ಯತಿ ಸ್ವಂತೀ -62
03-03-2018
ನನ್ನ ಉದ್ಯೋಗದ ಸ್ಥಳಗಳಲ್ಲಿ ಊಟದ ವಿಶೇಷಗಳನ್ನು ಹೇಳಬೇಕು. ಮೊದಲ ಕೆಲಸದಲ್ಲಿ ಅಮ್ಮ ಕೊಡುತ್ತಿದ್ದ ತಿಂಡಿ ತಿನ್ನುತ್ತಿದ್ದೆ ಒಂಟಿಯಾಗಿ. ಎರಡು ಚಪಾತಿಗಳ ನಡುವೆ ತುಪ್ಪ ಸವರಿ ಸಕ್ಕರೆ ಉದುರಿಸಿ ಸುತ್ತಿ ಕೊಟ್ಟಿರುತ್ತಿದ್ದರು. ಆಫೀಸ್ನಲ್ಲಿ ಅಥವಾ ರೈಲಿನಲ್ಲಿ ಅದನ್ನು ತಿನ್ನುತ್ತಿದ್ದೆ... ಒಂಟಿಯಾಗಿ. ಜೊತೆಗೆ ಪಾರ್ಲೆ ಗ್ಲೂಕೋಸ್ ಬಿಸ್ಕತ್ತು. ಕಿರ್ಲೋಸ್ಕರ್ ಎಲೆಕ್ಟ್ರಿಕ್ ಕಂಪೆನಿಯಲ್ಲಿ ತರಬೇತಿಗೆ ಸೇರಿದಾಗ ಬೆಳಗ್ಗೆ 11.30ಕ್ಕೆ ಕ್ಯಾಂಟೀನ್ನಲ್ಲಿ ದೊಡ್ಡ ಸ್ಟೀಲ್ ತಟ್ಟೆಯಲ್ಲಿ ಅನ್ನ ಪಲ್ಯ ಸಾರು ಸಾಂಬಾರು ಜೊತೆಗೆ ಒಂದೊಂದು ದಿನ ಒಂದೊಂದು ಕರಿದ ತಿಂಡಿ. ಉದ್ದಿನ ವಡೆ, ಮಸಾಲೆ ವಡೆ, ಉದ್ದಿನ ಬೋಂಡ, ಆಲೂ ಬೋಂಡ, ತರಕಾರಿ ಬೋಂಡ ಮತ್ತು ಚೌ ಚೌ. ಇದು ಎಂತಹ ರೊಟೀನ್ ಅಂದರೆ ನಮ್ಮ ಕಂಪೆನಿಯ ಯಂತ್ರಗಳ ಪರೀಕ್ಷೆಗೆ ಬರುತ್ತಿದ್ದ ಪರೀಕ್ಷಕರೂ ಎಂದೆಂದು ಏನೇನು ಎಂದು ಅರಿತಿದ್ದರು!
ನಂತರ ಸೇರಿದ ಕಂಪೆನಿಯಲ್ಲಿ ಲೋಕೇಶ್ ಗೌಡ ಎಂಬ ಹಿರಿಯರು ನನ್ನ ಊಟದ ಜತೆಗಾರ. ಅವರ ಪತ್ನಿ ಕೆಲವು ಖಾದ್ಯಗಳನ್ನು ಅದ್ಭುತವಾಗಿ ಮಾಡುತ್ತಿದ್ದರು. ಉದಾಹರಣೆಗೆ ಹಿದುಕಿದ ಅವರೇಕಾಳು ಸಾಂಬಾರು. ನಮ್ಮ ಮನೆಯ ಪುಳಿಯೋಗರೆ, ಅಕ್ಕಿ ರೊಟ್ಟಿ ಇತ್ಯಾದಿ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದೆವು. ಕಡಿಮೆ ಜನ ಇದ್ದ ಕಂಪೆನಿ ಅದು.
ಮುಂದಿನ ಕಂಪೆನಿಯಲ್ಲಿ ನನ್ನ ಗೆಳೆಯನೇ ನನ್ನ ಬಾಸ್. ಅಲ್ಲಿ ನಾಲ್ಕೈದು ಜನ ಊಟ ಹಂಚಿಕೊಂಡು ಸವಿಯುತ್ತಿದ್ದೆವು.
