ಯತಿ ಸ್ವಂತೀ -30


30-01-2018
ನನ್ನ ನೆನಪಿನ ಶಕ್ತಿಯ ಬಗ್ಗೆ ನನ್ನ ಕಿರ್ಲೋಸ್ಕರ್ ಸಹೋದ್ಯೋಗಿಗಳಿಗೆ ಚೆನ್ನಾಗಿ ಗೊತ್ತಿದೆ. ಸೇಲ್ಸ್‍ನಲ್ಲಿದ್ದಾಗ ಪ್ರತಿಯೊಂದು ಜನರೇಟರ್‍ನ ಸೀರಿಯಲ್ ನಂಬರ್ ನನಗೆ ನೆನಪಿರುತ್ತಿತ್ತು. ನನ್ನ ಸಹೋದ್ಯೋಗಿಗಳು ಯಾರೂ ಬಾಕ್ಸ್ ಫೈಲುಗಳನ್ನು ನೋಡುತ್ತಿರಲಿಲ್ಲ (ಹೌದು, ಕಂಪ್ಯೂಟರ್ ಆಗ ಇನ್ನೂ ಶೈಶವಾವಸ್ಥೆಯಲ್ಲಿತ್ತು. ಡಿಸೈನ್ ಡಿಪಾರ್ಟ್‍ಮೆಂಟ್‍ನಲ್ಲಿ ಫೋರ್ಟ್‍ರಾನ್ ಫೋರ್ ಎನ್ನುವ ಕಂಪ್ಯೂಟರ್ ಭಾಷೆಯಲ್ಲಿ ಡಿಸೈನ್ ಮಾಡುತ್ತಿದ್ದರು. ಅದು ಒಂದು ಪೋಸ್ಟ್‍ಕಾರ್ಡ್ ತರಹ ಇರುತ್ತಿತ್ತು. ಅದರಲ್ಲಿನ ಪಂಚ್ಡ್ ರಂಧ್ರಗಳ ಮೇರೆಗೆ ಡಿಸೈನ್‍ನ ಪ್ರಿಂಟ್‍ಔಟ್ ಡಾಟ್‍ಮ್ಯಾಟ್ರಿಕ್ಸ್ ಪ್ರಿಂಟರ್‍ನಲ್ಲಿ ಮುದ್ರಿಸಲಾಗುತ್ತಿತ್ತು. ಮೊದಮೊದಲು ಎಚ್.ಎ.ಎಲ್.ನಲ್ಲಿ ಮಾತ್ರವೇ ಪ್ರಿಂಟೌಟ್ ಸಿಗುತ್ತಿತ್ತಂತೆ.
ಹ್ಞಾಂ... ನೆನಪಿನ ಶಕ್ತಿ ಎಂದರೆ ಗಮನಿಸುವ ಶಕ್ತಿ. ಬೇಡದ್ದೆಲ್ಲಾ ನನ್ನ ಕಣ್ಣುಗಳಿಗೆ ಬೀಳುತ್ತದೆ. ಅದಕ್ಕೇ ನನ್ನ ಕಥೆಗಳಲ್ಲಿ ಒಂದಿಷ್ಟು ಟ್ವಿಸ್ಟ್, ಸಿನಿಕತೆಯ ಅತಿರೇಕಗಳು ಕೂಡ ಇರುತ್ತವೆ.
ಈ ಗಮನಿಸುವಿಕೆಯು ನನಗೆ ಎಷ್ಟು ವರವೋ ಅಷ್ಟೇ ಶಾಪವೂ ಆಗಿದೆ. ರಸ್ತೆಯಲ್ಲಿ ಯಾರಾದರೂ ಇದ್ದಕ್ಕಿದ್ದಂತೆ ತಿರುಗಿದರೆ, ಅದೂ ಸಿಗ್ನಲ್ ಹಾಕದೇ ತಿರುಗಿದರೆ ನನಗೆ ಮಹಾ ಸಿಟ್ಟು ಬರುತ್ತದೆ.
ಕೆಟ್ಟ ಅನುಭವಗಳಾಗಿವೆ ಕೂಡ. ನಾನು ಬಲಕ್ಕೆ ತಿರುಗಲು ಇಂಡಿಕೇಟರ್ ಹಾಕಿ ಇನ್ನೇನು ತಿರುಗಬೇಕು ಎನ್ನುವಷ್ಟರಲ್ಲಿ ನನ್ನ ಬಲಪಕ್ಕದಿಂದ ವೇಗವಾಗಿ ನೇರವಾಗಿ ಹೋದವರಿದ್ದಾರೆ. ಮೊನ್ನೆ ನನ್ನ ಮಗಳೊಂದಿಗೆ ಮುಖ್ಯರಸ್ತೆಯಲ್ಲಿ ಬರುವಾಗ ಒಂದಿಷ್ಟೂ ಸೂಚನೆ ನೀಡದೇ, ಹೆಡ್‍ಲೈಟ್ ಕೂಡ ಆನ್ ಮಾಡದೇ ಒಬ್ಬ ನನ್ನೆದುರಿನಿಂದ ಬಲಕ್ಕೆ ತಿರುಗಿದ. ಅಪ್ಪಾ! ನೋಡಿಕೊಂಡು ಹೋಗಿ ಎಂದಳು ನನಗೆ! ಸಿಗ್ನಲ್ ತೋರಿಸಬೇಕು ಅನ್ನೋ ಕಾಮನ್‍ಸೆನ್ಸ್ ಇಲ್ಲದ ಜನ ಇರೋವರೆಗೆ ಇದೆಲ್ಲಾ ಮಾಮೂಲಿ ಎಂದೆ. ಸಾಧಾರಣವಾಗಿಯೇ ನನ್ನ ಧ್ವನಿ ಜೋರು. ನಾನು ಜೋರಾಗಿ ಹೇಳಿದೆ ಎಂದರೆ ಬಹಳ ದೂರ ಕೇಳಿಸುವುದುಂಟು!
