ಯತಿ ಸ್ವಂತೀ -31


31-01-2018
1974ರಲ್ಲಿ ನಾನು ಮೈಸೂರಿನ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸೇರಿಕೊಂಡೆ. ದೊಡ್ಡ ಕಟ್ಟಡ. ನಡುವೆ ಖಾಲಿ ಜಾಗ. ಅಲ್ಲೇ ಒಂದು ವೇದಿಕೆ ಕೂಡ ಇತ್ತು. ಪಕ್ಕದಲ್ಲಿ ಅನೇಕ ಪ್ರಯೋಗಶಾಲೆಗಳೂ ಇದ್ದವು. ಹಾಗೆಯೇ ಕ್ಯಾಂಟೀನ್.
ನನಗಾಗ 17 ವರ್ಷಗಳು.
ಮುಂದೆ ಒಂದು ದೊಡ್ಡ ಗೇಟ್ ಇತ್ತು. ನಮ್ಮ ಸೀನಿಯರ್‍ಗಳು ಆಗಾಗ ಯಾವುದೋ ಒಂದು ಕಾರಣದಿಂದ ಮುಂದಿನ ಗೇಟು ಹಾಕಿಬಿಡುತ್ತಿದ್ದರು. ತಕ್ಷಣವೇ ನಾವು ಒಳಗೆ ಬರದೇ ಖುಷಿಯಿಂದ ಹತ್ತಿರದ ಗಣೇಶ ಟಾಕೀಸಿಗೋ, ಸ್ವಲ್ಪ ದೂರದ ಲಕ್ಷ್ಮಿ, ಗಾಯತ್ರಿ ಅಥವಾ ಶಾಂತಲಾ ಥೇಟರಿಗೋ ಮಾರ್ನಿಂಗ್ ಷೋಗೆ ಹೋಗಿ ನಂತರ ಮನೆಗೆ ಹೋಗಿಬಿಡುತ್ತಿದ್ದೆವು.
ಒಮ್ಮೆ ಯಾವುದೋ ಒಂದು ಗಂಭೀರ ವಿಷಯಕ್ಕೆ ಚಳುವಳಿ ಶುರುವಾಯಿತು. ಮೆಡಿಸಿನ್ ಓದಿದವರಿಗೆ ಹೆಚ್ಚು ಸಂಬಳ, ಇಂಜಿನಿಯರಿಂಗ್ ಓದಿದವರಿಗೆ ಕಡಿಮೆ ಸಂಬಳ ಅಂತ. ಸರಿ, ಗೇಟು ಹಾಕಿದರು. ನಾವಂದು ಥಿಯೇಟರಿಗೆ (ಆಗಲೇ!) ಹೋಗಲಾಗಲಿಲ್ಲ.
ತಾಯಿಗಿಂತ ದೇವರಿಲ್ಲ, ಮೆಡಿಸಿನ್‍ಗಿಂತ ಕಡಿಮೆ ಇಲ್ಲ ಎಂದು ಘೋಷಣೆ ಕೂಗುತ್ತಾ ಕಾಲೇಜಿನಿಂದ ಹೊರಟು, ಬಲ್ಲಾಳ್ ಹೊಟೇಲ್ ಕಡೆಯಿಂದ ರಾಮಸ್ವಾಮಿ ಸರ್ಕಲ್ ತಲುಪಿ, ಅಲ್ಲಿಂದ ಡಬ್ಬಲ್ ರೋಡ್‍ವರೆಗೆ ಹೋಗಿದ್ದು ನೆನಪು. ಆ ನಂತರ ನಾವು ಗೆಳೆಯರು ಲಕ್ಷ್ಮಿಗೋ, ಗಾಯತ್ರಿಗೋ, ಶಾಂತಲಾಗೋ ಹೋದೆವೇನೋ!
ನಮ್ಮ ಕ್ಯಾಂಟೀನ್‍ನಲ್ಲಿ ಶ್ರೀಕಂಠ ಎನ್ನುವ ಬಹಳ ಒಳ್ಳೆಯ ಮನುಷ್ಯನಿದ್ದ. ತಿಂಡಿ ಎಲ್ಲಾ ಓಕೆ. ಕಾಫಿ ವಿಷಯಕ್ಕೆ ಬಂದಾಗ ಸ್ವಲ್ಪ ಹಿಂಜರಿಕೆ. ನಮಗೆ ಕೊಡುವ ಕಾಫಿ ಚೆನ್ನಾಗಿರುತ್ತಿರಲಿಲ್ಲ.
