ಯತಿ ಸ್ವಂತೀ -67


08-03-2018
ಮಸ್ಕತ್‍ಗೆ ನಾನು 2002 ಜೂನ್ ತಿಂಗಳಲ್ಲಿ ಮೊದಲ ಸಲ ಕಾಲಿಟ್ಟೆ.
ನನ್ನ ಎರಡನೇ ವರ್ಷದ ಕೊನೆಯ ಹೊತ್ತಿಗೆ ನನ್ನ ತಂಗಿ, ನನ್ನ ಭಾವನವರು ಮಸ್ಕತ್‍ನಲ್ಲಿ ಕೆಲಕಾಲ ನೆಲೆಸಿದ್ದರು. ಅವರದೊಂದು ದೊಡ್ಡ ವಿಲ್ಲಾ. ಸುತ್ತಲೂ ಜಾಗ. ಅಲ್ಲಲ್ಲಿ ಪೊದೆಗಳು. ಅನೇಕ ರೂಮುಗಳ ದೊಡ್ಡ ಮನೆ ಅದು. ಮುಂದಿದ್ದ ಒಂದು ಪೊದೆಯಲ್ಲಿ ಚೀಂವ್ ಚೀಂವ್ ಎನ್ನುತ್ತಾ ನೂರಾರು ಗುಬ್ಬಚ್ಚಿಗಳು... ಹೌದು ಗುಬ್ಬಚ್ಚಿಗಳಿದ್ದವು. ಬೆಂಗಳೂರಲ್ಲಿ ರಾಜರಾಜೇಶ್ವರಿನಗರದ ಮಣಿಪಾಲ ಆಸ್ಪತ್ರೆಯಲ್ಲಿ ನನ್ನ ತಾಯಿಯವರನ್ನು ಅಡ್ಮಿಟ್ ಮಾಡಿದಾಗ ಸಂಜೆಯ ವೇಳೆ ಗಿಡಗಳಲ್ಲಿ ಗುಬ್ಬಿಗಳ ಕಲರವ ಕೇಳಿಸುತ್ತಿತ್ತು. ಮತ್ತು ದೇವನಹಳ್ಳಿಯ ನಮ್ಮ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಚೆಕ್ ಮಾಡಿಸಿಕೊಂಡು ಒಳಗಿನ ರೆಸ್ಟುರಾಂಟ್‍ನಲ್ಲಿ ತಿಂಡಿ ತಿನ್ನುತ್ತಿದ್ದರೆ ನಮ್ಮ ಕಾಲುಗಳ ಬಳಿ ಅನೇಕ ಗುಬ್ಬಿಗಳು ಬರುತ್ತಿದ್ದವು. ನಾನೂ ವಿಮಾನ ನಿಲ್ದಾಣಕ್ಕೆ ಹೋಗಿ ಬಹಳ ದಿನಗಳಾದವು. ಈಗ ಇವೆಯೋ ಇಲ್ಲವೋ ತಿಳಿಯದು. ಮದನಪಲ್ಲಿಯ ಬಳಿಯ ಹಾರ್ಸ್‍ಲೀ ಹಿಲ್ಸ್‍ಗೆ ಹೋಗುವಾಗ ಕೋಲಾರದ ಬಳಿ ಒಂದು ಹೊಟೇಲ್ ಬಳಿ ಗುಬ್ಬಚ್ಚಿ ನೋಡಿದ್ದೆ.
ನಮ್ಮ ರೈಲ್ವೇ ಕಾಲೋನಿ ಮನೆಯಲ್ಲಿ ವರಾಂಡಾದಲ್ಲಿ ಮೇಲೆ ಆಸ್‍ಬೆಸ್ಟಾಸ್ ಶೀಟು. ಅದಕ್ಕೆ ಸಪೋರ್ಟ್‍ನಂತೆ ರೈಲ್ವೇ ಕಂಬಿಗಳನ್ನು ತೊಲೆಯನ್ನಾಗಿ ಬಳಸಿದ್ದರು. ಶೀಟ್‍ಗೂ, ತೊಲೆಗೂ ನಡುವೆ ಒಂದಿಷ್ಟು ಜಾಗವಿರುತ್ತಿತ್ತು. ಅಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟುತ್ತಿದ್ದವು. ಎಲ್ಲೆಲ್ಲಿಂದಲೋ ಒಣಹುಲ್ಲು ತಂದು ಸೇರಿಸಿ ಗೂಡು ಕಟ್ಟುತ್ತಿದ್ದವು. ಗೂಡಿನಲ್ಲಿ ಕೆಲವು ಮೊಟ್ಟೆಗಳನ್ನಿಟ್ಟು ಕಾವು ಕೊಟ್ಟು ಕಾಯುತ್ತಿದ್ದವು.
