ಯತಿ ಸ್ವಂತೀ -28


28-01-2018
ದೂರದರ್ಶನಕ್ಕೂ, ನನಗೂ ಒಂದಿಷ್ಟು ನಂಟಿದೆ.
ದೂರದರ್ಶನದ ಆರಂಭಕಾಲದಲ್ಲಿ ಕನ್ನಡ ಕಾದಂಬರಿಗಳನ್ನು 13 ಅಥವಾ 26 ಕಂತುಗಳ ಧಾರಾವಾಹಿಗೆ ಅಳವಡಿಸಲು ಆಹ್ವಾನ ಬಂದಿತ್ತು. ನಾನೂ ಒಬ್ಬ ಕೆಲವು ಕಾದಂಬರಿಗಳನ್ನು ಚಿತ್ರನಾಟಕ ಮಾಡಿದವರಲ್ಲಿ.
ಇಡೀ ಕಾದಂಬರಿಯನ್ನು 13 ಭಾಗ ಮಾಡಿ ಸಿನಾಪ್ನಿಸ್ ಬರೆದು, ಮೊದಲ ಅಧ್ಯಾಯಕ್ಕೆ ಇಡೀ ಚಿತ್ರನಾಟಕ ಮತ್ತು ಸಂಭಾಷಣೆ ಬರೆಯುವ ಕೆಲಸ. ಬಹಳ ಇಷ್ಟವಾಗಿ ಮಾಡಿದ್ದೆ ಆ ಕೆಲಸವನ್ನು. ನನಗೆ ಅಶ್ವಿನಿ ಅವರ ಬಿಂದಿಯಾ ಬಹಳ ಇಷ್ಟದ ಕಾದಂಬರಿಗಳಲ್ಲಿ ಒಂದು. ಅದರಲ್ಲಿ ಬಿಂದಿಯಾ ಕಾದಂಬರಿಯ ಕೊನೆಯ ಭಾಗದ ಹೊತ್ತಿಗೆ ಒವೇರಿಯನ್ ಕ್ಯಾನ್ಸರ್ ಬಂದು ಸಾಯುತ್ತಾಳೆ. ನನಗೆ ಅದನ್ನೋದುವಾಗ ಬಹಳ ದುಃಖ. ಅಶ್ವಿನಿ ಅವರೊಂದಿಗೆ (ಅವರು ನನ್ನ ಸೋದರತ್ತೆಯ ನಾದಿನಿ. ಈಗ ಸೋದರತ್ತೆಯೂ ಇಲ್ಲ, ಅಶ್ವಿನಿಯವರೂ ಇಲ್ಲ) ಸಾಕಷ್ಟು ಚರ್ಚೆ ನಡೆಸಿದ್ದೆ. ನೀವು ಅವಳನ್ನು ಸಾಯಿಸಕೂಡದಿತ್ತು ಅಂತ. ಆದರೆ ಅವರು ನಕ್ಕು, ವಾಸಿಯಾಗದ ಖಾಯಿಲೆ (ಆ ಸಮಯದಲ್ಲಿ ಕ್ಯಾನ್ಸರ್ ಎಂದರೆ ಗೋವಿಂದಾ ಗೋವಿಂದ ಎನ್ನುವಂತಹ ಸನ್ನಿವೇಶವಿತ್ತು) ಬಂದರೆ ಅವಳು ಹೇಗೆ ಬದುಕಲು ಸಾಧ್ಯ? ಎಂದು ನಕ್ಕಿದ್ದರು.
ನಾನು ಬಿಂದಿಯಾ ಕಾದಂಬರಿಯನ್ನು ದೂರದರ್ಶನದ ಚಿತ್ರನಾಟಕಕ್ಕೆ ಆರಿಸಿಕೊಂಡಾಗ ಬಿಂದಿಯಾಳಿಗೆ ಚಿಕಿತ್ಸೆ ಕೊಡಿಸಲು ಅವಳ ಪತಿ ಸತ್ಯನ್ ಅಮೆರಿಕಾಗೆ ಕರೆದೊಯ್ಯುತ್ತಾನೆ. ಅಲ್ಲಿ ಒಂದಿಷ್ಟು ಅಡ್ವಾನ್ಸ್ ಕ್ಯೂರ್ ಇದೆ ಎನ್ನುವಂತೆ ಮುಗಿಸಿದ್ದೆ. ಅದನ್ನು ಅಶ್ವಿನಿಯವರಿಗೆ ಹೇಳಿದಾಗ ನಕ್ಕಿದ್ದರು. ಅಂತೂ ಬಿಂದಿಯಾಳನ್ನು ಬದುಕಿಸೋ ಪ್ಲ್ಯಾನ್ ನಿಂದು ಹೀಗೆ ಸಕ್ಸಸ್ ಆಯ್ತಾ? ಎಂದಿದ್ದರು. ಆಮೇಲೆ... ಬಹಳ ವರ್ಷಗಳಾದ ಮೇಲೆ... ಅಮಿತಾಭ್ ಜಯಾ ಸಿನಿಮಾ ಮಿಲಿಯಲ್ಲಿ ಅಮಿತಾಭ್ ಜಯಾಳನ್ನು ಕ್ಯಾನ್ಸರ್ ಕ್ಯೂರ್‍ಗೆ ವಿದೇಶಕ್ಕೆ ಕರೆದೊಯ್ಯುವ ದೃಶ್ಯ ಕಂಡು ಮನಸ್ಸಿಗೆ ಖುಷಿ ಆಯಿತು.
