ಯತಿ ಸ್ವಂತೀ -83
24-03-2018
2004ರ ನವೆಂಬರ್ ತಿಂಗಳಲ್ಲಿ ನನ್ನ ದೊಡ್ಡ ಬಾಸ್ ಕರೆದು ‘ನೀನು ನಿಝ್ವಾಗೆ ಹೋಗಿ ಅಲ್ಲಿನ ಲೈಟಿಂಗ್ ಷೋ ರೂಂ ನೋಡಿಕೊಳ್ಳಬೇಕು. ಅಲ್ಲಿ ಇನ್‍ಛಾರ್ಜ್ ಆಗಿರೋ ಪೈ ಅವರು ವರ್ಷದ ರಜೆಗೆ ಊರಿಗೆ ಹೋಗುತ್ತಾರೆ. ನೀನು ಅಲ್ಲಿಗೆ ಹೋಗು’ ಎಂದರು.
ಏನೋ ಒಂದು ರೀತಿಯ ಥ್ರಿಲ್. ಷೋ ರೂಮ್‍ಗೆ ಇನ್‍ಛಾರ್ಜ್. ಆದರೆ ಅಷ್ಟು ಹೊತ್ತಿಗೆ ನನಗೆ ಆ ದೇಶದಲ್ಲಿನ ನನ್ನ ಒಂಟಿತನ ಬೇಸರ ತಂದುಬಿಟ್ಟಿತ್ತು. ಏನು ಮಾಡಲೂ ತೋಚದ ಪರಿಸ್ಥಿತಿ. ಸಂಬಳ ಬೇಕು, ಅಂದರೆ ಕೆಲಸ ಮಾಡಬೇಕು. ಆದರೆ ಮನೆಯವರನ್ನು ಕರೆತರಲಾರೆ. ಇದೆಂತಹ ವಿಚಿತ್ರ ಪರಿಸ್ಥಿತಿ! ಎನ್ನಿಸದಿರಲಿಲ್ಲ.
ಆದರೂ ಅಲ್ಲಿ ಇರುವವರೆಗೂ ಅಲ್ಲಿನ ಬಾಸ್ ಹೇಳಿದ ಹಾಗೆ ಕೇಳಬೇಕಾದುದು ನನ್ನ ಧರ್ಮ. ಅದಕ್ಕೇ ನನ್ನ ಬಟ್ಟೆಯ ಲಗೇಜ್ ಸಹಿತ ಕಾರಿನಲ್ಲಿ ಹೊರಟೆ. ಅದು ಸುಮಾರು 180 ಕಿಮೀ ದೂರದ ಊರು. ಹೆಚ್ಚು ಕಡಿಮೆ ಅಗಲ ರಸ್ತೆಗಳಿದ್ದ ದಾರಿ. ಐದನೇ ಗೇರ್‍ನಲ್ಲೇ ಕಾರು ಚಾಲಿಸುವುದು, ರೌಂಡೆಬೌಟ್ (ಸರ್ಕಲ್) ಬಂದಾಗ ನಾಲ್ಕನೇ ಗೇರ್‍ನಲ್ಲಿ ಕಾರೋಡಿಸುವುದು ಮಾಡುತ್ತಾ ನಿಝ್ವಾ ತಲುಪಿದೆ.
ಊರಿನೊಳಗೆ ಬರುತ್ತಿದ್ದಂತೆ ದೊಡ್ಡ ಕೋಟೆಯೊಂದು ನನ್ನನ್ನು ಸ್ವಾಗತಿಸಿತು. ನಿಝ್ವಾ ಫೋರ್ಟ್ ಹಿಂದೊಮ್ಮೆ ನೋಡಿದ್ದೆ ಹೊರಗಿನಿಂದ.
ಅದರ ಪಕ್ಕದ ಅಂಗಡಿಯ ಗುಚ್ಛದಲ್ಲಿ ನಮ್ಮ ಕಂಪೆನಿಯ ಲೈಟಿಂಗ್ ಷೋ ರೂಂ ಇತ್ತು. ಪೈ ಮಾಮ್ ಮತ್ತು ಅವರ ಪತ್ನಿ ಬಹಳ ಆದರದಿಂದ ನೋಡಿಕೊಂಡರು. ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಜೀವನ್‍ಪ್ರಕಾಶನನ್ನು ಒಮ್ಮೆ ಹಿಂದೆ ನೋಡಿದ್ದ ನೆನಪು. ತಮಿಳುನಾಡಿನ ಹುಡುಗ. ಅವನೂ ಪ್ರೀತಿಯಿಂದ ಸ್ವಾಗತಿಸಿದ.
