ಯತಿ ಸ್ವಂತೀ -121
01-05-2018
ನನಗೆ ನೆನಪಿರುವ ಮಟ್ಟಿಗೆ ದಾಖಲೆ ಮಾಡುತ್ತಿರುವ ಈ ಯತಿ ಸ್ವಂತೀಯಲ್ಲಿ ರಿಪಿಟಿಶನ್ ಇದ್ದರೆ ಪಾಪ ವಯಸ್ಸಾಯ್ತು ಅಂತ ದೊಡ್ಡ ಮನಸ್ಸು ಮಾಡಿ ಕ್ಷಮಿಸಿಬಿಡಿ..!
ನನ್ನ ಬಹಳ ಮೊದಲ ನೆನಪು ರೈಲ್ವೇ ಕಾಲೋನಿಯ ಮನೆಯ ಬಗ್ಗೆ.
ಒಂದು ಓಪನ್ ವರಾಂಡಾ (ಆಮೇಲೆ ಅದಕ್ಕೆ ಕ್ರಿಸ್ ಕ್ರಾಸ್ ಬಿದಿರಿನ ಟ್ರೆಲ್ಲಿಸ್ ಹಾಕಿ ಮುಚ್ಚಿದರು). ಒಂದು ಹಾಲ್... ಹಾಲ್ ಪಕ್ಕದಲ್ಲಿ ರೂಂ, ಹಾಲ್‌ನಿಂದ ಮುಂದೆ ಪ್ಯಾಸೇಜ್, ಎಡಗಡೆಗೆ ಬಾತ್ ರೂಮ್, ಬಲಗಡೆಗೆ ಸ್ಟೋರ್ ರೂಂ, ಅದರ ಪಕ್ಕದಲ್ಲೇ ಅಡುಗೆ ಮನೆ. ಪ್ಯಾಸೇಜಿಗೆ ಚೌಕಾಕಾರದ ತೂತುಗಳ ಗಟ್ಟಿ ಮರದ 'ಗೋಡೆ'. ಹಿಂದೆ ಖಾಲಿ ಜಾಗ ಎಡ ಅಂಚಿನಲ್ಲಿ ಟಾಯ್ಲೆಟ್. ಹೊರಬಾಗಿಲಿನಿಂದ ಹಿತ್ತಿಲಿನ ವರೆಗೆ ರೈಲಿನ ಹಾಗೆ ಹಾದಿ. ಕೊನೆಯಲ್ಲಿ ಮರದ ಬಾಗಿಲು. ಆರಡಿ ಗೋಡೆ. ಅದರಾಚೆ ಕನ್ಸರ್ವೆನ್ಸಿ. ಇಪ್ಪತ್ತು ಅಡಿಗಳಾಚೆ ಇನ್ನೊಂದು ಮನೆಯ ಹಿಂಬಾಗಿಲು.
ಹಿತ್ತಿಲಲ್ಲಿ ನೀರಿನ ದೊಡ್ಡ ತೊಟ್ಟಿ. ಒಗೆಯುವ ಕಲ್ಲು. ನಲ್ಲಿ. ಇಪ್ಪತ್ನಾಲ್ಕು ಗಂಟೆ ಕಾವೇರಿ ನೀರು. ಕಾಲೋನಿ ಪಕ್ಕದ ವಾಟರ್ ವರ್ಕ್ಸ್‌ನಲ್ಲಿ ಶುದ್ಧಗೊಂಡು ಬರುತ್ತಿದ್ದಳು ಕಾವೇರಿ.
ಕೆಂಪು ಮತ್ತು ಬಿಳಿ ಹಣ್ಣಿನ ಸೀಬೆ ಮರಗಳು. ಹುಳಿ ಮತ್ತು ಸಿಹಿ ದಾಳಿಂಬೆ ಮರಗಳು. ಒಂದೆರಡು ಗುಲಾಬಿ ಗಿಡಗಳು. ಕಾಕಡ ಗಿಡ.
