ಯತಿ ಸ್ವಂತೀ -85


26-03-2018
ನಮ್ಮ ಮೈಸೂರು ರೈಲ್ವೇ ಲೋಕೋ ಕಾಲೋನಿಯ ಮನೆಯ ಬಳಿ ಆಗಿನ ಕಾಲದಲ್ಲಿ ಒಬ್ಬರು ನಟರಿದ್ದರು. ಅವರು ರೈಲಿನಲ್ಲಿ ಗಾರ್ಡ್. ಅನೇಕ ಕನ್ನಡ ಸಿನಿಮಾಗಳಲ್ಲಿ ಪೋಷಕ ಪಾತ್ರ ವಹಿಸಿದ್ದರು. ಅವರ ಹೆಸರು ನೆನಪಿಲ್ಲ. ಅವರ ಮನೆಯ ಬಳಿ ಮತ್ತೊಬ್ಬರು ಗಾರ್ಡ್ ಇದ್ದರು. ಅವರ ಮಗಳು ನನ್ನ ತಂಗಿಯ ಗೆಳತಿ. ಅವರ ಮನೆಗೆ ನಾನು ಕೂಡ ಹೋಗುತ್ತಿದ್ದೆ. ಏಕೆಂದರೆ ಅವರ ಮನೆಯಲ್ಲಿ ಕನ್ನಡ ಸಿನಿಮಾಗಳ ಪುಸ್ತಕಗಳು ಇರುತ್ತಿದ್ದವು.
ಥಿಯೇಟರಿಗೆ ಹೋದರೆ ಅಲ್ಲಿ ಐದು ಪೈಸೆಗೋ ಹತ್ತು ಪೈಸೆಗೋ ನಾಲ್ಕಾಣೆಗೋ ಒಂದು ಪುಸ್ತಕ ಮಾರುತ್ತಿದ್ದರು. ಅದು ಆಗ ಆ ಥಿಯೇಟರಿನಲ್ಲಿ ‘ಓಡುತ್ತಿದ್ದ’ ಕನ್ನಡ ಸಿನಿಮಾದ ಬಗ್ಗೆ ಪುಸ್ತಕ.
ಆ ಪುಟ್ಟ ಪುಸ್ತಕದ ಮುಖಪುಟದಲ್ಲಿ ಸಿನಿಮಾದ ಹೆಸರು, ಮುಖ್ಯ ನಟರ ಕಪ್ಪುಬಿಳುಪು ಚಿತ್ರಗಳು. ಒಳಗೆ ಆ ಸಿನಿಮಾದ ಕಥೆಯ ಬಗ್ಗೆ ಕೆಲವು ಸ್ವಾರಸ್ಯಕರ ಸಾಲುಗಳಿರುತ್ತಿದ್ದವು. ಕಥೆಯನ್ನು ಒಂದು ಮುಖ್ಯ ಘಟ್ಟದಲ್ಲಿ ನಿಲ್ಲಿಸಿ, ಮುಂದೇನಾಯಿತು...? ಎಂದು ಬರೆದು, ಮುಂದಿನದನ್ನು ರಜತಪರದೆಯ ಮೇಲೆ ನೋಡಿ ಆನಂದಿಸಿ ಎಂದು ಬರೆದಿರುತ್ತಿದ್ದರು. ಅತ್ಯಂತ ಗೋಳು ಸಿನಿಮಾಗೆ ಕೂಡ ‘ಆನಂದಿಸಿ’ ಎಂದೇ ಬರೆದಿರುತ್ತಿದ್ದರು!
ಮುಂದಿನ ಪುಟಗಳಲ್ಲಿ ಆ ಸಿನಿಮಾದ ಹಾಡುಗಳ ಸಾಹಿತ್ಯ. ಅದನ್ನು ಬರೆದವರು, ಹಾಡಿದವರು ಈ ವಿವರಗಳು ಕೂಡ ಇರುತ್ತಿದ್ದವು.
ಗೆಜ್ಜೆಪೂಜೆ ಸಿನಿಮಾದ ಪುಸ್ತಕ ಓದಿ ಅದರಲ್ಲಿ ‘ಒಂದು ದಿನ ರಾತ್ರಿಯಲೀ ಕಂಡೇ ಕನಸೊಂದು’ ಹಾಡು ಇದೆ ಎಂದು ನೋಡಿ, ಸಿನಿಮಾದಲ್ಲಿ ನೋಡಿದರೆ ಅದು ಇಲ್ಲ!
