ಯತಿ ಸ್ವಂತೀ -71


12-03-2018
ನನ್ನ ನೆನಪುಗಳು ಸಾಕಷ್ಟು ಕೆದರಿ ಹೋಗಿವೆ. ಮರೆಯುವ ಮುನ್ನ ಅಥವಾ ನೆನಪಲ್ಲಿ ಉಳಿದಿರುವಾಗ ಒಂದಿಷ್ಟು ದಾಖಲಿಸೋಣ ಎನ್ನಿಸುವುದು ಸಹಜ.
ನನ್ನ ಜೀವನದಲ್ಲಿ ಅನೇಕ ಗೆಳೆಯರು ಬಂದಿದ್ದಾರೆ, ಹೋಗಿದ್ದಾರೆ. ಕೆಲವರು ಉಳಿದುಕೊಂಡಿದ್ದಾರೆ.
ಕೆಲವರಂತೂ ನನ್ನನ್ನು ಕಂಡ ಮೊದಲ ದಿನವೇ ‘ನಿಮ್ಮ ಮನೆ ನೋಡಬೇಕು. ನಿಮ್ಮ ಮನೆಯವರನ್ನೆಲ್ಲ ನೋಡಬೇಕು’ ಎಂದಿರುವುದುಂಟು.
ಒಬ್ಬ ಹುಡುಗನಂತೂ (ನನಗೆ ಆಗ 35. ಅವನಿಗೆ 24... ಸೋ ಹುಡುಗ...ನನಗಿಂತ!) ಮನೆಗೆ ಬಂದವನು ‘ನಿಮ್ಮ ಮನೆಯಲ್ಲಿ ಇರುತ್ತೇನೆ’ ಎಂದುಬಿಟ್ಟ. ನನ್ನ ಹೆಂಡತಿ, ಅಮ್ಮ ನನಗಿಂತ ‘ಒಳ್ಳೆಯವರು’. ಇರಲಿ ಬಿಡಿ ಎಂದುಬಿಟ್ಟರು.
ಆ ಹುಡುಗನಿಗೆ 25ಕ್ಕೇ ಮದುವೆ ಆಗುವುದರಲ್ಲಿತ್ತು. ಬಹುಶಃ ಫ್ಯಾಮಿಲಿ ಲೈಫ್ ಹೇಗಿರಬಹುದು ಎನ್ನುವ ಅಭ್ಯಾಸ ಮಾಡಿಕೊಳ್ಳಬೇಕೆನ್ನಿಸಿತ್ತೇನೋ!
ಅವನು ಬಂದಿದ್ದು ತಮಿಳುನಾಡಿನಿಂದ. ನನಗೆ ನಿರರ್ಗಳವಾಗಿ ಎನ್ನಲಾಗದಿದ್ದರೂ ತಮಿಳನ್ನು ಮಾತಾಡಬಲ್ಲವನಾಗಿದ್ದೆ. ಪ್ರಾಯಶಃ ಅದೂ ಒಂದು ಕಾರಣ ಇರಬಹುದು. ನನ್ನ ಎದುರಿನ ಡಿಪಾರ್ಟ್‍ಮೆಂಟಿನಲ್ಲೇ ಕೆಲಸ ಅವನಿಗೆ.
ಮದುವೆ ಆಗುವವರೆಗೂ ಜೊತೆಯಲ್ಲಿದ್ದ. ಆಮೇಲೆ ಘಾಯಬ್!
ಬೇಸರವೇನಿಲ್ಲ. ಅವನ ಬದುಕು. ಅವನು ಇಷ್ಟ.
