ಯತಿ ಸ್ವಂತೀ -32
01-02-2018
ನನ್ನ ಅನೇಕ ಪ್ರಯಾಣಗಳಲ್ಲಿ ವಿಜಯವಾಡದ ಪ್ರಯಾಣವು ವಿಶೇಷ ಎನ್ನಬೇಕು. ಅದೆಷ್ಟು ಸಲ ಆ ಊರಿಗೆ ಹೋದೆನೋ, 2009ರಲ್ಲಿ... ಸರಿಯಾಗಿ ನೆನಪಿಲ್ಲ.
ಒಮ್ಮೆ ಹೀಗಾಯಿತು.
ವಿಜಯವಾಡದಿಂದ ಸಂಜೆ ಏಳು ಗಂಟೆಗೆ ಹೊರಟೆ. ಪ್ರಶಾಂತಿ ಎಕ್ಸ್‍ಪ್ರೆಸ್.
ಪ್ರಶಾಂತಿ ಅನ್ನೋ ಹೆಸರು ಹೇಗೆ ಬಂತು ಅನ್ನೋ ಕುತೂಹಲ ಇದ್ದರೆ ಕೇಳಿ. ಪುಟ್ಟಪರ್ತಿ ಅನ್ನೋ ಪುಟ್ಟ ಆದರೆ ಪ್ರಸಿದ್ಧ ಊರಿನ ಬಗ್ಗೆ ಕೇಳಿರುವಿರಾ? ಅದು ಶ್ರೀ ಸತ್ಯ ಸಾಯಿಬಾಬಾ ಅವರ ಆಶ್ರಮವಿರುವ ಊರು. ಈಗ ರೈಲ್ವೇ ನಿಲ್ದಾಣವನ್ನು ಪ್ರಶಾಂತಿ ನಿಲಯ ಎಂದು ಕರೆಯುತ್ತಾರೆ. ಅದಕ್ಕೇ ಈ ರೈಲಿಗೂ ಪ್ರಶಾಂತಿ ಎಕ್ಸ್‍ಪ್ರೆಸ್ ಎಂದು ಹೆಸರು. ಅತ್ಯಂತ ಸ್ವಚ್ಛ ರೈಲು ನಿಲ್ದಾಣವದು.
ಸುಮಾರು ರಾತ್ರಿ ಕಳೆದಿತ್ತು. ನಿದ್ರೆ ಕಣ್ಣಿಗೆ ಹತ್ತುತ್ತಲಿತ್ತು. ಆಗ ಇದ್ದಕ್ಕಿದ್ದಂತೆ ಹಾರ್ಮೋನಿಯಂ ಪ್ಯಾಂ ಪ್ಯಾಂ ಎನ್ನುವ ಸದ್ದು ಕೇಳಿ ಬೆಚ್ಚಿ ಕಣ್ಣುಬಿಟ್ಟೆ.
ಆರೇಳು ಜನ ನನ್ನ ಬಳಿಯ ಬೆರ್ತ್‍ಗಳಲ್ಲಿ ಕುಳಿತಿದ್ದರು. ವಿವಿಧ ವಯಸ್ಸುಗಳ ಹೆಣ್ಣು, ಗಂಡುಗಳು. ಅವರಲ್ಲಿ ಅತ್ಯಂತ ವಯಸ್ಸಾದ (ಸುಮಾರು ನಲವತ್ತೈದು ಇರಬಹುದು) ವ್ಯಕ್ತಿಯನ್ನು ನೋಡಿ ಒಂದು ಕ್ಷಣ ಬೇಸರವಾಯಿತು. ಅರೆ! ಇದೇನು ಇಷ್ಟು ದೊಡ್ಡ ಕಂಠದಲ್ಲಿ ಹಾಡುತ್ತಿರುವನಲ್ಲಾ... ಉಳಿದವರು ಮಲಗಿದ್ದಾರೆ ಎಂಬ ಪರಿಜ್ಞಾನ ಬೇಡವೇ ಎಂದುಕೊಂಡೆ.
