ಯತಿ ಸ್ವಂತೀ -87
28-03-2018
ಒಂದು ಭಾನುವಾರ ಬೆಳಗ್ಗೆ ಅವರ ಬಂಜಾರ ಹಿಲ್ಸ್ ಮನೆಗೆ ಹೋದೆ. ಮೊದಲು ಅವರು ಕಪಾಡಿಯ ಲೇನ್... ಮಾಸಬ್ ಟ್ಯಾಂಕ್ ಬಳಿ ಆಫೀಸ್ ಮಾಡಿಕೊಂಡಿದ್ದರು. ಅಲ್ಲಿಗೂ ಹೋಗಿದ್ದ ನೆನಪು. ಬರೆಯುತ್ತಾ ಕುಳಿತಿದ್ದರು. ನಾನು ಪ್ರಕಾಶನ ಸಂಸ್ಥೆ ಶುರು ಮಾಡುವೆನೆಂದಾಗ ಸಂತೋಷ...ನನ್ನಿಂದ ಏನು ಬೇಕು ಎಂದರು. ನಿಮ್ಮ ಹೊಸ ಪುಸ್ತಕ ಕೊಟ್ಟರೆ ನನ್ನ ಪ್ರಕಾಶನಕ್ಕೆ ಒಳ್ಳೆಯ ಬುನಾದಿ ಸಿಗುತ್ತದೆ ಎಂದೆ. ಮಾಸಿಕವೊಂದರಲ್ಲಿ ಧಾರಾವಾಹಿ ಆಗಬೇಕಿದ್ದ ದೊಡ್ಡ ಕಾದಂಬರಿ ನೀಡಿದರು. ನನ್ನ ಪ್ರಕಾಶನ ಗಟ್ಟಿಯಾಗಿ ನಿಂತಿತು. ಯಂಡಮೂರಿ ಅವರ ಅನೇಕ ಪುಸ್ತಕಗಳನ್ನು ಪ್ರಕಟಿಸಿದೆ. ಅವರು ಕಾದಂಬರಿ ಬರೆದ ಹೀರೋ ಫೌಂಟನ್ ಪೆನ್ಗಳನ್ನು ಅಭಿಮಾನಿಗಳಿಗೆ ನೀಡುತ್ತಿದ್ದರು. ನನಗೊಂದು ಸಿಕ್ಕಿತು. ಬೆಳದಿಂಗಳ ಬಾಲೆ ಕನ್ನಡ ಸಿನಿಮಾ ಬಂದಾಗ ಗೆಳೆಯರೊಡನೆ ಬೆಂಗಳೂರಿಗೆ ಬಂದರು. ಅವರೊಂದಿಗೆ ಸಾಗರ್ ಚಿತ್ರಮಂದಿರದಲ್ಲಿ ಆ ಸಿನಿಮಾ ನೋಡಿದ ಹೆಮ್ಮೆ ನನ್ನದು. ಸಂಜೆ ಬೌರಿಂಗ್ ಇನ್ಸ್ಟಿಟ್ಯೂಟ್ನಲ್ಲಿ ಸಮಾರಂಭ ಇತ್ತು. ಅನಂತನಾಗ್, ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ, ಅನುವಾದ ಮಾಡಿದ ವಂಶಿ ಇದ್ದರು. ತಡವಾಗಿ ಮನೆಗೆ ಬಂದೆ. ಮರುದಿನ ಬೆಳಗ್ಗೆ ಬೇಗನೆ ಯಂಡಮೂರಿ ಅವರ ಹೊಟೇಲ್ ರೂಂ ತಲುಪಿದೆ. ದೇಸಾಯಿ ಅವರು ಸಿಟಿ ಕೇಬಲ್ ಛಾನೆಲ್ಗಾಗಿ ಯಂಡಮೂರಿ ಅವರನ್ನು ಸಂದರ್ಶನ ಮಾಡಬೇಕಿತ್ತು. ಅವರು ಬರಲಿಲ್ಲ. ನೀನೇ ಮಾಡು ಸಂದರ್ಶನ ಎಂದರು ಯಂಡಮೂರಿ. ಅದೊಂದು ಖುಷಿ ಘಟನೆ. ಖೇದವೆಂದರೆ ಆ ಕ್ಯಾಸೆಟ್ ನನಗೆ ಸಿಗಲೇ ಇಲ್ಲ. ನಾನು ಅದನ್ನು ನೋಡಿಯೇ ಇಲ್ಲ. ಅವರ ಕುಟುಂಬ ಮತ್ತು ಗೆಳೆಯರ ಜೊತೆ ಮೈಸೂರಿಗೆ ಹೋದೆ. ಹಾದಿಯಲ್ಲಿ ಶ್ರೀರಂಗಪಟ್ಟಣವನ್ನು ತೋರಿಸಿದೆ. ಆ ಸಂಜೆ ಮೈಸೂರು ಅರಮನೆಯ ಬಳಿ ಅವರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಒಬ್ಬ ಯುವಕ ಅವರನ್ನು ಸಮೀಪಿಸಿ ನಮಸ್ಕಾರ ಮಾಡಿ మీరు యండమూరి వీరేంద్రనాథ్గారు కదూ? ಎಂದು ಕೇಳಿದ. ಆಗ ನನಗೆ ಚಿತ್ರತಾರೆಯರಲ್ಲದೇ ಒಳ್ಳೆಯ ಕಾದಂಬರಿಕಾರರನ್ನೂ ಜನ ಗುರುತಿಸಬಲ್ಲರು ಎಂಬ ಸತ್ಯ ಅರಿವಾಯಿತು. ಈಗ ನನ್ನ ಫೋಟೋವನ್ನು ಫೇಸ್ ಬುಕ್ನಲ್ಲಿ ನೋಡಿ ಎದುರಿಗೆ ಕಂಡಾಗ ಗುರುತಿಸುತ್ತಾರೆ. ಆದರೆ 1995-96? ಎರಡು ವರ್ಷಗಳ ಹಿಂದೆ ನಮ್ಮ ಕರಿಗಂಬಳಿಯಲ್ಲಿ ಮಿಡಿನಾಗ ಚಿತ್ರದ ನಾಯಕ ನವೀನ್ ತೀರ್ಥಹಳ್ಳಿ ನಾಯಕನಾಗಿ ಬಡ್ತಿ ಪಡೆದ ಮೊದಲ ಚಿತ್ರ ಕೌರ್ಯದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಸುನಿಲ್ ಕುಮಾರ್ ದೇಸಾಯಿ ಅವರ ಭೇಟಿ ಆಯಿತು. ಅವರಿಗೆ ಅವರು ಮಾಡಬೇಕಾಗಿದ್ದ ಇಂಟರ್ವ್ಯೂ ನಾನು ಮಾಡಿದ್ದನ್ನು ನೆನಪಿಸಿದೆ. ಮುಗುಳ್ನಕ್ಕರು. ಈ ನಡುವೆ ಪ್ರಕಾಶನ ಬಿಟ್ಟು ಎರಡು ಕಂಪೆನಿಗಳನ್ನು ಬದಲಾಯಿಸಿದೆ. ಆಗಾಗ ಸಂಪರ್ಕ ಇತ್ತು. ನಂತರ ನಾನು ಸಲ್ತನತ್ ಆಫ್ ಒಮಾನ್ಗೆ ಉದ್ಯೋಗ ನಿಮಿತ್ತ ಹೊರಟು ಹೋದೆ. ಯಂಡಮೂರಿ ಅವರ ಸಂಪರ್ಕ ಸಂಪೂರ್ಣವಾಗಿ ಕಡಿದು ಹೋಯಿತು.
Comments
Post a Comment