ಮತ್ತೊಂದು ಕಾದಂಬರಿ ನಾನು ಚಿತ್ರನಾಟಕ ಬರೆದಿದ್ದು ಮಕ್ಕಳ ಕಥೆ ಸಾಸನೂರ ಅವರದ್ದು. ನಾಲ್ವರು ಹುಡುಗರು ಎಂದಿತ್ತು. ಅವರನ್ನು ಹೇಗೆ ಪರಿಚಯಿಸುವುದು? ನಾಲ್ವರೂ ಕೇರಂ ಆಡುವ ದೃಶ್ಯ ಸೃಷ್ಟಿಸಿ, ಅವರವರು ಮಾತಾಡುವಾಗ ಎಲ್ಲರ ಸ್ವಭಾವ ನೋಡುಗರಿಗೆ ತಿಳಿಯುವಂತೆ ಬರೆದಿದ್ದೆ. ಕೆಲವರು ನನ್ನ ಚಿತ್ರನಾಟಕ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು ಕೂಡ.
ದುರದೃಷ್ಟವಶಾತ್ ಡಿಡಿ1 ‘ಶಾಂತಿ’ ದೈನಿಕ ಧಾರಾವಾಹಿ ಶುರುವಾಗಿ ಓದುಗರನ್ನೂ, ಬರೆಯುವವರನ್ನೂ ಕೊಂದಿತು. ಹಿರಿಯಕ್ಕ ಶಾಂತಿಯ ಚಾಳಿ ಎಲ್ಲ ಭಾಷೆಗಳಿಗೂ ಹರಡಿ, ಹೊಸ ಪೀಳಿಗೆಯಲ್ಲಿ ಓದುವವರ ಸಂಖ್ಯೆ ಬಹಳ ಕಡಿಮೆ ಆಗಿದೆ. ಖ್ಯಾತ ಲೇಖಕ ಜೋಗಿಯವರು ಹೇಳುವಂತೆ ಆ ರೀತಿ ಓದುವವರು ‘ಹೋಗಿಬಿಟ್ಟಿದ್ದಾರೆ’.
ನಂತರ ದೂರದರ್ಶನದ ನಂಟು 1999ರಲ್ಲಾಯಿತು. ದೈನಿಕ ಧಾರಾವಾಹಿಯಲ್ಲಿ ನಟಿಸುವ ಕೆಲವು ಪಾತ್ರಧಾರಿಗಳು, ಅವರ ಪಾತ್ರಗಳಿಗೆ ವಿರುದ್ಧವಾಗಿ ಅವರ ಜೀವನ... ಹೀಗೆ ಒಂದು ಕಾದಂಬರಿ ಬರೆಯುವ ಪ್ರೇರಣೆಯಾಯಿತು. ಅದಕ್ಕೆ ಆ ಸಮಯದಲ್ಲಿ ನನ್ನ ಪುಸ್ತಕಗಳನ್ನು ಪ್ರಕಾಶನ ಮಾಡಿದ್ದ ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯನವರನ್ನು ಒಂದು ಪಾತ್ರ ಕೊಡಿ ಎಂದು ಕೇಳಿದ್ದೆ. ನನಗೆ ‘ಅನುಭವಿಸಿ’ ಬರೆಯಬೇಕೆಂಬ ಆಸೆ ಇತ್ತಾಗ. ಒಳ್ಳೆಯ ಪಾತ್ರ ಇದೆ ಎಂದು ಹೇಳಿ ಅವರು ನಿರ್ಮಿಸಿ, ನಟಿಸುತ್ತಿದ್ದ ‘ಚಂದ್ರಬಿಂಬ’ ಧಾರಾವಾಹಿಯಲ್ಲಿ ಒಂದು ಪಾತ್ರ ನೀಡಿದರು. ದಿವಂಗತ ನಟ ವೆಂಕಿ ಜೊತೆಗೆ ನನ್ನ ಎರಡು ದೃಶ್ಯಗಳಿದ್ದವು. ನಿರ್ದೇಶಕ ಸಂಜೀವ್ ತಗಡೂರ್ ನನಗೆ ಸಾಕಷ್ಟು ತರಬೇತಿ ನೀಡಿ ನಟಿಸುವಂತೆ ಮಾಡಿದ್ದರು. ಆಮೇಲೆ ಕಥೆ ಬೇರೆ ತಿರುವು ಪಡೆದು ನಾನು ಚಂದ್ರಬಿಂಬದಿಂದ ‘ಔಟ್’ ಆಗಿದ್ದೆ.
ಹಿಂದಿನ ವರ್ಷ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ದೂರದರ್ಶನದ ಇತ್ತೀಚಿನ ನಂಟು!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102