ಯತಿ ಸ್ವಂತೀ -91
01-04-2018
ಕಿರ್ಲೋಸ್ಕರ್ ಬಿಟ್ಟು ಸ್ವಂತ ಬ್ಯುಸಿನೆಸ್ ಮಾಡಬೇಕೆಂದು ಪುಸ್ತಕ ಪ್ರಕಾಶನವನ್ನು ಆರಂಭಿಸಿದೆ. ಸುರಭಿ ಪ್ರಕಾಶನ ಮತ್ತು ಸುಘೋಷ ಸಾಹಿತ್ಯ ಎನ್ನುವ ಎರಡು ಪ್ರಕಾಶನ ಸಂಸ್ಥೆಗಳಿಗೆ ಎರಡು ಬ್ಯಾಂಕುಗಳಿಂದ ಓವರ್‍ಡ್ರಾಫ್ಟ್ ಪಡೆದು ಪುಸ್ತಕಗಳನ್ನು ಸಿದ್ಧಗೊಳಿಸಲು ಪ್ರಾರಂಭಿಸಿದೆ.
ಕೊಮ್ಮನಾಪಲ್ಲಿ ಗಣಪತಿರಾವ್ ಅವರ ಸ್ನೇಹಗಾನ ನಮ್ಮ ಪ್ರಕಾಶನದಿಂದ ಪ್ರಕಟವಾದ ಮೊದಲ ಪುಸ್ತಕ. ಆ ನಂತರ ನನ್ನದೇ ಕಾದಂಬರಿಗಳು ಬಂದವು. ಮೊಟ್ಟಮೊದಲು ನನ್ನದೇ ಪುಸ್ತಕ ಬಂದಿದ್ದು ವೀರಾಂಬುಧಿ ಜೋಕ್ಸ್. ಹತ್ತು ರೂಪಾಯಿಗಳಿಗೆ 300+ ಜೋಕುಗಳು. ಅವುಗಳಲ್ಲಿ ಅಶ್ಲೀಲತೆಯ ಸೋಂಕು ಕೂಡ ಇರಕೂಡದು ಎನ್ನುವುದು ನನ್ನ ಆಸೆಯಾಗಿತ್ತು.
ನನ್ನ ಹೆಸರನ್ನು ಅದುವರೆಗೆ ಪತ್ರಿಕೆಗಳಲ್ಲಿ ಎಂ.ವಿ.ಯತಿರಾಜ್ ಎಂದು ಪ್ರಕಟಿಸುತ್ತಿದ್ದರು. ಜೋಕ್ ಬುಕ್ ಬರೆಯುವಾಗ ಏನಾದರೂ ಒಂದು ಬ್ರ್ಯಾಂಡ್ ಹೆಸರು ಇಟ್ಟುಕೊಳ್ಳಬೇಕೆನ್ನಿಸಿತು. ಏಕೆಂದರೆ ಜೋಕ್ ಬುಕ್‍ಗಳ ಸರಮಾಲೆ ಬರೆಯುವಾಗ ಒಂದೇ ಹೆಸರಿದ್ದರೆ ಚೆನ್ನವೆನಿಸಿತು.
ಖುಷ್‍ವಂತ್ ಸಿಂಗ್ ಅವರ ಜೋಕ್ ಬುಕ್‍ಗಳಂತೆ ಸರಣಿ ತರುವ ಆಸೆಯಿತ್ತು. ಆಗ ಬೇರೆ ಯಾವುದಾದರೂ ಹೆಸರೇಕೆ, ನನ್ನ ಮನೆಯ ಹೆಸರನ್ನೇ ಏಕೆ ಇಟ್ಟುಕೊಳ್ಳಬಾರದು ಎನಿಸಿ ವೀರಾಂಬುಧಿ ಜೋಕ್ಸ್ ಎಂದು ಪುಸ್ತಕಕ್ಕೆ ಹೆಸರಿಟ್ಟೆ. ಆಗ ನನ್ನ ಹೆಸರನ್ನು ಯತಿರಾಜ್ ಎಂ ವೀರಾಂಬುಧಿ ಎಂದಿಟ್ಟುಕೊಂಡೆ. ನಂತರ ಎಂ ಕತ್ತರಿಸಿ ಯತಿರಾಜ್ ವೀರಾಂಬುಧಿ ಎಂದು ಮಾತ್ರ ಇಟ್ಟುಕೊಂಡೆ.