ಆಗಿನ ಕಾಲದಲ್ಲಿ ಸಿ.ಡಿ.ಗಳಿರಲಿ, ಕ್ಯಾಸೆಟ್‍ಗಳೂ ಇರುತ್ತಿರಲಿಲ್ಲ. ರೆಕಾರ್ಡ್‍ಗಳಿರುತ್ತಿದ್ದವು. ಎಲ್‍ಪಿ ಮತ್ತು ಇಪಿ. ಎಲ್ ಪಿ ಅಥವಾ ಲಾಂಗ್‍ಪ್ಲೇ ರೆಕಾರ್ಡ್‍ಗಳಲ್ಲಿ ಚಿತ್ರದ ಇಡೀ ಹಾಡುಗಳನ್ನು ಆ ರೆಕಾರ್ಡ್‍ನ ಎರಡೂ ಕಡೆ ಮುದ್ರಿಸಿರುತ್ತಿದ್ದರು. ಒಂದು ಫೋನೋಗ್ರಾಫ್. ಅದರಲ್ಲಿ ಒಂದು ದೊಡ್ಡ ಮೈಕು. ಒಂದು ತಿರುಗುವ ತಟ್ಟೆ. ಅದರ ಮೇಲೆ ರೆಕಾರ್ಡ್ ಇಟ್ಟು ಒಂದು ಚಿಕ್ಕ ಸೂಜಿಯನ್ನು ಒಂದು ತುದಿಗೆ ಇಟ್ಟರೆ ಅದು ತಿರುಗಿ ಹಾಡುತ್ತಿತ್ತು.
ಇಪಿ ಎಂದರೆ ಎಕ್ಸ್‍ಟೆಂಡೆಡ್ ಪ್ಲೇ. ಅದರಲ್ಲಿ ಆ ಕಡೆ ಈ ಕಡೆ ಒಂದೊಂದು ಹಾಡು ಇರುತ್ತಿದ್ದವು.
ಸಿನಿಮಾದಲ್ಲಿ ಇರುವ ಹಾಡನ್ನು ಕತ್ತರಿಸುವ ಅವಕಾಶ ಈ ರೆಕಾರ್ಡ್‍ಗಳಲ್ಲಿ ಇರುತ್ತಿತ್ತು. ಉದಾಹರಣೆಗೆ ಏಳು ಸ್ವರಗಳ ಭಾವ ಗೀತೆಯ ಸಂಗೀತ... ಅ ಅ ಅ ಅ ಅ ಅ ಎನ್ನುತ್ತಾನೆ ಗಾಯಕ. ಆದರೆ ಅದು ರೆಕಾರ್ಡ್‍ನಲ್ಲಿ ಕಟ್! ಏಕೆಂದರೆ ಸ್ವಲ್ಪ ಉದ್ದ ಜಾಸ್ತಿ ಆಗಿದ್ದಿರಬೇಕು. ಮಡಿಲಲಿ ಒಂದು ತೊಟ್ಟಿಲಲೊಂದು ಪುಟ್ಟಿಯ ಕಾಡುತ ಅಳಬೇಕು ಎಂದು ಪಿಬಿಎಸ್ ಹಾಡಿದಾಗ ಎಸ್ ಜಾನಕಿ ಪುಟ್ಟ ಹುಡುಗಿಯ ವಾಯ್ಸ್‍ನಲ್ಲಿ ಆಹಹಹ ಎನ್ನುವ ಅಳು ಇದೆ. ಆಮೇಲೆ ಹಾಡು ಕಟ್. ಗಂಧದ ಗುಡಿಯ ಸಿನಿಮಾದಲ್ಲಿ ನೋಡಿದರೆ ಇನ್ನೂ ಒಂದಿಷ್ಟು ಉದ್ದ ಇದೆ ಹಾಡು.
ಬೆರೆತಾ ಜೀವಕೆ ಹರಕೆಯ ತರಲು... ಎಂದು ಹಾಡಿ ನಂತರ ಎಸ್ ಜಾನಕಿ, ರಾಜ್ ಹಮ್ ಮಾಡುತ್ತಾರೆ. ಆಮೇಲೆ ಹಾಡಿಲ್ಲ. ಸಿನಿಮಾದಲ್ಲಿ ಮಳೆಯನು ಸುರಿಸಿದೆ ಕಪ್ಪನೆ ಮುಗಿಲು ಎಂದು ಬರುತ್ತದೆ.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102