ಯತಿ ಸ್ವಂತೀ -65
06-03-2018
ನಮ್ಮ ಎರಡನೇ ದೊಡ್ಡ ಅಧಿಕಾರಿಯ ಆಫೀಸ್ ಒಳಗೆ ಕಾಲಿಟ್ಟೆ.
ಸುಮಾರು ಎರಡು ಫರ್ಲಾಂಗ್ ದೂರ ನಡೆದುಬರುವಾಗ ಏನು ಮಾಡಬೇಕೆಂದು ನಿರ್ಧರಿಸಿದೆ. ಕೊನೆಯ ಬಾಲ್. ಸಿಕ್ಸರ್ ಹೊಡೆದರೆ ಗೆದ್ದೆ. ಇಲ್ಲದಿದ್ದರೆ ಗೆಟ್ ಔಟ್. ಎರಡೇ ಆಯ್ಕೆಗಳು.
ನನ್ನ ಇಮ್ಮೀಡಿಯೇಟ್ ಬಾಸ್ ಮೊದಲೇ ಹೇಳಿದಂತೆ ಊರು ಬಿಟ್ಟು ಬಾಂಬೆಗೆ ಹೋಗಿ ಆಗಿತ್ತು. ಅವರ ಕಾರ್ಯವೈಖರಿಯನ್ನು ನೆನೆದೆ. ಅವರ ಇಮ್ಮೀಡಿಯೇಟ್ ಬಾಸ್ ಕರೆದರು ಎಂದು ತಿಳಿದೊಡನೆ, ‘ಯಾಕೆ ಕರೆದಿರಬಹುದು?’ ಎಂದು ಆಲೋಚಿಸಿ, ಅವರು ಕೇಳಬಹುದಾದ ಎಲ್ಲ ಕಾಗದಗಳನ್ನೂ ತೆಗೆದೊಯ್ಯುತ್ತಿದ್ದರು. ಅದಂತೂ ನನಗೆ ಬಹಳವೇ ಶ್ಲಾಘನೀಯ ಕೃತ್ಯ ಎನ್ನಿಸುತ್ತಿತ್ತು ಯಾವಾಗಲೂ. ಹೇಗೆ ಗೆಸ್ ಮಾಡುವುದು ಬಾಸ್ ಏನು ಕೇಳಬಹುದೆಂದು? ಇದಕ್ಕೆ ಇನ್ನೊಂದು ಉದಾಹರಣೆ ನನ್ನ ಜೀವನದಲ್ಲೂ ನಡೆಯಿತು. ಅದು ಆಮೇಲೆ.
ಹ್ಞಾಂ... ಕಾಲಿಟ್ಟೆ.
ಅಲ್ಲಿ ಎರಡನೇ ದೊಡ್ಡ ಬಾಸ್ ಇರಲಿಲ್ಲ. ಸೆಕ್ರೆಟರಿ ಇದ್ದರು. ಆತ ಗ್ರಾಹಕರಿಗೆ ಕಾಫಿ ಉಪಚಾರ ಮಾಡಿದ್ದರು. ನೇರ ಹೋಗಿ ಗ್ರಾಹಕರನ್ನು ಭೇಟಿ ಮಾಡಿ ನಮಸ್ಕರಿಸಿ, ಅವರು ಬಾಯ್ತೆರೆಯುವ ಮೊದಲೇ, ‘ನನ್ನನ್ನು ಕ್ಷಮಿಸಿ. ಇದು ನನ್ನ ತಪ್ಪು. ಇದನ್ನು ನಾನು ಆದಷ್ಟು ಬೇಗ ಸರಿಪಡಿಸಿ ನಿಮಗೆ ಆಲ್ಟರ್‍ನೇಟರ್ ಕಳಿಸುತ್ತೇನೆ’ ಎಂದೆ. ನನ್ನ ನಗೆಮೊಗವೋ, ನನ್ನ ಮಾತಿನಲ್ಲಿ ಅವರಿಗೆ ಕೇಳಿಸಿರಬಹುದಾದ ನಿಯತ್ತೋ ತಿಳಿಯದು ಮುಗುಳ್ನಕ್ಕರು.
ನಮ್ಮ ಎರಡನೇ ದೊಡ್ಡ ಬಾಸ್, ನನ್ನ ಇಮ್ಮೀಡಿಯೇಟ್ ಬಾಸ್‍ನ ಇಮ್ಮೀಡಿಯೇಟ್ ಬಾಸ್ ಆಫೀಸಿಗೆ ಗ್ರಾಹಕರನ್ನು ಕರೆತರುವಂತೆ ಸಂದೇಶ ನೀಡಿದರು. ನನ್ನ ಕಥೆ ಮುಗಿಯಿತು. ಎರಡು ದೊಡ್ಡ ಕ್ಷಿಪಣಿಗಳು ನನ್ನ ಮೇಲೆ ಬಿದ್ದು ನಾನು ಇತಿಶ್ರೀ ಆಗಲಿದ್ದೇನೆ ಎಂದು ಕಣ್ಬಿಟ್ಟುಕೊಂಡೇ ದುಃಸ್ವಪ್ನ ಕಂಡೆ.
