ಯತಿ ಸ್ವಂತೀ -29
29-01-2018
ನನ್ನ ಪ್ರೈಮರಿ ಶಾಲೆ ರೈಲ್ವೇ ಕಾಲೋನಿಯಲ್ಲಿ ಮನೆಗೆ ಬಹಳ ಹತ್ತಿರದಲ್ಲಿತ್ತು. ನಾಲ್ಕನೆ ಇಯತ್ತೆಯಲ್ಲಿ ಉತ್ತೀರ್ಣನಾದ ಮೇಲೆ ನನ್ನ ಮುಂದಿನ ಶಾಲೆ ಸರ್ಕಾರಿ ಮಾಧ್ಯಮಿಕ ಹುಡುಗರ ಶಾಲೆ. ಇಲ್ಲಿ ನಾನು ಓದಿದ್ದು ಐದು, ಆರು ಮತ್ತು ಏಳನೆ ತರಗತಿಗಳು.
ಇದು ಕೆ.ಆರ್.ರಸ್ತೆಯ ಮೇಲಿದ್ದ ವೆಂಕಟರಮಣ ದೇವಸ್ಥಾನದ ಎದುರಿಗೆ ರಸ್ತೆಯಿಂದ ಒಂದು ಫರ್ಲಾಂಗ್ ದೂರದಲ್ಲಿತ್ತು.
ದಿನವೂ ರೈಲ್ವೇ ಕಾಲೋನಿಯ ಮನೆಯಿಂದ ಚೆಲುವಾಂಬ ಪಾರ್ಕ್ ಮತ್ತು ರಾಮಕೃಷ್ಣ ಆಶ್ರಮ ದಾಟಿ, ರೈಲ್ವೇ ಆಸ್ಪತ್ರೆ, ಭಾರತೀ ಸ್ತ್ರೀ ಸಮಾಜ ದಾಟಿ ಬಲಗಡೆ ತಿರುಗಿ ಸ್ವಲ್ಪ ದೂರ ನಡೆದರೆ... ಅದೋ.... ನಮ್ಮ ಮಾಧ್ಯಮಿಕ ಶಾಲೆ.
ಐದರಿಂದ ಏಳರವರೆಗೆ ಓದಿದ ಶಾಲೆ. ಅನೇಕ ಹೊಸ ಗೆಳೆಯರು. ರಘುನಾಥ್, ಶ್ರೀಧರ್, ವಾಯ್‍ಚಲ್ ಹೆಸರುಗಳು ನೆನಪಿವೆ. ಏಕೆಂದರೆ ರಘುನಾಥ್ (ಗುಂಡ) ಬಹಳ ತುಂಟ. ನನ್ನನ್ನು ಗೋಳು ಹುಯ್ದುಕೊಳ್ಳುತ್ತಿದ್ದ. ಶ್ರೀಧರ ನಾವು ಗೆಳೆಯರ ಜೊತೆಗೆ ಕ್ರಿಕೆಟ್ ಆಡುವಾಗ (ಬಹುಶಃ ಹತ್ತನೇ ತರಗತಿ) ಕುಸಿದವನು ಮತ್ತೆ ಮೇಲೇಳಲಿಲ್ಲ. ವಾಯ್‍ಚಲ್ ಹೆಸರೇ ವಿಶಿಷ್ಟ. ಇನ್ನೂ ಇವನನ್ನು ಹುಡುಕುತ್ತಲೇ ಇದ್ದೇನೆ. ಎಲ್ಲಿರುವನೋ..
ಗುಂಡನ ತಾಯಿಯೂ, ನನ್ನ ತಾಯಿಯೂ ಒಂಟಿಕೊಪ್ಪಲ್ ಮೂರನೆ ಮೆಯ್ನ್‍ನಲ್ಲಿ ಎದುರೆದುರು ಮನೆಯಲ್ಲಿದ್ದರು. ಮಿಡ್ಲ್‍ಸ್ಕೂಲಿನಲ್ಲಿ ಇಬ್ಬರೂ ಸಹಪಾಠಿಗಳಂತೆ.
ಗುಂಡ ಆಮೇಲೆ ನನ್ನ ಜೊತೆ ಹೈಸ್ಕೂಲಿಗೂ ಬಂದ. ಮಹಾಜನ ಹೈಸ್ಕೂಲ್. ನಂತರ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರಿಂಗ್‍ನಲ್ಲಿ ನನ್ನ ಜೊತೆ ಬಿ.ಇ. (ಎಲೆಕ್ಟ್ರಿಕಲ್ ಪವರ್) ಓದಿದ.
