ಯತಿ ಸ್ವಂತೀ -72





13-03-2018
ಸ್ವಂತೀ ಅಂತ ಹೇಳಿಕೊಳ್ಳುತ್ತಿರುವುದರಿಂದ ಪ್ರತಿ ಕಂತಿನಲ್ಲೂ ನಾನು, ನನ್ನದು ಎಂದು ಬರುವುದು ಸಹಜ ಅಲ್ಲವೇ? ನನ್ನ ಪರಿಧಿ ಹಾಗೆ ನೋಡಿದರೆ ದೊಡ್ಡದೇ.
ನನ್ನ ಸುತ್ತಲೂ ಇರುವ ಜನರಾರೂ ನನ್ನನ್ನು ದ್ವೇಷಿಸಿದಂತೆ ತೋರುವುದಿಲ್ಲ. ವಿಶೇಷವಾಗಿ ಎದುರಿಗೆ! ಅದಕ್ಕಿಂತ ವಿಶಿಷ್ಟವಾದ ವಿಷಯವೇನೆಂದರೆ ನನ್ನ ನಗೆಮೊಗದ ಪಟಗಳನ್ನು ಎಲ್ಲರೂ ಇಷ್ಟ ಪಡುತ್ತಾರೆ. ಫೋಟೋ ತೆಗೆಯಲು ಯಾರಾದರೂ ಮುಂದೆ ಬಂದರೆ ಮೊದಲು ನನ್ನ ಮುಖದ ಮೇಲೆ ಕಾಣಿಸಿಕೊಳ್ಳುವುದೇ - ನಗೆ!
ನನಗೆ ಯಾರ ಮೇಲೂ ಕೋಪವಿಲ್ಲ. ಯಾರಿಂದಲೂ ನನಗೆ ದುಃಖವಿಲ್ಲ. ಒಂದು ವೇಳೆ ಯಾರಾದರೂ ನಾನಂದುಕೊಂಡಂತೆ ಇರದಿದ್ದರೆ ಆಶ್ಚರ್ಯವಾಗುತ್ತದೆ. ಆದರೆ ತಕ್ಷಣವೇ ಅನ್ನಿಸುತ್ತದೆ. ಅವರೇಕೆ ನಾನಂದುಕೊಂಡಂತೆ ಇರಬೇಕು ಎಂದು.
ಎಲ್ಲೋ ಇತ್ತೀಚೆಗೆ ಓದಿದೆ. ಯಾರನ್ನಾದರೂ ನಾವು ಪ್ರೀತಿಸುವುದಾದರೆ ಅವರಿರುವಂತೆಯೇ ಪ್ರೀತಿಸಬೇಕಂತೆ. ಅವರನ್ನು ನಾವು ಬದಲಾಯಿಸಲು ಇಚ್ಛಿಸಿದರೆ ಅದರರ್ಥ ಅವರನ್ನು ನಾವು ಸಂಪೂರ್ಣವಾಗಿ ಪ್ರೀತಿಸುವುದಿಲ್ಲ ಎಂದು.
ಕೆಲವರನ್ನು ನಾವು ಅಕಾರಣವಾಗಿ ಪ್ರೀತಿಸುತ್ತೇವೆ. ಅದಕ್ಕೆ ಯಾವುದೇ ತರ್ಕವಿರುವುದಿಲ್ಲ. ಅದು ಆಕರ್ಷಣೆ ಇರಬಹುದು. ಅಥವಾ ಅವರು ನಮ್ಮಲ್ಲಿ ಯಾವುದೋ ಒಂದು ಪ್ರೀತಿಯ ಕಣವನ್ನು ಟ್ರಿಗರ್ ಮಾಡಿರಬಹುದು. ಅಥವಾ ಏನೂ ಕಾರಣವೇ ಇಲ್ಲದೇ ನಾವು ಅವರನ್ನು ಇಷ್ಟ ಪಡಬಹುದು.
