ಯತಿ ಸ್ವಂತೀ -27


27-01-2018
ಬಾಲ್ಯದ ಆಟ, ಆ ಹುಡುಗಾಟಗಳು ಎಂದಿಗೂ ಮಾಸವು.
ಮನೆಯ ಮುಂದಿದ್ದ ಪುಟ್ಟ ಫೀಲ್ಡ್‍ನಲ್ಲಿ ಕ್ರಿಕೆಟ್ ಆಡುತ್ತಿದ್ದೆವು. ನಮ್ಮ ತಾಯಿ ಒಂದು ರೀತಿ ಅಂಪೈರ್ ಆಗಿಬಿಡುತ್ತಿದ್ದರು!
ನನಗೆ ನೆನಪಿದೆ. ಟೇಬಲ್ ಟೆನಿಸ್ ಆಡಲು ಮರದ ಹಲಗೆಗಳಲ್ಲಿ ಬ್ಯಾಟ್ ಮಾಡಿಕೊಂಡಿದ್ದೆವು. ಅದಕ್ಕೆ ಬಣ್ಣ ಹೊಡೆಯೋಣ ಎಂದು ಮಾತಾಡಿಕೊಂಡಿದ್ದೆವು. ಅದು ಯಾವ ಮಾಯದಲ್ಲೋ ನಮ್ಮ ತಾಯಿಯ ಕಿವಿ ತಲುಪಿದೆ.
ಸಂಜೆ ಶಾಲೆಯಿಂದ ಬಂದು ಕ್ರಿಕೆಟ್ ಆಡಲು ಬ್ಯಾಟ್ ಕೈಗೆತ್ತಿಕೊಂಡರೆ ಬಣ್ಣ ಕೈಗೆ ಮೆತ್ತಿಕೊಂಡಿತು... ನೋಡಿ ಒಂದು ಕ್ಷಣ ನಗು ಬಂದರೂ ನಂತರ ಕೋಪ ಬಂದಿತ್ತು. ಅಮ್ಮ ನಮ್ಮ ಕ್ರಿಕೆಟ್‍ಬ್ಯಾಟಿಗೆ ಹಸಿರು ಪೆಯಿಂಟ್ ಮಾಡಿಬಿಟ್ಟಿದ್ದರು.
ಅಬ್ಬಾ... ಅವರ ಈ ಅಂಪೈರಿಂಗ್ ಕೆಲಸ 1965ರ ಸುಮಾರಿಗೆ ಆರಂಭವಾಗಿದ್ದು, 1998ರಲ್ಲಿ ನಾವು ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ವಾಸ್ತವ್ಯ ಹೂಡಿದ ಮೇಲೂ ಮುಂದುವರಿದಿತ್ತು. ನನ್ನ ಮಕ್ಕಳು, ನಮ್ಮ ಸುತ್ತ ಮುತ್ತಲ ಮನೆಯ ಮಕ್ಕಳು ಆಡುವಾಗ ನಮ್ಮ ಮನೆಯ ಮುಂದೆ ಕುರ್ಚಿ ಹಾಕಿಕೊಂಡು ಕೂತು ಅಂಪೈರಿಂಗ್ ನಡೆಸುತ್ತಿದ್ದರು!
ಅವರಂತಹ ಜೀವನ್ಮುಖಿಯನ್ನು ನಾನು ಕಂಡಿರುವುದು ಬಹಳ ಕಡಿಮೆ.
ಅವರ ಬಹು ಫೇವರಿಟ್ ಕಾದಂಬರಿಗಳು ಪತ್ತೇದಾರಿ. ಸಿನಿಮಾಗಳು ಕೂಡ ಅಂತಹ ಡಿಟೆಕ್ಟಿವ್ ವಿಷಯಗಳಿರುವುದೇ. ಟಿವಿ ಬಂದ ಮೇಲಂತೂ ಕರಮ್‍ಚಂದ್, ಕಿಲೇ ಕಾ ರಹಸ್ಯ, ತೆಹಕಿಕಾತ್ ಮುಂತಾದ ಧಾರಾವಾಹಿಗಳನ್ನು ನೋಡುವುದರಲ್ಲಿ ಆಸಕ್ತಿ ತೋರುತ್ತಿದ್ದರು.