ಪ್ರಿನ್ಸಿಪಾಲ್ ಆಫೀಸ್‍ನಿಂದ ಹುಡುಗ ಬಂದು, “ಶ್ರೀಕಂಠ, ಪ್ರಿನ್ಸಿಪಾಲ್‍ಗೆ ಕಾಫಿ” ಎಂದಾಗ ಒಳ್ಳೆಯ ಕಾಫಿ ಮಾಡುತ್ತಿದ್ದ ಎನ್ನುವ ಗುಮಾನಿ ಬಂದಿತು ನಮಗೆಲ್ಲ.
ನಮ್ಮ ಸಹಪಾಠಿಯೊಬ್ಬ ಒಂದು ದಿನ “ಶ್ರೀಕಂಠ ಪ್ರಿನ್ಸಿಪಾಲ್ ಕಾಫಿ” ಎಂದು ಹೇಳಿದ. ಶ್ರೀಕಂಠ ಲಗುಬಗೆಯಿಂದ ಕಾಫಿ ಮಾಡಿದಾಗ ಅದನ್ನು ಅವನಿಂದ ಪಡೆದು ತಾನೇ ಕುಡಿಯಲಾರಂಭಿಸಿದ. ಎಲ್ಲರೂ ನಕ್ಕೆವು. ಶ್ರೀಕಂಠನಿಗೆ ಸ್ವಾಭಾವಿಕವಾಗಿ ಕೋಪ ಬಂದಿತ್ತು!
ನಮ್ಮ ಮೇಷ್ಟರೊಬ್ಬರಿದ್ದರು. ಆಲ್ವಾರ್ ಎಂದು ಅವರ ಹೆಸರು. ಅವರ ಮಾತೃಭಾಷೆ ತಿಳಿಯುವ ಆಸೆ ನನಗೆ. ಏಕೆಂದರೆ ಆತನನ್ನು ನೋಡಿದರೆ, ಅವರ ಇಂಗ್ಲೀಷ್ ಕೇಳಿದರೆ ಅವರ ಮಾತೃಭಾಷೆ ಯಾವುದೆಂದು ತಿಳಿಯುತ್ತಿರಲಿಲ್ಲ! ಒಮ್ಮೆ ಅವರು ಯಾವುದೋ ಅಂಕಿಗಳ ಗುಂಪನ್ನು ಕೂಡುತ್ತಿದ್ದರು. ರೆಂಡು ಮೂಡು ಐದು.. ನಾಲ್ಗು ಎನಿಮಿದಿ ಎಂದಿದ್ದು ಕಿವಿಗೆ ಬಿತ್ತು. ಸಾರ್, ನೀವು ತೆಲುಗು ಮಾತಾಡೋದಾ ಮನೆಯಲ್ಲಿ ಎಂದೆ. ಹೌದು ಎಂದರು.
ನಮ್ಮ ಲೆಕ್ಕದ ಭಾಷೆ ನಮ್ಮ ನಿಜವಾದ ಭಾಷೆ. ಆದರೆ ಕಾನ್ವೆಂಟಿನಲ್ಲಿ ಓದಿರೋ ಮಕ್ಕಳು ಟೂ ಪ್ಲಸ್ ಫೈವ್ ಎಂದೇ ಹೇಳುತ್ತಾರೆ. ನನಗೆ ಈಗಲೂ ಲೆಕ್ಕ ಮಾಡುವಾಗ ಎರಡು ಮೂರು ಐದು ಎಂಟು ಹದಿಮೂರು ಎಂದೇ ಹೇಳುತ್ತೇನೆ. ನನ್ನ ಪ್ರಾಥಮಿಕ ಶಿಕ್ಷಣ ಒಂದರಿಂದ ಏಳರವರೆಗೆ ಕನ್ನಡದಲ್ಲಿಯೇ ಆಗಿದ್ದು.


Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102