ಯತಿ ಸ್ವಂತೀ -74


15-03-2018
“ನಿನ್ನ ಬಗ್ಗೆ ಹೇಳು” ಎಂದರು ಕಂಪೆನಿಯ ಎಂ.ಡಿ.
“ನಾನು ಎಸ್ಕಿಮೋಗಳಿಗೆ ...” ಎಂದು ಆರಂಭಿಸಿದಾಗ, “ಐಸ್‍ಕ್ರೀಂ ಮಾರಬಲ್ಲೆ!” ಎಂದು ನಕ್ಕು, “ಸರಿ, ನನ್ನ ಮೂರು ಡಿವಿಜನ್‍ಗಳು ಆರಂಭವಾಗ್ತಿವೆ. ನಿನ್ನನ್ನು ಎಲ್ಲಿ ಫಿಟ್ ಮಾಡಬಹುದು ಅಂತ ತಿಳಿಸ್ತೇನೆ” ಎಂದು ಹೇಳಿದರು.
ಇಂಟವ್ರ್ಯೂ ಮುಗಿಯಿತು. ನೇರ ಕೆಳಗೆ ಬಂದೆ. ಸುಮಾರು ಎರಡೂವರೆ ಗಂಟೆ ಮಾರುತಿ ಆಮ್ನಿಯ ಡ್ರೈವಿಂಗ್ ಸೀಟ್‍ನಲ್ಲಿಯೇ ಇದ್ದ ನನ್ನ ಶ್ರೀಮತಿ ನೆಮ್ಮದಿಯಿಂದ ಮನೆಯತ್ತ ವ್ಯಾನ್ ಓಡಿಸಿದಳು.
ಒಂದು ವಾರವಾಯಿತು. ಆ ಸಮಯದಲ್ಲಿ ಯಾವುದರ ಭಯವಿತ್ತೋ ಅದೇ ಆಯಿತು. ನನ್ನ ದುಬಾಯ್ ವೀಸಾ ನನ್ನ ಭಾವನವರ ಆಫೀಸಿಗೆ ಫ್ಯಾಕ್ಸ್ ಆಗಿತ್ತು! ಈಗ ಮತ್ತೆ ಫಜೀತಿ. ಇದು ಕೈಯಲ್ಲಿರುವ ಹಕ್ಕಿ. ಬೆಂಗಳೂರು ಕಂಪೆನಿ ಎಂ.ಡಿ.ಯವರಿಂದ ಯಾವ ಸಂಪರ್ಕವೂ ಇರಲಿಲ್ಲ. ಈಗೇನು ಮಾಡುವುದು?
ಮಕ್ಕಳ ಬೇಸರ ನೆನಪಾಗಿ, ಸೌದಿ ಕಂಪೆನಿಯ ಮುಖ್ಯಾಧಿಕಾರಿಗೆ ‘ನನ್ನ ಅಮ್ಮನ ಆರೋಗ್ಯದ ಸೆಂಟಿಮೆಂಟ್ ಪ್ಲೇ ಮಾಡಿ, ನನ್ನನ್ನು ಕ್ಷಮಿಸಿ’ ಎಂದು ಬರೆದುಬಿಟ್ಟೆ.
ಆದರೂ ಬೆಂಗಳೂರಿನಿಂದ ಪತ್ರ ಬರಲಿಲ್ಲ. ಆ ಸಮಯದಲ್ಲಿ ಮತ್ತೊಂದು ಕಂಪೆನಿಗೆ ಕನ್ಸಲ್ಟೆಂಟ್ ಆಗಿದ್ದ ...ರಾಜ್ ಎನ್ನುವವರನ್ನು ಇಂದಿರಾನಗರದಲ್ಲಿ ಭೇಟಿ ಆದೆ. ಅವರು ತನ್ನ ಬಳಿ ಯಾವ ಕೆಲಸವೂ ಇಲ್ಲವೆಂದರು. ದುಬಾಯ್ ಕೆಲಸ ತ್ಯಜಿಸಿ ತಪ್ಪು ಮಾಡಿದೆನಾ ಎನ್ನಿಸಹತ್ತಿತು. ಆಗ ಆ ...ರಾಜ್ ಒಂದು ಒಳ್ಳೆಯ ಸಲಹೆ ನೀಡಿದರು. ನಿನಗೆ ಅವರ ಬಗ್ಗೆ ನೆನಪಿರಲಾರದು. ನೀನೇಕೆ ಅವರಿಗೆ ನೆನಪು ತರಕೂಡದು ಎಂದರು.
