ಯತಿ ಸ್ವಂತೀ -122
12-05-2018
ಹಸಿರು ತೋರಣ ನೋಡಿದ ನೆನಪಿದೆ. ಅದರಲ್ಲಿ ರಾಜ್ ತಮ್ಮ ‘ನಾರಾಯಣ, ವೈಕುಂಠ’ ಅಂತ ಕಾಗದವನ್ನು ಅಂಚೆ ಡಬ್ಬಕ್ಕೆ ಹಾಕೋಕ್ಕೆ ಪ್ರಯತ್ನಿಸೋದು. ಭಾರತಿಯ ತಂದೆ ಅಶ್ವತ್ಥ್ ಅದನ್ನು ಪೋಸ್ಟ್ ಮಾಡಿ, ಅಂಚೆ ಕಛೇರಿಯಲ್ಲಿ ಅದನ್ನು ಪಡೆದು ಆ ಹುಡುಗನ ಅಭಿಲಾಷೆಗಳನ್ನು ತೀರಿಸಲು ಯತ್ನಿಸೋದು, ನರಸಿಂಹರಾಜುವಿನ ಹನುಮಂತನ ಪಾತ್ರ, ಒಳ್ಳೊಳ್ಳೆಯ ಹಾಡುಗಳು (ನೀ ಯಾರೋ ಏನೋ ಸಖಾ, ಒಂದು ದಿನ ಎಲ್ಲಿಂದಲೋ ನೀ ಬಂದೆ) ನೆನಪಿದೆ.
ಮನೆಯ ಬಳಿ ಇದ್ದ ನನ್ನ ತಂಗಿಯ ಗೆಳತಿ ಪದ್ದುವಿನ ಮನೆಯಲ್ಲಿ ಬಹಳ ಸಿನಿಮಾ ನೋಡುತ್ತಿದ್ದರು. ಅವರ ಮನೆಯಲ್ಲೇ ನಾನು ಸಿನಿಮಾ ಪುಸ್ತಕಗಳನ್ನು ಕಂಡಿದ್ದು. ಎಂಟು ಪುಟಗಳ ಪುಟ್ಟ ಪುಸ್ತಕ. ಅದರಲ್ಲಿ ಮುಂದೆ ಸಿನಿಮಾದ ಹೆಸರು, ಕಲಾವಿದರ ಫೋಟೋಗಳು.
ಎರಡನೇ ಪುಟದಲ್ಲಿ ತಾರಾಗಣ. ಮೂರನೆ ಪುಟ ಮತ್ತು ನಾಲ್ಕನೆ ಪುಟದಲ್ಲಿ ಪುಟ್ಟದಾಗಿ ಮೊದಲಾರ್ಧದ ಕಥೆ. ಆಮೇಲೆ... ಮುಂದಿನದನ್ನು ರಜತಪರದೆಯ ಮೇಲೆ ನೋಡಿ ಆನಂದಿಸಿ ಎಂದು ಬರೆದಿರುತ್ತಿತ್ತು. ಆಮೇಲೆ ಆ ಸಿನಿಮಾದ ಹಾಡುಗಳು. ಬರೆದೋರು, ಹಾಡಿರೋರು ವಿವರಗಳು.
ಅವರ ಮನೆಗೆ ಎರಡು ವಾರಗಳಿಗೊಮ್ಮೆ ಹೋಗಿ ಇವನ್ನು ಓದುತ್ತಿದ್ದೆ.
ನನ್ನ ಇನ್ನೊಬ್ಬ ಗೆಳೆಯ ಪ್ರಸಾದ್. ಅವನ ಮನೆ ನಮ್ಮ ಮನೆಯಾಚೆ ರೈಲ್ವೇ ಸ್ಟೇಷನ್‍ನ ಬಳಿಯ ರೈಲ್ವೇ ಷೆಡ್ ಬಳಿ ಇತ್ತು. ನಮ್ಮ ಮನೆಗೆ ಅವರ ಮನೆ ಕಾಣುತ್ತಿತ್ತು. ಬಹಳ ಜನ ಪ್ರಸಾದ್‍ಗಳು ಗೊತ್ತಿದ್ದರಿಂದ ಅವನು ಮಹಡಿ ಪ್ರಸಾದ್ ಆಗಿದ್ದ. ಅವರು ಮನೆಯಲ್ಲಿ ತೆಲುಗು ಮಾತಾಡುತ್ತಿದ್ದರು.
