ಯತಿ ಸ್ವಂತೀ -75


16-03-2018
‘ಓ.. ಸರಿ ಹಾಗಾದರೆ... ಸದ್ಯದಲ್ಲೇ ನಮ್ಮ ಬೆಂಗಳೂರು ಸಹೋದ್ಯೋಗಿ ಒಬ್ಬರು ನಿಮ್ಮನ್ನು ಭೇಟಿ ಮಾಡುತ್ತಾರೆ. ಒಳ್ಳೆಯದಾಗಲಿ’ ಎಂದು ಫೋನಿಟ್ಟರು.
ಮುಂದಿನ ವಾರ ಒಂದು ಕರೆ ಬಂದಿತು.
ಬನ್ನೇರುಘಟ್ಟ ರಸ್ತೆಯ ಷಾಪರ್ಸ್‍ಸ್ಟಾಪ್ ಕಟ್ಟಡದಲ್ಲಿದ್ದ ಕಂಪೆನಿಯ ಆಫೀಸಿಗೆ ಬರಹೇಳಿದರು.
ಏನೋ ಒಂದು ತವಕ. ಬಂದು ತಲುಪಿದೆ. ಪ್ರವೀಣ್ ಎನ್ನುವಾತನನ್ನು ಭೇಟಿ ಆಗಬೇಕಿತ್ತು. ದೊಡ್ಡ ರಿಸೆಪ್ಷನ್. ನೂರಾರು ಜನ ಕೂರುವಂತಹ ದೊಡ್ಡ ಹಾಲ್.
ಪ್ರವೀಣ್ ನನ್ನನ್ನು ಆಹ್ವಾನಿಸಿ ಕಾನ್ಫರೆನ್ಸ್ ರೂಮಿನಲ್ಲಿ ಕೂರಿಸಿ, ‘ಈ ಆರ್ ಪಿ’ ಎಂದರೇನು?’ ಎಂದ.
‘ಎಂಟರ್‍ಪ್ರೈಸಸ್ ರೀಸೋರ್ಸ್....’ ಎಂದೇನೋ ಹೇಳಿದೆ. ನನಗೆ ನಿಜಕ್ಕೂ ತಿಳಿದಿರಲಿಲ್ಲ.
ಇನ್ನೂ ಒಂದಿಷ್ಟು ಪ್ರಶ್ನೆಗಳನ್ನು ಕೇಳಿದ. ಗೊತ್ತಿರುವ ಮಟ್ಟಿಗೆ ಉತ್ತರಿಸಿದೆ.
ಮಾರನೇ ವಾರ ಕರೆ ಬಂದಿತು ಎಚ್ ಆರ್ ಡಿಪಾರ್ಟ್‍ಮೆಂಟ್‍ನಿಂದ.
ಸಂಬಳ ಇಂತಿಷ್ಟು ಎಂದು ನಿರ್ಧರಿಸಿದರು. ಪತ್ರವು ಇನ್ನೇನು ತಲುಪಲಿದೆ ಎಂದು ಭರವಸೆ ನೀಡಿದರು.
ಒಂದು ದಿನ ಅದೂ ಆಯಿತು.
ಮತ್ತೆ ಕರೆದರು. ಆಫೀಸಿಗೆ ಹೋದೆ. ನನ್ನೊಂದಿಗೆ ಸುಮಾರು ಹದಿನೈದು ಜನ ಬೇರೆ ಬೇರೆ ಡಿಪಾರ್ಟ್‍ಮೆಂಟುಗಳಿಗೆ ಆಯ್ಕೆಯಾಗಿದ್ದರು.
ಎಲ್ಲರನ್ನೂ ಪರಿಚಯಿಸಿಕೊಂಡೆ. ಕೊನೆಗೂ ಹಿರಿಯರೊಬ್ಬರು ಬಂದು ಜೂನ್ ಹದಿನೈದರಿಂದ ನೀವು ನಮ್ಮ ಕಂಪೆನಿಯಲ್ಲಿ ಕೆಲಸ ಮಾಡಲು ಬನ್ನಿ ಎಂದು.
ಅಂತೂ ಬೆಂಗಳೂರಿನಲ್ಲಿಯೇ ಕೆಲಸ ಆಯಿತು. ಇನ್ನು ನಮ್ಮ ಮನೆಯಿಂದ ಅಷ್ಟು ದೂರ ಹೋಗೋದು ಹೇಗೆ?
