ಯತಿ ಸ್ವಂತೀ -78
19-03-2018
ನನ್ನ ನೆನಪಿನ ಕಣಜದಲ್ಲಿ ಅನೇಕ ತುಣುಕುಗಳಿವೆ. ಅದು ಹಿಂದೆ ಮುಂದೆ ಆಗುವುದರಲ್ಲಿ ಆಶ್ಚರ್ಯವೇನಿಲ್ಲ. ಮೈಸೂರಿನ ನಮ್ಮ ರೈಲ್ವೇ ಕಾಲೋನಿಯ ಮನೆಯಲ್ಲಿ ಹಿತ್ತಿಲಿನಲ್ಲಿ ಒಂದು ತೊಟ್ಟಿ ಇತ್ತು. ನೀರು ಸಂಗ್ರಹ ಮಾಡಲೆಂದು ಅದನ್ನು ಕಟ್ಟಿದ್ದರು. ಆದರೆ ನಾವಿದ್ದುದು ಜ್ಯೂಯೆಲ್ ಫಿಲ್ಟರ್ ಪಕ್ಕದಲ್ಲಿ. ಅಂದರೆ ಕಾವೇರಿ ನದಿಯನ್ನು ಪೈಪುಗಳಲ್ಲಿ ತಂದು ಅದನ್ನು ಶುದ್ಧೀಕರಿಸಿ ಮೈಸೂರಿಗೆ ಸರಬರಾಜು ಮಾಡುವ ಜಾಗದ ಪಕ್ಕದಲ್ಲಿ. ಇದರಿಂದ ನಮಗೆ ಇಪ್ಪತ್ತನಾಲ್ಕು ಗಂಟೆ, ಏಳು ದಿನ, ಮುನ್ನೂರ ಅರವತ್ತೈದು ದಿನವೂ ನೀರು ನಲ್ಲಿಯಲ್ಲಿ ಬರುತ್ತಿತ್ತು. ಅದಕ್ಕೇ ನಮ್ಮ ಅಮ್ಮ ತೊಟ್ಟಿಯಲ್ಲಿ ನೀರು ಸಂಗ್ರಹಿಸುತ್ತಿರಲಿಲ್ಲ. ಅಲುಗಾಡದೇ ನಿಂತ ನೀರು ಪಾಚಿ ಕಟ್ಟುವುದೆಂದು ಅದನ್ನು ಖಾಲಿ ಇಟ್ಟಿರುತ್ತಿದ್ದರು.
ನಮಗೆ ಆಗ ಬಂದಿತ್ತೊಂದು ಪ್ರಚಂಡ ಐಡಿಯಾ. ನಮ್ಮ ಮನೆಯಿಂದ ಹೊರಗೆ ಬಂದರೆ ಸ್ವಲ್ಪ ದೂರದಲ್ಲಿ ಮೋರಿಯಲ್ಲಿ ಗಲೀಜು ನೀರು ಹರಿಯುತ್ತಿತ್ತು. ಹಾರ್ಲಿಕ್ಸ್ ಬಾಟಲಿ ತೆಗೆದುಕೊಂಡು ಹೋಗಿ, ಮೋರಿಯಲ್ಲಿ ಕೈ ಹಾಕಿ ಅಲ್ಲಿ ಈಜಾಡುತ್ತಿದ್ದ ಗಪ್ಪಿ ಮೀನುಗಳನ್ನು ಹಿಡಿದು ತರುತ್ತಿದ್ದೆವು.
ಮನೆಯಲ್ಲಿನ ಆ ದೊಡ್ಡ ತೊಟ್ಟಿಯಲ್ಲಿ (ನಾಲ್ಕೂ ಬೈ ನಾಲ್ಕೂ ಬೈ ನಾಲ್ಕು ಅಡಿ) ನೀರು ತುಂಬಿ ಅದರಲ್ಲಿ ಈ ಮೀನುಗಳನ್ನು ಬಿಡುತ್ತಿದ್ದೆವು. ಅಲ್ಲಿ ಇಲ್ಲಿಂದ ವಿಚಿತ್ರ ಆಕಾರದ ಕಲ್ಲುಗಳನ್ನು ತಂದು ತೊಟ್ಟಿಯೊಳಗೆ ಜೋಡಿಸುತ್ತಿದ್ದೆವು. ವ್ಯಾಲಿಸ್ನೇರಿಯಾ, ಇಲೋಡಿಯಾ ಗಿಡಗಳನ್ನು ತಂದು ತೊಟ್ಟಿಯ ಬುಡದಲ್ಲಿ ಮರಳು ಹಾಕಿ ಅದರಲ್ಲಿ ನೆಡುತ್ತಿದ್ದೆವು.
