ಯತಿ ಸ್ವಂತೀ -88


29-03-2018
ನಿಝ್ವಾ ನಗರದಲ್ಲಿ ನನ್ನ ಜೀವನ ಒಂದು ರೊಟೀನ್‍ಗೆ ಬಿದ್ದಿತು. ನನಗೆ ಪೈ ಅವರು ಅವರ ಮನೆಯಲ್ಲಿಯೇ ಇರಲು ಹೇಳಿದ್ದರೂ ನಾನು ಜೀವನ್ ಜೊತೆಗೆ ಅವನ ಮನೆಯಲ್ಲಿ ಇರಬೇಕೆಂದುಕೊಂಡೆ. ಅವನಿಗೂ ಬಾಯಿ ತುಂಬಾ ಹರಟುವ ಅವಕಾಶ ಸಿಕ್ಕಿತೆಂದೋ ಏನೋ ಹೂಂ ಎಂದ.
ಬೆಳಗ್ಗೆ ಕಾಫಿಯಿಂದ ಹಿಡಿದು ರಾತ್ರಿ ಊಟದ ವರೆಗೆ ಅವನಿಂದ ನನಗೆ ಉಪಚಾರವಾಯಿತು. ನಿಜಕ್ಕೂ ಒಳ್ಳೆಯ ಅಡುಗೆ ಮಾಡುತ್ತಿದ್ದ ಜೀವನ್. ನನ್ನ ಕೆಲಸವೇನಿದ್ದರೂ ಅವನೊಂದಿಗೆ ಸೂಪರ್ ಮಾರ್ಕೆಟ್‍ಗೆ ಅವನೊಂದಿಗೆ ಹೋಗಿ ಅವನಿಗೆ ಬೇಕಾದ ಕಚ್ಚಾವಸ್ತುಗಳನ್ನೂ, ದಿನಸಿಗಳನ್ನೂ ಕೊಳ್ಳುವುದು.
ಬಲು ಮಜದ ಸಮಯವದು. ಮಸ್ಕತ್‍ನಲ್ಲಿ ಮಳೆ ನೋಡಿದ್ದೆ. ಛಳಿ ನೋಡಿರಲಿಲ್ಲ. ಇಲ್ಲಿ ಛಳಿಯ ಅನುಭವವಾಯಿತು. ಬೆಳಗ್ಗೆ ಬೆಂಗಳೂರಿನಂತೆ ಮಂಜು ಸುರಿಯುತ್ತಿತ್ತು. ರಾತ್ರಿ ರೂಮಿನಲ್ಲಿ ರೂಂ ಹೀಟರ್ ಇಲ್ಲದೇ ಮಲಗಲು ಆಗುತ್ತಿರಲಿಲ್ಲ, ಅಷ್ಟು ಛಳಿ!
ಆ ರೂಮ್ ಹೀಟರ್ ಎರಡು ಕಾಯಿಲ್‍ಗಳ ಚಿಕ್ಕ ಯಂತ್ರ. ಅದು ಕೆಂಪಗೆ ಕಾದಾಗ ಇಡೀ ರೂಮು ಬೆಂಕಿಯಂತೆ ಬಿಸಿಯಾಗುತ್ತಿತ್ತು. ಆಗ ಎದ್ದು ಅದನ್ನು ಆರಿಸಿ ಮಲಗಬೇಕಿತ್ತು.
ಬಹಳ ಸಾಧು ಸ್ವಭಾವದ ಹುಡುಗ ಜೀವನ್. ಬೆಳಗ್ಗೆ ಏಳೂವರೆಗೆ ತಿಂಡಿ ತಿಂದು ಎಂಟಕ್ಕೆ ಸರಿಯಾಗಿ ಅಂಗಡಿ ತೆರೆಯುತ್ತಿದ್ದೆವು.
