ಜೀವನದೊಂದಿಗೆ ನಿಭಾವಣೆ
-9-
9-1-2018
ನಾನು ಜೀವನದೊಂದಿಗೆ ನಿಭಾಯಿಸುತ್ತಾ ಹೊರಟುಹೋದೆ. ಪ್ರತಿ ಚಿಂತೆಯನ್ನು ಕೂಡ ಹೊಗೆಯಲ್ಲಿ ಹಾರಿಸಿದೆ.
ವಿನಾಶಗಳ ಬಗ್ಗೆ ದುಃಖಿಸುವುದು ವ್ಯರ್ಥವೆನಿಸಿದೆ. ಅದಕ್ಕೇ... ನಾನು ವಿನಾಶಗಳನ್ನು ಸಂಭ್ರಮಿಸುತ್ತಾ ಹೊರಟುಹೋದೆ.
ಏನು ಸಿಕ್ಕಿತೋ ಅದನ್ನು ನಿಯತಿ ಎಂದುಕೊಂಡೆ. ಕಳೆದುಹೋಗಿದ್ದನ್ನು ನಾನು ಮರೆಯುತ್ತಾ ಹೊರಟುಹೋದೆ.
ದುಃಖ ಮತ್ತು ಖುಷಿಗಳ ನಡುವೆ ಎಲ್ಲಿ ವ್ಯತ್ಯಾಸವಿಲ್ಲವೋ... ನನ್ನ ಹೃದಯವನ್ನು ಆ ತಿರುವಿಗೆ ಕರೆದುಕೊಳ್ಳುತ್ತಾ ಹೋದೆ.
ಎಂತಹ ಸುಂದರ ಕವಿತೆ! ಅದಕ್ಕೆ ಅಂದದ ಸಂಗೀತ. ಮಧುರ ಕಂಚಿನ ಕಂಠದ ಗಾಯನ. ಮಹಾನ್ ಕವಿ ಸಾಹಿರ್ ಲೂಧಿಯಾನ್ವಿಯವರ ಗೀತೆ.
ಗೊತ್ತಾಯಿತಾ ಯಾವ ಹಾಡಿನ ಬಗ್ಗೆ ಹೇಳುತ್ತಿರುವೆನೆಂದು?
ಹಂ ದೋನೋ (1961) ಚಿತ್ರದ ‘ಮೈ ಜಿóಂದಗೀ ಕಾ ಸಾಥ್ ನಿಭಾತಾ ಚಲಾಗಯಾ’ ಬಗ್ಗೆ ನಾನು ಹೇಳುತ್ತಿರುವುದು.
ಜೀವನದ ಬಗ್ಗೆ ಅನೇಕ ಗೀತೆಗಳು ನಮ್ಮ ಹಳೆಯ ಗೀತೆಗಳಲ್ಲಿವೆ. ಇದರಲ್ಲಿ ಬದುಕಿನ ಸಂತಸದ ಕ್ಷಣಗಳನ್ನು ಹೇಗೆ ಉಳಿಸಿಕೊಳ್ಳುತ್ತಾ ಜೀವಿಸಬಹುದೆಂದು ಬಲು ಸುಂದರವಾಗಿ ಹೇಳಿದ್ದಾರೆ ಸಾಹಿರ್. ಜೈದೇವ್ ಅವರ ಸಂಗೀತವೂ ಬಹಳವೇ ಅಂದ.
ಇದರಲ್ಲಿ ಇನ್ನೂ ಒಂದು ಗೀತೆ ಇದೆ. ಅದು ಅಳುವುದರ ಬಗ್ಗೆ. ಕೆಲವೊಮ್ಮೆ ನನ್ನ ಬಗ್ಗೆ, ಕೆಲವೊಮ್ಮೆ ನನ್ನ ಪರಿಸ್ಥಿತಿಯ ಬಗ್ಗೆ ಅಳು ಬಂದಿತು. ಬಹುಶಃ ಈ ಚಿತ್ರದಲ್ಲಿನ ದ್ವಿಪಾತ್ರದಲ್ಲಿನ ಮತ್ತೊಂದು ಪಾತ್ರ ಅಳುವುದಕ್ಕೆಂದೇ ಸೃಷ್ಟಿಯಾಗಿರಬೇಕು. ಏಕೆಂದರೆ ಹಿಂದಿನ ಹಾಡಿನ ಭಾವಕ್ಕೆ ವಿರುದ್ಧವಾಗಿದೆ ಈ ಹಾಡು.
ಈಗಲೇ ಹೋಗಬೇಡ, ಈ ಹೃದಯವಿನ್ನೂ ತುಂಬಿ ಬಂದಿಲ್ಲ ಎನ್ನುವ ಹಾಡಿನಲ್ಲಿ ನಾವು ನಾಯಕಿಯ ಬದಲಾಗಿ ನಮ್ಮ ಜೀವನವನ್ನು ಸಂಬೋಧಿಸುತ್ತಿರುವೆವೆಂದು ಅಂದುಕೊಂಡರೆ ಬಹಳವೇ ಹೊಸ ಅರ್ಥ ಬರುತ್ತದೆ.