ನನಗೆ ಮದುವೆ ಆದಾಗ ನಾವು 13ನೇ ಮೆಯಿನ್‍ನಲ್ಲಿ ಒಂದು ಔಟ್‍ಹೌಸ್‍ನಲ್ಲಿದ್ದೆವು. ನನ್ನ ಸೋದರತ್ತೆಯ ಮನೆ 16ನೇ ಮುಖ್ಯರಸ್ತೆಯಲ್ಲಿತ್ತು. ರಾತ್ರಿ ಊಟ ಮಾಡಿ, ಧಾರಾವಾಹಿ ನೋಡಲು ಹೊರಡುತ್ತಿದ್ದರು. ನಾನು ಅವರ ಬಾಲ.
ನನ್ನ ಮಾವ, ಅತ್ತೆ ಬದರಿ ಯಾತ್ರೆ ಹೊರಟಾಗ ನನ್ನ ಅಮ್ಮನನ್ನು ಕರೆದರು. ಆಗ ಅವರಿಗೆ ಬಹುಶಃ 75 ವರ್ಷಗಳಿರಬಹುದು. ಆದರೆ ಗಟ್ಟಿಮುಟ್ಟಾಗಿದ್ದರು. ಒಬ್ಬೊಬ್ಬರೇ ಬಸ್‍ನಲ್ಲಿ ಎಲ್ಲ ಕಡೆ ಓಡಾಡುತ್ತಿದ್ದರು.
ನಮ್ಮ ಮನೆಗೆ ಯಾರು ಹೊಸ ನೆಂಟರು ಬಂದರೂ ಬೆಂಗಳೂರನ್ನು ಅವರಿಗೆ ತೋರಿಸಲು ಅಮ್ಮ ಹೊರಟುಬಿಡುತ್ತಿದ್ದರು. ನನ್ನ ಪತ್ನಿ ಮದುವೆಯ ನಂತರ ಬೆಂಗಳೂರಿಗೆ ಬಂದಾಗ ಅವಳಿಗೆ ನಗರದ ಪರಿಚಯ, ನಗರದ ಬ್ಯಾಂಕ್, ಅಂಚೆ ಕಛೇರಿ ಇತ್ಯಾದಿ ವ್ಯವಹಾರಗಳ ಪರಿಚಯ ಮಾಡಿಕೊಟ್ಟಿದ್ದೇ ನನ್ನಮ್ಮ. ನಾನು ಒಂದು ರೀತಿ ಜೀತದಾಳು ಆಗ. ಭಾನುವಾರ ಮಾತ್ರವೇ ನನಗೆ ರಜೆ.
ಹ್ಞಾಂ... ನನ್ನ ಮಾವನವರು ‘ಅಮ್ಮಾ, ಬದರೀ ಯಾತ್ರೆಗೆ ಬರುವಿರಾ?’ ಎಂದು ಕೇಳಿದಾಗ ಅಮ್ಮನ ಉತ್ತರ ಕೇಳಿ ಎಲ್ಲರೂ ಸ್ಟನ್. ‘ಕಾಶ್ಮೀರ್, ಸಿಮ್ಲಾ ಆದರೆ ಪರವಾಗಿಲ್ಲ. ಬದರಿ ಯಾತ್ರೆಗೆ ಇನ್ನೂ ಟೈಮಿದೆ’ ಎಂದಿದ್ದರು.
ಕಾಶ್ಮೀರ್‍ಗೆ ಅವರ ಅಕ್ಕನೊಂದಿಗೆ ನಮ್ಮ ಅಮ್ಮ ಹೋಗಿ ಬಂದರು ಕೂಡ. ಅದರಿಂದ ನನ್ನ ಎಂ.ಎ. ಕನ್ನಡ ಪದವಿ ಪಡೆಯುವ ವಿಷಯ ಕನಸಿನ ಮಾತಾಯಿತು. ಆದರೆ ನೋ ರಿಗ್ರೆಟ್ಸ್.
ಅಮ್ಮ ಮುಂದೊಂದು ದಿನ ಅವರ ಎಂಬತ್ತೊಂದನೆಯ ವಯಸ್ಸಿನಲ್ಲಿ ಹಾಸಿಗೆ ಹಿಡಿದಾಗ ರೇಗಿಸಿದ್ದೆ. ‘ಹೋಗಬಹುದಾಗಿತ್ತು ಬದರಿಗೆ. ಪುಣ್ಯ ಆದರೂ ಬಂದಿರುತ್ತಿತ್ತು’
ಅವರದು ಒಂದೇ ಉತ್ತರ. ಒಂದು ಮುಗುಳ್ನಗೆ. ಚಿರಸ್ಮಿತ ನನ್ನಮ್ಮ.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102