8


8-1-2018
1980ರಲ್ಲಿ ನಾನು ಉದ್ಯೋಗಕ್ಕಾಗಿ ಹುಡುಕುತ್ತಿರುವಾಗ ನನ್ನ ಹತ್ತಿರದ ಬಂಧುವೊಬ್ಬರು, ‘ನೀನೇ ಪ್ರಯತ್ನ ಮಾಡಿ ಕೆಲಸ ಗಿಟ್ಟಿಸು. ಅವಮಾನಗಳನ್ನು ಕೂಡ ನೀನು ನುಂಗಿ ಬೆಳೆಯಬೇಕು’ ಎಂದರು.
ಅದರ ಮೊದಲ ಹೆಜ್ಜೆಯಾಗಿ ಡೆಕ್ಕನ್ ಹೆರಾಲ್ಡ್‍ನಲ್ಲಿ ಬಂದಿದ್ದ ಒಂದು ಪುಟ್ಟ ಜಾಹೀರಾತು ನೋಡಿದೆ. ಅದರಲ್ಲಿ ಸೇಲ್ಸ್ ಇಂಜಿನಿಯರ್ ಬೇಕು ಎಂದಿತ್ತು. ಎನ್ನಾರ್ ಕಾಲೋನಿಯ ಒಂದು ಮನೆಗೆ ಹೋದೆ. ಎದುರು ಮನೆಯಲ್ಲಿ ಕನ್ನಡ ಚಿತ್ರನಟ ದ್ವಾರಕೀಶ್ ಇದ್ದರು!
ನನ್ನನ್ನು ಚೆನ್ನಾಗಿ ಮಾತಾಡಿಸಿದ ನನ್ನ ಭಾವೀ ಬಾಸ್ ನನಗೆ ಕೆಲಸ ಕೊಟ್ಟರು. ತಿಂಗಳಿಗೆ ಮುನ್ನೂರು ರೂಪಾಯಿ ಸಂಬಳ. ನನ್ನ ಕೆಲಸ ಗ್ರಾಹಕರ ಭೇಟಿ. ಸೇಲ್ಸ್ ಇಂಜಿನಿಯರ್ ಕೆಲಸವೇ ಅದಲ್ಲವೇ!
ಆದರೆ ನನಗೆ ಕೆಲಸ ಎಂದರೇನೇ ಹೊಸತು. ನನ್ನ ಗ್ರಾಹಕರಿಗೆ ನೀಡಬೇಕಾಗಿದ್ದ ಕಂಪೆನಿಯ ಪರಿಚಯ ಪತ್ರಗಳನ್ನು ನಾನೇ ಟೈಪ್‍ರೈಟರ್‍ನಲ್ಲಿ ಟೈಪ್ ಮಾಡಿಕೊಂಡು ಒಯ್ಯಬೇಕಿತ್ತು. ಆ ಕಂಪೆನಿಯ ಮುಖ್ಯ ವೆಂಡರ್‍ಗಳು ಭಾರತದ ಮೂಲೆಮೂಲೆಗಳಲ್ಲಿದ್ದರು. ದಕ್ಷಿಣ ಭಾರತದಲ್ಲಿ ಆ ಉತ್ಪನ್ನಗಳನ್ನು ಮಾರಬೇಕಿತ್ತು. ನನಗೆ ಸ್ವಲ್ಪ ಬೇಗನೆ ಭೇಟಿಯ ಸಮಯ ಸಿಗುತ್ತಿತ್ತು. ಏಕೆಂದರೆ ನಾನು ‘ನಾನು ಕಲ್ಕತ್ತಾದ ... ಇಂಡಸ್ಟ್ರೀಸ್‍ನಿಂದ ಬಂದಿದ್ದೇನೆ’ ಎನ್ನುತ್ತಿದ್ದೆ. ಇಲ್ಲಿನ ಪ್ರತಿನಿಧಿ ಎಂದು ಹೇಳುತ್ತಿರಲಿಲ್ಲ!
ಮೊಟ್ಟಮೊದಲ ಬಾರಿಗೆ ನೆಂಟರು, ಮನೆಯ ಸುತ್ತಲಿನವರು ಮತ್ತು ಮೇಷ್ಟರುಗಳನ್ನು ಬಿಟ್ಟು ಹೊಸ ಜನರನ್ನು ಭೇಟಿಯಾಗುವ ಅವಕಾಶ ದೊರಕಿತು. ಥುಂಬಾ ರಾಕೆಟ್ ಸ್ಟೇಷನ್ ತಿರುವನಂತಪುರಂ, ಶಾರ್ ಸೆಂಟರ್ ಸುಳ್ಳೂರ್‍ಪೇಟ ಮತ್ತು ಬಿಇಎಮ್‍ಎಲ್ ಕೆಜಿಎಫ್ ನನ್ನ ಮುಖ್ಯ ಹೊರಗಿನ ಗ್ರಾಹಕರು.