ಗಂಡು ಗುಬ್ಬಿ, ಹೆಣ್ಣು ಗುಬ್ಬಿಗಳನ್ನು ನಾವು ಕಂಡುಹಿಡಿಯುತ್ತಿದ್ದೆವು. ಮೊಟ್ಟೆಗಳು ಒಡೆದಾಗ ಚೀಂವ್ ಚೀಂವ್ ಸದ್ದು ಮರಿಗಳಿಂದ ಕೇಳಿಸುತ್ತಿತ್ತು. ಆಹಾರವನ್ನು ತಂದು ಮರಿಯ ಕೊಕ್ಕಿನಲ್ಲಿ ತುರುಕುತ್ತಿದ್ದುದನ್ನು ಕಂಡಿದ್ದೇನೆ. ಸ್ವಲ್ಪ ದೊಡ್ಡದಾದ ನಂತರ ಮರಿಗಳ ಮುಂದೆ ಆಹಾರ ಹಾಕಿದರೆ ಅವೇ ತಿನ್ನುತ್ತಿದ್ದವು.
ಒಮ್ಮೆ ಒಂದು ಮರಿ ಕೆಳಗೆ ಬಿದ್ದುಬಿಟ್ಟಿತು. ನಾನು ಮುಟ್ಟಲು ಹೋದಾಗ ಅಮ್ಮ, ‘ಅದನ್ನು ನಾವು ಮುಟ್ಟಿದರೆ ಮತ್ತೆ ತಾಯಿ ಅದನ್ನು ಗೂಡಿಗೆ ಸೇರಿಸಿಕೊಳ್ಳಲ್ಲ’ ಎಂದು ಹೇಳಿ, ಒಂದು ಸೌಟಿನಲ್ಲಿ ಅದನ್ನೆತ್ತಿ ಗೂಡಿನಲ್ಲಿ ಬಿಟ್ಟಿದ್ದರು.
ಇನ್ನೂ ಒಂದಿಷ್ಟು ದೊಡ್ಡದಾದ ಮೇಲೆ ತೊಲೆಯ ಮೇಲೆ ಅದನ್ನು ನಿಲ್ಲುವಂತೆ ಮಾಡಿ ಹಿಂದಿನಿಂದ ತಳ್ಳುತ್ತಿತ್ತು ತಾಯಿ ಅಥವಾ ತಂದೆ ಹಕ್ಕಿ. ಮರಿ ಬಹುಶಃ ಹೆದರುತ್ತಿತ್ತೋ ಏನೋ ಬಿದ್ದುಹೋಗುವೆನೆಂದು. ನಂತರ ಆಟೋಮ್ಯಾಟಿಕ್ಕಾಗಿ ರೆಕ್ಕೆಗಳನ್ನು ಹರಡಿ ಹಾರಿ ಹೊರಟುಹೋಗುತ್ತಿತ್ತು. ಪ್ರಾಯಶಃ ಮತ್ತೆ ಹಿಂದಿರುಗುತ್ತಿರಲಿಲ್ಲ ಎಂದು ನೆನಪು.
ನಮ್ಮ ಮಕ್ಕಳನ್ನೂ ನಾವು ಬೆಳೆಸಬೇಕು. ಅವರಿಗೆ ಸ್ವತಂತ್ರವಾಗಿ ಆಲೋಚಿಸುವಂತಹ ಬುದ್ಧಿಯನ್ನು ಕೊಡಿಸಬೇಕು. ಆ ನಂತರ ಅವರು ನಮ್ಮಿಂದ ದೂರವಾದಾಗÀ ದುಃಖಿಸಕೂಡದು.
ಏಕೆಂದರೆ ಅವರು ಎಂದಿಗಾದರೂ ಮರಳಿ ಬರಬೇಕೆಂದರೆ ಅದು ಅವರ ಆಯ್ಕೆ. ನಾವು ಅವರನ್ನು ಬ್ಲ್ಯಾಕ್ ಮೆಯ್ಲ್ ಮಾಡಿ ನಮ್ಮ ಬಳಿಯೇ ಇಟ್ಟುಕೊಂಡರೆ ಅದು ನಮಗೆ ಗಿಣಿಭವಿಷ್ಯ ಹೇಳುವವನ ಬಳಿಯ ಗಿಳಿಯ ನೆನಪು ಬರಬೇಕು. ಆ ಗಿಳಿಗಳ ರೆಕ್ಕೆಗಳನ್ನು ಕತ್ತರಿಸಿಬಿಟ್ಟಿರುತ್ತಾನೆ ಆ ಭವಿಷ್ಯ ಹೇಳುವಾತ. ನಾವು ಕೂಡ ಅದೇ ರೀತಿ ಮಾಡಿದರೆ ಮಕ್ಕಳು ನಮ್ಮ ಬಳಿ ಇರುತ್ತಾರೆ. ಆದರೆ ಸಂತಸದಿಂದ ಇರುತ್ತಾರಾ?
ಗೊತ್ತಿಲ್ಲ!
 

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102