ಬಲಕ್ಕೆ ತಿರುಗಿದಾತ ಗುರ್ರೆಂದು ನೋಡುತ್ತಾ ಹೊರಟುಹೋದ.
ಮಗುವನ್ನು ಮಡಿಲಲ್ಲಿ ಕೂರಿಸಿಕೊಂಡು ಕಾರು ಡ್ರೈವ್ ಮಾಡುವ ಮಹಾನುಭಾವರನ್ನು ಕಂಡು ನನ್ನ ಮೈ ಉರಿಯುತ್ತಿತ್ತು. ಮೊಬೈಲ್ ಬಲಗೈಯಲ್ಲಿ ಹಿಡಿದು ಸ್ಟೀರಿಂಗನ್ನು ಎಡಗೈಲಿ ತಿರುಗಿಸುತ್ತಾ ಇಂಡಿಕೇಟರ್ ಹಾಕದೇ ತಿರುಗುವವರು ಕೂಡ ಕಿರಿಕಿರಿ ಮಾಡುತ್ತಿದ್ದರು. ಕುತ್ತಿಗೆಯನ್ನು ಒಂದೆಡೆ ವಾಲಿಸಿ ದ್ವಿಚಕ್ರ ವಾಹನ ಓಡಿಸುವವರನ್ನು ಕಂಡು ಸಿಟ್ಟು ಮಾಡಿಕೊಳ್ಳುತ್ತಿದ್ದೆ.
ಒಮ್ಮೆ ನನ್ನ ಪತ್ನಿಗೆ ಹೇಳಿದಾಗ, ‘ನೀವೇನು ಅನ್ನಿಯನ್‍ನ ರೂಲ್ಸ್ ರಾಮಾನುಜಂ ಥರ ಆಡ್ತಿದ್ದೀರಿ. ನಿಮ್ಮ ಮಾತುಗಳನ್ನು ಉಳಿದವರು ಕೇಳ್ತಾರೆ ಅನ್ಕೊಂಡಿದ್ದೀರಾ?’ ಎಂದಳು.
ನನ್ನ ತಾತನ ಹೆಸರು ರಾಮಾನುಜಂ. ನನ್ನ ಹುಟ್ಟು ನಾಮಧೇಯ ಕೂಡ ಅದೇ. ರೂಲ್ಸ್ ಹೇಳಲು ನಾನ್ಯಾರು ಎಂದು ಅಂದು ಜ್ಞಾನೋದಯವಾಯಿತು. ರಸ್ತೆಯಲ್ಲಾದ ಜ್ಞಾನೋದಯ. ಯಾವ ಮರದ ಕೆಳಗಿದ್ದೆನೋ ತಿಳಿಯದು.
ಈಗೆಲ್ಲ ಕಾರಿನ ಸ್ಟೀರಿಂಗನ್ನು ಮಗುವಿನ ಕೈಗೆ ಕೊಟ್ಟ ತಂದೆಯನ್ನು ಕಂಡು ಮುಗುಳ್ನಗುತ್ತೇನೆ. ಸಿಗ್ನಲ್ ಜಂಪ್ ಮಾಡಿ ವೇಗವಾಗಿ ಹೋಗುವವರನ್ನು ಕಂಡು ಬಾತ್‍ರೂಮಿಗೆ ಅವಸರವೇನೋ ಎಂದುಕೊಂಡು ಸುಮ್ಮನಾಗುತ್ತೇನೆ. ಸುತ್ತಲಿನ ಜನರ ಪರಿವೆ ಇಲ್ಲದೇ, ಇತರ ವಾಹನಗಳ ಬಗ್ಗೆ ಒಂದಿಷ್ಟೂ ಲಕ್ಷ್ಯ ತೋರದೇ ಹೋಗುವವರನ್ನು ಕಂಡಾಗ ಥ್ರೀ ಇಡಿಯೆಟ್ಸ್ ಕರೀನಾಳ ತರಹ ಡಾಕ್ಟರ್ ಇರಬೇಕು. ಹೆರಿಗೆ ಮಾಡಲು ಸಲಹೆ ಸೂಚನೆ ಕೊಡುತ್ತಿರಬೇಕು ಎಂದುಕೊಂಡು ನಗುತ್ತೇನೆ.
ಇರಬಹುದಲ್ಲವಾ?

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102