ಯತಿ ಸ್ವಂತೀ -64
05-03-2018
ನನ್ನ ಜೀವನದಲ್ಲಿನ ಕೆಲವು ಘಟನೆಗಳನ್ನು ಈಗ ನೆನೆದಾಗ ನನ್ನ ಭಂಡತನವು ನನ್ನನ್ನು ಕಾಪಾಡಿದೆ ಎನ್ನಬಹುದೇನೋ!
ಒಮ್ಮೆ ಹೀಗಾಯಿತು. ನನ್ನ ಮದುವೆಯಾದೊಡನೆ ಚಿಕ್ಕಮಗಳೂರಿಗೆ ಹೋಗಿದ್ದೆ ಪತ್ನಿಯೊಂದಿಗೆ. ಊಟಿಗೆ ಹೋಗಬೇಕಿತ್ತು, ಕಾರಣಾಂತರಗಳಿಂದ ಹೋಗಲಾಗಲಿಲ್ಲ. ಮದುವೆಯಾದ ವರ್ಷವೇ ಆಗಸ್ಟ್‍ನಲ್ಲಿ ಕಾಶ್ಮೀರದ ಪ್ರವಾಸ ಮಾಡಿದೆವು. ಆದರೂ ಊಟಿ ನಮಗೆ ಹೋಗಲಾಗಲಿಲ್ಲ. ಮರುವರ್ಷ ಮಾರ್ಚ್‍ನಲ್ಲಿ ಕೊಡೈಕೆನಾಲ್‍ಗೆ ಹೋಗೋ ಅವಕಾಶ ಸಿಕ್ಕಾಗ ಪತಿ ಪತ್ನಿ ಬೆಂಗಳೂರಿನಿಂದ ಘಾಯಬ್!
ಖುಷಿಯಿಂದ ವಾಪಸ್ ಆಫೀಸಿಗೆ ಬಂದರೆ ಟೇಬಲ್ ಮೇಲೆ ಎರಡು ಪತ್ರಗಳು. ( ಈ ಹೆಸರಿನ ಕಥೆಯೊಂದು ನಾನು ಬರೆದಿರುವುದು ಯಾದೃಚ್ಛಿಕ!) ಒಂದು ಪತ್ರದಲ್ಲಿ ನಮ್ಮ ಉಪಾಧ್ಯಕ್ಷರು, ನಿನ್ನ ಅಭಿವೃದ್ಧಿ ಬಗ್ಗೆ ನಿನ್ನ ಬಾಸ್ ಹೇಳುತ್ತಿರುತ್ತಾರೆ. ನಿನ್ನನ್ನು ಸೀನಿಯರ್ ಇಂಜಿನಿಯರ್ ಆಗಿ ಬಡ್ತಿ ನೀಡುತ್ತಿದ್ದೇವೆ ಎಂದಿದ್ದರು. ಎರಡನೆಯ ಪತ್ರ ನನ್ನ ಬಾಸ್‍ನದು. ‘ನಿನ್ನ ನಿರ್ಲಕ್ಷ್ಯದಿಂದ ಒಬ್ಬ ಗ್ರಾಹಕ ತೊಂದರೆಗೊಳಗಾಗಿದ್ದಾನೆ. ನಿನ್ನ ಮೇಲೇಕೆ ನಾನು ಕ್ರಮ ಕೈಗೊಳ್ಳಬಾರದು?’
ಬಡ್ತಿಗೆ ಸಂತಸ ಪಡಬೇಕೋ, ನೋಟೀಸಿಗೆ ಸಂತಾಪ ಪಡಬೇಕೋ ತಿಳಿಯದ ಡೋಲಾಯಮಾನ ಪರಿಸ್ಥಿತಿ.
ಗ್ರಾಹಕನ ವಿಷಯಕ್ಕೆ ಬರೋಣ. ಕಂಪೆನಿಯ ಆಂತರಿಕ ಹೊಂದಾಣಿಕೆಯಿಂದಾಗಿ ಒಂದು ನಿರ್ದಿಷ್ಟ ಸೈಜಿನ ಆಲ್ಟರ್‍ನೇಟರುಗಳ ಉತ್ಪಾದನೆ ನಮ್ಮ ಮೂರನೆಯ ಯೂನಿಟ್ಟಿಗೆ ಹೋಗಿತ್ತು. ಅಲ್ಲಿ ಅದನ್ನು ಫಾಲೋ ಅಪ್ ಮಾಡುವುದು ಕಷ್ಟವಾಗಿತ್ತು. ಏನೇ ಆದರೂ ಅದು ‘ಮದರ್‍ಲೆಸ್ ಚೈಲ್ಡ್’ ಅಲ್ಲಿ! ಅದರಿಂದಾಗಿ ಅದರ ಉತ್ಪಾದರೆ ನಡೆದಿರಲಿಲ್ಲ.
