ಯತಿ ಸ್ವಂತೀ -66


07-03-2018
1979 ಆರಂಭವಾದಾಗ ನಮಗೆ ಥ್ರಿಲ್ಲೋ ಥ್ರಿಲ್ಲು. ನಮ್ಮ ಆಲ್ ಇಂಡಿಯಾ ಟೂರ್ ರೂಟ್ ಸಿದ್ಧವಾಯಿತು. 21 ದಿನಗಳಿಗೆ ಮಾತ್ರ ಹೋಗಬಹುದಿತ್ತು. ನಮ್ಮ ಟೂರ್‍ಗೆ ಇಪ್ಪತ್ತೆಂಟು ದಿನಗಳು ಬೇಕಿದ್ದವು. ನಮ್ಮ ಟೂರ್ ಲೀಡರ್ ಸ್ವಲ್ಪ ಸ್ಟ್ರಿಕ್ಟು. ಅವನನ್ನು ಹೇಗೋ ಒಪ್ಪಿಸಿ ಐದಾರು ಪ್ರತಿಗಳನ್ನು ಪ್ರಿನ್ಸಿಪಾಲರಿಂದ ಸಹಿ ಮಾಡಿಸುವಾಗ ನಮ್ಮ ನಿಜವಾದ ಟೂರ್‍ನ ಕಾಗದವನ್ನು ನಡುವೆ ಬಚ್ಚಿಟ್ಟು ಅದಕ್ಕೂ ಸಹಿ ಪಡೆದೆವು! (ತಪ್ಪಲ್ವಾ?)
ಕೊನೆಗೂ ಎಲ್ಲರೂ ಬೆಂಗಳೂರಿನಿಂದ ಹೊರಟೆವು. ಕೆಲವರು ನಡುನಡುವೆ ಹತ್ತಿಕೊಂಡರೆ ಕೆಲವರು ನಡುವೆಯೇ ಇಳಿದುಬಿಟ್ಟರು. ಅವರವರಿಗೆ ಅವರವರ ಕಾರಣಗಳು ಇದ್ದವು ಎಂದಿಟ್ಟುಕೊಳ್ಳಿ!
ಶಿಮ್ಲಾದಲ್ಲಿ ಹಿಮವು ಬಹಳ ಚೆನ್ನಾಗಿತ್ತು. ಚಂಡೀಗಢದಲ್ಲಿ ರಾಕ್ ಗಾರ್ಡನ್, ಇಡೀ ನಗರವನ್ನು ಎಂಜಾಯ್ ಮಾಡಿದೆವು.  ಜೈಪುರಕ್ಕೆ ಹೋದಾಗ ಒಂದು ಸಮಸ್ಯೆ ಆಯಿತು. ಆಮೇಲೆ ಅದರ ಬಗ್ಗೆ.
ಹೀಗೆ ನಡುವೆ ಸೇರಿದವರಲ್ಲಿ ಕಲ್ಪನಾ ಎಂಬ ಹುಡುಗಿ. ನಾಲ್ಕನೇ ವರ್ಷದಲ್ಲಿ ಓದುತ್ತಿದ್ದಳು. ನಾವು ಐದನೆ ವರ್ಷದವರು. ಆಕೆಯ ತಾಯಿ ಕನ್ನಡದಲ್ಲಿ ಕಾದಂಬರಿ ಬರೆಯುತ್ತಿದ್ದರು.
ಅವಳು ಮುಂಬೈನಲ್ಲಿ ಬೆಳೆದ ಹುಡುಗಿ. ಅದರಿಂದ ಸ್ವಲ್ಪ ಹೆಚ್ಚು ಸೋಷಿಯಲ್. ಅಂದರೆ ಮೈಛಳಿ ಬಿಟ್ಟು ನಮ್ಮೊಂದಿಗೆಲ್ಲ ಮಾತಾಡುತ್ತಿದ್ದಳು.
ಮುಂಬೈನಲ್ಲಿ ಕಂಡ ಮತ್ತೊಂದು ವಿಶೇಷ ದೃಶ್ಯ. ಆಗಿನ ಕಾಲಕ್ಕೆ ಅಪರೂಪ, ಕನಿಷ್ಠಪಕ್ಷ ನನಗೆ. ಅಯ್ಯೋ, ಹೆಂಗಸರು, ಗಂಡಸರು ಬಿ ಇ ಎಸ್ ಟಿ ಬಸ್‍ನಲ್ಲಿ ಒಂದೇ ಸೀಟಿನಲ್ಲಿ ಅಕ್ಕಪಕ್ಕದಲ್ಲಿ ಕೂತಿರುತ್ತಿದ್ದುದು ನನಗಂತೂ ಅಚ್ಚರಿಯೋ ಅಚ್ಚರಿ!
