ಯತಿ ಸ್ವಂತೀ -82
23-03-2018
ಶುಕ್ರವಾರದ ದಿನ ಬೆಳಗ್ಗೆ ಇಡೀ ಮಸ್ಕತ್ ಪಟ್ಟಣ ಮನೆ ಬಿಟ್ಟು ಹೊರಬರುತ್ತಿರಲಿಲ್ಲ. ಮಧ್ಯಾಹ್ನ ನಮಾಜ್ ಸಮಯಕ್ಕೆ ಹೊರಗೆ ಬರುತ್ತಿದ್ದರು. ಮಸೀದಿಗೆ ಹೋಗುತ್ತಿದ್ದರು.
ನಾವಂತೂ ಮನೆ ಬಿಟ್ಟು ಬರುತ್ತಲೇ ಇರಲಿಲ್ಲ ಎನ್ನುವಂತಿರಲಿಲ್ಲ. ನಮಗೆ ಸಮಯ ಸರಿಯುತ್ತಿರಲಿಲ್ಲ. ಅದಕ್ಕೇ ಬೆಳಗ್ಗೆ ಎದ್ದು ಸಿದ್ಧವಾಗಿ ಸರಸರನೆ ಒಂದು ಮಹಡಿ ಇಳಿದು ಆಫೀಸಿಗೆ ಬರುತ್ತಿದ್ದೆವು. ಅಂದು ಎಲ್ಲರೂ ಟೀ ಷರ್ಟ್ ಜೀನ್ಸ್ ಪ್ಯಾಂಟ್ ಚಪ್ಪಲಿ ಧರಿಸುತ್ತಿದ್ದೆವು.
ಹೇಗೂ ಹತ್ತಿರದ ಹೊಟೇಲ್‍ನಲ್ಲಿ ತಿಂಡಿ ಆಗಿರುತ್ತಿತ್ತು. ನಂತರ ಆಫೀಸಿನಲ್ಲಿ ಕೆಲಸ ಮಾಡುತ್ತಾ ಕೂರುತ್ತಿದ್ದೆವು.
ಮಸ್ಕತ್‍ನಲ್ಲಿ ಶುಕ್ರವಾರ ರಜೆ. ಆ ದೇಶದ ಟೆಂಡರ್‍ಗಳೆಲ್ಲವೂ ಸಾಮಾನ್ಯವಾಗಿ ಭಾನುವಾರ ಬೆಳಗ್ಗೆ ಓಪನ್ ಆಗುತ್ತಿದ್ದವು. ನಾವು ಶುಕ್ರವಾರ ಆಫೀಸಿನಿಂದ ನಮ್ಮ ಕಂಪೆನಿಗೆ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಇಂಗ್ಲೆಂಡ್ ಮತ್ತು ಅಮೆರಿಕಾ ದೇಶದ ಕಂಪೆನಿಗಳಿಗೆ ಶುಕ್ರವಾರವೇ ಫೋನ್ ಮಾಡಿ, ಫ್ಯಾಕ್ಸ್, ಮೆಯಿಲ್ ಕಳಿಸಿ ದರಗಳನ್ನು ತರಿಸಿಕೊಳ್ಳಬೇಕಿತ್ತು.
ಮಧ್ಯಾಹ್ನ ಒಂದೂವರೆ ವರೆಗೆ ಕೆಲಸ ಮಾಡಿ, ಕೆಲವೊಮ್ಮೆ ರೂಮಿಗೆ ಹಿಂದಿರುಗಿ ಊಟ ಮಾಡಿ ನಿದ್ರೆ ಮಾಡುತ್ತಿದ್ದೆ.
ಊಟವು ಹತ್ತಿರದ ಒಮಾನ್ ಎಕ್ಸ್‍ಪ್ರೆಸ್ ಎನ್ನುವ ಹೊಟೇಲ್‍ನಿಂದ ಕವರ್‍ಗಳಲ್ಲಿ ಬರುತ್ತಿತ್ತು.
