ಯತಿ ಸ್ವಂತೀ -79


20-03-2018
ಮಹಾಜನ ಪ್ರೌಢಶಾಲೆಗೆ ನಮ್ಮ ಮನೆಯಿಂದ ನಡೆದು ಹೋಗುತ್ತಿದ್ದೆ. ಮನೆಯಿಂದ ಹೊರಗೆ ಬಂದು ಬಲಕ್ಕೆ ತಿರುಗಿ, ಸ್ವಲ್ಪ ದೂರ ನಡೆದರೆ ಮುಖ್ಯ ರಸ್ತೆ ಸಿಗುತ್ತಿತ್ತು. ಅಲ್ಲಿ ಎಡಕ್ಕೆ ತಿರುಗಿದರೆ ಸಿಟಿ. ಬಲಕ್ಕೆ ತಿರುಗಿದರೆ ಒಂಟಿಕೊಪ್ಪಲ್.
ಮೈಸೂರು ಕೆ ಆರ್ ಎಸ್ ರಸ್ತೆ ಅದು. ಅದರಲ್ಲಿ ಸ್ವಲ್ಪ ದೂರ ನಡೆದರೆ ಬಲಗಡೆಗೆ ಚೆಲುವಾಂಬಾ ಪಾರ್ಕ್, ಅದರಾಚೆಗೆ ಮೈಸೂರು ಆಕಾಶವಾಣಿ. ಇನ್ನೂ ಸ್ವಲ್ಪ ದೂರ ನಡೆದರೆ ಕಾಳಿದಾಸ ರಸ್ತೆ.
ಹಂಸಲೇಖರ ಕಾಳಿದಾಸನೂ ಇಲ್ಲಿ ರಸ್ತೆ ಆಗವ್ನೆ ಹಾಡು ಕೇಳಿದಾಗಲೆಲ್ಲ ನನಗೆ ಈ ರಸ್ತೆಯಲ್ಲಿ ನಡೆದು ಹೋಗಿದ್ದರ ನೆನಪಿದೆ. ಇನ್ನೂ ಒಂದಿಷ್ಟು ದೂರ ಹೋದರೆ ಈಶ್ವರನ ದೇವಸ್ಥಾನ, ಮಾತೃಮಂಡಳಿ ಸ್ಕೂಲ್. ಪಡುವಾರಳ್ಳಿ. ಅವನ್ನೂ ದಾಟಿ ಎಡಗಡೆಗೆ ತಿರುಗಿದರೆ ಮಹಾಜನ ಹೈಸ್ಕೂಲ್.
ಕಳೆದ ವರ್ಷ ನನ್ನ ದೂರದ ಬಂಧುವಿನ ಮದುವೆಯಾದಾಗ ಈ ಶಾಲೆಯ ಮುಂದೆ ಹೋದೆ. ಅಬ್ಬಾ... ಅದೆಷ್ಟು ವರ್ಷಗಳಾದವು ಈ ಶಾಲೆಯಲ್ಲಿ ಓದಿ ಮುಗಿಸಿ! 1970ರಿಂದ 1972 ಇಲ್ಲಿ ಓದಿದ್ದು.
ಮೊಟ್ಟಮೊದಲನೇ ಸಲ ಇಂಗ್ಲೀಷ್ ಮೀಡಿಯಂ. ಮೇಷ್ಟರು, ಮೇಡಂ ಏನು ಹೇಳಿದರೂ ಅರ್ಥವಾಗದ ಎಂಟನೇ ತರಗತಿ. ನಂತರ ನಿಧಾನವಾಗಿ ಎಲ್ಲವೂ ಅರ್ಥವಾಗತೊಡಗಿತ್ತು.
ಕೆಲವು ಸ್ನೇಹಿತರು ಮಿಡ್ಲ್‍ಸ್ಕೂಲ್‍ನಿಂದ ಇಲ್ಲಿಗೂ ಬಂದರು. ಕೆಲವರು ಹೊಸಬರು.
ಅಂತೂ ಇಂತೂ ಸೆಕೆಂಡ್‍ಕ್ಲಾಸ್‍ನಲ್ಲಿ ಹತ್ತನೇ ತರಗತಿಯನ್ನು ಪಾಸಾಗಿದ್ದೆ!
