3-1-2018
ಅವನ ಗುರುವಿನ ಸಪ್ಪಳ!
ಅನಂತಶಯನ ನನ್ನ ಹೈಸ್ಕೂಲು ಸಹಪಾಠಿ. ಅವನ ಮನೆ ಕುವೆಂಪು ಅವರ ಮನೆಯ ಹಿಂದಿನದು. ಮಹಾಜನ ಹೈಸ್ಕೂಲಿನಲ್ಲಿ ಎಂಟನೇ ತರಗತಿ ಸೇರಿದಾಗ ಗೆಳೆಯನಾದ. ಅವನ ಅಣ್ಣಂದಿರಲ್ಲಿ ಒಬ್ಬರು ಜನರ ಡಾಕ್ಟರು. ಒಬ್ಬರು ದನದ ಡಾಕ್ಟರು. ನೀನ್ಯಾವ ಡಾಕ್ಟರಾಗ್ತೀ ಅಂತ ರೇಗಿಸ್ತಿದ್ವಿ.
ಬಹಳ ಬುದ್ಧಿವಂತ. ಕೆಲವೊಮ್ಮೆ ಅದ್ಭುತವಾದ ಒನ್‍ಲೈನರ್ಸ್ ಅವನಿಂದ ಹೊರಹೊಮ್ಮುತ್ತಿದ್ದವು.
ಹೈಸ್ಕೂಲು ಮುಗಿಸಿ ನಾನು ಬೆಂಗಳೂರಿಗೆ ಬಂದು ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ಪಿ.ಯು.ಸಿ. ಓದಿದೆ. ಡಾ. ಎಚ್ ಎಸ್ ರಾಘವೇಂದ್ರರಾವ್ ನಮ್ಮ ಕನ್ನಡ ಮೇಷ್ಟರು ಆಗ. ಮುಂದೊಮ್ಮೆ ನಾನು ಕಾದಂಬರಿಗಳನ್ನು ಬರೆಯುವೆ ಅಂತ, ಅವರಿಂದ ನನ್ನ ಮ್ಯಾಗ್ನಂ ಓಪಸ್ ಚಿರಸ್ಮಿತಗೆ ಮುನ್ನುಡಿ ಬರೆಸುವೆ ಅಂತ ಕನಸು ಕೂಡ ಕಂಡಿರಲಿಲ್ಲ!
ಪಿ.ಯು.ಸಿ. ಮುಗಿಸಿದಾಗ ಒಂದು ಅನಿಶ್ಚಯ ಸ್ಥಿತಿ ಉಂಟಾಗಿ ನಾನು ಮತ್ತೆ ಮೈಸೂರಿಗೆ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸೇರಬೇಕಾಯಿತು. ಆಗ ನನ್ನ ಸಹಪಾಠಿ ಅನಂತಶಯನ ಎಂದು ತಿಳಿದು ಖುಷಿ ಆಯಿತು. ನಮ್ಮ ಮನೆ ರೈಲ್ವೇ ಲೋಕೋ ಕಾಲೋನಿಯಲ್ಲಿತ್ತು. ಅಲ್ಲಿಗೆ ಅವನು ತನ್ನ ಸೈಕಲ್‍ನಲ್ಲಿ ಬರುತ್ತಿದ್ದ. ಇಬ್ಬರೂ ಕಂಬೈಂಡ್ ಸ್ಟಡೀ ಮಾಡ್ತಿದ್ದೆವು. ರಾತ್ರಿ ಹನ್ನೆರಡು ಗಂಟೆಗೆ ರೈಲ್ವೇ ಕಂಬಿಗಳನ್ನು ದಾಟಿಕೊಂಡು, ಮೂರು ಫರ್ಲಾಂಗ್ ದೂರದಲ್ಲಿದ್ದ ರೈಲು ನಿಲ್ದಾಣದಲ್ಲಿ ಟೀ ಕುಡಿಯುತ್ತಿದ್ದೆವು.
ಮೂರನೆಯ ವರ್ಷ ಇಂಜಿನಿಯರಿಂಗ್‍ನಲ್ಲಿ ನನಗೆ ನನ್ನ ಅಂಕಲ್ ಸೈಕಲ್ ಕೊಂಡುಕೊಟ್ಟರು. ಅದನ್ನು ಓಡಿಸುವಾಗ ಅನಂತಶಯನ ನನಗೆ ರಕ್ಷಕಭಟ. ನಾನು ಫುಟ್‍ಪಾತ್ ಪಕ್ಕದಲ್ಲೇ ಹೋದರೆ ನನಗೆ ಕಾವಲಿನಂತೆ ಅವನು ನನ್ನ ಪಕ್ಕದಲ್ಲೇ ಬರುತ್ತಿದ್ದ. ನನಗೋ ಸೈಕಲ್ ಹತ್ತುವುದಕ್ಕೆ, ಇಳಿಯುವುದಕ್ಕೆ ಬರುತ್ತಿರಲಿಲ್ಲ. ಫುಟ್‍ಪಾತ್ ಕಲ್ಲಿನ ಮೇಲೆ ಕಾಲಿಟ್ಟು ಹತ್ತುವುದು, ಇಳಿಯುವುದು ಮಾಡುತ್ತಿದ್ದೆ!