ನನಗೂ ಇಂತಹ ಅನೇಕರು ಸಿಕ್ಕಿದ್ದಾರೆ. ಪ್ರೀತಿ ಎಂದೊಡನೆ ಯಾವುದೇ ಕೆಟ್ಟ ಅಭಿಪ್ರಾಯ ಇರಬೇಕಿಲ್ಲ. ಒಂದು ಸುಂದರ ಹೂವು, ಒಂದು ಪುಟ್ಟ ಮಗುವಿನ ಮುಗ್ಧ ನಗೆ, ಮಳೆ ನಿಂತ ನಂತರ ಕಾಣುವ ಕಾಮನಬಿಲ್ಲು, ವರ್ಷದ ಮೊದಲ ಮಳೆ, ಆ ಮಳೆ ಬೀಳುವಾಗ ಉಂಟಾಗುವ ಮಣ್ಣಿನ ಘಮಲು, ಇವೆಲ್ಲವೂ ಪ್ರೀತಿಸುವಂತಹವೇ.
ಇವಕ್ಕೆ ವಿಶೇಷ ಕಾರಣ ಬೇಕಿಲ್ಲ. ಇವನ್ನು ಕೂಡ ಇಷ್ಟ ಪಡದವರ ಭಾವನೆಗಳು ಅವರ ಮನದಾಳದಲ್ಲೆಲ್ಲೋ ಅಡಗಿಕೊಂಡಿವೆ ಎಂದು ಮಾತ್ರ ಅನಿಸುತ್ತದೆ.
ನಾನು ಕಥೆಗಳನ್ನು ಬರೆದ ಹೊಸತರಲ್ಲಿ ಪತ್ರಿಕೆಗಳಿಗೆ ಅಲೆದಾಡಿ ಪಟ್ಟ ಪಾಡು ನನಗೇ ಗೊತ್ತು. ಅದೇನೋ ತಹತಹ ಹೇಗಾದರೂ ನನ್ನ ಹೆಸರು ಪತ್ರಿಕೆಯಲ್ಲಿ ‘ಬೀಳ’ಬೇಕೆಂದು. 
ಮೊದಲ ಸಲ ನನ್ನ ದೈನಿಕ ಧಾರಾವಾಹಿ ಕನ್ನಡಪ್ರಭದಲ್ಲಿ ಬಂದಾಗ, ಪತ್ರಿಕೆಯವರು ನನ್ನ ಪರಿಚಯದೊಂದಿಗೆ ನನ್ನ ಫೋಟೋ ಹಾಕಿದಾಗ, ಮೊದಲ ಸಲ ನನ್ನ ಕಿರುಕಾದಂಬರಿ ರಾಗಸಂಗಮದಲ್ಲಿ ಬಂದಾಗ ಇಡೀ ಪುಟಕ್ಕೆ ನನ್ನ ಪಟ ಹಾಕಿದಾಗ... ಓಹ್.. ಅದೊಂದು ಖುಷಿ. 
ಸುಧಾದಲ್ಲಿ ನನ್ನ ಧಾರಾವಾಹಿ ಬರುತ್ತದೆ ಎಂಬ ವಿಷಯ ತಿಳಿದಾಗ ಗಗನವು ಎಲ್ಲೋ ಭೂಮಿಯು ಎಲ್ಲೋ ಒಂದೂ ಅರಿಯೇನಾ... ಎನ್ನಿಸಿತ್ತು.
ಸುಧಾದಲ್ಲಿ! ಅವರಲ್ಲಿ ನನ್ನ ಕಥೆಯೊಂದು ಐದು ಪುಟಗಳನ್ನು ‘ತಿಂದಾಗ’, ಆಗಿನ ಸಂಪಾದಕರು, ‘ಇಷ್ಟು ದೊಡ್ಡ ಕಥೆ ಬರೀಬ್ಯಾಡ್ರೀ. ಸುಧಾದಲ್ಲಿ ಹಾಕೋಕ್ಕೆ ಕಷ್ಟ’ ಎಂದಾಗ ಎಂತಹ ಖುಷಿ ಅಂತೀರಿ. ಅಂದರೆ ಕಥೆ ಚೆನ್ನಾಗಿದೆ. ಆದರೆ ಜಾಗ ಜಾಸ್ತಿ ‘ತಿನ್ನುತ್ತದೆ’ ಎಂದು ಅವರಿಗೆ ಅನಿಸಿದ್ದು ಖುಷಿ ತರದಿದ್ದೀತೇನು?

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102