ಯತಿ ಸ್ವಂತೀ -73


14-3-2018
ನಾನು ಮಸ್ಕತ್‍ನಿಂದ ಭಾರತಕ್ಕೆ ಶಾಶ್ವತವಾಗಿ ಮರಳಿದ ಹೊಸತರಲ್ಲಿ ಅನೇಕರ ಪ್ರಶ್ನೆ ಇದಾಗಿತ್ತು. ‘ಮತ್ತೆ ಯಾವಾಗ ಹೋಗ್ತೀರಿ?’
ನನಗೆ ಅಚ್ಚರಿ. ಇದೇಕೆ ಹೀಗೆ ಹೇಳುತ್ತಿದ್ದಾರೆ ಎಂದು. ನಂತರ ಅದರ ಅರ್ಥ ತಿಳಿಯಿತು. ಒಮ್ಮೆ ಕೊಲ್ಲಿಯ ದೇಶಕ್ಕೆ ಉದ್ಯೋಗಕ್ಕೆಂದು ಸೇರಿದರೆ ಅಲ್ಲಿಂದ ಯಾರೂ ಮರಳಲಾರರು, ಮರಳಿದರೂ ಇನ್ನು ಸಾಕಪ್ಪಾ ಅನ್ನುವಷ್ಟು ಕಾಲ ದುಡಿದು, ಸಂಪಾದಿಸಿ ಮರಳುತ್ತಾರೆ ಎಂದು ಪ್ರತೀತಿ.
ಈ ವಿಷಯದಲ್ಲಿ ನಾನು ಅಪವಾದವಾಗಿಬಿಟ್ಟೆ. ತಮಾಷೆ ಎಂದರೆ ನಾನು ಪ್ರತಿಯೊಂದು ಸಾಮಾನ್ಯ ನಂಬಿಕೆಯನ್ನೂ ಸುಳ್ಳು ಮಾಡಿದ ಹೆಗ್ಗಳಿಕೆ ಉಳ್ಳವನಾದೆ. ಉದಾಹರಣೆಗೆ, ನಾನು ಕಿರ್ಲೋಸ್ಕರ್ ಕಂಪೆನಿಗೆ ರಾಜೀನಾಮೆ ನೀಡಿದಾಗ ‘ಇಲ್ಲಿಂದ ರಿಸೈನ್ ಮಾಡಿ ಹೋದವರೆಲ್ಲಾ ಸಖತ್ತಾಗೇ ಇಂಪ್ರೂವ್ ಆಗವ್ರೆ ಗುರೂ’ ಎಂದವರೇ ಜಾಸ್ತಿ. ನನಗೇನಾದರೂ ಪೊಳ್ಳು ಖುಷಿ ಕೊಡುತ್ತಿದ್ದರಾ? ತಿಳಿಯದು. ಬಹಳ ಜನ ಕಿರ್ಲೋಸ್ಕರ್ ಬಿಟ್ಟವರು ಚೆನ್ನಾಗಿ ಬೆಳೆದಿದ್ದಾರೆ, ಆರ್ಥಿಕವಾಗಿ. ನಾನು... ಸೊನ್ನೆ!
ಮಸ್ಕತ್ ಬಿಟ್ಟು ಬೆಂಗಳೂರಿಗೆ ಶಾಶ್ವತವಾಗಿ ಮರಳಿದಾಗ.. ಇದಕ್ಕೆ ಒಂದು ಕಾರಣವಿದೆ. ನಾನು ಮಸ್ಕತ್ ಕೆಲಸಕ್ಕೆ ರಾಜೀನಾಮೆ ಇತ್ತು, ಸೌದಿ ಅರೇಬಿಯಾ ಕಂಪೆನಿಯ ಕೇಬಲ್ ಮಾಡಲು ನನಗೆ ದುಬಾಯ್‍ಯಲ್ಲಿ ಉದ್ಯೋಗ ಸಿಕ್ಕಿತು. ಅಲ್ಲಿನ ದೊಡ್ಡ ಅಧಿಕಾರಿಯನ್ನು ಭೇಟಿ ಮಾಡಿ ಅವರಿಂದ ಉದ್ಯೋಗ ಗಿಟ್ಟಿಸಿಕೊಂಡು ಬೆಂಗಳೂರಿಗೆ ಮರಳಿದ್ದೆ. ಮಸ್ಕತ್‍ನಷ್ಟೇ ಸಂಬಳ. ಹೇಳಿ ಕೇಳಿ 48 ವರ್ಷ ಆಗಿತ್ತೆನಗೆ ಆಗ. ನನ್ನೆದುರಿಗೆ ಹೆಚ್ಚು ಆಯ್ಕೆಗಳಿರಲಿಲ್ಲ. ಹೇಳಿದೆನಲ್ಲ ನಾನು ಕಡಿಮೆ ಮಟ್ಟದ ದೇವರ ಕೂಸೆಂದು...
