ಯತಿ ಸ್ವಂತೀ -90
31-03-2018
33 ವರ್ಷಗಳ ಹಿಂದೆ ಚಾಮರಾಜಪೇಟೆಯ ರಾಘವೇಂದ್ರಸ್ವಾಮಿ ಮಠಕ್ಕೆ ಸೇರಿದ ಕಲ್ಯಾಣಮಂಟಪದಲ್ಲಿ ನರಸಿಂಹನ ಮದುವೆ!
ನಮ್ಮ ಗೆಳೆಯರ ಗುಂಪಿನ ಮೊದಲ ಮದುವೆ. ನಮ್ಮದು ಹದಿಮೂರು ಜನರ ಗುಂಪು. ನಾವುಗಳು 1978ರಲ್ಲಿ ಒಂದುಗೂಡಿದೆವು. ನಂತರ ಅನೇಕರು ಗುಂಪಿಗೆ ಸೇರುತ್ತಾ ಹೋದರು. ಲೋಕಸಭಾ, ರಾಜ್ಯಸಭಾ ಸದಸ್ಯರು ಎಂದು ಸೀನಿಯರ್ ಮತ್ತು ಜ್ಯೂನಿಯರ್‍ಗಳನ್ನು ಕರೆಯುತ್ತಿದ್ದೆವು.
ಬಹಳವೇ ಡೈವರ್ಸಿಫೈಡ್ ಗುಂಪು ನಮ್ಮದು. ಎಲ್ಲೈಸಿಯಲ್ಲಿ ಕೆಲಸ ಮಾಡುತ್ತಿದ್ದ ನರಸಿಂಹ ನಮ್ಮ ಮೋಸ್ಟ್ ಸೀನಿಯರ್ ಸದಸ್ಯ. ನನ್ನ ಹೈಸ್ಕೂಲ್ ಸಹಪಾಠಿ. ಆದರೆ ಅವನ ಪರಿಚಯ ನನಗೆ ಅದಕ್ಕೂ ಮುಂಚಿನಿಂದ ಇತ್ತು. ಬಹುಶಃ 1964ರಲ್ಲಿಯೇ ಅವನನ್ನು ನಮ್ಮ ಕಮ್ಯೂನಿಟಿಯ ಕಾರ್ಯಕ್ರಮಗಳಲ್ಲಿ ಕಂಡಿದ್ದೆ. ನನ್ನ ಅಜ್ಜಿಯ ಅಣ್ಣನ ಮನೆಯ ಹತ್ತಿರವೆಲ್ಲೋ ಅವರ ಮನೆಯಿತ್ತು ಮೈಸೂರು ಎನ್ ಆರ್ ಮೊಹಲ್ಲಾದಲ್ಲಿ. ಅವನ ತಂದೆ, ನನ್ನ ತಂದೆ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದರು.
ಹೈಸ್ಕೂಲಿಗೆ ನಾನು ಮಹಾಜನ ಪ್ರೌಢಶಾಲೆಗೆ ಸೇರಿದಾಗ ನರಸಿಂಹನೂ ಅಲ್ಲಿಗೆ ಸೇರಿಕೊಂಡ. ಅವರ ಸ್ವಂತ ಮನೆ ಒಂಟಿಕೊಪ್ಪಲ್ 16ನೇ ಕ್ರಾಸ್‍ನಲ್ಲಿತ್ತು. ಅವನೊಂದಿಗೆ ನಾನು ಸುಧಾ ಪತ್ರಿಕೆ ಬಂದಾಗಲೇ ಓದಲಾರಂಭಿಸಿದೆ. ನಮ್ಮ ಮೇಷ್ಟ್ರು ಕೆ.ಜಿ.ಆರ್. ಮನೆಯಲ್ಲಿ ಸುಧಾ ಬರುತ್ತಿತ್ತು ಎಂದು ನೆನಪು. ನರಸಿಂಹನ ಮನೆಯಲ್ಲಿ ಚಂದಮಾಮ ತರಿಸುತ್ತಿದ್ದರು.
ನನಗೆ ಇವನ್ನೆಲ್ಲ ಕೊಂಡು ತಿಳಿಯದು. ಅದಕ್ಕೇ ನರಸಿಂಹನ ಮನೆಯಲ್ಲಿ ಮರೆಯದೇ ಚಂದಮಾಮ ಓದುತ್ತಿದ್ದೆ. ರಕ್ಕಸಕೊಳ್ಳ, ಚಂದಮಾಮನ ಮಂದಹಾಸ, ಭೇತಾಳನ ಕಥೆಗಳು ಇವೆಲ್ಲವನ್ನೂ ಓದಿದ ನೆನಪು. ಸುಧಾದಲ್ಲಿ ಬಾಲವಿಹಾರ ಅಲ್ಲದೇ ಅರ್ಥವಾಗುತ್ತಿತ್ತೋ ಬಿಡುತ್ತಿತ್ತೋ ತಿಳಿಯದು ಬಿ. ಪುಟ್ಟಸ್ವಾಮಯ್ಯನವರ ‘ದ್ವಾಸುಪರ್ಣಾ, ಹೂವುಕಾವು’ ಓದಿದ ನೆನಪಿದೆ.
