ಯತಿ ಸ್ವಂತೀ -68
09-03-2018
ಇತ್ತೀಚೆಗೆ ಹಿಂದಿ ಹಾಡುಗಳ ಲಿರಿಕ್ಸ್ ಕೂಡ ಗಮನಿಸುತ್ತಿದ್ದೇನೆ. ಅವುಗಳ ಮಾಧುರ್ಯ ಇದ್ದೇ ಇದೆ. ಕೆಲವೆಡೆ ಅವುಗಳ ಪದಗಳ ಜೋಡಣೆ ಅದ್ಭುತ ಎನ್ನಿಸುತ್ತದೆ. ನಮ್ಮ ಜೀವನದ ಎಲ್ಲ ಸನ್ನಿವೇಶಗಳಿಗೂ ಹೊಂದುವ ಹಾಡುಗಳಿವೆ ಎಂದರೆ ಅಚ್ಚರಿಯೇನಿಲ್ಲ.
ಕಿಶೋರ್ ಕುಮಾರ್ ತನ್ನ ಯೂಡ್ಲಿಂಗ್‍ಗೆ ಭಾರೀ ಫೇಮಸ್ಸು. ಯುಡಲಿ ಯುಡಲಿ ಯೂ ಯೂ ಎಂದು ಅನೇಕ ಹಾಡುಗಳಲ್ಲಿ ಹಾಡಿದ್ದಾನೆ. ಕೆಲವೊಮ್ಮೆ ಅವನ ಧ್ವನಿಯನ್ನು ‘ಬೆಂಡ್’ ಮಾಡುವುದೇ ಕೇಳಲು ಮಜಾ ಬರುತ್ತದೆ. ಉದಾಹರಣೆಗೆ, ಚಲಾ ಜಾತಾ ಹೂಂ ಕಿಸೀಕೆ ಧುನ್ ಮೇ... ಹಾಡಿನಲ್ಲಿ ಎ ಆಲಂ ಭೀ ಅಜಬ್ ಹೋಗಾ ಎನ್ನುವಾಗ ಅವನ ವಾಯ್ಸ್ ಸ್ವಲ್ಪ ಬೇರೆ ರೀತಿ ಕೇಳಿಸುತ್ತದೆ.
ಮೈ ಹೂಂ ಝುಮ್ ಝುಮ್ ಝುಮ್ ಝುಮ್ ಝುಮ್ರೂ... ಹಾಡಿನಲ್ಲಿ ಬೀತೀ ಬಾತೋಂ ಪೆ ಧೂಲ್ ಉಡಾತಾ ಚಲಾ ಎನ್ನುತ್ತಾನೆ. ಮೊಹಮ್ಮದ್ ರಫಿ ಒಂದು ಹಾಡಿನಲ್ಲಿ ಹರ್ ಫಿಕ್ರ್ ಕೋ ಧುವೇ ಮೆ ಉಡಾತಾ ಚಲಾ ಗಯಾ ಎಂದಿದ್ದಾನೆ.
ಅಂದರೆ ಆಗಿ ಹೋಗಿದ್ದನ್ನು ಯಾರೂ ಏನೂ ಮಾಡಲಾರರು. ಅನೇಕ ಚಿಂತೆಗಳಿಗೆ ಉತ್ತರವಿಲ್ಲ. ಏಕೆಂದರೆ ನಾವೇ ಕೆಲವು ಚಿಂತೆಗಳನ್ನು ಆಲ್‍ಮೋಸ್ಟ್ ಬೇಕೆಂದೇ ಹುಟ್ಟು ಹಾಕಿಕೊಳ್ಳುತ್ತೇವೆ.
ನನಗೆ ತಿಳಿದಿರುವಂತೆ ಕೆಲವರಿಗೆ ಏನೂ ತೊಂದರೆ ಇರುವುದಿಲ್ಲ. ಅಥವಾ ಚಿಕ್ಕ ತೊಂದರೆ ಇರುತ್ತದೆ. ಆದರೆ ಎಲ್ಲರಿಂದ ಅಯ್ಯೋ ಪಾಪ ಎನ್ನಿಸಿಕೊಳ್ಳುವ ಹಪಾಹಪಿ ಅವರ ಮಾತುಗಳಲ್ಲಿ ಧ್ವನಿಸುತ್ತದೆ.