ಗುಂಡನ ಮನೆಯಲ್ಲಿ ಅವನು ಚಿಕ್ಕಿ ಹೆಸರಿನ ಅಳಿಲೊಂದನ್ನು ಸಾಕಿದ್ದ ನೆನಪು. ಅವನು ಕೈಯಲ್ಲಿ ಅನ್ನದ ಉಂಡೆಯನ್ನೋ, ಚಕ್ಕುಲಿಯನ್ನೋ ಹಿಡಿದು ಚಿಕ್ಕಿ ಚಿಕ್ಕಿ ಎಂದು ಕೂಗಿದರೆ, ಚಿಕ್ಕಿ ಎಲ್ಲಿರುತ್ತಿತ್ತೋ ಥಟ್ಟನೆ ವೇಗವಾಗಿ ಓಡಿ ಬಂದು ಅವನ ತಲೆ ಮೇಲೆ ಕೂತು, ಅವನ ಕೈಯಲ್ಲಿದ್ದ ತಿನಿಸನ್ನು ತನ್ನ ಮುಂದಿನೆರಡು ಕೈಗಳಲ್ಲಿ ಹಿಡಿದು ಅದರ ಬಾಚಿ ಹಲ್ಲಿನಲ್ಲಿ ಕಚ್ಚಿ ತಿಂದು ಹೊರಟುಹೋಗುತ್ತಿತ್ತು.
ನಮ್ಮೊಂದಿಗೆ ಟೂರ್ ಬಂದಿದ್ದ ಗುಂಡ. ಯಾರೋ ಒಬ್ಬ ಯುವತಿಯ ಇನಿಷಿಯಲ್ ಎ.ಎಸ್. ಎಂದಿದ್ದಾಗ, ನಾನೊಂದು ಎಸ್ ಸೇರಿಸುತ್ತೇನೆ ಆ ಎಸ್ ಪಕ್ಕ ಎಂದು ಚೇಷ್ಟೆ ಮಾಡುತ್ತಿದ್ದ!
ಅವನು ಕರ್ನಾಟಕ ಪವರ್ ಕಾರ್ಪೋರೇಷನ್ ಸೇರಿದ. ಕಾಳಿ, ನಾಗ್ಝರಿಯಲ್ಲಿ ಕೆಲಸ ಮಾಡುತ್ತಿದ್ದನೇನೋ... ನನಗೆ ಕೆ.ಇ.ಬಿ, ಕೆ.ಪಿ.ಸಿ, ಎಚ್‍ಎಎಲ್, ಬಿಎಚ್‍ಇಎಲ್ ಎಲ್ಲ ಕಡೆಗೂ ಅಪ್ಲೈ ಮಾಡಿದ್ದೆ ಬಿ.ಇ. ಮುಗಿದಾಗ. ಕೆ.ಪಿ.ಸಿ.ಯಲ್ಲಿ ಇಂಟರ್ವ್ಯೂ ಅಟೆಂಡ್ ಮಾಡಿದ್ದೆ.
ಆದರೆ ಈ ಲೇಖಕನಿಗೆ ಪ್ರತ್ಯಕ್ಷ ಅನುಭವ ಆಗಲೆಂದು ಆ ದೇವದೇವ ಗಿರಗಿರನೆ ತಿರುಗಿಸಿ ನಾನಾ ಉದ್ಯೋಗಗಳಲ್ಲಿ, ಒಂದು ವಿದೇಶದಲ್ಲಿ ಕೂಡ ಕೆಲಸ ಮಾಡುವಂತೆ ಮಾಡಿದ!
ನನ್ನ ಟ್ಯಾಲಿ ಸೊಲ್ಯೂಷನ್ಸ್ ಉದ್ಯೋಗದ ಸಮಯದಲ್ಲಿ ನನ್ನ ಬಾಸ್ ಒಬ್ಬರು ಕೆ.ಪಿ.ಸಿಯಲ್ಲಿದ್ದರು ಎಂದು ತಿಳಿಯಿತು. ಆಗ ಅವರಿಂದ ಗುಂಡನ ನಂಬರ್ ಪಡೆದು ಫೋನ್ ಮಾಡಿದ್ದೆ.
ತೀರಾ ಇತ್ತೀಚೆಗೆ ಎನ್‍ಐಈನಲ್ಲಿ ಓದುತ್ತಿದ್ದ ಮತ್ತೊಬ್ಬ ಸಹಪಾಠಿಯೊಂದಿಗೆ ಸ್ಪೀಕರ್ ಫೋನ್‍ನಲ್ಲಿ ಗುಂಡನೊಂದಿಗೆ ಮಾತಾಡಿದೆ. ಅವನ ಫೋಟೋ ನೋಡಬೇಕೆಂದು ಹೇಳಿದೆ.
ಅವನು ಹಾಗೇ ಮುದುಕ ಆಗಿದ್ದಾನೆ. ನನ್ನ ಥರ ಮುಖವನ್ನೇ ಬದಲಾಯಿಸಿಕೊಂಡಿಲ್ಲ!
Comments
Post a Comment