ಯತಿ ಸ್ವಂತೀ -70
11-03-2018
ನನ್ನ ಚಿಕ್ಕಂದಿನ ನೆನಪುಗಳು ಅನೇಕವಿವೆ. ಕೆಲವು ಅಳಿಸಿವೆ. ಕೆಲವು ಹೇಳಬಾರದೇನೋ..!
ನಾವು ಮೈಸೂರು ರೈಲ್ವೇ ಕಾಲೋನಿ ಕ್ವಾರ್ಟರ್ಸ್ ಮನೆಗೆ 1960ರಲ್ಲಿ ಬಂದೆವಂತೆ. ‘ಅಂತೆ’ ಏಕೆಂದರೆ ನನಗೆ ನೆನಪಿಲ್ಲ. ನನ್ನ ವಯಸ್ಸಾಗ ಮೂರು ವರ್ಷಗಳು. ನನ್ನ ತಂಗಿಗೆ ಒಂದು ವರ್ಷವಿರಬಹುದು.
ಚಿಕ್ಕಂದಿನಲ್ಲಿ ನಾನು ಬಹಳವೇ ಸಣಕಲನಾಗಿದ್ದೆ. ಬಹಳ ಬೇಗ ಖಾಯಿಲೆ ಬೀಳುತ್ತಿದ್ದೆ. ನಮ್ಮ ಅಮ್ಮನಿಗೆ ಸಾಕಷ್ಟು ಕೆಲಸ ಕೊಟ್ಟಿದ್ದಿರಬೇಕು. ನನ್ನ ತಂಗಿ ಹಾಗಲ್ಲ. ಅವಳು ಸ್ವಲ್ಪ ಸ್ಟ್ರಾಂಗು.
ಎಂದಿನಂತೆ ಸಿಬ್ಲಿಂಗ್ ರೈವಲ್ರೀ. ಬಹಳ ಸಲ ಅವಳನ್ನು ಗೋಳು ಹುಯ್ದುಕೊಂಡಿದ್ದೇನೆ. ಅವಳ ಮುಖವನ್ನು ಪರಚಿದ್ದೇನೆ. ಅವಳ ತಲೆಯನ್ನು ಹಿಡಿದು ಗೋಡೆಗೆ ಬಡಿದಿದ್ದೇನೆ. ಅಪ್ಪನ ಬಳಿ ಏಟು ತಿಂದಿದ್ದಿರಬಹುದು. ಏಕೆಂದರೆ ಅಪ್ಪನಿಗೆ ಅವಳು ಮುದ್ದು! ಅಂದ ಹಾಗೆ ನಾವು ನಮ್ಮ ಅಪ್ಪನನ್ನು ಅಯ್ಯ ಎನ್ನುತ್ತಿದ್ದೆವು. ಅದೇಕೋ ನನ್ನ ಮಕ್ಕಳು ನನ್ನನ್ನು ಅಪ್ಪ ಎನ್ನುತ್ತವೆ. ಅಯ್ಯ ಎನ್ನುವುದೇ ಚೆನ್ನಾಗಿರುತ್ತಿತ್ತು ಎನ್ನಿಸಿತು.
ಅಪ್ಪ ನನ್ನ ತಂಗಿಯನ್ನು ವಹಿಸಿಕೊಳ್ಳುವುದು ನನಗಾಗ ಕೋಪ ಬರಿಸುತ್ತಿತ್ತು. ಈಗ ನಾನು ನನ್ನ ಮಗಳನ್ನು ನನ್ನ ತಲೆ ಮೇಲೆ ಕೂರಿಸಿಕೊಂಡಿದ್ದೇನೆ ಎಂದು ನನ್ನ ಹೆಂಡತಿ ಹೇಳುವಾಗ ನನ್ನ ಅಯ್ಯ ಅವರದು ತಪ್ಪಿರಲಿಲ್ಲವೇನೋ ಎನ್ನಿಸುತ್ತಿದೆ!
ಅಪ್ಪ ಬೆಳಗ್ಗೆ ಏಳು ಗಂಟೆಗೆ ಕೆಲಸಕ್ಕೆ ಹೊರಟರೆ ಸಂಜೆ ಐದು ಗಂಟೆಗೆ ಬರುತ್ತಿದ್ದರು. ಮನೆಗೆ ಬೇಕಾದ ವಸ್ತುಗಳ ಕೊಳ್ಳುವಿಕೆ ಎಲ್ಲವೂ ಅಮ್ಮನ ಕೆಲಸ.
