ಯತಿ ಸ್ವಂತೀ -76
17-03-2018
ಭೋಪಾಲ... ಮಧ್ಯಪ್ರದೇಶದ ರಾಜಧಾನಿ. ಹಿಂದೊಮ್ಮೆ 80ರ ದಶಕದಲ್ಲಿ ಹೋಗಿದ್ದ ನೆನಪು. ಅದು ಕಿರ್ಲೋಸ್ಕರ್‍ನಿಂದ. ಅದಕ್ಕೂ ಮೊದಲು ಕಾಲೇಜಿನಿಂದ ಟೂರ್ ಹೋದಾಗ ಅಲ್ಲಿನ ಬಿ.ಎಚ್.ಇ.ಎಲ್. ಕಾರ್ಖಾನೆಯನ್ನು ನೋಡಿದ ಜ್ಞಾಪಕ. ಎಲೆಕ್ಟ್ರಿಕಲ್ ಇಂಜಿನಿಯರ್ ಅಲ್ವಾ?
ಈ ಸಲ ನನ್ನ ಟೂರ್ ನೇರ ಭೋಪಾಲ್‍ಗೆ ಆಗಲಿಲ್ಲ. ಮುಂಬೈಗೆ ಬೆಂಗಳೂರಿನಿಂದ ಹಾರಿ ಅಲ್ಲಿಂದ ಭೋಪಾಲಕ್ಕೆ ಮತ್ತೊಂದು ವಿಮಾನ. ಬಲು ಚಿಕ್ಕ ವಿಮಾನ ನಿಲ್ದಾಣ ಭೋಪಾಲದ್ದು. ವಿಮಾನದಿಂದ ವಿಮಾನ ನಿಲ್ದಾಣದೊಳಗೆ ನಡೆದೇ ಹೋಗಿದ್ದೆ.
ಅಲ್ಲಿ ನನ್ನ ಕೆಲಸ ಸರ್ಕಾರಿ ಅಧಿಕಾರಿಗಳಿಗೆ ಟ್ಯಾಲಿ ಉತ್ಪನ್ನದ ಹೊಸ ಶಕ್ತಿಗಳನ್ನು ಪರಿಚಯಿಸುವುದು. ಎಲ್ಲ ಫಲಕಗಳೂ ಹಿಂದಿಯಲ್ಲಿದ್ದವು. ಆಗಂತುಕ್ ಎನ್ನುವ ಪದವನ್ನು ನೋಡಿ, ಅಪರಿಚಿತ ಎಂದು ತರ್ಜುಮೆ ಮಾಡಿಕೊಂಡೆ. ಆದರೆ ನಿಜವಾದ ಅರ್ಥ ಭೇಟಿ ಮಾಡುವವರು – ವ್ಹಿಜಿಟರ್ಸ್ ಎಂದು. ಎರಡು ದಿನಗಳ ಕಾಲ ಅಲ್ಲಿದ್ದ ಎಲ್ಲ ಸರ್ಕಾರಿ ಕಛೇರಿಗಳಿಗೂ ಲಗ್ಗೆ ಇಟ್ಟು ನಂತರ ಮತ್ತೆ ವಯಾ ಮುಂಬೈ ಮರಳಬೇಕಿತ್ತು.
ಮುಂಬೈ ಬಂದು ಸೇರುವ ವೇಳೆಗೆ ಹುಚ್ಚು ಹುಚ್ಚು ಮಳೆ. ನನ್ನ ಬೆಂಗಳೂರು ಪ್ರಯಾಣ ಸುಮಾರು ಐದಾರು ಗಂಟೆಗಳ ಕಾಲ ತಡವಾಯಿತು. ಎಂತಹ ಬೋರ್ ಸಮಯ ಅಂತೀರಿ!
ನನ್ನ ಮಗನಿಗೆ ತೋರಿಸಲೆಂದು ಅಲ್ಲಿನ ಎಲ್ಲ ವೃತ್ತಪತ್ರಿಕೆಗಳ ಪ್ರತಿಗಳನ್ನು ಒಂದೊಂದು ಎತ್ತಿಕೊಂಡೆ. ಏಕೆಂದರೆ ಅವುಗಳಲ್ಲಿ ಕೆಲವನ್ನು ನಾವು ಬೆಂಗಳೂರಿನಲ್ಲಿ ನೋಡುತ್ತಿರಲಿಲ್ಲ ಆಗ. ಈಗ ಅಂತರ್ಜಾಲದಲ್ಲಿ ಪ್ರಪಂಚದ ಯಾವ ವೃತ್ತಪತ್ರಿಕೆಯನ್ನಾದರೂ ಚಿಟಿಕೆ ಹೊಡೆಯುವಷ್ಟರಲ್ಲಿ ನೋಡಬಹುದು ಎಂದಿಟ್ಟುಕೊಳ್ಳಿ.