ಕಾರಿಲ್ಲದ ನಾನು, ಹೆಚ್ಚು ಗೆಳೆಯರಿಲ್ಲದ ನಾನು ಒಂಟಿಯಾಗಿ ಶುಕ್ರವಾರ ಸಂಜೆಯನ್ನು ಕಳೆಯುತ್ತಿದ್ದೆ. ಕೆಲವೊಮ್ಮೆ ನಡೆದು ಹೋಗಿ ಹತ್ತಿರದ ಥಿಯೇಟರ್‍ನಲ್ಲಿ ಸಿನಿಮಾ ನೋಡುತ್ತಿದ್ದೆ. ಬಹಳ ಕಡಿಮೆ ಸಲ ಸಹೋದ್ಯೋಗಿಗಳು ನನ್ನನ್ನು ಜೊತೆಗೆ ಕರೆದೊಯ್ಯುತ್ತಿದ್ದರು. ಅಯ್ಯೋ ಪಾಪ, ಒಂಟಿಬಡಕ ಎನ್ನುವ ಭಾವನೆಯಿಂದಲೂ ಇದ್ದೀತು.
ಡ್ರೈವಿಂಗ್ ಕಲಿಯಲು ಅನುಮತಿ ಕೊಡಬೇಕಾದ ದೊಡ್ಡ ಬಾಸ್ ಇನ್ನೂ ಭಾರತದಿಂದ ಹಿಂದಿರುಗಿರಲಿಲ್ಲ. ಕೇವಲ ಅವರು ಮಾತ್ರವೇ ಕಾರು ಕಲಿಯಲು ಅನುಮತಿ ಕೊಡಬೇಕಿತ್ತು.
ನನಗೆ ಒಂದು ರೀತಿಯ ಮೆಂಟಲ್‍ಬ್ಲಾಕ್ ಇತ್ತು ಕಾರು ಓಡಿಸುವುದರ ಬಗ್ಗೆ. ಇದೂ ಒಳ್ಳೆಯದೇ ಆಯಿತು ಎಂದು ಹಾಯಾಗಿ ಇರುತ್ತಿದ್ದೆ.
ಸೋಮವಾರ ಬೆಳಗ್ಗೆ ಪಕ್ಕದ ರೂಮಿನ ಸಹೋದ್ಯೋಗಿಗಳು ನನ್ನನ್ನೂ ಶಿವನ ಗುಡಿಗೆ ಕರೆಯುತ್ತಿದ್ದರು. ಬೆಳಗ್ಗೆ ಆರೂವರೆಗೇ ಹೋಗಿ ಶಿವ ಮತ್ತು ಉದ್ಭವ ಹನುಮ ಗುಡಿಗಳಿಗೆ ಹೋಗುತ್ತಿದ್ದೆವು. ಅಲ್ಲಿನ ರಸ್ತೆ ಅದೆಷ್ಟು ಕಿರಿದೆಂದರೆ ನಾನು ಕಾರು ಕಲಿತರೆ ಇಲ್ಲಿ ಖಂಡಿತ ಓಡಿಸಲಾರೆ ಎಂದು ನಿರ್ಧರಿಸಿಬಿಟ್ಟಿದ್ದೆ! (ಅದು ಸುಳ್ಳೆಂದು ಬಹಳ ದಿನಗಳ ನಂತರ ತಿಳಿಯಿತು!)
ನಮಶ್ಶಿವಾಯ ಓಂ ನಮಶ್ಶಿವಾಯ ಹರ ಹರ ಶಿವ ಶಿವ ನಮಶ್ಶಿವಾಯ ವಿಶ್ವೇಶ್ವರಾಯ... ರಾಮೇಶ್ವರಾಯ... ಹೀಗೆ ಈ ಹಾಡು ಗುಡಿಯಲ್ಲಿ ಹಾಕುತ್ತಿದ್ದರು.
ಈಗಲೂ ನಮ್ಮ ಮನೆಯ ಬಳಿ ಶನಿವಾರಗಳಂದು ಈ ಹಾಡು ಕೇಳಿಸಿದಾಗ ಆ ದಿನಗಳ ನೆನಪಾಗುತ್ತದೆ.
ಕೆಲವೊಮ್ಮೆ ಭಕ್ತಾದಿಗಳು ಈ ದೇವರ ನಾಮಗಳ ಕ್ಯಾಸೆಟ್‍ಗಳನ್ನು ಗುಡ್ಡೆ ಹಾಕಿರುತ್ತಿದ್ದರು. ಅವುಗಳನ್ನು ತಂದು ಕಾರಿನಲ್ಲಿ ಕೇಳುತ್ತಿದ್ದೆವು.
ಶನಿವಾರ ಸಂಜೆಯಂತೂ ನಮಗೆ ತಿನ್ನಲು ಯಥೇಚ್ಛವಾಗಿ ಸಿಗುತ್ತಿತ್ತು ಪ್ರಸಾದ!
Comments
Post a Comment