ಯತಿ ಸ್ವಂತೀ -84


25-03-2018
ಪಿಯುಸಿ ಓದಲು ನಾನು ಬೆಂಗಳೂರಿಗೆ ಬಂದೆ. ಜಯನಗರದ ನಾಲ್ಕನೇ ಬ್ಲಾಕ್‍ನ ನನ್ನ ಸೋದರತ್ತೆಯ ಮನೆಯಲ್ಲಿದ್ದೆ. ಆ ಸಮಯದಲ್ಲಿ ನನಗೆ ಬಹಳ ದಿನಗಳು ರಜೆ ಬಂದಿದ್ದವು. ಮಾತೆತ್ತಿದರೆ ಬೆಂಗಳೂರು ಯೂನಿವರ್ಸಿಟಿಯವರು ಸ್ಟ್ರೈಕ್ ಮಾಡುತ್ತಿದ್ದರು.
ಮನೆಯಲ್ಲೇ ಬಹಳ ಹೊತ್ತು ಕಾಲ ಕಳೆಯುವ ಸಮಯದಲ್ಲಿ ನನ್ನ ಸೋದರ ಮಾವನ ಬಳಿ ನೋಡಿದ್ದ ಜೇಮ್ಸ್ ಹ್ಯಾಡ್ಲಿ ಛೇಸ್ ಪುಸ್ತಕ ‘ಮಿಷನ್ ಟು ವೆನಿಸ್’ನ ನೆನಪಾಯಿತು.
ಜಯನಗರದ ಮನೆಯ ಬಳಿ ನೋಚೂರ್ ಲೈಬ್ರೆರಿ ಎಂಬ ವಾಚನಾಲಯವಿತ್ತು. ಅದರ ಒಡೆಯ ಬಾಬು (ಉದಯ್) ನನಗೆ ದೋಸ್ತ್. ಅವನ ಬಳಿ ಇದ್ದ ಎಲ್ಲ ಛೇಸ್ ಕಾದಂಬರಿಗಳನ್ನು ಅನೇಕ ಸಲ ತಿರುವಿ ಹಾಕಿದೆ. ಅದೇ ಸಮಯದಲ್ಲಿ ಡೆಸ್ಮಂಡ್ ಬ್ಯಾಗ್ಲಿ, ಆಲಿಸ್ಟೈರ್ ಮ್ಯಾಕ್‍ಲೀನ್, ಅರ್ಲ್ ಸ್ಟ್ಯಾನ್ಲಿ ಗಾರ್ಡ್‍ನರ್ ಎಲ್ಲರನ್ನೂ ಓದಿದೆ.
ಡೆಸ್ಮಂಡ್ ಬ್ಯಾಗ್ಲಿಯ ಟೈಟ್‍ರೋಪ್‍ಮನ್ ಓದಿದಾಗ ಏನೋ ಒಂದು ಹೊಸ ಥ್ರಿಲ್. ನನ್ನ ಅಸಂಗತ ಕಾದಂಬರಿ ಗಾಥೆ ಬರೆಯುವಾಗ ಅದರ ಒಂದು ಭಾಗವನ್ನು ಅಪ್ರಯತ್ನವಾಗಿ ಬಳಸಿದೆ! ಅದನ್ನು ಚೆನ್ನೈನ ಲೇಖಕ ನಾಗೇಶ್ ಕುಮಾರ್ ಕಂಡು ಹಿಡಿದರು ಕೂಡ!
ಅದೇ ಸಮಯದಲ್ಲಿ ನನ್ನ ಸೋದರತ್ತೆಯ ಮಕ್ಕಳ ಬಳಿ ಎನಿಡ್ ಬ್ಲೈಟನ್ ಎಂಬ ಲೇಖಕಿಯ ಪುಸ್ತಕಗಳು ದೊರೆತವು. ಅಬ್ಬಾ! ಮಕ್ಕಳಿಗೆ ಆಕೆ ಎಂತೆಂತಹ ಸಾಹಸಮಯ ಪುಸ್ತಕಗಳನ್ನು ಬರೆದಿದ್ದಾಳೆ!