ಅದೊಂದು ವಿಶೇಷ ಆಲ್ಟರ್‍ನೇಟರ್. ಒಂದು ಪ್ರತಿಷ್ಠಿತ ಪೋರ್ಟ್ ಟ್ರಸ್ಟ್‍ಗೆ ಹೋಗಬೇಕು. ಅದನ್ನು ಮತ್ತೊಂದು ಪ್ರತಿಷ್ಠಿತ ಪರೀಕ್ಷಾ ಕಂಪೆನಿ ಪ್ರತಿಯೊಂದು ಹಂತದಲ್ಲೂ ಪರೀಕ್ಷಿಸಬೇಕು. ಅವರು ಮದ್ರಾಸಿನಿಂದ ಬರಬೇಕಿತ್ತು. ಅವರು ಬಂದಾಗ ಸಿದ್ಧಗೊಳಿಸಿರಲಿಲ್ಲ. ತಡವಾಗಿಹೋಗಿತ್ತು.
ಆ ಪ್ರತಿಷ್ಠಿತ ಕಂಪೆನಿಯ ಅತಿ ದೊಡ್ಡ ಅಧಿಕಾರಿ ನಮ್ಮ ಎರಡನೇ ದೊಡ್ಡ ಅಧಿಕಾರಿಯನ್ನು ನೋಡಿ ವಿವರ ಪಡೆಯಲು ಬರುವವರಿದ್ದರು. ನನ್ನ ಬಾಸ್ ಒಂದು ದಿನ ನನ್ನನ್ನು ಕರೆದರು. ಆಗ ಎಲ್ಲರೂ ಊಟಕ್ಕೆ ಹೋಗಿದ್ದರು. ‘ಆ ದೊಡ್ಡ ಅಧಿಕಾರಿ ನಾಳೆ ಬರುತ್ತಿದ್ದಾರೆ. ನಾನು ನಾಳೆ ಒಂದು ದಿನದ ಮಟ್ಟಿಗೆ ಬಾಂಬೆಗೆ ಹೋಗುತ್ತಿದ್ದೇನೆ ಬೇಕೆಂದೇ. ನೀನು ಆ ಅಧಿಕಾರಿಯನ್ನು ಎದುರಿಸು. ಅವರ ಜೊತೆಗೆ ನಮ್ಮ ಎರಡನೇ ದೊಡ್ಡ ಅಧಿಕಾರಿ ಇರುತ್ತಾರೆ. ಇದು ನಿನ್ನ ಫ್ಯೂನರಲ್’ ಎಂದುಬಿಟ್ಟರು. ಆ ಕಸ್ಟಮರ್ ಬಂದು ಬೈದು ಹೋಗಿದ್ದ ಎಂಬ ವಿಷಯ ನನಗೆ ನಂತರ ತಿಳಿಯಿತು. ನಾನಿಲ್ಲದಾಗಲೇ ಆಗಬೇಕಾ ಇದು ಎಂದು ಹಲುಬಿದೆ. ಆದರೆ ಈಗ ಕೆಂಡವನ್ನು ಕೈಗೆ ಸುರಿದುಕೊಂಡಾಗಿದೆ.
ಕೈ ಸುಡದೇ ಬಿಡದು. ಏನು ಮಾಡುವುದು? ತಲೆ ಧಿಮ್ಮೆಂದಿತು.
ಆ ಸಮಯದಲ್ಲಿ ನನಗೆ ಒಂದು ತರಬೇತಿ ಕಾರ್ಯಕ್ರಮಕ್ಕೆ ಕಳಿಸಿದ್ದರು. ಇದೇ ಎರಡನೇ ದೊಡ್ಡ ಅಧಿಕಾರಿಯೇ ಪ್ರತಿ ಡಿಪಾರ್ಟ್‍ಮೆಂಟ್ ಹೆಡ್‍ಗೂ ‘ಈ ಕಾರ್ಯಕ್ರಮದ ನಡುವೆ ಯಾರನ್ನೂ ಕರೆಯುವಂತಿಲ್ಲ. ಎಲ್ಲರೂ ಪೂರ್ತಿಯಾಗಿ ಇರಲೇಬೇಕು’ ಎಂದು ಕಟ್ಟುನಿಟ್ಟಾದ ಆದೇಶ ನೀಡಿದ್ದರು.
ತರಬೇತಿ ನಡುವೆ ನನಗೆ ಕರೆ ಬಂದಿತು. ಅದೇ ಎರಡನೇ ದೊಡ್ಡ ಅಧಿಕಾರಿಯ ಪಿ.ಎ. ಇಂದ. ‘ಯತಿರಾಜ್, ನಿಮ್ಮನ್ನು ನಮ್ಮ ಬಾಸ್ ಕರೆಯುತ್ತಿದ್ದಾರೆ’ ಎಂದು.
ನನ್ನ ಕಥೆ ಮುಗಿಯಿತು ಹೊಸ ಕೆಲಸ ಹುಡುಕಿಕೊಳ್ಳುವ ಸಮಯ ಬಂದಿತು ಎಂದು ಮನದಲ್ಲೇ ಗಡಗಡನೆ ಕಂಪಿಸುತ್ತಾ ಆ ಎರಡನೆಯ ಅಧಿಕಾರಿಯ ಆಫೀಸ್ ಒಳಗೆ ಕಾಲಿಟ್ಟೆ....
Comments
Post a Comment