ನಾನು ಮತ್ತು ನನ್ನ ತಂಗಿ ಪಕ್ಕದ ಮನೆಯ ಬೂಬಮ್ಮನ ಬಳಿ ಇರುತ್ತಿದ್ದೆವು. ಅಮ್ಮ ಎದುರು ಮನೆಯ ಆಂಟಿಯೋ, ಹಿಂದಿನ ರಸ್ತೆಯ ಪದ್ಮಾ ಮಾಮಿಯೊಂದಿಗೋ ದೇವರಾಜ ಮಾರ್ಕೆಟ್‍ಗೆ ಹೋಗಿ ಬರುತ್ತಿದ್ದರು. ನಮ್ಮ ಮನೆಯಿಂದ ಒಂದು ಫರ್ಲಾಂಗ್ ದೂರದಲ್ಲಿ ರೈಲ್ವೇ ಸ್ಟೇಷನ್. ಅದರಾಚೆಗೆ ಜೀವಣ್ಣರಾಯನ ಕಟ್ಟೆ ದಾಟಿದರೆ ಗಾಯತ್ರಿ ಭವನ್ ಇದ್ದ ಧನ್ವಂತರಿ ರಸ್ತೆ. ಆ ರಸ್ತೆಯ ನಡುವೆಯೇ ಮೈಸೂರು ಮಾರ್ಕೆಟ್‍ಗೆ ಗೇಟ್. ಅಲ್ಲಿಯೇ ತರಕಾರಿ, ತೆಂಗಿನಕಾಯಿ, ದಿನಸಿ ಎಲ್ಲವನ್ನೂ ಕೊಳ್ಳುತ್ತಿದ್ದರು. ಅಲ್ಲಿನ ಸ್ಟ್ಯಾಚ್ಯೂ ಸ್ಕ್ವೇರ್ ಬಳಿ ಕುದುರೆ ಕಟ್ಟಿದ ಟಾಂಗಾವನ್ನು ಬಾಡಿಗೆಗೆ ತೆಗೆದುಕೊಂಡು ಮನೆಗೆ ಬರುತ್ತಿದ್ದರು. ಸಾಮಾನ್ಯವಾಗಿ ರೈಲ್ವೇ ಸ್ಟೇಷನ್ ದಾಟಿ ಪೆಟ್ರೋಲ್ ಬಂಕ್ ಮುಗಿದೊಡನೆ ಒಂದು ಭಾರೀ ಅಪ್ ಇದೆ. ಅಲ್ಲಿ ಕುದುರೆಗಳು ಮುಂದಕ್ಕೆ ಹೋಗಲು ಮಕ್ಕರ್ ಮಾಡುತ್ತಿದ್ದವು.
ಅಮ್ಮ ಆ ಟಾಂಗಾ ಸಾಬನನ್ನು ‘ನಿಮ್ಮ ಗಾಡಿ ಎಲ್ಲಿನದು?’ ಎನ್ನುತ್ತಿದ್ದರು. ಅವನು ಒಂಟಿಕೊಪ್ಪಲ್ ಎಂದರೆ ಅದನ್ನು ಹತ್ತುತ್ತಿದ್ದರು. ಏಕೆಂದರೆ ಮಧ್ಯಾಹ್ನ ಒಂದೂವರೆ ಸಮಯದಲ್ಲಿ ಮನೆಗೆ ಹೋಗಲು ಕುದುರೆಗಳು ತಹತಹಿಸುತ್ತಿದ್ದವು. ಒಂಟಿಕೊಪ್ಪಲ್‍ಗೆ ಹೋಗುವ ದಾರಿಯಲ್ಲಿ ನಮ್ಮ ಮನೆ. ಕುದುರೆಗಳು ವಾಯುವೇಗದಲ್ಲಿ ಆ ಅಪ್‍ನಲ್ಲಿ ಓಡುತ್ತಿದ್ದವು. ಏಕೆಂದರೆ ಮನೆ ತಲುಪಿದರೆ ಕುದುರೆಗೆ ಅದರ ಮಾಲೀಕ ಹುರುಳಿ, ನೀರು ಕೊಡುವನೆಂದು ಗೊತ್ತಿರುತ್ತಿತ್ತು.
ಅಮ್ಮನಿಗೆ ಅಶ್ವಹೃದಯ ಗೊತ್ತಿದೆ ಎಂದು ನನಗೆ ಬಹಳ ಹೆಮ್ಮೆಯಾಗುತ್ತಿತ್ತು.
-0-0-0-
Comments
Post a Comment