ಹತ್ತಿರದ ಗಲೀಜು ನೀರಿನ ಮೋರಿಯಿಂದ ಗಪ್ಪಿ ಮೀನುಗಳನ್ನು ತಂದು ತೊಟ್ಟಿಯಲ್ಲಿ ಬಿಟ್ಟೆವು. ಅವಕ್ಕೆ ಆಟ ಆಡಲಿಕ್ಕೆ ಕಲ್ಲುಗಳಲ್ಲಿ ಗುಹೆಗಳು, ಜಲಸಸ್ಯಗಳು... ಅನೇಕ ರೀತಿಯ ತರಕಾರಿಗಳನ್ನು ಬೆಳೆದವು ಬೆಂಡೆಯಿಂದ ಬಟಾಣಿ ವರೆಗೆ.
ಅಮ್ಮ ನಮಗೆ ಸೂಪರ್ ಸಪೋರ್ಟು. ಅಯ್ಯ(ನಮ್ಮ ತಂದೆಯವರಿಗೆ ನಮ್ಮ ಸಂಬೋಧನೆ ಅಯ್ಯ) ಬೆಳಗ್ಗೆ ಕೆಲಸಕ್ಕೆ ಹೋದರೆ ಸಂಜೆ ಹಿಂದಿರುಗುತ್ತಿದ್ದರು.
ನಾನು ನನ್ನ ತಂಗಿ ಸುಮಾರು ವರ್ಷಗಳ ಕಾಲ ಇಬ್ಬರೇ. ನನಗೆ ಹತ್ತು ವರ್ಷ ಆಗಬೇಕಿದ್ದ ವರ್ಷ ನನ್ನ ಚಿಕ್ಕ ತಂಗಿ ಹುಟ್ಟಿದಳು.
ನನಗೆ ನಮ್ಮ ತಾಯ್ತಂದೆಯರ ಹೆಸರೇ ಸಖತ್ ಅನ್ನಿಸುತ್ತದೆ. ತಿರುಮಲೈ ಮತ್ತು ಯದುಗಿರಿ. ಅಂದರೆ ತಿಮ್ಮಪ್ಪನ ಬೆಟ್ಟ ಮತ್ತು ಚೆಲುವ ನಾರಾಯಣನ ಬೆಟ್ಟ. ಅಂದರೆ ನಾವು ಮೂವರೂ ಎರಡು ಬೆಟ್ಟಗಳ ಮಕ್ಕಳು. ಸ್ವಲ್ಪ ಜಾಸ್ತಿಯೇ ಗಟ್ಟಿ ನಾವು ಮೂವರೂ.
ಬಂದದ್ದನ್ನೆಲ್ಲಾ ಆ ಗೋವಿಂದನ ದಯೆ ಎಂದೂಕೊಳ್ಳುವವರು ನಾವು.
ನಮ್ಮ ಆಗಿನ್ನೂ ಮದುವೆ ಆಗದಿದ್ದ ಸೋದರತ್ತೆಯ ಹೆಸರೂ ಯದುಗಿರಿ. ಅದಕ್ಕೇ ನಮ್ಮ ಅಮ್ಮನ ಹೆಸರು ವಿಜಯ ಎಂದಿಟ್ಟರು. ಅದು ಕೂಡ ಎಲ್ಲರೂ ಬದುಕಲ್ಲಿ ಆಸೆ ಪಡುವ ವಿಷಯ.
ವಿಜಯ =ಯಶಸ್ಸು.
ನಮ್ಮ ಮನೆಗಳೆಲ್ಲಾ ಒಂದೇ ರೀತಿ ಇದ್ದವು. ನಮ್ಮ ಮನೆಯ ಒಂದು ಪಕ್ಕ ಬೂಬಮ್ಮ ಇನ್ನೊಂದು ಕಡೆ ರಾಮೇಗೌಡ, ಎದುರಿಗೆ ತಿಮ್ಮರಾಯಪ್ಪ, ಬ್ರಿಗ್ಸ್, ಇರ್ವಿನ್, ಹೀಗೆ ನಾನಾ ಜನ.
Comments
Post a Comment