-7-


7-1-2018
ಜೀವನ ಖಂಡಗಳು
ಬದುಕೊಂದು ಬಂಡಿ, ಓ ಪ್ರಯಾಣಿಕ! ಆದರೆ ನಮಗೆ ಬೇಕಾದಂತೆ ಒಂದಿಷ್ಟು ತಿರುಗಿಸಿಕೊಳ್ಳಲು ಪ್ರಯತ್ನವನ್ನಂತೂ ಮಾಡುವುದಕ್ಕೆ ಅಡ್ಡಿಯಿಲ್ಲ.
ಜುಲೈ 1989 ನನ್ನ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರಲು ಆರಂಭ ಮಾಡಿತ್ತು ನಿಯತಿ. ನನ್ನ ಇಡೀ ವೃತ್ತಿ ಜೀವನವನ್ನು ಅಲ್ಲಿಯೇ ಕಳೆಯಬೇಕೆಂದುಕೊಂಡಿದ್ದ ನನಗೆ ವರ್ಗವಾಗಿತ್ತು.
ಕಾರ್ಖಾನೆಯ ಒಳಗಿನ ಮತ್ತು ಹೊರಗಿನ ಜನರ ನಡುವಣ ಸೇತುವೆಯಾಗಿ ಜನರೇಟರ್ ಮಾರುತ್ತಿದ್ದವನನ್ನು ಇದ್ದಕ್ಕಿದ್ದಂತೆ ಮೋಟರ್ ವಿನ್ಯಾಸ ಮಾಡಲು ಸ್ಥಳಾಂತರಿಸಿದರು.
ಹೊಸ ಕೆಲಸ, ಆದರೆ ಹೊಸ ಜನವಲ್ಲ. ಏಕೆಂದರೆ ನನಗೆ ಇಡೀ ಕಾರ್ಖಾನೆಯ ಮುಕ್ಕಾಲಂಶ ಜನರ ಪರಿಚಯವಿತ್ತು. ಯಾವುದೋ ಒಂದು ವಿಷಯದಲ್ಲಿ ಎಲ್ಲರೊಂದಿಗೂ ಸಂಪರ್ಕ ಏರ್ಪಟ್ಟಿತ್ತು.
ಕೆಲಸ ಕಲಿಸಲು ನನಗೆ ಮೂವರು ಬಾಸ್‍ಗಳು. ಇದೂ ಒಂದು ಹೊಸ ಅನುಭವ.
ಬಾಸ್ ಎಂದರೆ ನನಗೆ ನೆನಪಾಗುವುದು ನನ್ನ ಇಬ್ಬರು ಬಾಸ್‍ಗಳು.
ಒಂದು ಕಾಲದಲ್ಲಿ ಬೇರಾವುದೋ ಶಾಖೆಯಲ್ಲಿದ್ದರು. ಆಗ ನನ್ನ ಮಾಮೂಲೀ ಶೈಲಿಯಲ್ಲಿ ಅವರನ್ನು ದಬಾಯಿಸಿದ್ದೆ. ನನ್ನ ಹೆಸರು ಅವರಿಗೆ ಗೊತ್ತಿತ್ತೋ ಇಲ್ಲವೋ ಗೊತ್ತಿಲ್ಲ.
ಒಬ್ಬ ಹೊಸ ಉದ್ಯೋಗಿ ಒಂದು ಕೆಲಸಕ್ಕೆ ಸೇರಿದನಂತೆ. ಯಾವುದೋ ನಂಬರ್ ಡಯಲ್ ಮಾಡಿ, ‘ಕಾಫಿ ತಗೊಂಬಾ’ ಎಂದನಂತೆ ಕ್ಯಾಂಟೀನ್ ಎಂದುಕೊಂಡು.
ಆ ಕಡೆಯಿಂದ ಒಂದು ಸಿಟ್ಟಿನ ಧ್ವನಿ ‘ನಾನ್ಯಾರು ಗೊತ್ತಾ?’ ಎಂದಿತು.
‘ಗೊತ್ತಿಲ್ಲ’ ಎಂದ.
‘ನಾನೀ ಕಂಪೆನಿ ಬಾಸ್’ ಎಂದ ಅವನು ಹೂಂಕರಿಸಿ.