ಈ ಜೋಕುಗಳನ್ನು ಅನೇಕ ಪತ್ರಿಕೆಗಳಿಂದ ಸಂಗ್ರಹಿಸಿ, ಅವುಗಳಲ್ಲಿ ಬರುವ ಪಾತ್ರಗಳಿಗೆ ಕೆಲವೇ ಹೆಸರನ್ನಿಡಬೇಕೆಂದು ಆಶಿಸಿದೆ. ಚಿಮ್ಮು ಪಮ್ಮಿ ಎನ್ನುವ ಹೆಸರುಗಳ ನಾಯಕ ನಾಯಕಿಯರ ‘ಚಿಮ್ಮಿನ ಚಹಾ’ ಎನ್ನುವ ಕಥೆ ಬರೆದಿದ್ದೆ. ಅದು ಪ್ರಕಟವಾಗಲಿಲ್ಲ ಎನ್ನುವುದು ಬೇರೆ ವಿಷಯ!
ಚಿಮ್ಮು ಎಂದರೆ ಶ್ರೀನಿವಾಸ ಮೂರ್ತಿ, ಪಮ್ಮಿ ಎಂದರೆ ಪರಿಮಳ ಎಂದು ನನ್ನದೇ ವಿವರ ಕೊಟ್ಟುಕೊಂಡೆ. ನಂತರ ಶ್ರೀನಗರದ ಮುದ್ರಕರು ಒಬ್ಬರ ಬಳಿ ಹೋಗಿ ಹಸ್ತಪ್ರತಿ ನೀಡಿದೆ. ಆ ಪ್ರಿಂಟರ್ ಹೆಸರು ಶ್ರೀನಿವಾಸ ಮೂರ್ತಿ ಎಂದು ತಿಳಿದೊಡನೆ ಅಯ್ಯಯ್ಯೋ ಈಗೇನು ಮಾಡುವುದು ಎಂದು ತಕ್ಷಣವೇ ಚಿಮ್ಮುವಿಗೆ ಬೇರೆ ಹೆಸರಿಡಲು ನಿರ್ಧರಿಸಿದೆ.
ಜಯಪ್ರಿಯ ಲೇಖಕಿ ಎಂ.ಕೆ.ಇಂದಿರಾ ಬರೆದಿದ್ದ ಚಿದ್ವಿಲಾಸ ಎನ್ನುವ ಕಥೆಯ(ಕಾದಂಬರಿ?) ನೆನಪಾಯಿತು. ಆಗ ಚಿಮ್ಮು ಆದ ಚಿದ್ವಿಲಾಸ ಮೂರ್ತಿ! ಪಮ್ಮಿಯ ಹೆಸರು ಪರಿಮಳ ಎಂದೇ ಉಳಿಸಿಕೊಂಡೆ.
ಬಹಳವೇ ಜನಪ್ರಿಯವಾಗಿ ಸಾಕಷ್ಟು ಪುಸ್ತಕಗಳು ಖರ್ಚಾದವು. ಕೇವಲ ಹತ್ತು ರೂಪಾಯಿಗಳ ಬೆಲೆ. ಶಶಿಧರ ಅವರು ಸುಂದರವಾದ ಕಾರ್ಟೂನ್ ಬರೆದರು ಮುಖಚಿತ್ರಕ್ಕೆ.
ಹಿಂಬದಿಯ ಪುಟದಲ್ಲಿ ನನ್ನದೊಂದು ಹಳೆಯ ಫೋಟೋ ಹಾಕಿದ್ದೆ.
ಬಹಳ ದಿನಗಳ ನಂತರ ನನ್ನ ಗೆಳೆಯನ ಮನೆಗೆ ಹೋಗಿದ್ದೆ. ಅವನ ಮಗ ಬದ್ರಿ ಕನ್ನಡ ಕಲಿತಿದ್ದ. ಪುಸ್ತಕಗಳನ್ನು ಓದುತ್ತಿದ್ದ. ಅವರ ಅಪ್ಪನನ್ನು ಮೆಲ್ಲನೆ ಏನೋ ಕೇಳಿದ್ದು ಕಂಡು, ‘ಏನ್ ಮರೀ?’ ಎಂದೆ.
ಅವನಿಗೆ ಸಂಕೋಚ. ಅವನ ಅಪ್ಪ, ಅದೇ ನನ್ನ ಗೆಳೆಯ ಹೇಳಿದ... ಇವರೇ ಅಲ್ವಾ ವೀರಾಂಬುಧಿ ಜೋಕ್ಸ್ ಬರೆದಿರೋದು? ಅಂತ ಕೇಳ್ದ ಎಂದ.
ಪರವಾಗಿಲ್ಲ, ಪುಸ್ತಕವು ಮಕ್ಕಳಿಗೂ ಇಷ್ಟವಾಗುವ ರೀತಿಯಲ್ಲಿದೆ ಎಂದು ಸಂತೋಷಿಸಿದೆ.
Comments
Post a Comment