ಯತಿ ಸ್ವಂತೀ -26


26-01-2018
ನಮ್ಮ ಮೈಸೂರು ರೈಲ್ವೇ ಕ್ವಾರ್ಟರ್ಸ್ ಮನೆಯ ಎದುರಿಗೆ ದೊಡ್ಡ ಮೈದಾನವೊಂದಿತ್ತು. ಅಲ್ಲಿ ಅನೇಕ ಸಲ ಪೆರೇಡ್‍ಗಳು ನಡೆಯುತ್ತಿದ್ದವು. ವಿಶೇಷವಾಗಿ ಗಣರಾಜ್ಯ ದಿನ ಮತ್ತು ಸ್ವಾತಂತ್ರ್ಯ ದಿನ. ನಮಗೆಲ್ಲಾ ಪೆಪ್ಪರ್‍ಮೆಂಟ್ ಸಿಗುತ್ತೆ ಅಂತ ಹೋಗಿದ್ದ ನೆನಪು. ಆಗೆಲ್ಲಾ ಚಾಕಲೇಟ್ ಇರಲಿಲ್ಲ. ಬಣ್ಣಬಣ್ಣದ ಪಾರದರ್ಶಕ ಸಿಹಿಗೋಲಿಗಳಿದ್ದವು. ಅದನ್ನು ಪೆಪ್ಪರ್‍ಮೆಂಟ್ ಎನ್ನುತ್ತಿದ್ದೆವು.
ಮೈದಾನದ ಒಂದು ಮೂಲೆಯಲ್ಲೊಂದು ಕಲ್ಲಿನ ಚಿಕ್ಕ ಕಟ್ಟಡ. ಅದರಲ್ಲಿ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್. ನಾವು ಚಿಕ್ಕ ಹುಡುಗರಾಗಿದ್ದಾಗ ಕಬ್‍ಗಳು. ಹೆಣ್ಮಕ್ಕಳು ಬುಲ್‍ಬುಲ್‍ಗಳು. ರತ್ತಿನಂ ಎನ್ನುವ ಸ್ಕೌಟ್ ಮಾಸ್ಟರ್ ನಮಗೆ ಇದ್ದರು. ಅವರೊಂದಿಗೆ ಯಾವುದೋ ಒಂದು ತಮಿಳುನಾಡಿನ ಊರಿಗೆ ಸ್ಕೌಟ್ ಕ್ಯಾಂಪ್‍ಗೆ ಹೋದದ್ದು ಅಸ್ಪಷ್ಟವಾದ ಜ್ಞಾಪಕ.
ಸ್ಕೌಟ್ ಬಿಲ್ಡಿಂಗ್‍ನ ಹಿಂಭಾಗದಲ್ಲಿ ನಮ್ಮ ಡಿಸ್ಪೆನ್ಸರಿ ಇತ್ತು. ಡಿಸ್ಪೆನ್ಸರಿ ಅಂದರೆ ಪುಟ್ಟ ಆಸ್ಪತ್ರೆ ಕಣ್ರೀ. ಅಲ್ಲಿ ಒಬ್ಬರು ಡಾಕ್ಟರು, ಒಬ್ಬರು ಕಾಂಪೌಂಡರು.
ನಮಗೆ ಜ್ವರ ಬಂದರೆ ಅಲ್ಲಿಗೆ ಹೋಗುತ್ತಿದ್ದೆವು. ಕಾರ್ಮನೇಟಿವ್ (ಕಾರ್ಬನೇಟಿವ್?) ಮಿಕ್ಸ್‍ಚರ್ ಅಂತ ಒಂದು ಭಯಾನಕ ಕಹಿ ಔಷಧಿ ಕೊಡುತ್ತಿದ್ದರು. ಆ ಬಣ್ಣದ ನೀರನ್ನು ವ್ಯಾ ಎಂದು ಮುಖ ಮಾಡಿಕೊಂಡು ಕುಡಿಯುತ್ತಿದ್ದೆವು.
ಬೇಸಗೆ ಕಾಲ ಬಂದಾಗಲಂತೂ ನಮಗೆಲ್ಲ ರಜೆಯ ಖುಷಿ. ಜೊತೆಗೆ ಈ ಇನಾಕ್ಯುಲೇಷನ್, ವ್ಯಾಕ್ಸಿನೇಷನ್‍ಗಳ ಕಾಟದ ಭಯ.
ಕಾಲರಾ, ಸಿಡುಬು ಆಗಿನ್ನೂ ತಮ್ಮ ಅಸ್ತಿತ್ವನ್ನು ಉಳಿಸಿಕೊಂಡು, ಜನರ ಮೇಲೆ ಕಾಣಿಸಿಕೊಂಡು ವಿಜೃಂಭಿಸುತ್ತಿದ್ದ ಕಾಲವದು.
ಭೈರಪ್ಪನೋರ ಕಾದಂಬರಿಗಳಲ್ಲಿ ಪ್ಲೇಗ್ ರೋಗದ ಬಗ್ಗೆ ಓದಿದ ನಂತರ ಕಾಲರಾ, ಸಿಡುಬು ಕೂಡ ಅದೇ ರೀತಿಯ ಮಾರಣಾಂತಿಕ ಖಾಯಿಲೆಗಳು ಎಂದು ಅರ್ಥವಾಗಿತ್ತು.