72ರಲ್ಲಿ ಹೈಸ್ಕೂಲು ಮುಗಿಸಿ ನಾನು ಬೆಂಗಳೂರು ಜಯನಗರದ ನ್ಯಾಷನಲ್ ಕಾಲೇಜಿಗೆ ಪಿಯುಸಿ ಓದಲು ಸೇರಿಕೊಂಡೆ. ಮತ್ತೆ ಮೈಸೂರಿಗೆ ಇಂಜಿನಿಯರಿಂಗ್ ಓದಲು 1974ರಲ್ಲಿ ಹೋದೆ. ಆಗ ನರಸಿಂಹನೊಂದಿಗೆ ಅವನ ಚಿಕ್ಕಮ್ಮನ ಮನೆಗೆ ಹಾಸನಕ್ಕೆ ಹೋಗಿದ್ದು ಜ್ಞಾಪಕವಿದೆ.
ಆದರೆ 78ರಲ್ಲಿ ನಮ್ಮ ಗೆಳೆತನ ಗಟ್ಟಿಗೊಂಡಿತು. ನನ್ನ ಕೊನೆಯ ವರ್ಷ ಇಂಜಿನಿಯರಿಂಗ್ ಸಮಯದಲ್ಲಿ ಕಾರಣಾಂತರಗಳಿಂದ ನನಗೆ ಉಳಿದುಕೊಳ್ಳಲು ಜಾಗ ಸಿಗದಿದ್ದಾಗ ನರಸಿಂಹ ತಾಯಿಯನ್ನು ‘ನಾಗೂಮ್ಮ, ನಿಮ್ಮ ಮಗ ಅಂತೀರಲ್ವಾ ನನ್ನನ್ನ? ನನಗೆ ಇರಲು ಜಾಗ ಕೊಡಿ’ ಎಂದು ಅವರ ಮನೆ ಸೇರಿಕೊಂಡೆ. ನರಸಿಂಹನ ತಮ್ಮ, ಇಬ್ಬರು ತಂಗಿಯರು ನನ್ನನ್ನು ಆದರಿಸಿದರು. ನರಸಿಂಹ ಕೆಲಸಕ್ಕೆ ಸೇರಿದ್ದ. ನಾನಿನ್ನೂ ಓದುತ್ತಿದ್ದೆ. ಪುಡಿಕಾಸು ಅವನಿಂದ ಸಾಲ ಪಡೆಯುತ್ತಿದ್ದೆ. ಸಾಲ ಎಂಥದ್ದು? ಎಂದಿಗೂ ಅದನ್ನು ವಾಪಸ್ಸು ಮಾಡಿಲ್ಲ. ಅವನು ನಿಜಕ್ಕೂ ನನಗೆ ಜೊತೆಯಲ್ಲಿ ಹುಟ್ಟದ ಅಣ್ಣ. ಏಕೆಂದರೆ ಅವನು ನನಗಿಂತ 15 ತಿಂಗಳು ದೊಡ್ಡವನು.
ಅವನ ಶ್ರೀಮತಿಯಾಗಿ ಬಂದವಳು ಶೋಭಾ. ಬಂದ ದಿನವೇ ‘ಏನೋ ಏನೇ’ ಸ್ಟೈಲಿನಲ್ಲಿ ಪರಸ್ಪರ ಮಾತಾಡಿಸಲು ಆರಂಭಿಸಿದ್ದು ಈಗಲೂ ಅವರಿಬ್ಬರೂ ನನ್ನ ಫೇವರಿಟ್ ಗಂಡ ಹೆಂಡತಿ.
ಇಂದು ಅವರ ಮದುವೆಯಾಗಿ 33 ವರ್ಷಗಳು. ಅವರಿಗೆ ಇನ್ನೂ ಅನೇಕ ಕಾಲದ ಸುಂದರ, ಸುಖ, ಆರೋಗ್ಯಕರ ದಾಂಪತ್ಯ ಜೀವನವನ್ನು ಕರುಣಿಸೆಂದು ಆ ದೇವದೇವನನ್ನು ಬೇಡಿಕೊಳ್ಳುತ್ತೇನೆ.
Comments
Post a Comment