ಬೆಂಗಳೂರಿಗೆ ಕೊನೆಗೂ ಹೊರಟಿತ್ತು ವಿಮಾನ. ಬೆಂಗಳೂರಿನಲ್ಲಿ ಲ್ಯಾಂಡ್ ಆದೊಡನೆ ನನ್ನ ಮೊಬೈಲ್ ಆನ್ ಮಾಡಿದೆ. ಬಂದಿತ್ತು ಆಗೊಂದು ಸಿಹಿಸುದ್ದಿ.
ನನ್ನ ನಿರಂತರ ಭೇಟಿ ಒಂದು ಕರ್ನಾಟಕ ಸರ್ಕಾರದ ಕಂಪೆನಿಗೆ ಆಗಿದ್ದು, ಈಗ ಅದು ಫಲ ಕೊಡುವ ಸಮಯ ಬಂದಿತ್ತು!
ಡೆಮಾನ್ಸ್‍ಟ್ರೇಷನ್ ಕೊಡಲು ಆ ಕಂಪೆನಿಯವರು ನಮ್ಮ ಕಂಪೆನಿಯವರನ್ನು ಕರೆದಿದ್ದರು. ಏನೋ ಒಂದು ರೋಮಾಂಚನ. ಅಬ್ಬಾ, ಈ ಆರ್ಡರ್ ಏನಾದರೂ ಸಿಕ್ಕಿಬಿಟ್ಟರೆ... ನನ್ನನ್ನು ಕಂಪೆನಿಗೆ ತೆಗೆದುಕೊಂಡಿದ್ದಕ್ಕೆ ಸಾರ್ಥಕವಾಗಲಿದೆ.
ಮರುದಿನ ಬೆಳಗ್ಗೆಯೇ ದೊಡ್ಡವರೊಂದಿಗೆ ಚರ್ಚೆ ನಡೆಯಿತು. ಒಂದು ಟೀಂ ಹೋಗಿ ಡೆಮೋ ಕೊಡಬೇಕೆಂದು ನಿರ್ಧಾರಿತವಾಯಿತು.
ಡೆಮೋ ಆಯಿತು. ಆರ್ಡರ್ ಕೊಡುವೆನೆಂದರು. ಅದಕ್ಕೆ ಅನೇಕ ಸಲ ಅಲೆದು ಕೊನೆಗೂ ಒಂದು ಆರ್ಡರ್ ಮತ್ತು ಅಡ್ವಾನ್ಸ್ ಚೆಕ್ ತಂದೆ.
ನನ್ನನ್ನು ಸಿಂಗಾಪೂರ್‍ನಿಂದ ಇಂಟರ್‍ವ್ಯೂ ಮಾಡಿ ಆಯ್ಕೆ ಮಾಡಿದ್ದ ಮೇಡಂ ಈಗ ಬೆಂಗಳೂರಿನಲ್ಲೇ ಇದ್ದರು. ಅವರಿಗಂತೂ ಬಹಳ ಖುಷಿ. ಹೊಸ ಉತ್ಪನ್ನ ಸಿದ್ಧವಾಗುತ್ತಿದ್ದಂತೆಯೇ ಆರ್ಡರ್!
ಇದೇ ರೀತಿ ನಾನು 1999ರಲ್ಲಿ ಇದ್ದ ಕಂಪೆನಿಯಲ್ಲಿಯೂ ಆಗಿತ್ತು. ಉತ್ಪನ್ನ ಸಿಗುವುದಕ್ಕೆ ಮೊದಲು ಆರ್ಡರ್.
ಏನೋ ಒಂದು ಖುಷಿ. ಆಮೇಲೆ ಆ ಆರ್ಡರ್ ನನಗೆ ಒಂದು ಸಮಸ್ಯೆಯನ್ನು ತಂದೊಡ್ಡಿತು ಎನ್ನುವುದು ಬೇರೆ ವಿಷಯ.
-0-0-0-
Comments
Post a Comment