ಮೀನುಗಳು ಸರಕ್ ಸರಕ್ ಎಂದು ಬಳುಕುತ್ತಾ ಓಡಾಡಾಲು ಗುಹೆಗಳನ್ನು ಕಟ್ಟುತ್ತಿದ್ದೆವು.
ಬಣ್ಣಬಣ್ಣದ ರೆಕ್ಕೆಗಳುಳ್ಳ ಮೀನುಗಳು ಆಗಿನ ಸಿನಿಮಾ ತಾರೆಯರ ಹೆಸರುಗಳನ್ನು ಹೊಂದಿದವು. ಹೇಮಾಮಾಲಿನಿ, ರೇಖಾ, ಜ್ಯೋತಿಲಕ್ಷ್ಮಿ, ಹಲಂ .... ತಮಾಷೆ ಎಂದರೆ ಈ ಬಣ್ಣದ ಮೀನುಗಳೆಲ್ಲಾ ಗಂಡು ಮೀನುಗಳೆಂದು ನಮಗೆ ತೀರಾ ತಡವಾಗಿ ತಿಳಿದು ಬಂದಿತ್ತು!
ನವಿಲು, ಹುಂಜಗಳಂತೆ ಗಂಡುಗಳೇ ಸುಂದರರು. ಹೆಣ್ಣು ಮೀನುಗಳು ಬಹಳವೇ ಬಣ್ಣರಹಿತವಾಗಿದ್ದವು. ಅವುಗಳ ಹೊಟ್ಟೆ ಊದಿಕೊಂಡಾಗ ಅವನ್ನು ಮೆಲ್ಲನೆ ಎತ್ತಿ ಮತ್ತೊಂದು ಬಾಟಲಿಯಲ್ಲಿ ಹಾಕುತ್ತಿದ್ದೆವು. ಕೆಲವು ದಿನಗಳ ನಂತರ ಪುಟುಪುಟು ಎಂದು ಮರಿಗಳು ಬಾಟಲಿಯಲ್ಲಿ ಕಾಣಿಸಿಕೊಳ್ಳುತ್ತಿದ್ದವು.
ಅವನ್ನು ಒಂದೆರಡು ಸಲ ಬೆಳಕಿನಲ್ಲಿ ದೊಡ್ಡ ತೊಟ್ಟಿಗೆ ಹಾಕಿ ತಪ್ಪು ಮಾಡಿದೆವು. ಮರಿಗಳು ತೊಟ್ಟಿಯೊಳಗೆ ಇಳಿದೊಡನೆ ದೊಡ್ಡ ಮೀನುಗಳು ಆ ಮರಿಗಳನ್ನು ಆಹಾರವೆಂದು ನುಂಗಿಬಿಟ್ಟವು!
ಆಗಿನಿಂದ ರಾತ್ರಿ ಅವು ಮಲಗಿರುವಾಗ ಮರಿಗಳನ್ನು ತೊಟ್ಟಿಯೊಳಗೆ ಬಿಡುವ ವಾಡಿಕೆ ಆಯಿತು. ಆಗ ಅವು ಬದುಕಿಕೊಂಡವು.
ಮೀನು ಸಿಕ್ಕ ಮೋರಿಯಲ್ಲಿಯೇ ಕೆಂಪಗಿನ ಹುಳುಗಳು ಜುಂಯ್ ಎಂದು ಹೆಣ್ಣಿನ ಮುಂಗುರುಳಿನಂತೆ ಅಲುಗಾಡುತ್ತಾ ಒಂದು ಕಡೆ ನಿಂತಿರುತ್ತಿದ್ದವು. ಅವನ್ನೆಲ್ಲಾ ಕಡ್ಡಿಯಲ್ಲಿ ಹಿಡಿದು ತಂದು ತೊಟ್ಟಿಯೊಳಗೆ ಬಿಡುತ್ತಿದ್ದೆವು. ಸರಕ್ಕೆಂದು ಮೀನುಗಳು ಅವನ್ನು ತಿನ್ನುವುದನ್ನು ನೋಡುವುದೊಂದು ಮಜಾ.
ಶೃಂಗೇರಿಯ ನದಿಯಲ್ಲಿ ಮತ್ತು ಭಾಗಮಂಡಲದ ಭಗಂಡೇಶ್ವರನ ಪುಷ್ಕರಣಿಯಲ್ಲಿ ಮೀನುಗಳು ನಾವು ಹಾಕುವ ಪುರಿಯನ್ನು ಎಗರಿ ತಿನ್ನುವುದನ್ನು ನೋಡುವುದೊಂದು ಖುಷಿ.
Comments
Post a Comment