ಮಿಸ್ಟರಿಗಳು, ಅಡ್ವೆಂಚರುಗಳು... ಇವನ್ನು ಅದೆಷ್ಟು ಸಲ ಓದಿರುವೆನೋ... ಮಕ್ಕಳಿಗಾಗಿ ಬರೆಯಲು ಇಷ್ಟವಾಗಿ ಅಕ್ಷರ ಸಾಹಸಿಗಳು ಎಂಬ ಕಾದಂಬರಿ ಆರಂಭಿಸಿದೆ ಕೂಡ. ಆದರೆ ಅದು ಆಗಲ್ಲ, ನಾನು ಬರೆಯಲಾರಂಭಿಸಿದ್ದು 1989ರಲ್ಲಿ.
ನೋಚೂರ್ ಲೈಬ್ರರಿಗೆ ಮ್ಯಾಗಝೀನ್ ಅಂಗಡಿಯಿಂದ ಹೊಸ ಪತ್ರಿಕೆಗಳನ್ನು ತರಲಾರಂಭಿಸಿದೆ. ಸ್ಟಾರ್‍ಡಸ್ಟ್, ಸ್ಟಾರ್ ಆಂಡ್ ಸ್ಟೈಲ್, ಫಿಲ್ಮ್‍ಫೇರ್ ಎಲ್ಲವನ್ನೂ ಮೊದಲು ಮನೆಗೆ ಒಯ್ದು ಓದಿ ನಂತರ ಲೈಬ್ರರಿಗೆ ನೀಡುವಷ್ಟು ಓದುವ ಹುಚ್ಚು.
ಹೊಸ ಕಾದಂಬರಿ ಯಾವುದು ಬಂದರೂ ಕೊಂಡು ತರುವ ಹಕ್ಕು ನನಗಿತ್ತು. ನಾನು ಓದಿ ನಂತರ ಲೈಬ್ರರಿಗೆ ನೀಡಿ ಹಣ ಪಡೆಯುತ್ತಿದ್ದುದೂ ಉಂಟು.
ಬಹಳ ಜನ ತಮಿಳು ಓದುಗರು ಬರುತ್ತಿದ್ದರು. ರಾಣಿ, ರಾಣಿ ಮುತ್ತು, ಮುಕ್ತಾರಂ ಮತ್ತು ತಿಂಗಳಿಗೊಂದು ಕಾದಂಬರಿ ಪ್ರಕಟಿಸುತ್ತಿದ್ದ ಅನೇಕ ತಮಿಳು ಮಾಸಿಕಗಳನ್ನು ತರುತ್ತಿದ್ದೆ.
ಕೇವಲ ಶೀರ್ಷಿಕೆಗಳನ್ನು ಓದುವಷ್ಟು ತಮಿಳು ಕಲಿತಿದ್ದೆ. ರಾಜೇಂದ್ರಕುಮಾರ್, ರಾಜೇಶ್‍ಕುಮಾರ್, ಹೇಮಾ ಆನಂದತೀರ್ಥನ್, ಸುಜಾತ ಹೀಗೆ ಲೇಖಕರ ಹೆಸರುಗಳನ್ನು ನೋಡಿ ಪುಸ್ತಕಗಳನ್ನು ತರುತ್ತಿದ್ದೆ.
ತರಂಗ ವಾರಪತ್ರಿಕೆ ಬರುತ್ತಿದ್ದಾಗ ಇದ್ಯಾವುದೋ ಸುಧಾಗೆ ಸೆಡ್ಡು ಹೊಡೆಯುವ ಹಾಗಿದೆ ಎಂದು ಖುಷಿಯಿಂದ ಓದುತ್ತಿದ್ದ ಕಾಲವೂ ಇತ್ತು.
ಅಷ್ಟು ಹೊತ್ತಿಗೆ ನಾನು ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದೆ. ಆದರೂ ನೋಚೂರ್ ಲೈಬ್ರರಿಯ ಕನೆಕ್ಷನ್ ಇತ್ತು. ಹಾಗೆಯೇ ಈ ಪತ್ರಿಕೆಗಳನ್ನು, ಪುಸ್ತಕಗಳನ್ನು ಕೊಂಡು ತರುತ್ತಿದ್ದ ಜಯನಗರ ಕಾಂಪ್ಲೆಕ್ಸ್‍ನ ನಾಗಶ್ರೀ ಬುಕ್‍ಹೌಸ್‍ನ ವೆಂಕಟೇಶ್, ಗುರು ಇವರುಗಳು ಕೂಡ ಪರಿಚಿತರಾದರು. ಇವರು ಇಂದಿಗೂ ನನಗೆ ಪರಿಚಿತರೇ.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102