ಯತಿ ಸ್ವಂತೀ -69


10-03-2018
ಮಸ್ಕತ್‍ನಲ್ಲಿ ನಾನಿದ್ದುದು ಜೂನ್ 2002ರಿಂದ ಏಪ್ರಿಲ್ 2005. ಮಧ್ಯೆ ಜೂನ್ 2003 ಮತ್ತು ಜೂನ್ 2004 ಈ ಎರಡು ತಿಂಗಳುಗಳು ಬೆಂಗಳೂರಿನ ನನ್ನ ಮನೆಯಲ್ಲಿದ್ದೆ.
ಮೊದಲ ಒಂದು ವರ್ಷ ನಾನು ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ನಡೆದಾಡಿದ್ದೆ. ಎಂತಹ ರಣಬಿಸಿಲೆಂದರೆ ಈಗ ನೆನೆದರೂ ನಾನು ಓಡಾಡಿದೆನಾ ಇಲ್ಲ ನನ್ನ ವಿಲ್‍ಪವರ್ ನನ್ನನ್ನು ಓಡಾಡುವಂತೆ ಮಾಡಿತ್ತಾ ಎಂಬ ವಿಷಯ ಸ್ಪಷ್ಟವಾಗದು.
ಏಕೆಂದರೆ ಬಹಳ ಹಿಂದೆ ನನಗೆ ಇದೇ ಸಲ್ತನತ್ ಆಫ್ ಒಮಾನ್‍ನಲ್ಲಿ ಕೆಲಸವೊಂದಕ್ಕೆ ಆಫರ್ ಬಂದಿತ್ತು. ನನಗೆ ಎಂತಹ ಘಮ್ಮಂಡ್ ಇತ್ತೆಂದರೆ ‘ನಾನಾ? ಒಂಟಿಯಾಗಿ ಮಸ್ಕತ್‍ಗಾ? ಫ್ಯಾಮಿಲಿ ಬಿಟ್ಟಾ? ನೆವರ್!’ ಎಂದಿದ್ದೆ.
ಅದು ಆ ದೇವದೇವನಿಗೆ ಕೇಳಿಸಿ ನಗು ಬಂದಿದ್ದಿರಬೇಕು. ನನ್ನ ಋಣವೇನಾದರೂ ಆ ಮಸ್ಕತ್‍ನ ಉಪ್ಪು ತೆಗೆದ ನೀರು ಕುಡಿಯಬೇಕೆಂದಿತ್ತೇನೋ... ಆ ಉರಿಬಿಸಿಲಿನಲ್ಲಿ ಬೆಣ್ಣೆಯಂತೆ ಕರಗಬೇಕೆಂಬ ನಿರ್ಧಾರ ಇದ್ದಿತೇನೋ... 2000ದ ಕೊನೆಯ ವೇಳೆಗೆ ಕೆಲಸ ಹೋಯಿತು. ನಾನಿದ್ದ ಕಂಪೆನಿ ಮುಚ್ಚಿಬಿಟ್ಟಿತು.
ಇಡೀ ದೇಶವನ್ನು ಜಾಲಾಡಿ ಸುಮಾರು 200 ಕಂಪೆನಿಗಳಿಗೆ ಆನ್‍ಲೈನ್ ಅಪ್ಲೈ ಮಾಡಿದೆ. ಸಾರಿ ವೀ ಕಾನ್ಟ್ ಅಫೋರ್ಡ್ ಯೂ ಎಂದು ಉತ್ತರ ಬಂದಿತ್ತು. ದುರದೃಷ್ಟವಶಾತ್ ನಾನು ಅಮೆರಿಕನ್ ಕಂಪೆನಿಯ ಸಂಬಳವನ್ನು ಕೆಲವು ತಿಂಗಳುಗಳು ತೆಗೆದುಕೊಂಡಿದ್ದರ ಫಲಿತಾಂಶ ಅದು.
