ಯತಿ ಸ್ವಂತೀ - 61



02-03-2018
ಒಂದು ಚಿಕ್ಕ ಹುಡುಗಿ. ತಾಯಿ ಇಲ್ಲದ ಹುಡುಗಿ. ಮಹಾ ತರಲೆ. ಸುಳ್ಳು ನಿರರ್ಗಳವಾಗಿ ಹೇಳಿ ಎಲ್ಲರನ್ನೂ ಹೆಡ್ಡರನ್ನಾಗಿ ಮಾಡುತ್ತಿರುತ್ತಾಳೆ. ಅವಳ ಅಪ್ಪನ ಮಾಜಿ ಗೆಳತಿಯ ಕೊಲೆಯನ್ನು ನೋಡುತ್ತಾಳೆ. ಅಪ್ಪನನ್ನು ಬಂಧಿಸುತ್ತಾರೆ.  ಅಪ್ಪನ ಮಾಜಿ ಗೆಳತಿ ಬಳಿ ಇದ್ದ ಬ್ರೂಚ್ ಇವಳಿಗೆ ಸಿಗುತ್ತದೆ. ಅದರಲ್ಲಿ ರಹಸ್ಯ ನಿಧಿಯ ನಕ್ಷೆ ಇರುತ್ತದೆ. ಇವಳನ್ನು ರೌಡಿಗಳು ಅಟ್ಟಿಸಿಕೊಂಡು ಬರುತ್ತಾರೆ. ಇವಳು ಒಂದು ಬಸ್ ಹತ್ತುತ್ತಾಳೆ. ಒಬ್ಬ ರೌಡಿ ಅದೇ ಬಸ್ ಹತ್ತುತ್ತಾನೆ...
ಪ್ರೇಮಿಗಳಿಬ್ಬರು ಅದೇ ಬಸ್ ಹತ್ತುತ್ತಾರೆ. ಹುಡುಗಿ ಬಸ್ಸಿಳಿದು ಓಡುವಾಗ ರೌಡಿ ಅಟ್ಟಿಸಿಕೊಂಡು ಹೋಗುತ್ತಾನೆ.
ನಾಯಕಿಯ ತಂದೆ ಒಂದು ಕಾಮಿಕಲ್ ಕ್ಯಾರೆಕ್ಟರ್. ಬಾಸ್ ಸಿಕ್ಕಾಪಟ್ಟೆ ಕ್ರೂರಿ. ಹುಡುಗಿಯನ್ನು ಅವರು ಅಪಹರಿಸುವುದು... ನಾಯಕ ನಾಯಕಿ ಅವಳನ್ನು ಬಿಡಿಸಲು ಪ್ರಯತ್ನ ಮಾಡುವುದು ಇಡೀ ಸಿನಿಮಾದಲ್ಲಿ ನಡೆಯುತ್ತಲೇ ಇರುತ್ತದೆ.
ಬಾಸ್ ಮುಖ ತೋರಿಸುವುದಿಲ್ಲ. ಅವನ ಧ್ವನಿ ಕೇಳಿಸುತ್ತದೆ. ಆ ಧ್ವನಿಯೇ ನಮಗೆ ಮೋಸ ಮಾಡುತ್ತದೆ.
ಒಬ್ಬ ಹುಚ್ಚನ ಕೈಗೆ ಆ ಬ್ರೂಚ್ ಸಿಗುತ್ತದೆ. ಅದರಿಂದಾಗಿ ಅವನು... ಮುಂದಿನದನ್ನು ತೆರೆಯ ಮೇಲೆ ನೋಡಿ ಆನಂದಿಸಿರಿ.
ಹೌದೂ, ಈ ಮುಂದಿನದನ್ನು... ವಾಕ್ಯವು ಏಕೆ ಹೇಳಲ್ಪಡುವುದೆಂದು ತಿಳಿಯಲು ನನ್ನಂತಹ ಅರವತ್ತು ವರ್ಷದವರನ್ನೇ ಕೇಳಬೇಕು. ಆಗೆಲ್ಲಾ ಥೇಟರಿನಲ್ಲಿ ಸದರಿ ಚಿತ್ರದ ಪುಟ್ಟ ಪುಸ್ತಕವೊಂದು ಮಾರಲ್ಪಡುತ್ತಿತ್ತು. ಅದರಲ್ಲಿ ಸಿನಿಮಾದಲ್ಲಿನ ಎಲ್ಲ ಹಾಡುಗಳ ಸಂಪೂರ್ಣ ಪಾಠ ಮತ್ತು ಸಿನಿಮಾದ ಕಥೆ ಇರುತ್ತಿತ್ತು. ಒಂದಷ್ಟು ದೂರ ಕಥೆ ಹೇಳಿ ಕುತೂಹಲದಲ್ಲಿ ನಿಲ್ಲಿಸಿ, ಮುಂದಿನದನ್ನು ರಜತಪರದೆಯ ಮೇಲೆ ನೋಡಿ ಆನಂದಿಸಿರಿ ಎಂದು ಬರೆದಿರುತ್ತಿದ್ದರು. ಈಗೆಲ್ಲ ಆ ಪುಸ್ತಕ ಯಾರೂ ಕೊಡುವುದಿಲ್ಲ. ಮೈಸೂರು ಬ್ಯಾಂಕ್ ಬಳಿ (ಸಾರಿ, ಈಗ ಎಸ್ಬೀಐ) ಕನ್ನಡ ಮತ್ತು ಹಿಂದಿ ಹಾಡುಗಳ ಪುಸ್ತಕಗಳನ್ನು ಸ್ವಲ್ಪ ವರ್ಷಗಳ ಹಿಂದೆ ನೋಡಿದ್ದೆ. ಈಗ್ ಇವೆಯೋ ಇಲ್ಲವೋ ತಿಳಿಯದು.