ಮತ್ತೊಬ್ಬ ಹುಡುಗ ಬಂದ ಅವನೂ ಬೇರೆ ಊರಿನಿಂದ ಬಂದವನು. ಅದೇಕೋ ನಮ್ಮ ಮಗನ ಬಗ್ಗೆ ಬಲು ಪ್ರೀತಿ ಅವನಿಗೆ. ನನ್ನ ಮಗನ ವಯಸ್ಸಾಗ ಎರಡು ವರ್ಷಗಳು. ಸದಾ ಅವನನ್ನು ಅಂಟಿಕೊಂಡಿರುತ್ತಿದ್ದ. ಅವನ ಮದುವೆಗೆ ಹೋದಾಗ ನಾನು ಅವನ ಹೆಂಡತಿಯನ್ನು ರೇಗಿಸಿದೆ. ‘ನಿಮ್ಮ ಪತಿ ಇನ್ನು ಮೇಲೆ ನಮ್ಮ ಮನೆಗೆ ಬರದಿದ್ದರೆ ನಿಮ್ಮನ್ನೇ ಬ್ಲೇಮ್ ಮಾಡುತ್ತೇನೆ’ ಎಂದಿದ್ದೆ. ಆ ನಂತರ ಅವನು ನಮ್ಮ ಮನೆಗೆ ಬಂದಿರುವುದು ಒಂದು... ಎರಡು... ಎರಡೇ ಸಲ!
ಇನ್ನೂ ಒಬ್ಬ ಹುಡುಗ. ಅವನು ನನಗಿಂತ 15 ವರ್ಷಗಳಿಗೆ ಚಿಕ್ಕವನು. ನನಗಾಗ ತೆಲುಗು ಬರುತ್ತಿತ್ತು. ಅವನು ಕಾವಲಿ ಎನ್ನುವ ಊರಿನಿಂದ ಬಂದಿದ್ದ. ಅನೇಕ ದಿನ ನಮ್ಮ ಮನೆಯಲ್ಲಿ ಇರುತ್ತಿದ್ದ. ಅವನಿಗೆ ಜ್ವರ ಬಂದಿದ್ದಾಗ ಬಲವಂತವಾಗಿ ನಮ್ಮ ಮನೆಯಲ್ಲಿಟ್ಟುಕೊಂಡು ಆರೈಕೆ ಮಾಡಿದ್ದೆವು.
ಮತ್ತೊಮ್ಮೆ ದೀಪಾವಳಿಯ ಸಮಯದಲ್ಲಿ ಅವನ ಕೈಯಲ್ಲೇ ಹೂಕುಂಡವೊಂದು ಸಿಡಿದು ಬಲಗೈ ಸುಟ್ಟುಹೋಗಿತ್ತು. ಆಗ ನಾವು ಕಿರ್ಲೋಸ್ಕರ್ ಕಾಲೋನಿಯ ಮನೆಯಿಂದ ಜಯನಗರದ ಆರನೇ ಬ್ಲಾಕ್‍ನ ಮನೆಯೊಂದಕ್ಕೆ ಶಿಫ್ಟ್ ಆಗಿದ್ದೆವು.
ಅಲ್ಲಿಗೇ ಕರೆತಂದು ನೋಡಿಕೊಂಡೆವು. ನಮ್ಮ ಅಮ್ಮ, ಹೆಂಡತಿ ನಿಜಕ್ಕೂ ಬಹಳವೇ ಒಳ್ಳೆಯವರು.
ನನಗಂತೂ ಇವೆಲ್ಲಾ ಋಣ ಎನ್ನಿಸುತ್ತದೆ. ಹಿಂದಿನ ಜನ್ಮದಲ್ಲಿ ಅವರಿಗೆಲ್ಲ ನಾನು ಸಾಲ ಕೊಡಬೇಕಿದ್ದಿರಬಹುದು. ಅದನ್ನು ಈ ಜನ್ಮದಲ್ಲಿ ತೀರಿಸಿದ್ದಿರಬೇಕು.
ಅಥವಾ ಇನ್ನೂ ಒಂದು ಥಿಯರಿ ಇದೆ. ನಾವು ಒಂದು ರೀತಿ ರೈಲು ನಿಲ್ದಾಣ. ರೈಲುಗಾಡಿಗಳು ಬರುತ್ತವೆ, ಹೋಗುತ್ತವೆ. ನಾವು ಮಾತ್ರ ಇದ್ದಲ್ಲಿಯೇ ಇರುತ್ತೇವೆ.
ಬಂದವರಿಗಾಗಿ ಸಂತೋಷಿಸಬೇಕು. ಹೋದವರ ಬಗ್ಗೆ ದುಃಖಿಸಬಾರದು. ಇದು ನನ್ನ ಚಿಂತನೆ.
ನೀವೇನಂತೀರಿ?
 

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102