ಯತಿ ಸ್ವಂತೀ -89
30-03-2018
ಜೀವನ್ ಆಗಾಗ ತುಪ್ಪ ಬೇಕು ಎನ್ನುತ್ತಿದ್ದ. ಚಪಾತಿ ಮಾಡುವಾಗ ಒಂದಿಷ್ಟೂ ತುಪ್ಪ ಯಾ ಎಣ್ಣೆ ಹಾಕುತ್ತಿರಲಿಲ್ಲ ಕಾವಲಿಯ ಮೇಲೆ. ಅಬ್ಬಾ, ಎಂತಹ ಡ್ರೈ ಚಪಾತಿ ಮಾಡುತ್ತಾನೆ ಎಂದುಕೊಂಡಿದ್ದೆ. ಆದರೆ ತುಪ್ಪ ಮಾತ್ರ ಬಹಳ ಖರ್ಚಾಗುತ್ತಿತ್ತು. ನನಗೋ ಅಡುಗೆಯ ಗಂಧವೇ ತಿಳಿಯದು. (ಆರು ತಿಂಗಳು 2003ರಲ್ಲಿ ಅಡುಗೆ ಮಾಡಿಕೊಂಡಿದ್ದೆ. ಅದರ ವಿಷಯ ಆಮೇಲೆ)
ಒಂದು ದಿನ ಅವನು ಚಪಾತಿ ಹಿಟ್ಟು ಕಲಸಿ ಅಡುಗೆ ಮನೆಯ ಕಪ್ಪು ಗ್ರಾನೈಟ್ ಕಲ್ಲುಹಾಸಿನ ಮೇಲೆ ಚಪಾತಿ ಹಿಟ್ಟನ್ನು ಟಪ್ ಟಪ್ ಎಂದು ಬಡಿಯುತ್ತಿದ್ದ. ಬಡಿಯುವಾಗಲೆಲ್ಲ ತುಪ್ಪವನ್ನು ಸುರಿದು ಕಲಸುತ್ತಿದ್ದ. ಆಗ ತಿಳಿದವು ಎರಡು ವಿಷಯಗಳು. ಒಂದು ತುಪ್ಪದ ಖರ್ಚು ಹೇಗಾಗುತ್ತಿದೆ ಎಂದು! ಎರಡು ನಾನೇಕೆ ತೂಕ ಹೆಚ್ಚಿಸಿಕೊಳ್ಳುತ್ತಿದ್ದೇನೆ ಎಂದು!
ಹಿಂದೊಮ್ಮೆ ಐತ್‍ರಾಝ್ ಎನ್ನುವ ಹಿಂದೀ ಸಿನಿಮಾ ನೋಡಿದ್ದೆ. ಇನ್‍ಡೀಸೆಂಟ್ ಪ್ರಪೋಜಲ್ ಸಿನಿಮಾದ ಭಾರತೀಯ ವರ್ಷನ್. ನನಗೆ ಬಹಳ ಇಷ್ಟವಾಗಿದ್ದು ಅದರ ಹಾಡುಗಳು. ಹಿಮೇಶ್ ರೇಷಮಿಯಾ ಇನ್ನೂ ತನ್ನ ರೇಷ್ಮೆಯಂತಹ ಧ್ವನಿಯಲ್ಲಿ ಹಾಡಲು ಶುರು ಮಾಡಿರದಿದ್ದ ಸಮಯವದು!
ಆಂಖೇ ಬಂದ್ ಕರಕೇ, ಗಿಲ ಗಿಲ ಗಿಲ, ತಲಾತುಂ.. ಹೀಗೆ ಇಡೀ ಚಿತ್ರದ ಕಥೆ ಮತ್ತು ಎಲ್ಲ ಹಾಡುಗಳು ನನಗೆ ಬಹಳ ಇಷ್ಟವಾದವು.