ಪೈಯವರು ನನ್ನನ್ನು ಅವರ ಗ್ರಾಹಕರಿಗೆ ಪರಿಚಯಿಸಲು ಕರೆದೊಯ್ದರು. ಅವರ ಕಾರಿನಲ್ಲಿ ಸುಮೈಲ್ ಎನ್ನುವ 180 ಕಿಮೀ ದೂರದ ಜಾಗ, ಇಬ್ರಿ ಎನ್ನುವ ಇನ್ನೂರು ಕಿಮೀ ದೂರದ ಜಾಗ ಮತ್ತು ಇಝ್ಕಿ ಎನ್ನುವ ಮೂವತ್ತೈದು ಕಿಮೀ ದೂರದ ಜಾಗ. ಈ ಮೂರು ಕಡೆ ನಮ್ಮ ಗ್ರಾಹಕರಿದ್ದರು. ಅವರಿಗೆಲ್ಲ ಅವರು ಕೇಳಿದಾಗ ಎಲೆಕ್ಟ್ರಿಕಲ್ ಉತ್ಪನ್ನಗಳನ್ನು ತೆಗೆದುಕೊಂಡು ಹೋಗಿ ಕೊಡಬೇಕಿತ್ತು.
ಪೈ ಮಾಮ್ ಬಹಳ ಚೆನ್ನಾಗಿ ಹಾಡುತ್ತಾರೆ. ಅವರೊಂದಿಗೆ ಹೋಗುವಾಗ ನಮ್ಮ ಮಾತುಗಳಂತೂ ಎಲ್ಲೆಲ್ಲೋ ಹೋಗುತ್ತಿದ್ದವು. ಭೀಮಸೇನ ಜೋಷಿ ಮತ್ತು ಲತಾ ಮಂಗೇಷ್ಕರಳ ಭಜನಾರ್ಪಣ್ ಕೇಳಿದ ನೆನಪಿದೆ. ಪೈ ಮಾಮ್ ಭಜನ್ ಹಾಡುವುದರಲ್ಲಿ ನಿಪುಣ.
ಅನೇಕ ಶುಕ್ರವಾರಗಳು ಕೃಷ್ಣನ ದೇವಸ್ಥಾನದಲ್ಲಿ ಅವರು ಹಾಡಿರುವುದನ್ನು ಕೇಳಿದ್ದೆ.
ಪೈ ಮಾಮ್ ನನಗೆ ಅವರ ಗ್ರಾಹಕರೆಲ್ಲರ ಪರಿಚಯ ಮಾಡಿಕೊಟ್ಟರು. ಇಝ್ಕಿಗೆ ಹೋಗುವಾಗ ಎರಡು ದಾರಿಗಳಿದ್ದವು. ಸಿಂಗಲ್ ಟ್ರ್ಯಾಕ್‍ನಲ್ಲಿ ಹೋಗಬೇಡವೆಂದು ಎಚ್ಚರಿಕೆ ನೀಡಿದ್ದರು. ಆದರೆ ಇಬ್ರಿಗೆ ಮಾತ್ರ ಇದ್ದಿದ್ದು ಒಂದೇ ಹಾದಿ. ಸುಮಾರು ಇನ್ನೂರು ಕಿಮೀ ದೂರದ ರಸ್ತೆ. ಸಿಂಗಲ್ ಟ್ರ್ಯಾಕ್. ಆ ಕಡೆ ಈ ಕಡೆ ಕಲ್ಲಿನ ಪರ್ವತಗಳು.
ರಸ್ತೆಯಲ್ಲಿ ಬಹಳ ಹೊತ್ತು ಕೇವಲ ಒಂಟೆಗಳು, ಆಡು, ಕುರಿಗಳ ಹೊರತಾಗಿ ಬೇರೇನೂ ಕಾಣಸಿಗವು. ಅವನ್ನು ದಾಟುವಾಗ ಜಾಗರೂಕತೆಯಿಂದ ಇರದಿದ್ದರೆ ಕಾರು ಜಜ್ಜಿ ಹೋಗುವ ಅಪಾಯವಿತ್ತು.
Comments
Post a Comment