
ಅಮ್ಮ ಅಂದು ಮನೆ ಒರೆಸುತ್ತಿದ್ದರಂತೆ. ಆಗ ನಾನು ಹೊರಬರಬೇಕೆಂದು ಒದೆಯಲು ಆರಂಭಿಸಿದೆನಂತೆ. ಮೈಸೂರು ಜಯಲಕ್ಷ್ಮೀಪುರಂ ಲಕ್ಷ್ಮೀದೇವಮ್ಮ ಆಸ್ಪತ್ರೆಯಲ್ಲಿ ರಾತ್ರಿ 9.15...ಆಗಸ್ಟ್ 11 ನನ್ನ ಜನನ ಆಯಿತು.
                      -0-0-0-0-0 -

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102