ಕ್ಯಾಬ್ ಫೆಸಿಲಿಟಿ ಇದೆ ಎಂದರು. ಸರಿ, ಅದನ್ನೂ ತಿಳಿದುಕೊಂಡು ಮನೆಗೆ ಬಂದೆ.
ಏನೋ ಒಂದು ರೀತಿ ಖುಷಿ. ಅಬ್ಬಾ... ಮನೆಯಲ್ಲಿಯೇ ಇರಬಹುದು. ಇನ್ನೂ ದೂರದ ದೇಶಕ್ಕೆ ಮರಳುವ ಭಯವಿಲ್ಲ ಎಂದುಕೊಂಡೆ.
ಮೊದಲ ದಿನ ಎಂಡಿ ಅವರ ಇಂಟರ್‍ವ್ಯೂನಲ್ಲಿ ಹೇಳಿದ್ದೆ. ದಯವಿಟ್ಟು ನೀವು ನನ್ನನ್ನು ಯಾವ ಊರಿಗಾದರೂ ಕಳಿಸಿ. ಆದರೆ ಅಲ್ಲಿಯೇ ಉಳಿದುಕೊಳ್ಳುವಂತೆ ಮಾಡಬೇಡಿ. ನನಗೆ ನನ್ನ ಕುಟುಂಬ ಮುಖ್ಯ ಎಂದಿದ್ದೆ.
ಬೇಗನೆ ಹೇಳಿ. ಏಕೆಂದರೆ ನನಗೆ ದುಬಾಯ್‍ನಲ್ಲಿ ಕೆಲಸ ಸಿಕ್ಕಿದೆ ಎಂದೂ ಹೇಳಿದ್ದೆ.
ಕೆಲಸಕ್ಕೆ ಹೋಗಲು ಏನೋ ಖುಷಿ. ಏನು ಕೆಲಸ ಎಂದು ಆಗ ಇನ್ನೂ ತಿಳಿಯದು. ಸರ್ಕಾರಕ್ಕೆ ನಮ್ಮ ಉತ್ಪನ್ನಗಳನ್ನು ಮಾರುವ ಕೆಲಸ ಎಂದು ಮಾತ್ರ ಅರಿವಾಗಿತ್ತು.
ಪ್ರಗತಿ ಎನ್ನುವ ಗುಂಪು ಮಾಡಿದರು. ಅದರ ಸದಸ್ಯನಾದೆ ನಾನು. ನನ್ನ ಬಾಸ್ ಸುವೀರ್ ಎಂಬಾತ. ಪಾಪ, ಇಂದು ಇಲ್ಲ. ತೀರಿಕೊಂಡಿದ್ದಾರೆ.
ಸೇರಿದ ಕೆಲವೇ ದಿನಗಳಲ್ಲಿ ಅವರೊಂದಿಗೆ ಕಾರಿನಲ್ಲಿ ಪಾಂಡಿಚೆರಿಗೆ ಹೋದೆ. ಅಲ್ಲಿಗೆ ಹೋಗಲು ನನ್ನ ಮನಸ್ಸು ಬಹಳ ದಿನಗಳಿಂದ ತುಡಿಯುತ್ತಿತ್ತು.
ಅಲ್ಲಿನ ಸರ್ಕಾರಿ ಅಧಿಕಾರಿಗಳನ್ನು ಭೇಟಿಯಾದೆವು. ನಂತರ ಸಮುದ್ರ ತಟ. ಅರವಿಂದರ ಆಶ್ರಮ ಎಲ್ಲವನ್ನೂ ನೋಡಿದೆವು.
ಹೀಗೆ ಶುರುವಾಯಿತು ನನ್ನ ಹೊಸ ಕೆಲಸ. ಅನೇಕ ಊರುಗಳಿಗೆ ಹೋದೆ. ಭೋಪಾಲ್ ಅದರಲ್ಲಿ ಒಂದು.

 

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102