ಯತಿ ಸ್ವಂತೀ -81
22-03-2018
ಮಸ್ಕತ್‍ನಲ್ಲಿ ಕಾಲಿಟ್ಟ ಕೆಲವು ದಿನಗಳು ನಾನು ನನ್ನ ಸಹೋದ್ಯೋಗಿಗಳೊಂದಿಗೆ ಮಾತ್ರವೇ ಹೊರಗೆ ಕಾರಿನಲ್ಲಿ ಹೋಗುತ್ತಿದ್ದೆ. ಆ ನಂತರ ಯಾವುದು ಎಲ್ಲಿದೆಯೆಂಬ ಅವಗಾಹನೆ ಬಂದಿತು. ಹತ್ತಿರದ ರೂವಿ ಹೈ ಸ್ಟ್ರೀಟ್ ನಮ್ಮೂರಿನ ಎಂ.ಜಿ. ರಸ್ತೆ ಇದ್ದ ಹಾಗೆ. ಅಲ್ಲಿ ಎಲ್ಲವೂ ಸಿಗುತ್ತಿತ್ತು. ಚಿನ್ನದಿಂದ ಮೊದಲುಗೊಂಡು ಒಂದು ಗುಂಡುಪಿನ್ ವರೆಗೂ ಎಲ್ಲವನ್ನೂ ಅಲ್ಲಿ ಕೊಳ್ಳಬಹುದಿತ್ತು.
ಒಬ್ಬನೇ ಹೋದೆ ಒಮ್ಮೆ. ಆಫೀಸ್ ಮೇಲೇ ನನ್ನ ರೂಮ್. ಸಂಜೆ ಬಿಸಿಲು ಕಡಿಮೆಯಾದ ಮೇಲೆ ಸೂರ್ಯನ ಶಾಖವು ಸುಡುತ್ತಿದ್ದರೂ ಹೊರಗೆ ಹೊರಟೆ.
ಏನು ಮಾಡುವುದು? ಯಾವಾಗಲೋ ಒಮ್ಮೆ ನಾನೊಬ್ಬನೇ ಹೋಗಲೇಬೇಕಾದ ಸ್ಥಿತಿ ಬಂದೇ ಬರುತ್ತದೆ. ಎಲ್ಲರೂ ಸದಾ ಯಾರಿಗೂ ಸಹಾಯ ಮಾಡಲಾರರು. ಅದೂ ಅಲ್ಲದೇ ನಾನು ಅಲ್ಲಿದ್ದ ಎಲ್ಲರಿಗೂ ಅಪರಿಚಿತ. ಮೇಲಾಗಿ ನಲವತ್ತೈದು ವರ್ಷಗಳು ಇನ್ನೇನು ಆಗುವ ಸಮಯವದು.
ಉಳಿದವರೆಲ್ಲ ಚಿಕ್ಕವರು. ನನ್ನ ವಯಸ್ಸಿನವರು ಎಲ್ಲರೂ ದೊಡ್ಡ ಪದವಿಯಲ್ಲಿದ್ದರು. ಒಂದು ರೀತಿ ‘ಅಮ್ಮನಿಲ್ಲದ ಮಗು’ ನಾನು. ಎಂದಿಗೂ ಎಲ್ಲಿಯೂ ನನ್ನದೇ ಆದ ಛಾಪು ಮೂಡಿಸಲು ಸಾಧ್ಯವಾಗದ ಬದುಕು.
ಈಗ ಹೇಳಲು ಅಷ್ಟು ಕಷ್ಟ ಆಗುವುದಿಲ್ಲ. ಆಗೆಲ್ಲ ನನ್ನ ಮನಃಸ್ಥಿತಿ ಹೇಗಿತ್ತೆಂದರೆ ಎರಡು ಹೊತ್ತು ಊಟ, ಮನೆಗೆ ಕಳಿಸಲು ಒಂದಿಷ್ಟು ಸಂಬಳ... ಅಷ್ಟೇ ನನ್ನ ಗುರಿಯಾಗಿತ್ತು.