ಅವರ ಮನೆಯಲ್ಲಿ ನಾನು ಆಂಧ್ರಪ್ರಭ ತೆಲುಗು ವಾರಪತ್ರಿಕೆಯನ್ನು ಮೊದಲ ಬಾರಿಗೆ ಕಂಡೆ. ತೆಲುಗಿನ ಅಕ್ಷರಗಳು ಕನ್ನಡದಂತೆಯೇ ಇದೆಯಲ್ಲ ಎಂದುಕೊಂಡು ಓದಲು ಪ್ರಯತ್ನಿಸುತ್ತಿದ್ದೆ. ಆಗಿನ ಕಾಲದ ಎನ್.ಟಿ.ರಾಮರಾವ್, ವಾಣಿಶ್ರೀ, ಎ. ನಾಗೇಶ್ವರರಾವ್ ಮುಂತಾದವರ ಕಪ್ಪುಬಿಳುಪು ಚಿತ್ರಗಳನ್ನು ಆ ಪತ್ರಿಕೆಯಲ್ಲಿ ನೋಡಿ ಓದಲು ಪ್ರಯತ್ನಿಸುತ್ತಿದ್ದೆ.
ಆ ತೆಲುಗು ಪತ್ರಿಕೆಯಲ್ಲಿ ಫುರ್ ಫುರ್ ಕಿ ಕಹಾನಿ ಎಂದು ಒಮ್ಮೆ ಓದಿದಾಗ ಅದು ಘರ್ ಘರ್ ಕಿ ಕಹಾನಿ ಎಂದು ತಿದ್ದಿದ್ದರು ಪ್ರಸಾದ್ ಅಕ್ಕಂದಿರು. ಅವನ ಮೂವರು ಅಕ್ಕಂದಿರಲ್ಲಿ ಎರಡು ಮತ್ತು ಮೂರನೆಯವರೊಂದಿಗೆ ಸ್ವಲ್ಪ ಹೆಚ್ಚಿಗೆ ಮಾತಾಡುತ್ತಿದ್ದೆ. ಕೆಲವೊಮ್ಮೆ ಅವರು ನೋಡಿ ಬಂದ ತೆಲುಗು ಸಿನಿಮಾಗಳ ಕಥೆಗಳನ್ನು ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದೆವು.
ನಾನು, ಪ್ರಸಾದ್ ಮತ್ತು ಪ್ರಕಾಶ್ (ಇವನು ಪ್ರಸಾದನ ತಮ್ಮ) ಮೂವರೂ ದಸರಾ ವಸ್ತುಪ್ರದರ್ಶನದ ಸ್ಟುಡಿಯೋದಲ್ಲಿ ಫೋಟೋ ತೆಗೆಸಿಕೊಂಡೆವು. ಅದರ ಪ್ರತಿ ನನ್ನ ಬಳಿ ಇನ್ನೂ ಇದೆ. ಬಹುಶಃ ಇದು 1968ರಲ್ಲಿ ತೆಗೆಸಿಕೊಂಡಿದ್ದಿರಬೇಕು.
ರೈಲ್ವೇ ಶೆಡ್‍ನಲ್ಲಿ ಮಹಾರಾಜರ ಸಲೂನ್ ಇತ್ತು. ಅಂದರೆ ಅವರಿಗಾಗಿ ಎರಡು ಡಬ್ಬಗಳ ಒಂದು ವಿಶೇಷ ರೈಲು. ಅತ್ಯಂತ ಸುಂದರವಾದ ರೈಲಾಗಿತ್ತು ಅದು. ಮಹಾರಾಜರಿಗಲ್ಲವೇ?
ಆಗಿನ್ನೂ ಮಹಾರಾಜರಿದ್ದರು. ಬಹುಶಃ ಅವರ ಮಹಾರಾಜತನ ಹೋಗುವ ಮುಂಚೆ ಅವರ ಕೊನೆಯ ಜಂಬೂಸವಾರಿ ನೋಡಿದ ನೆನಪಿದೆ.
-0-0-0-
Comments
Post a Comment