ಮುಂದಿನ ಕಂಪೆನಿಯಲ್ಲಿ ಮೊದಲ ಸಲ ವಿಶಿಷ್ಟ ಅನುಭವಗಳಾದವು. ಎಲ್ಲ ಯುವಜನರು. ನಾನು ನಮ್ಮ ದೊಡ್ಡ ಬಾಸ್ ಇಬ್ಬರೇ ಸುಮಾರು ನಲವತ್ತರ ಗಡಿ ದಾಟಿದವರು. ಇನ್ನೆಲ್ಲರೂ ಇಪ್ಪತ್ತು+ ವಯಸ್ಸಿನೋರು. ಒಂದಿಬ್ಬರು ಹುಡುಗರಿದ್ದರು. ಅವರಿಂದ ನಮ್ಮ ಊಟವನ್ನು ಕಾಪಾಡಿಕೊಳ್ಳಲು ಹರಸಾಹಸ ಮಾಡಬೇಕಾಗುತ್ತಿತ್ತು. ಯಾವ ಮಾಯದಲ್ಲೋ ನಮ್ಮ ಕ್ಯಾರಿಯರ್ ಅಥವಾ ತಟ್ಟೆಯಿಂದ ತಿನಿಸುಗಳು ಥಟ್ಟನೆ ಸೆಳೆಯಲ್ಪಡುತ್ತಿದ್ದವು! ಹೊಟೇಲ್ನಲ್ಲಿ ಪಾರ್ಟಿ ಇದ್ದರಂತೂ ಎರಡೂ ಕೈಗಳನ್ನು ಬಳಸಿ ನಮ್ಮ ತಿಂಡಿಗಳನ್ನು ತುಂಟ ಹುಡುಗರಿಂದ ಕಾಪಾಡಿಕೊಳ್ಳಬೇಕಾಗಿತ್ತು. ಮಸ್ಕತ್ನಲ್ಲಿ ಈ ಸಮಸ್ಯೆ ಇರಲಿಲ್ಲ. ಮುಕ್ಕಾಲು ಪಾಲು ಸಮಯ ಊಟ ಮಾಡುತ್ತಿದ್ದುದು... ಒಂಟಿಯಾಗಿ.
ಮತ್ತೆ ಭಾರತಕ್ಕೆ ಮರಳಿ ಟ್ಯಾಲಿ ಕಂಪೆನಿ ಸೇರಿಕೊಂಡಾಗ ಮನೆಯಿಂದ ಊಟ ಒಯ್ಯುತ್ತಿದ್ದೆ. ನನ್ನ ಪತ್ನಿಯ ರುಚಿ ರುಚಿ ಅಡುಗೆ ಎಲ್ಲರೂ ತಿನ್ನುವ ಆಸಕ್ತಿ ತೋರುತ್ತಿದ್ದರು.
ಎಲ್ಲಾ ತಿನ್ನುವ ಸಮಯದಲ್ಲಿ ತಮ್ಮ ಸ್ಪೂನನ್ನು ಇನ್ನೊಬ್ಬರ ಡಬ್ಬಿಗೆ ಹಾಕಿ ಊಟ ತೆಗೆದುಕೊಂಡುಬಿಡುತ್ತಿದ್ದರು. ಸ್ವಲ್ಪ ದಿನ ಬೇಕಾಯಿತು ಅದು ಸಹಜ ಎಂಬ ಭಾವನೆ ನನ್ನಲ್ಲಿ ಮೂಡಲು.