ಕನ್ನಡ ಮೇಷ್ಟ್ರು ರಾಘವಾಚಾರ್, ಮ್ಯಾತ್ಸ್‍ಗೆ ಶ್ರೀಕಂಠರಾವ್, ಕೆಮಿಸ್ಟ್ರಿಗೆ ಅಂಜನ ಕುಮಾರಿ, ಸೋಷಿಯಲ್ ಸ್ಟಡೀಸ್‍ಗೆ ದೇವನಾಯಕಿ, ಸೈನ್ಸ್‍ಗೆ ಅನಸೂಯ, ಇಂಗ್ಲೀಷ್‍ಗೂ ಅನಸೂಯ, ಹೆಡ್‍ಮೇಷ್ಟ್ರು ಜಿ.ಪಿ.ಸುಬ್ಬರಾಯ... ಎಷ್ಟು ಜನ! ಅವರುಗಳು ನಮ್ಮ ತರಲೆಗಳನ್ನು ಸಹಿಸಿಕೊಂಡು ಪಾಠ ಹೇಳಿಕೊಟ್ಟಿದ್ದರು.
ಶಶಿಧರ, ಸುರೇಶ, ಅರುಣ್, ವನಿತ್, ರಮೇಶ... ಜೊತೆಗೆ ನನ್ನ ಚಿಕ್ಕಪ್ಪ ನರಸಿಂಹಾಚಾರ್ ನನ್ನ ಸಹಪಾಠಿಗಳು.
ಇತ್ತೀಚೆಗೆ ನರಸಿಂಹಾಚಾರ್ ಉರ್ಫ್ ನಚ್ಚಿ ತೀರಿಕೊಂಡ ಎಂದು ಕೇಳಿದಾಗ ಅಚ್ಚರಿ, ವ್ಯಥೆ ಎರಡೂ ಆದವು. ಇಷ್ಟೇನಾ ಲೈಫು? ಜೊತೆಯವರು ಇಲ್ಲವಾಗುವುದೆಂದರೆ..!
ಅನಂತಶಯನ ನನ್ನೊಂದಿಗೆ ಓದಿದವನು ಇಂದು ಇಲ್ಲ. ಅವನ ಒನ್ ಲೈನರ್‍ಗಳು, ಅವನೊಂದಿಗೆ ಕಂಬೈಂಡ್ ಸ್ಟಡೀ ಮಾಡಿದ್ದು ಮೊನ್ನೆ ಮೊನ್ನೆಯೇನೋ ಎನ್ನಿಸುತ್ತದೆ.
ಕೆಲವರು ಎಲ್ಲಿರುವರೋ ಇಂದಿಗೂ ತಿಳಿಯದು. ಆಗ ಇದ್ದವರಲ್ಲಿ ಕೆಲವರು ಮತ್ತೆ ಇತ್ತೀಚೆಗೆ ಸಿಕ್ಕಿದ್ದೊಂದು ವಿಶೇಷ. ವಿಜಯರಾಘವನ್ (ಈತ ಈಗ ವಿಜಯ್ ಹೆಮ್ಮಿಗೆ ಎನ್ನುವ ಹೆಸರಲ್ಲಿ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಬರೆಯುತ್ತಾನೆ), ರವೀಂದ್ರ (ಈತ ನನ್ನ ಬಾಲ್ಯದ ಗೆಳೆಯ. 1972ರ ನಂತರ 2016ರಲ್ಲಿ ಮತ್ತೆ ನನಗೆ ಸಿಕ್ಕಿದ!) ಇವರುಗಳ ಒಡನಾಟ ನೆನಪಿದೆ.
ಕಳೆದ ವರ್ಷ ಮೇ ತಿಂಗಳಲ್ಲಿ ಇವರುಗಳನ್ನು ಭೇಟಿಯಾದಾಗ ಹಳೆಯ ವಿಷಯಗಳನ್ನು ಕೆದಕಿ ನೆನಪಿಗೆ ತಂದುಕೊಳ್ಳಲು ಯತ್ನಿಸಿದ್ದು ಉಂಟು. ಆದರೆ ಕ್ರಮೇಣ ಕೆಲವು ವಿಷಯಗಳು ಮನದಲ್ಲಿ ಉಳಿಯುತ್ತಿಲ್ಲ. ಮಾಸುತ್ತಿವೆ.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102