ಮತ್ತೆ ಚಿತ್ರದ ವಿಷಯಕ್ಕೆ ಬಂದರೆ ...
ಪ್ರಣಯ ರಾಜನಾಗಲು ಯತ್ನಿಸುತ್ತಿರುವ ಶ್ರೀನಾಥ್, ಮುದ್ದು ಮುದ್ದಾಗಿ ಮಾತಾಡುವ ಆರತಿ, ಟಿಪಿಕಲ್ ಬಾಲಕೃಷ್ಣ , ಅಪರೂಪದ ಹುಚ್ಚನ ಪಾತ್ರದಲ್ಲಿ ನರಸಿಂಹರಾಜು, ಪ್ರಭಾಕರ್, ತೂಗುದೀಪ ಶ್ರೀನಿವಾಸ್, ಅತಿಥಿ ಪಾತ್ರದಲ್ಲಿ ವಜ್ರಮುನಿ, ಜಯಶ್ರೀ, ಲೋಕನಾಥ್, ಎನ್ ಎಸ್ ರಾವ್... ಹಾಗೂ ಚಿತ್ರದ ನಿರ್ದೇಶಕ ವೈ ಆರ್ ಸ್ವಾಮಿ ಅವರ ಮಗಳು ಸುನೀತಾ ಆ ಪುಟ್ಟ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾಳೆ.
ಸತ್ಯಂ ಅವರ ಸಂಗೀತ ನಿರ್ದೇಶನದಲ್ಲಿ ಬೇಡ ನಂಬಬೇಡ... ಹುಚ್ಚನಿಗೆ ಹಾಡು, ಕ್ಯಾಂಪ್ ಫಯರ್ ಮುಂದೆ ಓಯಮ್ಮೀ ಬಾರಮ್ಮ... ಒಂದು ಸುಂದರ ಡ್ಯೂಯೆಟ್ ನಗುವ ನಿನ್ನ ಮೊಗದ ಚೆನ್ನ.. ಹಲಂಳ ಕ್ಯಾಬರೇ ಜುಂ ಜಾಲಿಯಾ ಹಾಡುಗಳು ಮಧುರವಾಗಿವೆ.
ಕೊನೆಯ ವರೆಗೂ ಬಾಸ್ ಯಾರೆಂದು ತಿಳಿಯುವುದಿಲ್ಲ. ಮಿಸ್ಟರಿ ಒಡೆಯದಂತೆ ಬಹಳವೇ ಪ್ರಯತ್ನ ಮಾಡಿದ್ದಾರೆ.
ಈ ಹುಡುಗಿ ಸುನೀತಾ (ಅವಳ ಸಿನಿಮಾ ಹೆಸರೂ ಅದೇ) ಮಮತಾ ಶೆಣೈ ಕೊಲೆಯನ್ನು ನೋಡುತ್ತಾಳೆ. ಅದು ಆ ಬಾಸ್‌ನನ್ನು ಬಾಧಿಸುವುದಿಲ್ಲ. ಅವಳ ಬಳಿಯಿದ್ದ ಬ್ರೂಚ್‌ಗಾಗಿ ಅವಳನ್ನು ಬೆನ್ನಟ್ಟುತ್ತಾರೆ.
1976ರ ಬೆಂಗಳೂರು ನೋಡಲು ಮಜಾ ಇದೆ. ಬರೀ ಅಂಬಾಸೆಡರ್ ಕಾರುಗಳು ರಸ್ತೆಗಳಲ್ಲಿ.
ಆಗ ಥಿಯೇಟರಿನಲ್ಲಿ ನೋಡಿದ್ದೆ. ಈಗ ಯೂ ಟ್ಯೂಬ್.
ಚೆನ್ನಾಗಿದೆ. ಒಮ್ಮೆ ನೋಡಬಹುದು... ಅಂದ ಹಾಗೆ ಸಿನಿಮಾ ಹೆಸರು “ಅಪರಾಧಿ?”

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102