ಒಮ್ಮೆ ನೋಡಿದ್ದೆ. ಈಗ ನನ್ನ ರೂಮ್ಮೇಟ್ ಜೀವನ್‍ಗೆ ಅದನ್ನು ತೋರಿಸಬೇಕೆಂದುಕೊಂಡೆ. ಅದು ಮತ್ತೆ ಮಸ್ಕತ್‍ನಲ್ಲಿ ಬಿಡುಗಡೆ ಆಗಿತ್ತು. ಅಂದ ಹಾಗೆ ನಿಝ್ವಾದಲ್ಲಿ ಸಿನಿಮಾ ಥೇಟರುಗಳಿರಲಿಲ್ಲ.
ಸರಿ, ಶುಕ್ರವಾರ ಬೆಳಗ್ಗೆಯೇ ಕಾರು ಓಡಿಸಿದೆ. ಸುಮಾರು 160 ಕಿಮೀ. ಶುಕ್ರವಾರ ಬೆಳಗ್ಗೆ ಇಡೀ ರಸ್ತೆಗಳೇ ನಮ್ಮವು. ಯಾರೂ ಇರರು.
ಹೇಗೂ ಆಫೀಸಿನಲ್ಲಿ ಜನ ಇರುವರೆಂದು ತಿಳಿದಿತ್ತು. ಸಹೋದ್ಯೋಗಿಗಳನ್ನೆಲ್ಲಾ ಮಾತಾಡಿಸಿದೆವು. ಜೀವನ್ ಊರಿನ ಬಳಿಯ ಗೋವಿಂದ ಮಸ್ಕತ್‍ನಲ್ಲಿ ನಮ್ಮ ಜೊತೆ ಕೆಲಸ ಮಾಡುತ್ತಿದ್ದ. ಇಬ್ಬರೂ ಒಂದೇ ಸಮನೆ ತಮಿಳಿನಲ್ಲಿ ಹರಟಿದರು.
ಎಲ್ಲರೂ ನನ್ನನ್ನು ನೋಡಿ ರೇಗಿಸಿದ್ದೂ ರೇಗಿಸಿದ್ದೇ. ಜೀವನ್ ಊಟ ನಿನ್ನ ಮೈಗೆ ಚೆನ್ನಾಗಿ ಹತ್ತಿಕೊಂಡಿದೆ ಎಂದು!
ಮಧ್ಯಾಹ್ನ ಒಂದು ತಮಿಳುನಾಡು ಹೊಟೇಲ್ ಅನ್ನಪೂರ್ಣಗೆ ಹೋಗಿ ಊಟ ಮಾಡಿದೆವು. ನಂತರ ಇಬ್ಬರೂ ರೂವಿ ಸಿನಿಮಾ ಥೇಟರಿಗೆ ಹೋಗಿ ಐತ್‍ರಾಝ್ ನೋಡಿ ಸಂಜೆ ಅಲ್ಲಿಂದ ಹೊರಟೆವು. ಯಥಾ ಪ್ರಕಾರ 160 ಕಿಮೀ ದೂರದ ಕಾರೋಡಿಸುವಿಕೆ.
ಮನೆಗೆ ಬಂದು ಮತ್ತೆ ಜೀವನ್ ಕೈ ರುಚಿ ಊಟ.
ಒಂದು ರೀತಿ ಹಾಯಾದ ಜೀವನ. ಪ್ರತಿ ಶುಕ್ರವಾರ ಬೆಳಗ್ಗೆ ಬೇಗನೆದ್ದು ಬೆಂಗಳೂರಿನ ಮನೆಗೆ ಫೋನ್ ಮಾಡುವುದು ವಾಡಿಕೆ. ಮಕ್ಕಳು ಶಾಲೆಗೆ ಹೋಗುವ ಮೊದಲು ಅವರನ್ನು ಮಾತಾಡಿಸಬೇಕು.
ಅಮ್ಮ, ಹೆಂಡತಿ ಇವರುಗಳನ್ನೂ ಮಾತಾಡಿಸಿದ ನಂತರ ಒಂದು ರೀತಿ ನಿರಾಳ. ಮತ್ತೆ ಮುಂದಿನ ಶುಕ್ರವಾರವೇ ದೂರವಾಣಿ ಕರೆ.
Comments
Post a Comment