ಸಿಂಡಿಕೇಟ್ ಬ್ಯಾಂಕ್‍ನಲ್ಲಿ ಇಲ್ಲಿ ನನ್ನ ಅಕೌಂಟ್ ಇತ್ತು. ಅಲ್ಲಿ ಮುಸಂದಂ ಎಕ್ಸ್‍ಛೇಂಜ್ ಎನ್ನುವ ಹಣ ವಿನಿಮಯದ ಕಂಪೆನಿ ಸಿಂಡಿಕೇಟ್ ಬ್ಯಾಂಕ್ ಜೊತೆ ಟೈ ಅಪ್ ಮಾಡಿಕೊಂಡಿತ್ತು. ಸಂಬಳವನ್ನು ಮುಸಂದಂ ಎಕ್ಸ್‍ಛೇಂಜ್‍ನಲ್ಲಿ ಕಟ್ಟಿದರೆ ಇಲ್ಲಿ ನನ್ನ ಪತ್ನಿ ಬ್ಯಾಂಕಿಗೆ ಹೋಗಿ ಅದನ್ನು ಪಡೆಯಬಹುದಿತ್ತು.
ಅದು ಕೂಡ ರೂವಿ ಹೈ ಸ್ಟ್ರೀಟ್‍ನಲ್ಲೇ ಇತ್ತು.
ನ್ಯಾಷನಲ್ ಬ್ಯಾಂಕ್ ಆಫ್ ಒಮಾನ್‍ನಲ್ಲಿ ನನ್ನ ಅಕೌಂಟ್ ಇತ್ತು. ಅಲ್ಲಿಗೆ ಹೋಗಿ ಹಣವನ್ನು ಡ್ರಾ ಮಾಡಬೇಕಿತ್ತು.
ನನ್ನ ಪಾಸ್‍ಪೋರ್ಟ್‍ನ ಫೋಟೋಕಾಪಿ ಬ್ಯಾಂಕಿನಲ್ಲಿತ್ತು. ಅದು ಅಮೆರಿಕದ ವೀಸಾ ಇದ್ದ ಪಾಸ್‍ಪೋರ್ಟ್. 2000ದ ಇಸವಿಯಲ್ಲಿ ಮೀಸೆ ಇಲ್ಲದೇ ಬೆಳ್ಳಗೆ ಇದ್ದ ಕಾಲ. ಆಗಿನ ಫೋಟೋ ಅದರಲ್ಲಿತ್ತು.
ಈಗ ನಾನು ಬಿಸಿಲಲ್ಲಿ ತಿರುಗಿ ಕಪ್ಪಾಗಿದ್ದೆ. ನನ್ನ ಬಾಸ್ ಸರ್ದಾರ್ಜಿ ‘ಯೇ ಸಚ್ ಬೋಲ್ತಾ ಹೈ ಕ್ಯಾ ನಾರಾಯನ್? ಯೇ ತುಮ್‍ಸೇ ಛೋಟಾ ಹೈ ಬೋಲ್ತಾ ಹೈ’ ಎಂದಿದ್ದರು! ಆ ದಿನವೇ ನಾನು ಮೀಸೆಯನ್ನು ಬಿಡಲಾರಂಭಿಸಿದ್ದೆ.
ಬ್ಯಾಂಕಿಗೆ ಹೋದರೆ ನನ್ನ ಸಹಿಯನ್ನು ಕಂಪ್ಯೂಟರ್‍ನಲ್ಲಿ ನೋಡಿ ಖಾತ್ರಿ ಮಾಡಿಕೊಂಡ ನಂತರ ಅಲ್ಲಿ ಕೆಲಸ ಮಾಡುತ್ತಿದ್ದ ಹೆಣ್ಣು ಮಕ್ಕಳು ನನ್ನ ಮುಖವನ್ನೂ, ಪಾಸ್‍ಪೋರ್ಟ್‍ನ ಚಿತ್ರವನ್ನೂ ನೋಡುತ್ತಿದ್ದರು. ಅವರಿಗೆ ಇವನೇ ಅವನಾ ಎನ್ನುವ ಅನುಮಾನ ಬಂದಂತಿರುತ್ತಿತ್ತು.
ತಕ್ಷಣವೇ ನಾನು ಅದನ್ನು ಗ್ರಹಿಸಿ ನನ್ನ ಮೇಲ್ದುಟಿಗಳ ಮೇಲ್ಭಾಗವನ್ನು ನನ್ನ ತೋರುಬೆರಳಿನಿಂದ ಮುಚ್ಚಿಕೊಳ್ಳುತ್ತಿದ್ದೆ. ಆಗ ನನ್ನ ಗುರುತು ಸಿಕ್ಕಿದ ನಗೆ ಚೆಲ್ಲಿದ ಹೆಣ್ಣುಮಕ್ಕಳು ನನ್ನ ಚೆಕ್ ಅನ್ನು ಪ್ರಾಸೆಸ್ ಮಾಡುತ್ತಿದ್ದರು!!
Comments
Post a Comment