‘ನಾನ್ಯಾರು ಗೊತ್ತಾ?’ ಎಂದನಂತೆ ಹೊ.ಉ.
‘ಗೊತ್ತಿಲ್ಲ’ ಎಂದನಂತೆ ಬಾಸ್. ‘ಸಧ್ಯ!’ ಎಂದುಕೊಂಡು ಫೋನಿಟ್ಟನಂತೆ. ಕಾಲರ್ ಐಡಿ ಬರುವುದಕ್ಕೆ ಮುಂಚೆ ನಡೆದಿರಬೇಕು ಇದು!
ಹೂಂ.. ಆಮೇಲೆ ಆತ ನನ್ನ ಬಾಸ್ ಆಗಿ ಬಂದರು. ಒಮ್ಮೆ ಮಧ್ಯಾಹ್ನ ಊಟ ಆದ ಮೇಲೆ ತಮ್ಮ ಟೇಬಲ್ ಮೇಲೇ ತಲೆಯಿಟ್ಟು ಮಲಗಿದ್ದರು. ನಮ್ಮ ದೊಡ್ಡ ಬಾಸ್ ಇವರ ಛೇಂಬರ್‍ಗೆ ಬರುವ ಸೂಚನೆ ಸಿಕ್ಕಿತು. ತಕ್ಷಣವೇ ನಾವು ನಮ್ಮ ತಕ್ಷಣದ ಬಾಸ್‍ರನ್ನು ಎಬ್ಬಿಸಲು ಅವರ ಇಂಟರ್‍ಕಾಂ ಫೋನನ್ನು ಒಂದೇ ಸಮನೆ ರಿಂಗ್ ಮಾಡಿದ್ದೆವು.
ಇನ್ನೊಬ್ಬರು ಬಾಸ್ ಬಂದರು. ಅವರು ಊಟ ಕೂಡ ಮನೆಯಿಂದ ತರುತ್ತಿದ್ದರು. ಊಟವಾದ ನಂತರ ಪಕ್ಕದಲ್ಲಿನ ಒಂದು ಕುರ್ಚಿಯ ಮೇಲೆ ಕುಳಿತು ಪವರ್‍ನ್ಯಾಪ್ (ಶಕ್ತಿಯುತ ಕುಸುಕು ನಿದ್ರೆ) ತೆಗೆಯುತ್ತಿದ್ದರು. ಇದು ನಮಗೆ ಆಗೆಲ್ಲಾ ಅಚ್ಚರಿ!
ಹೇಗೆ ಇವರು ಆಫೀಸಿನಲ್ಲಿ ನಿದ್ರೆ ಮಾಡ್ತಾರೆ?
ನಾವು ಅಲ್ಲಿಯೇ ಟ್ರೈನಿಂಗ್‍ನಲ್ಲಿದ್ದಾಗ ಅರುಣಗಿರಿ ಎನ್ನುವ ಹುಡುಗ ಕಣ್ಬಿಟ್ಟುಕೊಂಡೇ ನಿದ್ರೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ ಎಂದಿದ್ದ! ಹೇಗೆ? ಗೊತ್ತಿಲ್ಲ. ಯಾಕೆ? ಗೊತ್ತು.
ಮಧ್ಯಾಹ್ನ ಗಡದ್ದಾಗಿ ಉಂಡು ಬಂದ ನಂತರ ನಮ್ಮ ಟ್ರೈನಿಂಗ್ ಮ್ಯಾನೇಜರ್ ನಮ್ಮ ಆ ಬೆಳಗಿನ ತರಲೆಗಳಿಂದ ರೋಸಿ ನಮ್ಮನ್ನು ಬೈಯುತ್ತಿದ್ದರು. ಅದನ್ನು ಕೇಳಲಾರದೇ, ಕಣ್ಣು ಬಿಟ್ಟುಕೊಂಡೇ ನಿದ್ದೆಯನ್ನೂ ಮಾಡುತ್ತಿದ್ದ ಅರುಣಗಿರಿ.
ಅಬ್ಬಾ! ನಮಗಂತೂ ಅದು ಅಚ್ಚರಿಯ ಸಂಗತಿಯಾಗಿತ್ತು!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102