ಕೆಜಿಎಫ್ ಹೋಗುತ್ತಿದ್ದುದು ಒಂದು ಅವಿಸ್ಮರಣೀಯ ಅನುಭವ. ಬೆಂಗಳೂರು ರೈಲ್ವೇ ನಿಲ್ದಾಣದಿಂದ ಕುಪ್ಪಂ ಪ್ಯಾಸೆಂಜರ್ ಹತ್ತಿ ಕೆಜಿಎಫ್‍ನಲ್ಲಿ ಇಳಿಯುತ್ತಿದ್ದೆ. ಅಲ್ಲಿಯೇ ಹತ್ತಿರದಲ್ಲಿ ನನ್ನ ಇಂಜಿನಿಯರಿಂಗ್ ಸಹಪಾಠಿ ವಿಜಯ ಮನೆ ಇತ್ತು. ಆಕೆಯ ಮನೆಗೆ ಹೋಗಿ ಆಕೆಯ ಅಮ್ಮ  ನನಗೆ ಅಕ್ಕಿರೊಟ್ಟಿ, ದೋಸೆ ಹೀಗೆ ಪ್ರತಿ ಸಲ ಏನಾದರೊಂದು ತಿಂಡಿ ನೀಡುತ್ತಿದ್ದರು. ತಿನ್ನುತ್ತಾ, ವಿಜಯಳ ಜೊತೆ ಮಾತನಾಡಿ ಬಿ.ಇ.ಎಂ.ಎಲ್‍ಗೆ ಹೋಗುತ್ತಿದ್ದೆ. ಅಲ್ಲಿ ಕೆಲಸ ಮುಗಿಸಿ, ಮತ್ತೆ ರೈಲುಗಾಡಿ ಹತ್ತುತ್ತಿದ್ದೆ.
ಬರುವಾಗ ಅಮ್ಮ ನನಗೆ ನೀಡಿದ್ದ ಬುತ್ತಿ ತೆಗೆಯುತ್ತಿದ್ದೆ. ಎರಡು ಚಪಾತಿಗಳ ನಡುವೆ ತುಪ್ಪ ಸವರಿ, ಸಕ್ಕರೆ ಹಾಕಿ ಸುತ್ತಿ ಕೊಡುತ್ತಿದ್ದರು.  ಆ ‘ರೋಲ್’ ಅತ್ಯಂತ ರುಚಿಯಾದ ಖಾದ್ಯ ನನ್ನ ಪ್ರಕಾರ!
ಜೊತೆಗೆ ಆಗೆಲ್ಲಾ ಪಾರ್ಲೆ ಗ್ಲುಕೋಸ್ ಎನ್ನುವ ಬಿಸ್ಕೆಟ್ ಬರುತ್ತಿತ್ತು. ಹಾಂ ಹಾಂ.. ಅದೇ ಪಾರ್ಲೆ ಜಿ ಆದ ಬಿಸ್ಕೆಟ್.
ಅತ್ಯಂತ ಅಗ್ಗದ ಬೆಲೆಯ ರುಚಿಯಾದ ಬಿಸ್ಕೆಟ್. ಅವು ನಾಲ್ಕು ತಿಂದು ಒಂದಿಷ್ಟು ನೀರು ಕುಡಿದರೆ ಮುಗಿಯಿತು, ಹೊಟ್ಟೆ ಫುಲ್ಲು!
ಚೆನ್ನೈಗೆ ಹೋಗಿ ಅಲ್ಲಿಂದ ಸುಳ್ಳೂರ್‍ಪೇಟ ತಲುಪಿ, ಅಲ್ಲಿಂದ ಶಾರ್ ಸೆಂಟರ್‍ಗೆ ಹೋಗಬೇಕಿತ್ತು. ಇಸ್ರೋ ಅವರ ಮತ್ತೊಂದು ಶಾಖೆಯದು. ಸ್ವಲ್ಪ ದೂರ ಬಂಗಾಳ ಕೊಲ್ಲಿಯಲ್ಲಿ ಭೂಮಿ ಚಾಚಿಕೊಂಡಿದೆ. ಅದರ ಮೇಲೆ ಇಸ್ರೋ ಅವರ ಷಟಲ್ ಬಸ್‍ನಲ್ಲಿ ಹೋದರೆ ಅಲ್ಲಿತ್ತು ಶಾರ್ ಸೆಂಟರ್‍ನ ಕಟ್ಟಡಗಳು.
ರಹಸ್ಯವಾದ ಕೆಲಸವೆಂದೋ ಏನೋ, ನಡುನಡುವೆ ಖಾಲಿ. ತಕ್ಷಣಕ್ಕೆ ಅಲ್ಲಿ ಒಂದು ಉಪಗ್ರಹ ಕೇಂದ್ರವಿದೆ ಎಂದೇ ತಿಳಿಯುತ್ತಿರಲಿಲ್ಲ!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102