ಇಲ್ಲಿನ ಒಂದು ಕಂಪೆನಿಯ ಎಂ.ಡಿ.ಯ ಬಳಿಗೆ ಹೋಗಿ ಕೆಲಸ ಬೇಕು ಎಂದೆ. ಯಾವಾಗ ಬೇಕು ಎಂದರು. ‘ನಿನ್ನೆ’ ಎಂದು ನಾನೆಂದೆ ಎಂದರೆ ನನ್ನ ಡೆಸ್ಪರೇಶನ್ ಎಷ್ಟಿತ್ತೆಂದು ನಿಮಗೆ ಅರ್ಥ ಆಗಿರಬಹುದು. ಮಕ್ಕಳ ಶಿಕ್ಷಣ, ಮನೆಯವರ ಪೋಷಣೆ... ಓಹ್, ಎಂತಹ ವಿಷಮ ಪರೀಕ್ಷೆ ಎನ್ನುತ್ತೀರಿ?
ರಣರಣ ಬಿಸಿಯಲ್ಲಿ ಮಸ್ಕತ್‍ನ ಸೀಬ್ ನಿಲ್ದಾಣದಲ್ಲಿ ವಿಮಾನದಿಂದಿಳಿದೆ.  ರಾತ್ರಿ ಎಂಟೂವರೆಯ ತಾಪಮನ 45 ಡಿಗ್ರೀ ಸೆಲ್ಷಿಯಸ್.
ಕೇಳಿಯೇ ಇರದ ಹವಾಮಾನ. ವಿಮಾನದಿಂದಿಳಿದೊಡನೆ ಏನೋ ಒಂದು ರೀತಿಯ ಶಾಖವು ನನ್ನನ್ನಾವರಿಸಿತ್ತು. ನನ್ನನ್ನು ಕರೆದೊಯ್ಯಲು ಬಂದಿದ್ದ ಪ್ರವೀಣ ಮತ್ತು ಸುರೇಶರನ್ನು ಏನೇನೋ ಮಾತಾಡಿಸಲು ಪ್ರಯತ್ನಿಸಿದ್ದೆ. ಆದರೆ ಅವರಿಗೆ ನಾನು ಹೊಸಬ. ನನ್ನ ಫೋಟೋ ಒಂದನ್ನು ಹಿಡಿದುಕೊಂಡು ನನ್ನನ್ನು ಗುರುತಿಸಿ, ಕರೆದೊಯ್ದಿದ್ದರು.
ಅಮೆರಿಕದಲ್ಲಿ ನೋಡಿದ ಮೇಲೆ ಮತ್ತೆ ಇಲ್ಲಿ ಲೆಫ್ಟ್ ಹ್ಯಾಂಡ್ ಡ್ರೈವ್ ಕಾರುಗಳು. ರಸ್ತೆಯ ಬಲಗಡೆ ಹೋಗುತ್ತಿದ್ದ ವಾಹನಗಳು. ಇಲ್ಲಿ ಬಸ್ಸು, ರೈಲು ಇಲ್ವಾ ಎಂದು ಕೇಳಿದ್ದೆ. ಈವತ್ತಿಗೂ ಅವೆರಡೂ ಮಸ್ಕತ್‍ನಲ್ಲಿ ಇಲ್ಲ.
ಸ್ವಂತ ಕಾರುಗಳು ಮತ್ತು ಟ್ಯಾಕ್ಸಿಗಳು.
ಅಬ್ಬಾ, ಈ ಪ್ರವೀಣ ಅದೆಷ್ಟು ಚಾಕಚಕ್ಯತೆಯಿಂದ ಕಾರೋಡಿಸುತ್ತಿದ್ದಾನೆ! ನನಗೆ ಇಲ್ಲಿ ಕಾರು ಓಡಿಸಲು ಸಾಧ್ಯವೇ?
ಮೊದಲೇ ನನಗೆ ಕಾರೋಡಿಸುವುದೆಂದರೆ ಏನೋ ಒಂದು ರೀತಿಯ ಆತಂಕ. ಮೇಲಾಗಿ ಲೆಫ್ಟ್ ಹ್ಯಾಂಡ್ ಡ್ರೈವ್.
ಎಂತಹ ಜಾಗಕ್ಕೆ ಬಂದು ಸೇರಿಕೊಂಡೆನಪ್ಪಾ! ಇದೊಂದೇ ದಾರಿಯಾ ನನಗೆ ಇದ್ದಿದ್ದು? ಎನಿಸದಿರಲಿಲ್ಲ.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102