ಅಲ್ಲಾ ನೀನೇ, ಈಶ್ವರನೂ ನೀನೇ, ಎಲ್ಲರಿಗೂ ಸನ್ಮತಿ ಕೊಡು ಎನ್ನುವುದು ಮತ್ತೊಂದು ಗೀತೆ.
ಈ ಸಿನಿಮಾ ಬಂದಾಗ ನನಗೆ ನಾಲ್ಕು ವರ್ಷಗಳು. ಆದರೆ ಆಗ ಇದನ್ನು ನಾನು ನೋಡಿದ್ದರೂ ಅದರ ನೆನಪು ನನಗಿಲ್ಲ.
ಆದರೆ ಮುಂದೊಂದು ದಿನ ಯಾವುದೋ ಥಿಯೇಟರ್‍ಗೆ (ಬಹುಶಃ ನ್ಯೂಸಿಟಿ ಅಥವಾ ಎಲ್ಗಿನ್) ಹೋಗಿ ನೋಡಿದ್ದ ನೆನಪು.
ಅದರಲ್ಲಿನ ದೇವಾನಂದ್‍ನ ಲೈಟರ್‍ನ ಸಂಗೀತ ಅದೆಷ್ಟು ಪ್ರಭಾವ ಬೀರಿತ್ತೆಂದರೆ, ನನ್ನ ಎರಡನೆಯ ಕಾದಂಬರಿ ‘ಪರಿಶೋಧ’ ಬರೆದಾಗ ಈ ಲೈಟರ್‍ನ ಬಗ್ಗೆ ಬರೆದಿದ್ದೇನೆ. ಕರೆಂಟ್ ಇಲ್ಲದಿದ್ದಾಗ ಮನೆಯೊಳಗೆ ಬಂದ ಆಗಂತುಕನನ್ನು ಗುರುತಿಸಲು ಪತ್ತೇದಾರ ಲೈಟರ್ ಹೊತ್ತಿಸಿದಾಗ ಈ ಸಂಗೀತ ಬರುತ್ತದೆ. ಅದನ್ನು ಆ ಆಗಂತುಕ ಗುರುತಿಸುತ್ತಾನೆ!
ಹಿಂದೀ ಸಿನಿಮಾಗಳ ಹಾಡುಗಳ ಶಬ್ದಗಳಂತೂ ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳುತ್ತಿದ್ದೆವು.
ನನ್ನ ಗೆಳೆಯನೊಬ್ಬ ಚೆನ್ನಾಗಿ ವಿವರಿಸುತ್ತಿದ್ದ.
“ಲೋ ಯತೀ, ಹೊಸದಾಗಿ ಯಾವುದಾದರೂ ಹುಡುಗಿಯ ಮೇಲೆ ಲವ್ ಆದರೆ ರಫಿಯ ಧ್ವನಿಯಲ್ಲಿ, ಬದನ್‍ಪೆ ಸಿತಾರೆ ಲಪೇಟೆ ಹುವೆ ಓ ಜಾನೆ ತಮನ್ನಾ ಕಿಧರ್ ಜಾ ರಹೀ ಹೋ ಅಂತ ಹಾಡಿ ಹುಡುಗೀನ ಇಂಪ್ರೆಸ್ ಮಾಡಬೇಕು. ಆಮೇಲೆ ಕಿಶೋರ್ ಧ್ವನಿಯಲ್ಲಿ ಹಮೇ ತುಮ್‍ಸೆ ಪ್ಯಾರ್ ಕಿತನಾ ಯೆ ಹಂ ನಹೀ ಜಾನತೇ ಅಂತ ಹಾಡಬಹುದು. ಅವಳೇನಾದರೂ ನಮ್ಮನ್ನು ಬಿಟ್ಟು ಹೋದರೆ, ಮುಖೇಶ್ ಧ್ವನಿಯಲ್ಲಿ ಇಕ್ ಧನವಾನ್‍ಕಿ ಬೇಟೀ ನೆ ನಿರ್ಧನ್ ಕಾ ದಾಮನ್ ಛೋಡ್ ದಿಯಾ ಎಂದು ಹೇಳಬಹುದು’ ಎಂದಿದ್ದ.
‘ಈ ಮೂವರ ಹಾಡುಗಳನ್ನು ಮೂರೂ ಸನ್ನಿವೇಶಗಳಿಗೆ ಬಳಸಬಹುದು ಉಲ್ಟಾ ಮಾಡಿ’ ಎಂದೆ. ಹೌದು, ಮೂವರೂ ಮೂರು ತರಹದ ಹಾಡುಗಳನ್ನು ಹೇಳಿದ್ದಾರೆ.
Comments
Post a Comment