ಕೈಗೆ ಉದ್ಯೋಗ ನೀಡಿಕೆಯ ಪತ್ರ ಬರಲಿ ನೋಡಿಕೊಳ್ಳೋಣ ಎಂದುಕೊಂಡು ಸುಮ್ಮನಿದ್ದೆ. ಅದೂ ಕೂಡ ಬಂದಾಯಿತು. ಈಗ ಮಕ್ಕಳ ಗಲಾಟೆ ಹೆಚ್ಚಾಯಿತು. ‘ನಿನ್ನನ್ನು ಬಹಳ ಮಿಸ್ ಮಾಡ್ತೇವೆ. ಇಲ್ಲೇ ನಿನಗೆ ಕೆಲಸ ಸಿಗೋಲ್ವೇನು?’ ಎಂದು ದುಃಖಿಸಿದರು. ನನಗೇನೂ ತೋಚದ ಪರಿಸ್ಥಿತಿ.
ಆ ಸಮಯದಲ್ಲಿ ನಾನು 2002ಕ್ಕೂ ಮುಂಚೆ ಒಂದು ಕಂಪೆನಿಗೆ ಕೆಲಸ ಕೇಳಿಕೊಂಡು ಹೋಗಿ, ಯಾವಾಗ ಬೇಕು ಕೆಲಸ ಎಂದು ಅವರು ಕೇಳಿದಾಗ ‘ನಿನ್ನೆ’ ಎಂದಿದ್ದು ನೆನಪಾಗಿ, ಆ ಕಂಪೆನಿ ಈಗ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ ಎಂಬ ವಿಷಯ ತಿಳಿದು ಅವರನ್ನು ನೋಡಲು ಹೋದೆ.
ನಾಲ್ಕೂವರೆಗೆ ಬರಹೇಳಿದರು. ಕೋರಮಂಗಲದಲ್ಲಿ ಆಫೀಸು. ನನ್ನ ಪತ್ನಿ ಮಾರುತಿ ಆಮ್ನಿ ವ್ಯಾನ್ ಚಾಲಿಸಲು ಕಲಿತಿದ್ದಳು. ಕೈಯಲ್ಲಿ ಮೊಬೈಲ್ ಇಲ್ಲ. ಯಾವ ಕ್ಷಣದಲ್ಲಿ ಇಂಟರ್‍ವ್ಯೂಗೆ ಕರೆಯುವರೋ ತಿಳಿಯದು, ಎರಡನೆಯ ಮಹಡಿಯಿಂದ ಕೆಳಗೆ ಹೋಗಿ ಆಕೆಗೆ ಹೇಳಲಾಗಲಿಲ್ಲ.
ನನಗೆ ಇಂಟರ್‍ವ್ಯೂ ಸಿಕ್ಕಾಗ ಸಂಜೆ ಏಳೂವರೆ. ‘ಕ್ಷಮಿಸಿ’ ಎಂದರು ಎಂ.ಡಿ. ದೊಡ್ಡ ಅಧಿಕಾರಿ. ಪೆಚ್ಚುನಗೆ ನಗದೇ ಬೇರೇನು ಮಾಡಲು ಸಾಧ್ಯ?
ಹೇಳಿ ಕೇಳಿ ಕೆಲಸಕ್ಕಾಗಿ ಕಾದಿದ್ದೆ. ಕೊಡುವರೋ ಇಲ್ಲವೋ ತಿಳಿಯದು. ಆದರೂ ಒಂದು ಆಸೆ. ಇಲ್ಲೇ ಇರಬಹುದು. ಒಂಟಿಯಾಗಿ ಆ ದೂರದ ದೇಶಕ್ಕೆ (ಆಗ ಒಮಾನ್, ಈಗ ದುಬಾಯ್) ಹೋಗದೇ, ಮನೆಯವರೊಂದಿಗೆ ಇಲ್ಲೇ ಇರುವ ಅವಕಾಶ ಇದೆಯೇ ಎಂಬ ಅಭಿಲಾಷೆ.
ಅವರ ಮಾತುಗಳಿಗಾಗಿ ನಿರೀಕ್ಷಿಸಿದೆ.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102