ಆಮೇಲೆ ಗೊತ್ತಾಯಿತು ಅವರ ಕಾರ್ಯಕ್ರಮ ಮರುದಿನ ಬೆಳಗ್ಗೆ ಇದ್ದಿದ್ದರಿಂದ ಈ ರೈಲೇ ಅವರ ರಿಹರ್ಸಲ್ ವೇದಿಕೆಯಾಗಿತ್ತು. ಅವರ ಪ್ಯಾಷನ್ ನೋಡಿ, ಅರ್ಥ ಮಾಡಿಕೊಂಡ ನಂತರ ಒಂದು ನಿರ್ಧಾರಕ್ಕೆ ಬಂದೆ. ಹೇಗೂ ಇನ್ನು ನಿದ್ರೆಯಿಲ್ಲ. ಏಕೆ ನಾನು ಅವರ ರಿಹರ್ಸಲ್‍ನಲ್ಲಿ ನನ್ನ ಮೂಗು ತೂರಿಸಬಾರದು ಎಂದು!
ಆ ನಲವತ್ತೈದರಾತ ... ಬಹಳ ಸೊಗಸಾಗಿ ಹಾಡುತ್ತಿದ್ದರು. ಶ್ರುತಿ ಕೂಡ ತುಂಬಾ ಚೆನ್ನಾಗಿ ಹಿಡಿಯುತ್ತಿದ್ದರು.
ನಾನೂ ಅವರು ಹಾಡುವ ಯಾವುದೋ ಒಂದು ಹಾಡಿಗೆ ನನ್ನ ದನಿ ಸೇರಿಸಿದೆ. ಅರೆ ಸಾಬ್! ನಿಮಗೂ ಈ ಹಾಡು ಗೊತ್ತಾ? ಎಂದನಾತ ಹಿಂದಿಯಲ್ಲಿ. ಬಹುಶಃ ಉತ್ತರದಿಂದ ಅಲ್ಲಲ್ಲಿ ಹಾಡುತ್ತಾ ಬಂದಿದ್ದಿರಬೇಕು.
ಸ್ವಲ್ಪ ಹಿಂದಿ ಹಾಡಿನ ಹುಚ್ಚಿದೆ ಎಂದೆ.
ನಂತರ ‘ಮೇರೆ ಸಾಸೋಂಕೋ ಜೋ ಮೆಹಕ್ ಆ ರಹೀ ಹೈ’... ಈ ಹಾಡು ಯಾವ ರಾಗ ಎಂದು ಕೇಳಿದೆ. ನನಗೆ ಹಿಂದಿನಿಂದಲೂ ವಿವಿಧ ಭಾರತಿಯಲ್ಲಿ ಬೆಳಗ್ಗೆ ಏಳೂವರೆಗೆ ಬರುತ್ತಿದ್ದ ಸಂಗೀತ್ ಸರಿತಾ ಬಹಳ ಇಷ್ಟದ ಪ್ರೋಗ್ರಾಮ್. ಏಕೆಂದರೆ ಕೆಲವೊಮ್ಮೆ ಅದರಲ್ಲಿ ಉತ್ತರಾದಿ ಮತ್ತು ದಕ್ಷಿಣಾದಿ ರಾಗಗಳ ತಾಳೆ ಹಾಕಿ, ಅವಕ್ಕೆ ಸಂಬಂಧಪಟ್ಟ ಹಾಡುಗಳನ್ನು ಹಾಕುತ್ತಿದ್ದರು.
ಉದಾಹರಣೆಗೆ ಉತ್ತರದ ಮಾಲಖೌಂಸ ದಕ್ಷಿಣದ ಹಿಂದೋಳ ಆಗುತ್ತದೆ.
ಅರೆ ಸಾಬ್ ಎಂತಹ ಸುಂದರ ಹಾಡನ್ನು ನೆನಪಿಸಿದಿರಿ... ಇದು ಪೂರಿಯಾ ಧನಶ್ರೀ ಇರಬಹುದು ಎಂದನಾತ.
ಆಮೇಲೆ ‘ಹಂ ತೇರೆ ಪ್ಯಾರ್ ಮೇ ಸಾರಾ ಆಲಂ ಖೋ ಬೈಠೇ ಹೈ’ ಎಂದು ನಾನು ಗುನುಗಿದೊಡನೆ, ಸಾಬ್, ಬಹಳ ಚೆನ್ನಾದ ಹಾಡು ಎಂದು ಅವನೂ ಒಂದಿಷ್ಟು ದೂರ ಹಾಡಿದ.
ಪ್ರಶಾಂತಿ ನಿಲಯ ಬಂದು ಅವರು ಇಳಿದು ಹೋದಾಗ ನನಗೆ ವಿಪರೀತ ನಿದ್ರೆ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದೆ.
Comments
Post a Comment