ಆ ದಿನವೇ ಅವರಿಗೊಂದು ಈ ಮೆಯ್ಲ್ ಕಳಿಸಿದೆ. ಮರುಕ್ಷಣ ಉತ್ತರ ಬಂದಿತು. ಕ್ಷಮಿಸು, ಬಹಳ ಬ್ಯುಸಿಯಾಗಿಬಿಟ್ಟಿದ್ದೆ. ಒಳ್ಳೆಯದಾಯಿತು ನೀನೇ ಬರೆದಿದ್ದು ಎಂದರು.
ನಾಲ್ಕೈದು ದಿನಗಳಲ್ಲಿ ಒಂದು ಫೋನ್ ಕರೆ ಬಂದಿತು. ಸಿಂಗಾಪೂರ್‍ನಿಂದ ನಿನಗೆ ಟೆಲಿಫೋನ್ ಇಂಟವ್ರ್ಯೂ ಮಾಡಲಿದ್ದಾರೆ ಅಲ್ಲಿನ ಮೇಡಂ ಒಬ್ಬರು ಎಂದು.
ಅಂದು ಮನೆಯ ತುಂಬಾ ಜನ. ಮೊಬೈಲ್ ಇರಲಿಲ್ಲ. ಲ್ಯಾಂಡ್‍ಲೈನ್ ನಂಬರ್ ಕೊಟ್ಟಿದ್ದೆ. ಎಲ್ಲರನ್ನೂ ಮೇಲಿನ ರೂಮಿನಲ್ಲಿ ಬಾಗಿಲು ಹಾಕಿಕೊಂಡಿರಲು ಹೇಳಿ ಕರೆಯನ್ನು ಸ್ವೀಕರಿಸಿದೆ.
ನನ್ನ ಭಾವಮೈದುನನ ಸಲಹೆಯಂತೆ ನನ್ನ ರೆಸ್ಯೂಮೆಯನ್ನು ಒಂದೂವರೆ ಪುಟಕ್ಕೆ ಇಳಿಸಿದ್ದೆ! 1981ರಿಂದ 2005ರ ವರೆಗಿನ ಉದ್ಯೋಗದ ಇಡೀ ಸಾರಾಂಶ ಕೇವಲ ಒಂದೂವರೆ ಪುಟ.
ಯಾರಿಗೂ ಅದಕ್ಕಿಂತ ಹೆಚ್ಚಿಗೆ ಓದುವ ಪುರುಸೊತ್ತು, ವ್ಯವಧಾನ ಇರುವುದಿಲ್ಲ ಎಂದಿದ್ದ ಅವನು.
ಸರಿ, ಈ ಮೇಡಂ ನನ್ನ ರೆಸ್ಯೂಮೆಯ ಒಂದೊಂದೇ ಅಂಶವನ್ನು ಕೇಳುತ್ತಾ ಹೋದರು.
ಸ್ಪಷ್ಟವಾಗಿ, ಆದಷ್ಟೂ ಸತ್ಯವಾದ ಉತ್ತರಗಳನ್ನು ಹೇಳುತ್ತಾ ಹೋದೆ.
‘ನಿನ್ನ ವಿಶೇಷತೆ ಏನು? ಎಂದು ಒಂದು ವಾಕ್ಯದಲ್ಲಿ ಹೇಳು’ ಎಂದರು ಆ ಮೇಡಂ.
‘ನನಗೆ ಮಾತಾಡೋದು ಬಿಟ್ಟರೆ ಬೇರೇನೂ ತಿಳಿಯದು ಮೇಡಂ. ಮಸ್ಕತ್‍ನಲ್ಲಿ ಕೂಡ ಸರ್ಕಾರಿ ಸಿಬ್ಬಂದಿಯೊಂದಿಗೆ ಮಾತಾಡಲು ಹೋಗುತ್ತಿದ್ದೆ’ ಎಂದೆ.
ಅವರು ಮೌನವಾಗಿ ಕೇಳಿಸಿಕೊಂಡರು.
ಏನು ಹೇಳುವರೋ ಎಂದು ಕಾತರದಿಂದ ನಿರೀಕ್ಷಿಸಿದೆ.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102