-5-
5-1-2018
ನನಗೆ ನೆನಪಿರುವ ಮಟ್ಟಿಗೆ ನಾನು ನೋಡಿ ಅರ್ಥ ಮಾಡಿಕೊಂಡ ಮೊದಲ ಸಿನಿಮಾ ಮಂತ್ರಾಲಯ ಮಹಾತ್ಮೆ. ಅಣ್ಣಾವ್ರ ರಾಘವೇಂದ್ರ ಸ್ವಾಮಿ ಪಾತ್ರ ಇಂದಿಗೂ ಕಣ್ಣಿಗೆ ಕಟ್ಟಿದಂತೆ ಇದೆ. ನನಗಾಗ ಒಂಬತ್ತು ವರ್ಷ.
ನನ್ನ ತಂದೆಯವರ ತಂಗಿ ಬೆಂಗಳೂರು ಮಹಾರಾಣಿ ಕಾಲೇಜಿನಿಂದ ಮೈಸೂರು ಮಹಾರಾಣಿ ಕಾಲೇಜಿಗೆ ವರ್ಗವಾಗಿ ಬಂದರು. ಅವರೊಂದಿಗೆ ಅವರ ಮೂರು ವರ್ಷಗಳ ಮುದ್ದಿನ ಮಗ ಇದ್ದ. ನನಗೂ, ನನ್ನ ತಂಗಿಗೂ ಅವನೊಂದು ಜೀವಂತ ಗೊಂಬೆ ಆಗ. ಈಗ ಅವನು ನಮ್ಮ ಸರಿಸಮನಾಗಿ ಮಾತಾಡುತ್ತಾ ಇರುವ ಒಬ್ಬ ವೈದ್ಯ.
ನಮ್ಮ ಸೋದರತ್ತೆ ನನ್ನನ್ನು ಸಿನಿಮಾಗೆ ಕರೆದೊಯ್ಯುವರೆಂಬ ಥ್ರಿಲ್ ಆಗ. ಪ್ರಭುದೇವ (ಪದ್ಮ) ಟಾಕೀಸಿಗೆ ಹೋದೆವು.
ಅದಕ್ಕೆ ಮುಂಚೆ ನೋಡಿದ ಸಿನಿಮಾಗಳಲ್ಲಿ ‘ತೆರೆ ಘರ್‍ಕೆ ಸಾಮನೇ’ ಸಿನಿಮಾ ಮತ್ತು ಅದರ ಇನ್ನೊಂದು ಹಾಡು ‘ತೂ ಕಹಾಂ ಎ ಬತಾ ಇಸ್ ನಶೀಲೀ ರಾತ್‍ಮೆ’ ನೆನಪಿದೆ. ಹಾಡಿನ ತುಣುಕುಗಳು ಮಾತ್ರ ಎಂದಿಟ್ಟುಕೊಳ್ಳಿ.
ಹ್ಞಾಂ... ಪದ್ಮ ಟಾಕೀಸ್ ಮುಂದೆ ರಾಘವೇಂದ್ರ ಸ್ವಾಮಿಗಳ ಕಟೌಟ್ ಮತ್ತು ಹುಂಡಿ ಇಟ್ಟಿದ್ದರು ಎಂದು ನೆನಪು. ಸಿನಿಮಾದಲ್ಲಿ ಗಂಧ ಅರೆಯುವ ವೆಂಕಟನಾಥ, ಪಕ್ಕದ ಮನೆಯ ಕಲ್ಪನಾ ಜಯಂತಿಯೊಂದಿಗೆ ಹಾಡುವ ಹಾಡು ಆಭರಣದ ಅಲಂಕಾರ ಏನೂ ಇಲ್ಲದೆಯೇ ತಾ... ಜಯಂತಿ ದೆವ್ವವಾಗಿ ಬಾವಿಯಿಂದ ಎದ್ದು ಬರುವುದು...
ಮತ್ತೊಮ್ಮೆ ಈ ಸಿನಿಮಾವನ್ನು ನೋಡಿದ ನೆನಪಿಲ್ಲ ನನಗೆ. ಅಣ್ಣಾವ್ರ ಅನೇಕ ಸಿನಿಮಾಗಳನ್ನು ಅನೇಕಾನೇಕ ಬಾರಿ ನೋಡಿರುವ ಹೆಗ್ಗಳಿಕೆ ನನ್ನದು.