ಕಾಲೇಜಿನಲ್ಲಿ ಇನ್ನೂ ಮೂವರು ಗೆಳೆಯರಾದರು. ರಾಮ್ಮೋಹನ್, ವೆಂಕಟೇಶ್, ಅಶ್ವತ್ಥ್. ಫೈವ್ ಮೆನ್ ಆರ್ಮಿ ಎನ್ನುವಂತೆ ಸದಾ ಒಟ್ಟಿಗೇ ತಿರುಗುತ್ತಿದ್ದೆವು.
ಆ ಸಮಯದಲ್ಲಿ ನಮ್ಮ ನಡುವೆ ಬರದಿರುವ ವಿಷಯಗಳೇ ಇಲ್ಲ. ಇವತ್ತು ಹೊಣೆಗಾರಿಕೆ ಎಂದರೆ ಏನೆಂದು ಜೀವನವೇ ಕಲಿಸಿದೆ. ಆಗೆಲ್ಲಾ ನಾವಾಯಿತು ನಮ್ಮ ಪಾಡಾಯಿತು.
ಶ್ರೀರಂಗಪಟ್ಟಣಕ್ಕೆ ಒಮ್ಮೆ ಹೋಗಿ ದರಿಯಾದೌಲತ್, ಟಿಪ್ಪುವಿನ ಸಮಾಧಿ, ಸಂಗಮ, ರಂಗನಾಥನ ಗುಡಿ, ಡಂಜನ್ ಎಲ್ಲವನ್ನೂ ನೋಡಿ ಬಂದಿದ್ದೆವು.
ಈವತ್ತು ಆರ್.ಡಿ. ಬರ್ಮನ್ ಸಂಗೀತದ ನಮಕ್ ಹರಾಮ್ ಚಿತ್ರದ ನದಿಯಾ ಸೆ ದರಿಯಾ ದರಿಯಾಸೆ ಸಾಗರ್ ಸಾಗರ್ ಸೆ ಗೆಹರಾ ಜಾಂ ಕೇಳುತ್ತಿದ್ದಾಗ ನಮ್ಮ ಗೆಳೆಯ ವೆಂಕಟೇಶ್ ನೆನಪಾಯಿತು. ಒಳ್ಳೆಯ ಹಾಡುಗಾರ ಅವನು. ಒಮ್ಮೆ ಕಾಲೇಜಿನ ಸಮಾರಂಭದಲ್ಲಿ ಬಾನಿಗೊಂದು ಎಲ್ಲೆ ಎಲ್ಲಿದೇ ಹಾಡಿದಾಗ.. ಏಕೇ ಕನಸು ಕಾಣುವೇ... ಅಂತ ರಾಜ್ ಹಾಡಿ ರಾಗ ಎಳೆಯುವುದನ್ನು ‘ಅಯ್ಯೋ ಇವನು ಸರಿಯಾಗಿ ಹಾಡಲಪ್ಪಾ’ ಎಂದು ದೇವರನ್ನು ಬೇಡುತ್ತಿದ್ದೆ.
ಹ್ಞಾಂ... ಸಂಗೀತ ನಿರ್ದೇಶಕ ಆರ್‍ಡಿ ಬರ್ಮನ್ (ಪಂಚಂ) ಎಂದರೆ ಅವನಿಗೆ ಪಂಚಪ್ರಾಣ. ಅವನು ಏನು ಸಂಗೀತ ಕೊಟ್ಟರೂ, ಅದು ಯಾವ ರೀತಿ ಇದ್ದರೂ ಅದ್ಭುತ ಎನ್ನುತ್ತಿದ್ದ.
ಆಗೆಲ್ಲಾ ಹಿಸ್ ಮಾಸ್ಟರ್ಸ್ ವಾಯ್ಸ್ ಅಂತ ರೆಕಾರ್ಡ್‍ಗಳು ಬರುತ್ತಿದ್ದವು. ಅದರಲ್ಲೊಂದು ನಾಯಿ ಒಂದು ಮೈಕ್ ಮುಂದೆ ಕೂತು ಅದರ ಮಾಲೀಕನ ಹಾಡು ಕೇಳುತ್ತಿರುವ ಚಿತ್ರ ಇದೆ.
ಅನಂತನ ಒನ್‍ಲೈನರ್ ಇದು. ‘ಈ ವೆಂಕಟೇಶ್‍ನ ಎಚ್. ಎಮ್. ಎಸ್. ಎನ್ನಬಹುದು ಅಂದರೆ ಹಿಸ್ ಮಾಸ್ಟರ್ಸ್ ಸೌಂಡ್... ಯಾಕೆಂದರೆ ಆ ಆರ್‍ಡಿ ಬರ್ಮನ್ ಹೂಸು ಬಿಟ್ಟರೂ ಇವನಿಗೆ ಅದೂ ಸುಂದರ ಸಂಗೀತ!’.
ಅಂದಿನಿಂದ ವೆಂಕಟೇಶ್ ಎಚ್ಚೆಮ್ಮೆಸ್ ಆಗಿದ್ದ!
-0-0-0-

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102