ಗ್ರಾಹಕರನ್ನು ವಿಜ್ಹಿಟರ್‍ಗಳ ರೂಮಿನಲ್ಲಿ ಕೂರಿಸಿ ನಾನು ಈ ಇಬ್ಬರು ಬಾಸ್‍ಗಳಿದ್ದ ರೂಮಿಗೆ ಕಾಲಿಟ್ಟೆ. ನನ್ನನ್ನು ನೋಡಿದೊಡನೆ ಇಬ್ಬರೂ ‘ಏನು ಹೇಳೋಣ ಈ ಕಸ್ಟಮರ್‍ಗೆ?’ ಎಂದು ಚಿಂತಿತ ಸ್ವರದಲ್ಲಿ ಒಟ್ಟಿಗೇ ಕೇಳಿದರು! ನಾನು ನನ್ನೆಲ್ಲ ಆತಂಕವನ್ನು ಮರೆತುಬಿಟ್ಟು ಸನ್ನಿವೇಶವನ್ನು ನಿಯಂತ್ರಣಕ್ಕೆ ತಂದುಕೊಂಡೆ.
‘ಸರ್, ನಾನಾಗ್ಲೇ ಮಾತಾಡಿದ್ದೀನಿ ಸರ್. ನಮ್ಮದೇನೂ ತಪ್ಪಿಲ್ಲ. ಈ ಮೂರನೇ ಯೂನಿಟ್‍ನವರಿಗೆ ಬಹುಶಃ ಈ ಪ್ರಾಜೆಕ್ಟ್‍ನ ತೀವ್ರತೆ ಗೊತ್ತಿರಲಾರದು’ ಎಂದೆ.
ಅಬ್ಬಾ! ಹಿಮಾಲಯದಷ್ಟು ದೊಡ್ಡ ಕಷ್ಟ ಹತ್ತಿಯಂತೆ ಹಾರಿಹೋಗಿತ್ತು.
ಒಂದು ಮಿನಿಟ್ಸ್ ಆಫ್ ಮೀಟಿಂಗ್ ಬರೆದು ಬಾಕ್ಸ್ ಫೈಲ್‍ನಲ್ಲಿ ಫೈಲ್ ಮಾಡಿಬಿಟ್ಟೆ. ನನಗೂ ಸಿಟ್ಟು ತಾನೇ? ನನ್ನ ಬಾಸ್ ಮೇಲೆ? ಎಲ್ಲರಿಂದ ನನ್ನನ್ನು ಕಾಪಾಡಬೇಕಾದ ದೊಡ್ಡ ಬಾಸ್ ಹೀಗೆ ಮಾಡಿದರೆ ದುಃಖವಾಗದೇನು?
ನಾಲ್ಕು ದಿನಗಳ ನಂತರ ನನ್ನನ್ನು ಕರೆದು, ‘ಏನಾಯ್ತು?’ ಎಂದರು. ನಾನಿನ್ನೂ ಅಲ್ಲಿಂದ ಓಡಿಸಲ್ಪಟ್ಟಿಲ್ಲ ಎಂಬ ಅಚ್ಚರಿಯೂ ಅವರಿಗೆ ಇದ್ದಿರಬಹುದು!
ಆಮೇಲೆ ಆ ಆಲ್ಟರ್‍ನೇಟರ್ ಆದಷ್ಟು ಬೇಗ ಸಿದ್ಧವಾಗಿ ಡಿಸ್ಪ್ಯಾಚ್ ಆಗುವಂತೆ ನೋಡಿಕೊಂಡೆ.
ಕೆಲವರು ಗ್ರಾಹಕರು ನಮ್ಮನ್ನು ಕೇವಲ ಸೇಲ್ಸ್ ಇಂಜಿನಿಯರ್ ಆಗಿ ನೋಡುತ್ತಾರೆ. ಮತ್ತೆ ಸ್ವಲ್ಪ ಜನ ನನ್ನನ್ನು ಯತಿರಾಜ್ ಎಂಬ ವ್ಯಕ್ತಿಯಾಗಿ ನೋಡುತ್ತಾರೆ.
ಈ ಘಟನೆ ಆದ ಮೇಲೆ ಅದೇನಾಯಿತೋ ತಿಳಿಯದು, ನನ್ನನ್ನು ಸೇಲ್ಸ್‍ನಿಂದ ಡಿಸೈನ್ ಡಿಪಾರ್ಟ್‍ಮೆಂಟಿಗೆ ವರ್ಗ ಮಾಡಿದರು.
ಪ್ರಸ್ತುತ ಆಲ್ಟರ್‍ನೇಟರ್ ಟೆಸ್ಟ್ ಆಗಬೇಕಿದ್ದ ಸಮಯದಲ್ಲಿ ನಾನು ವರ್ಗವಾಗಿದ್ದೆ.
ಆ ವ್ಯಕ್ತಿಗಳು ಟೆಸ್ಟ್‍ಗೆ ಬಂದವರು, ಕೆಲಸ ಮುಗಿಸಿ ನನ್ನನ್ನು ನಾನಿದ್ದ ಜಾಗಕ್ಕೆ ಹುಡುಕಿಕೊಂಡು ಬಂದು, ‘ನಿಮ್ಮ ಮಾತಿನಂತೆ ಬೇಗನೆ ಆಲ್ಟರ್‍ನೇಟರ್ ಸಿದ್ಧ ಮಾಡಿಸಿದಿರಿ. ನಿಮಗೆ ಥ್ಯಾಂಕ್ಸ್’ ಎಂದಾಗ ಅದೆಷ್ಟು ಖುಷಿ ಆಯಿತು ಎನ್ನುತ್ತೀರಿ!
Comments
Post a Comment