ಒಬ್ಬ ಸಹೋದ್ಯೋಗಿನಿಗೆ ನಮ್ಮ ಮನೆಯ ತಿಂಡಿ ಇಷ್ಟ. ಆದರೆ ಉಳಿದವರು ತಮ್ಮ ಸ್ಪೂನ್ ಹಾಕಿಬಿಟ್ಟಿದ್ದ ತಿನಿಸನ್ನು ಆಕಿ ತಿನ್ನುತ್ತಿರಲಿಲ್ಲ. ಅದಕ್ಕೇ ಆಕಿಗೆ ಬೇರೆ ಪುಟ್ಟ ಡಬ್ಬದಲ್ಲಿ ತರುತ್ತಿದ್ದೆ ಅಥವಾ ಆಕಿ ತಗೊಂಡ ನಂತರ ಇತರರಿಗೆ ಕೊಡುತ್ತಿದ್ದೆ.
ಒಂದು ದೊಡ್ಡ ಗುಂಪು ಆಗ ಊಟಕ್ಕೆ. ಮಜ್ಜಿಗೆ ಕೋಡುಬಳೆ... ಡಬ್ಬಲ್ ಬೀನ್ಸ್ ಪಲಾವ್... ಅಕ್ಕಿ ರೊಟ್ಟಿ... ನಮ್ಮ ಮನೆಯ ಪುಳಿಯೋಗರೆ... ಸಕ್ಕರೆ ಪೊಂಗಲ್... ಫೇಮಸ್ಸು.
ಶುಕ್ರವಾರಗಳು ನಮ್ಮ ಊಟ ಹೊರಗೆ. ಆಂಧ್ರ... ಪಂಜಾಬಿ... ಇಟಾಲಿಯನ್... ಪ್ಯೂರ್ ವೆಜ್ ದುಬಾರಿ ಥಾಲಿ... ಚೈನೀಸ್... ಬಿರಿಯಾನಿ... ಅಕ್ಕಿ ರೊಟ್ಟಿ ನೀರ್ದೋಸೆ...ಹೀಗೆ ಆಯಾ ಹೊಟೇಲ್ ಸ್ಪೆಶಾಲಿಟಿಗಳ ಭಕ್ಷಣ... ಓಹ್... ಗಾನ್ ಆರ್ ದೋಸ್ ಡೇಸ್..
ಶುಕ್ರವಾರ ಮಧ್ಯಾಹ್ನ ಸಾಕಷ್ಟು ಜನ ಒಟ್ಟಿಗೆ ಹೋಗಿ (ಎರಡು ಮೂರು ಕಾರುಗಳು, ದ್ವಿಚಕ್ರ ವಾಹನಗಳು) ಚೆನ್ನಾಗಿ ತಿಂದು, ಸುಖ ದುಃಖ ಹಂಚಿಕೊಂಡು ಬರುತ್ತಿದ್ದೆವು.
ಕ್ಯಾಬ್ನಲ್ಲಿ ಹೋಗುವಾಗ ಕೂಡ ತಿಂಡಿಗಳು ಬರುತ್ತಿದ್ದವು. ನಮ್ಮ ಮನೆಯ ಪುಳಿಯೋಗರೆ, ಸಕ್ಕರೆ ಪೊಂಗಲ್... ಶೆಣೈ ಮಾಮ್ಸ್ ಮನೆಯ ಬನ್ಸ್.. ಬಿಸ್ಕೆಟ್ ಬೋಂಡಾ... ಋತಾ ಮನೆಯ ವಡಾ ಪಾವ್... ಗೀತಾ ಮನೆಯ ಅವರೇಕಾಳು ಸಾಂಬಾರ್ ಇತ್ಯಾದಿ...
ಗೋಕುಲಾಷ್ಟಮಿ ಸಮಯದಲ್ಲಿ ಚಕ್ಕುಲಿ ಮುಚ್ಚೋರೆ ತೇಂಗೊಳಲು ಕ್ಯಾಬ್ನಲ್ಲಿ ಮತ್ತು ಡಿಪಾರ್ಟ್ಮೆಂಟ್ನಲ್ಲಿ... ಸಂಕ್ರಾಂತಿ ಬಂದಾಗ ಎಳ್ಳು ತರುವಿಕೆ... ಹುಟ್ಟಿದ ದಿನ ಸ್ವೀಟುಗಳು... ಓ ಮೈ ಗಾಡ್...
ಓಹ್... ಗಾನ್ ಆರ್ ದೋಸ್ ಡೇಸ್..
Comments
Post a Comment