ಮೊದಲ ಎರಡು ಮೂರು ದಿನಗಳು ಹೊರಗೆ ಹೋಗಲಿಲ್ಲ. ಅಲ್ಲಿನ ವ್ಯವಹಾರ ಹೇಗಿರುವುದೆಂದು ನೋಡಿದೆ. ಹಿಂದೆ ಮಸ್ಕತ್‍ನಲ್ಲಿ ಲೈಟಿಂಗ್ ಷೋ ರೂಮಿನಲ್ಲಿ ಕೆಲಸ ಮಾಡಿದ ಅನುಭವವಿತ್ತು. ಆದರೆ ಅದು ದೊಡ್ಡ ಅಂಗಡಿ. ಇದು ಸಣ್ಣದು. ಬಹಳ ಜನ ಒಮಾನಿಗಳು ಬರುತ್ತಿದ್ದರು. ಅವರೊಂದಿಗೆ ನಮ್ಮ ಜೀವನ್ ತಮಿಳ್ ಆಕ್ಸೆಂಟ್‍ನಲ್ಲಿ ಅರಾಬಿಕ್ ಮಾತಾಡುತ್ತಿದ್ದ. ಖಂಸಾ, ಸಿತ್ತಾ, ಸಬಾ, ತಮನಿಯ  (ಐದು  ಆರು ಏಳು ಎಂಟು) ಹೀಗೆ ಕೆಲವು ಅರಾಬಿಕ್ ಶಬ್ದಗಳು ನನಗೂ ಬಾಯಿಪಾಠವಾದವು!
ಮಧ್ಯಾಹ್ನ ಒಂದು ಗಂಟೆಗೆ ಅಂಗಡಿ ಬಂದ್ ಮಾಡಿ ಮಹಡಿಗೆ ಹೋಗಿ ಊಟ ಮಾಡುತ್ತಿದ್ದೆವು. ಬಿಸಿ ಅಡುಗೆ ತಯಾರಾಗುವ ವೇಳೆಗೆ ಒಂದು ಗಂಟೆ ಕಾಲ ಆಗುತ್ತಿತ್ತು. ನಾನು ಕ್ಯಾಸೆಟ್‍ಗಳಲ್ಲಿ ಎಂ. ಎಲ್ ವಸಂತಕುಮಾರಿ, ಅರುಣಾ ಸಾಯಿರಾಂ ಮುಂತಾದವರ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೋ, ರಫಿ, ಕಿಶೋರರ ಹಿಂದೀ ಹಾಡುಗಳನ್ನೋ, ಎಸ್ಪಿ, ರಾಜ್, ಪಿಬಿಎಸ್‍ರ ಕನ್ನಡ ಹಾಡುಗಳನ್ನೋ ನನ್ನ ಕ್ಯಾಸೆಟ್ ಪ್ಲೇಯರ್‍ನಲ್ಲಿ ಜೋರಾಗಿ ಹಾಕುತ್ತಿದ್ದೆ. ಅದನ್ನು ಕೇಳಿಕೊಂಡು ಹರಟೆ. ಅವನು ಅಡುಗೆ ಮಾಡುವಾಗ ಅಲ್ಲಿಯೇ ಇದ್ದ ಕಟ್ಟೆಯ ಮೇಲೆ ಕೂತು ನನ್ನ ಮಾತುಕಥೆ.
ನಿಜಕ್ಕೂ ಬಹಳವೇ ಸುಂದರ ಸಮಯವದು. ಸಂಜೆ ನಾಲ್ಕಕ್ಕೆ ಮತ್ತೆ ಅಂಗಡಿ ಓಪನ್. ರಾತ್ರಿ ಎಂಟಕ್ಕೆ ಅಂಗಡಿ ಮುಚ್ಚಿ ಹತ್ತಿರದ ಅಂಗಡಿಗೆ ಹೋಗಿ ತಣ್ಣಗಿನ ಐಸ್‍ಕ್ರೀಮ್ ಅನ್ನು ಆ ಛಳಿಯಲ್ಲಿ ತಿನ್ನುತ್ತಿದ್ದೆವು. ಹಾಗೆ ಆ ಗಡಗಡದಲ್ಲಿ ತಣ್ಣಗಿನ ಐಸ್‍ಕ್ರೀಮ್ ತಿನ್ನುತ್ತಿದ್ದವರು ನಾವಿಬ್ಬರೇ ಏನೋ!
ಪ್ರತಿ ಕ್ರಿಯೆಗೆ ಪ್ರತಿಕ್ರಿಯೆ ಇರಲೇಬೇಕಲ್ಲವೇ?... ನನ್ನ ತೂಕ ಏರುತ್ತಾ ಹೋಯಿತು!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102