ಯತಿ ಸ್ವಂತೀ -122


02.05.2018

ಪ್ರೈಮರಿ ಶಾಲೆಗೆ ಬಹಳ ದೂರ ಹೋಗಬೇಕಿರಲಿಲ್ಲ. ಸಮವಸ್ತ್ರ ಇತ್ತೋ ಇಲ್ಲವೋ ನೆನಪಿಲ್ಲ. ಬಹುಶಃ ರೈಲ್ವೇ ಉದ್ಯೋಗಿಗಳ ಮಕ್ಕಳೆಲ್ಲಾ ಅಲ್ಲೇ ಬರುತ್ತಿದ್ದರು. ನನ್ನ ಬಾಲ್ಯ ಮತ್ತು ಕಿಶೋರಾವಸ್ಥೆ ಒಂದೇ ಮನೆಯಲ್ಲಿ ಕಳೆಯಿತು.
ಕೆಲವು ಶಬ್ದಗಳನ್ನು ನಾವು ಕೇಳದೇ ಇದ್ದ ದಿನವಿಲ್ಲ. ವೈಪೀ ವೈಡೀ ಸ್ಟೀಂ ಎಂಜಿನ್‌ಗಳು ಬಿಎಂಶ್ರೀ ಅವರ ವಸಂತ ಬಂದ ಹಾಡಿನ 'ಕೂವು ಝಗ್ ಝಗ್' ಸದ್ದು ಮಾಡುತ್ತಿದ್ದವು. ಹೆಚ್ಚಿನ ಆವಿಯನ್ನು ಬ್ಲೋ ಡೌನ್ ಮಾಡುತ್ತಿದ್ದರು. ಡಭಾರ್ ಎನ್ನುವ ಸದ್ದು ಮನೆಯ ವರೆಗೆ ಕೇಳಿಸುತ್ತಿತ್ತು. ಸಾಮಾನ್ಯವಾಗಿ ಬ್ಲೋ ಡೌನ್ ನಮ್ಮ ಶಾಲೆಯ ಮುಂದೆ ಆಗುತ್ತಿತ್ತು.
ಶಾಲೆಯ ಮುಂದೆಯೇ ಅರಸೀಕೆರೆ ಮತ್ತು ಬೆಂಗಳೂರಿನ ರೈಲುಗಳು ಹಾದು ಹೋಗುತ್ತಿದ್ದವು. ಎಬಿಸಿ.. ಅಂದರೆ ಅರಸೀಕೆರೆ ಬೆಂಗಳೂರು ಮತ್ತು ಚಾಮರಾಜನಗರ. ಅದು ಈ ದಿಕ್ಕಿನ ವಿರುದ್ಧ ದಿಕ್ಕಿನಲ್ಲಿ ಅಂದರೆ ದಕ್ಷಿಣಕ್ಕೆ ಹೋಗುತ್ತಿತ್ತು. ನಂಜನಗೂಡು, ಕಡಕೊಳ ಆ ಹಾದಿಯಲ್ಲಿನ ಎರಡು ನಿಲ್ದಾಣಗಳು.
ಮನೆಯ ಮುಂದೆ ಒಂದು ಫೀಲ್ಡ್. ಅದರಾಚೆ ರೈಲು ಕಂಬಿಗಳು. ಒಂದು ಮೋರಿ (ನಮ್ಮ ಮನೆಯ ಮೀನುಗಳ ತವರುಮನೆ!) ಒಂದು ಅಪ್ ಹತ್ತಿದರೆ ದೊಡ್ಡ ಫೀಲ್ಡ್. ಅದರ ಆಚೆ ನಮ್ಮ ರೈಲ್ವೇ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ. ಸ್ವಲ್ಪ ಬಲಗಡೆಗೆ ಡಿಸ್ಪೆನ್ಸರಿ. ಅದರಾಚೆ ಸೆಂಟ್ರಲ್ ಫುಡ್  ಟೆಕ್ನಲಾಜಿಕಲ್ ರೀಸರ್ಚ್ ಇನ್ಸ್‌ಟಿಟ್ಯೂಟ್ (ಸಿ ಎಫ್ ಟಿ ಆರ್ ಐ). ಅದರ ಮುಂದಿನ ರಸ್ತೆ ಕೆ. ಆರ್. ಎಸ್ ರಸ್ತೆ. ಕೃಷ್ಣ ರಾಜ ಸಾಗರ ರಸ್ತೆ. ಅದರ ಮೇಲೆ ಹೋದರೆ ಒಂದು ಕಡೆ ಒಂಟಿಕೊಪ್ಪಲ್ ಮತ್ತೊಂದು ಕಡೆ ಸಿಟಿ.
ಅದೇಕೆ ಸಿಟಿ ಎನ್ನುತ್ತಿದ್ದೆವೋ ತಿಳಿಯದು. ಬಹುಶಃ ಅಂಗಡಿಗಳು, ಊರಾಚೆ ಹೋಗಲು ಹತ್ತುವ ಬಸ್‌ಗಳ ನಿಲ್ದಾಣ, ಅರಮನೆ, ಟಾಕೀಸುಗಳು ಎಲ್ಲವೂ ಇದ್ದವು.
ಸಿಟಿ ನಮಗೆ ವಾಕಬಲ್. ಮನೆಯಿಂದ ಹೊರಟು ಕಂಬಿಗಳ ಮೇಲೆ ನಡೆದು ಅನೇಕ ಸ್ಥಗಿತ ರೈಲುಗಳ ಒಳಗೆ ಹತ್ತಿ ಇಳಿದ, ಅಥವಾ ಎರಡು ಗಾಡಿಗಳ ನಡುವಿನ ಲಿಂಕ್ ಮೇಲೆ ಹತ್ತಿ ಇಳಿದೋ ಸ್ಟೇಶನ್ ತಲುಪುತ್ತಿದ್ದೆವು.
ಗೇಟ್‌ನಲ್ಲಿ ಟಿಕೆಟ್ ಕಲೆಕ್ಟರ್ ಇದ್ದರೆ ಕ್ವಾಟ್ರಸ್ ಎನ್ನುತ್ತಿದ್ದೆವು. ನಮ್ಮನ್ನು ಹೊರಗೆ ಬಿಡುತ್ತಿದ್ದರು. ನನ್ನ ನಾನ್ ರೈಲ್ವೇ ಗೆಳೆಯರು ನಾವೂ ಹೀಗೇ ಮಾಡ್ತೀವಿ. ಪ್ಲಾಟ್‍ಫಾರ್ಮ್ ಟಿಕೆಟ್ ದುಡ್ಡು ಉಳಿಯುತ್ತದೆ ಅಂತಿದ್ರು!
ಹೊರಗೆ ಜೀವನರಾಯನ ಕಟ್ಟೆ. ಅದರೊಳಗಿಂದ ಹೋದರೆ ಧನ್ವಂತರಿ ರಸ್ತೆಯ ಆರಂಭ. ಗಾಯತ್ರಿ ಭವನ್ ಮುಂದಿನಿಂದ ಹೋದರೆ ದೇವರಾಜ ಮಾರ್ಕೆಟ್. ನಮ್ಮ ತರಕಾರಿ, ದಿನಸಿ ಅಂಗಡಿಗಳ ಸಮುಚ್ಚಯ.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102