ನಮ್ಮ ಕಾಲೋನಿಯ ಮನೆ ಮನೆಗೆ ಬಂದು ಎಲ್ಲರಿಗೂ ಇನಾಕ್ಯುಲೇಷನ್ ಹಾಕುತ್ತಿದ್ದರು. ದಬ್ಬಳದಂತಹ ಸೂಜಿಯಲ್ಲಿ ಮೇಲುತೋಳಿನಲ್ಲಿ ಚುಚ್ಚುತ್ತಿದ್ದರು. ಇನ್ನೊಮ್ಮೆ ಅಲ್ಲಿಯೇ ಚರ್ಮದಲ್ಲಿ ಒಂದು ಕುಪ್ಪಿಯಂತೆ ಜಾಗ ಮಾಡಿ ಅದರಲ್ಲಿ ದ್ರವವೊಂದನ್ನು ಮುಚ್ಚಿಟ್ಟ ನೆನಪು. ಆಗಿನ ಚುಚ್ಚುವಿಕೆಯ ಗುರುತುಗಳು ಈಗಲೂ ಇವೆ. ಮಹಾಭಾರತ ಸೀರಿಯಲ್‍ನಲ್ಲಿ ಭೀಮ, ನಕುಲ ಮುಂತಾದವರ ತೋಳಿನಲ್ಲಿ ಈ ವ್ಯಾಕ್ಸಿನೇಷನ್ ಗುರುತು ನೋಡಿ, ಅಬ್ಬಾ, ಮಹಾಭಾರತದ ಕಾಲದಲ್ಲೂ ಚುಚ್ಚುತ್ತಿದ್ದರೂ ಎಂದು ನಗುತ್ತಿದ್ದೆವು.
ವ್ಯಾಕ್ಸಿನೇಷನ್ ಒಂದು ಪೈಸೆ ಅಗಲದ ಗುರುತು. ಒಂದು ಪೈಸೆ ಎಂದರೆ ಮೊದಲು ವೃತ್ತಾಕಾರದಲ್ಲಿ ತಾಮ್ರದಲ್ಲಿ ಮಾಡಿರುತ್ತಿದ್ದರು. ಸುಮಾರು ಐದು ಮಿಮೀ ವ್ಯಾಸದ ನಾಣ್ಯ. ಆಮೇಲೆ ಚಚ್ಚೌಕದ ಅಲ್ಯೂಮಿನಿಯಂ ನಾಣ್ಯ ಬಂದಿತು.
ನಾನು ಹೇಳ್ತಿರೋದು ತಾಮ್ರದ ನಾಣ್ಯದ ಅಗಲದ ಎರಡು ಬೊಟ್ಟುಗಳನ್ನು ನಮ್ಮ ಕೈ ಮೇಲೆ (ಮಣಿಕಟ್ಟಿನಿಂದ  ಸ್ವಲ್ಪ ಮೇಲ್ಭಾಗದಲ್ಲಿ) ಬಿಸಿ ಮಾಡಿ ಬಲವಾಗಿ ಒತ್ತಿಬಿಡುತ್ತಿದ್ದರು. ಅಬ್ಬಾ! ಉರಿ... ಜ್ವರವೂ ಬಂದಿದೆ. ಗಾಯ ಮಾಗುವಾಗ ನವೆ. ಕೆರೆದುಕೊಳ್ಳಬೇಡ ಅಂತ ಅಮ್ಮನ ಎಚ್ಚರಿಕೆ.
ನನ್ನ ಎದುರು ಮನೆಯ ಸಹಪಾಠಿ ಮಖಬೂಲ್ ಒಮ್ಮೆ ಚುಚ್ಚುವವರು ಬಂದೊಡನೆ ಓಡಿ ಹೋಗಿ ಎಲ್ಲಿಯೋ ಅವಿತುಕೊಂಡ. ಸಂಜೆಯವರೆಗೂ ಕಾದಿದ್ದರು ಚುಚ್ಚುವವರು. ಏಕೆಂದರೆ ಆ ಸಲ ಕಾಲರಾ ಬಹಳ ತೀವ್ರವಾಗಿ ಬಂದಿತ್ತು. ಅವನನ್ನು ನಾವು ಗೆಳೆಯರು ಹುಡುಕಿಕೊಂಡು ಹೋದೆವು. ಅವರು ಹೊರಟುಹೋದರೆಂದು ನಂಬಿಸಿ ಮನೆಗೆ ಕರೆತಂದೆವು.
ಅವನು ಮನೆಯೊಳಗೆ ಕಾಲಿಟ್ಟೊಡನೆ ಇಬ್ಬರು ಬಲಿಷ್ಠ ಯುವಕರು ಅವನನ್ನು ಹಿಡಿದು ಚುಚ್ಚಿಯೇ ಬಿಟ್ಟರು. ಅಮ್ಮಾಗೇ ಮರ್‍ಗಯಾರೇ ಎಂದು ಅವನು ಅರಚಿಕೊಂಡಿದ್ದು ನಮಗೆಲ್ಲಾ ನಗು ತಂದಿತ್ತು.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102