ಅಂತಹವರಿಗೆ ಈ ಎರಡು ಹಾಡಿನ ಸಾಲುಗಳು ನಿಜಕ್ಕೂ ಒಳ್ಳೆಯ ಪಾಠ.
ಕಳೆದು ಹೋದುದರ ಮೇಲೆ ಧೂಳು ಹಾರಿಸುತ್ತಾ ನಡೆದೆ ಎನ್ನುತ್ತಾನೆ ಕಿಶೋರ್. ಪ್ರತಿ ಚಿಂತೆಯನ್ನೂ ಹೊಗೆಯಲ್ಲಿ ಹಾರಿಸುತ್ತಾ ನಡೆದೆ ಎನ್ನುತ್ತಾನೆ ರಫಿ.
ನಮಗೇನು ಸಿಕ್ಕಿತೋ ಅದನ್ನು ನಮ್ಮ ನಿಯತಿ ಎಂದುಕೊಂಡರೆ ಅದು ಖಚಿತವಾಗಿ ಸೋಲಲ್ಲ. ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದು ಕೂಡ ಅಲ್ಲ. ಅದು ಪ್ರ್ಯಾಕ್ಟಿಕಾಲಿಟಿ. ಹೌದು, ಇದು ಘಟಿಸಿ ಆಗಿದೆ. ಇದಕ್ಕೆ ನಾನು ಪ್ರತಿಕ್ರಿಯಿಸಲೇಬೇಕೆಂದು ಅಳುತ್ತಾ ಕುಳಿತರೆ ನನಗೆ ಹೊಳೆಯಬಹುದಾದ ಪರಿಹಾರ ಕೂಡ ಹೊಳೆಯದಿರುವುದು ಖಾತ್ರಿ.
ಏಕೆಂದರೆ ನಮಗಿರುವುದು ಒಂದು ಮೆದುಳು. ಅದರಲ್ಲಿ ನಾವು ಕೇವಲ ಕತ್ತಲೆಯನ್ನೇ ತುಂಬಿಕೊಂಡು ಬೆಳಕಿಗೆ ಜಾಗವನ್ನೇ ಕೊಡದಿದ್ದರೆ ಅದು ಒಳಗೆ ಪ್ರವೇಶಿಸುವುದಾದರೂ ಹೇಗೆ?
ನಮ್ಮ ಪ್ರಯತ್ನವಿರಬೇಕು. ಅದರಿಂದ ಬೆಳಕು ಒಳಗೆ ಬರಬೇಕು. ತೆಲುಗಿನಲ್ಲಿ ಒಂದು ನಾಣ್ಣುಡಿಯಿದೆ. ಕೊಂಡಂತ ಚೀಕಟಿ, ಗೋರಂತ ದೀಪಂ.
ಬೆಟ್ಟದಂತಹ ಕತ್ತಲೆಯ ನಡುವೆ ಉಗುರಿನಷ್ಟು ದೀಪವನ್ನು ಒಳಬರಲು ನಾವು ಪ್ರಯತ್ನ ಮಾಡಬೇಕು. ಆಗ ನಮ್ಮ ಜೀವನದ ಕತ್ತಲ ಉದ್ದನೆಯ ಸುರಂಗದ ಕೊನೆಯಲ್ಲಿ ಬೆಳಕಿನ ಪುಟ್ಟ ಕಿರಣ ಕಾಣಿಸುವುದು ಸಾಧ್ಯ.
ಒಂದು ವಿಷಯ ನಿಜ. ಘಟನೆ ಏನೇ ಆಗಿದ್ದರೂ ಅದು ಮುಖ್ಯವಾಗುವುದಿಲ್ಲ. ಅದಕ್ಕೆ ನಾವು ತೋರುವ ಪ್ರತಿಕ್ರಿಯೆ ಬಹಳ ಮುಖ್ಯವಾಗುತ್ತದೆ.
Comments
Post a Comment