ಪ್ರಭುದೇವ ಅಥವಾ ಪದ್ಮ ಟಾಕೀಸಿನ ಬಳಿ 108 ಗಣೇಶಗಳನ್ನು ಕೂರಿಸುತ್ತಿದ್ದರು. ವರ್ಷಕ್ಕೊಮ್ಮೆ ಗಣೇಶ ಹಬ್ಬದ ಸಮಯದಲ್ಲಿ ಅಲ್ಲಿಗೆ ಬರುತ್ತಿದ್ದೆವು.
ರೈಲ್ವೇ ಕ್ವಾರ್ಟರ್ಸ್‍ನಲ್ಲಿ ನಾವು ಹುಡುಗರದೊಂದು ಗುಂಪು, ಹುಡುಗಿಯರದೊಂದು ಗುಂಪು, ‘ರೀ ಗಣೇಶ ಇಟ್ಟಿದ್ದೀರಾ?’ ಎಂದು ಪ್ರತಿ ಮನೆಯ ಮುಂದೆ ಹೋಗಿ ಕೇಳುವುದು. ಅವರು ಒಳಗೆ ಕರೆದರೆ ಹೋಗಿ, ಗಣೇಶನಿಗೆ ಅಕ್ಷತೆ ಹಾಕಿ, ನಮಸ್ಕಾರ ಮಾಡಿ, ಅವರು ಕೊಡುವ ಚರುಪು ತಿಂದುಕೊಂಡು ಬರುವುದು. ವಿಶೇಷವಾಗಿ ಕಡಲೇಹಿಟ್ಟಿಗೆ ಸಕ್ಕರೆ ಹಾಕಿ ಕೊಡುತ್ತಿದ್ದುದು ನಮ್ಮ ಫೇವರಿಟ್. ಏಕೇಂತೀರಾ? ಅದನ್ನು ಬಾಯೊಳಗಿಟ್ಟುಕೊಂಡು ಬೂಬಮ್ಮ ಎನ್ನುತ್ತಿದ್ದೆವು. ತಕ್ಷಣವೇ ನಮ್ಮ ಬಾಯಿಯಿಂದ ಕಡಲೇ ಹಿಟ್ಟಿನ ಧೂಮ್ರವು ಹೊರಗೆ ಹಾರುತ್ತಿದ್ದುದು ನಮಗೆಲ್ಲ ನಗು ತರಿಸುತ್ತಿತ್ತು.
ಎದುರಿಗೆ ಸಿಕ್ಕಿದ ಮತ್ತೊಂದು ಗುಂಪನ್ನು, ‘ನಿಮ್ಮದೆಷ್ಟಾಯ್ತು ಗಣೇಶ?’ ಎಂದು ಕೇಳುತ್ತಿದ್ದೆವು. ಯಾರು ಮೊದಲು 108 ಮುಗಿಸುವರೆಂಬ ತವಕ.
ಗಣೇಶ ಟಾಕೀಸ್ ಬಲ್ಲಾಳ್ ಹೊಟೇಲ್ ಬಳಿ ಇತ್ತು. (ಈಗ ಬಲ್ಲಾಳ್ ಹೊಟೇಲ್ಲೂ ಇಲ್ಲ, ಗಣೇಶ ಟಾಕೀಸೂ ಇಲ್ಲ!) ಗಣೇಶದಲ್ಲಿ ಎಂಟರ್ ದ ಡ್ರ್ಯಾಗನ್ ಬಂದಾಗ ಎಂತಹ ರೋಮಾಂಚನ! ನನಗಾಗ ಹದಿನಾರು ವರ್ಷ. ಬ್ರೂಸ್ ಲೀ ಕುಂಗ್‍ಫೂ ನೋಡೋದಕ್ಕೆ ರಷ್ಷೋ ರಷ್ಷು. ಮೊಟ್ಟ ಮೊದಲ ಬಾರಿಗೆ ಗಣೇಶ ಟಾಕೀಸಿನಲ್ಲಿ ಸರ್ವೇ ಮರದ ಸಹಾಯದಿಂದ ಹೊರಗಡೆ ಕ್ಯೂಗಾಗಿ ಕಟ್ಟೆ ಕಟ್ಟಿ ಹಾದಿಯನ್ನು ಮಾಡಿದ್ದರು!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102