ಸರಿ, ಕಲ್ಪನಾ ವಿಷಯಕ್ಕೆ ಬರೋಣ. ಅವಳು ನಮ್ಮ ಜೊತೆ ಟ್ರೈನಲ್ಲಿ ಬಂದಾಗ ನಾವೆಲ್ಲಾ ಅಂದು ಅಂತ್ಯಾಕ್ಷರಿ ಹಾಡುತ್ತಿದ್ದೆವು. ಅವಳೂ ಖುಷಿಯಾಗಿ ಹಿಂದಿ ಹಾಡುಗಳನ್ನು ಹಾಡುತ್ತಿದ್ದಳು. ನಾನು ‘ಕ’ ಅಕ್ಷರ ಬರಲೆಂದು ಕಾಯುತ್ತಿದ್ದೆ. ಕ ಬಂತು. ತಕ್ಷಣ ಬಾಯ್ತೆರೆದು ‘ಕಲ್ಪನಾ ರೂಪರಾಶಿ ಬಂದಿಹೇ ನಿನ್ನ ಬಯಸೀ’ ಎಂದು ಹಾಡಿದೆ. ಆ ಕ್ಷಣದಲ್ಲಿ ಆ ಐಡಿಯಾ ನನ್ನ ಗೆಳೆಯ ಪ್ರಸನ್ನನಿಗೂ ಬಂದಿತು. ಅವನೂ ಹಾಡತೊಡಗಿದ. ಎಲ್ಲರೂ ನಗುತ್ತಿದ್ದರೂ ಅವಳು ನಗಲಿಲ್ಲ. ಏಕೆಂದರೆ ಅವಳ ತಾಯಿ ಕನ್ನಡ ಕಾದಂಬರಿಗಾರ್ತಿ ಆಗಿದ್ದರೂ ಅವಳಿಗೆ ಕನ್ನಡ ಅದರಲ್ಲೂ ಕನ್ನಡ ಹಾಡು ಅರ್ಥ ಆಗುತ್ತಿದ್ದುದು ಅಷ್ಟಕ್ಕಷ್ಟೇ.
ಬಾಂಬೆಗೆ ಬಂದೆವು. ನಮ್ಮ ಬಾಲು ನಂಬರ್ ಒನ್‍ಗೆ (ಇಬ್ಬರಿದ್ದರು ಬಾಲ...) ಅಂತ. ಸರಿ, ಮುಂಬೈಯಲ್ಲಿ ನಮ್ಮ ಡಾರ್ಮಿಟರಿಯಿಂದ ಕೆಳಗಿಳಿದು ನಾನು, ಪ್ರಸನ್ನ ಹೊರಗೆ ಹೋದೆವು. ಯಾವುದೋ ಒಂದು ಮನೆಯ ಮುಂದೆ ಕಾರೊಂದರ ಮೇಲೆ + ಚಿಹ್ನೆ ಕೆಂಪಿನಲ್ಲಿತ್ತು. ಆ ಕಾರಿನ ಮಾಲೀಕ ಒಬ್ಬ ಡಾಕ್ಟರ್. ಆ ಮನೆಯಿಂದ ಹೊರಬಂದೊಡನೆ ನಮ್ಮ ಬಾಲು ನಂಬರ್ ಒನ್‍ಗೆ ಔಷಧಿ ಕೊಡಿಸಿದೆವು.
ಮುಂದಿನ ಊರು ಹೈದರಾಬಾದ್. ಅಲ್ಲಿಗೆ ಹೋದ ದಿನ ಬಾಲು ನಂಬರ್ ಎರಡು ಜ್ವರ ಬಂದು ಮಲಗಿಬಿಟ್ಟ. ನಾವೆಲ್ಲಾ ಸಾಲಾರ್‍ಜಂಗ್ ಮ್ಯೂಸಿಯಂ ನೋಡಲು ಹೋಗಬೇಕಿತ್ತು. ಆಗ ಕಲ್ಪನಾ ‘ಪರವಾಗಿಲ್ಲ. ನಾನು ಹೈದರಾಬಾದ್ ನೋಡಿದ್ದೀನಿ. ಬಾಲು ನಂಬರ್ ಎರಡುಗೆ ಔಷಧಿ, ಹಣ್ಣಿನ ಜ್ಯೂಸ್ ನಾನು ಕೊಡುತ್ತೇನೆ’ ಎಂದಳು.
ಸರಿ, ಲೋಕಲ್ ಟೂ ಮುಗಿಸಿ ಮರಳಿದೆವು.
ನಂತರ ಬಾಲು ನಂಬರ್ ಒನ್ ಗೊಣಗೊಣ ಎಂದು ಬೈದುಕೊಳ್ಳುತ್ತಿದ್ದ. ಏನಪ್ಪಾ ಅಂತ ನೋಡಿದರೆ, ‘ನನಗೆ ಜ್ವರ ಬಂದರೆ ಈ ಯತಿ, ಪ್ರಸನ್ನ ನೋಡಿಕೊಂಡರು. ಆ ಬಾಲುನ ನೋಡಿಕೊಳ್ಳೋಕ್ಕೆ ಹುಡುಗೀನಾ?’ ಎಂದೆನ್ನುತ್ತಿದ್ದ.
ವಯಸ್ಸು ಅಂತಹದ್ದು! ಏನಂತೀರಿ?

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102