ಯತಿ ಸ್ವಂತೀ -25
25-01-2018
‘ಡ್ಯಾಡೀ!’ ಎಂದು ಸ್ಲೋ ಮೋಷನ್‍ನಲ್ಲಿ ಹಾರ ಹಿಡಿದುಕೊಂಡು ಏರ್‍ಪೋರ್ಟ್‍ನಲ್ಲಿ ಓಡುವ ಪುಟ್ಟ ಹುಡುಗನ ನೆನಪಿದೆಯಾ? ನಾಯಿಗಳಿಗೆ ‘ರಮಣಮೂರ್ತಿ’ ಎಂದು ಹೆಸರಿಟ್ಟು ಜಗಳಗಂಟಿ ಆದಿಲಕ್ಷ್ಮಿಗೆ ಸರಿಸಮನಾಗಿ ಜಗಳವಾಡುವ ಗಣೇಶನ ಜ್ಞಾಪಕ ಇದೆಯಾ? ‘ನಿಮ್ಮೆಂಜಲು ತಾನೇ ಗಣೇಶ’ ಅಂತ ಅಂಜಲಿ ಅಂದಾಗ, ‘ನೀರು ಹಿಡಕೊಂಡು ಬನ್ನಿ, ಉಗೀತೀನಿ’ ಎನ್ನುವ ಗಣೇಶ, ‘ಅಯ್ಯಯ್ಯೋ ಹಾಗಂತ ನಮ್ಮಗೂನ ಹೊಡೆದ್ಬಿಡಬೇಡಪ್ಪಾ’ ಎಂದು ಅಜ್ಜಿ ವೈಶಾಲಿ ಲಂಬೋದರನಿಗೆ ಹೇಳುವ ಮಾತು...
ನಿಮ್ಮ ಊಹೆ ಕರೆಕ್ಟ್. ಗಣೇಶನ ಮದುವೆ ಮತ್ತು ಗೌರಿ ಗಣೇಶ. ಈ ಎರಡು ಸಿನಿಮಾಗಳನ್ನು ಎಷ್ಟು ಸಲ ನೋಡಿದರೂ ಬೋರ್ ಆಗುವುದಿಲ್ಲ.
ಎರಡೂ ಮಲ್ಲಾದಿ ವೆಂಕಟಕೃಷ್ಣಮೂರ್ತಿ ಅವರ ಕಾದಂಬರಿಗಳು. ಫಣಿ ರಾಮಚಂದ್ರ ಅವರ ಜಾಣ ನಿರ್ದೇಶನ.
ನನಗೆ ಇವೆರಡಕ್ಕಿಂತ ಬಹಳ ಇಷ್ಟವಾಗಿದ್ದು ‘ಒಂದು ಸಿನಿಮಾ ಕಥೆ’. ಅನಂತನಾಗ್, ಅಂಜನಾ ಮುಂತಾದವರು ನಟಿಸಿದ ಚಿತ್ರ. ಅದೆಂತಹ ಕ್ಲೆವರ್ ಸ್ಕ್ರೀನ್‍ಪ್ಲೇ!
ಸಿನಿಮಾ ಅಂದುಕೊಂಡಷ್ಟು ಗೆಲ್ಲಲಿಲ್ಲವೆಂದೆನಿಸುತ್ತದೆ. ಆದರೆ ಚಿತ್ರನಾಟಕ ಮಾತ್ರ ಬಹಳ ಶಕ್ತಿಯುತವಾದದ್ದು.
ಗಣೇಶನ ಮದುವೆಯ ಆದಿಲಕ್ಷ್ಮಿಯೇ ಶ್ರುತಿ ಎನ್ನುವ ರಹಸ್ಯ ನಮಗೆ ಗೊತ್ತಿದ್ದರೂ ನಾಯಕನಿಗೆ ಗೊತ್ತಾಗುವವರೆಗೂ ಸಸ್ಪೆನ್ಸ್. ಅದರಲ್ಲಿ ವೈಶಾಲಿ ಕಾಸರವಳ್ಳಿಯ ಕ್ರಿಕೆಟ್‍ಗೂ, ಜೀವನಕ್ಕೂ ಹೋಲಿಸುವ ವಾಕ್ಯಗಳು ನಗೆಬುಗ್ಗೆ ಉಕ್ಕಿಸುತ್ತವೆ. ಅಯ್ಯೋ ಜೈಲಿಗೆ ಹೋಗೋ ಮುಂಚೆ ಕಪಿಲ್‍ದೇವ್ ತರ ಇದ್ದೋನು ಆಚೆ ಬಂದಾಗ ಅಜಾರುದ್ದೀನ್ ತರ ಆಗಿದ್ದಾನಲ್ರೀ ಎಂದು ಹಲುಬುವ ದೃಶ್ಯ ಸಖತ್.
ಅಣ್ಣಾವ್ರನ್ನ, ವಿಷ್ಣು, ಅಂಬರೀಶ್ ಇವರನ್ನು ಅಣಕು ಮಾಡುವ ಮಾಸ್ಟರ್ ಆನಂದ್, ಗಣೇಶ ಲಂಚ ಕೊಡದಿದ್ದಾಗ ಬ್ಲ್ಯಾಕ್‍ಮೆಯಿಲ್ ಮಾಡುವ ಮಾಸ್ಟರ್ ಆನಂದ್ ಅದ್ಭುತ. ಛೇ ಈ ಹುಡುಗ ದೊಡ್ಡವನಾಗಬಾರದಿತ್ತು.
ಹಾಗೆ ಅನ್ನಿಸಿದ ಮತ್ತೊಬ್ಬ ಹುಡುಗ ಮಾಲ್ಗುಡಿ ಡೇಸ್‍ನ ಸ್ವಾಮಿ, ನೋಡಿ ಸ್ವಾಮಿ ನಾವಿರೋದು ಹೀಗೆಯ ಚೊತ್ತೆ.
ಯಾಕೆ ದೊಡ್ಡವರಾದರು ಎನ್ನುವಷ್ಟು ಮುದ್ದು ಆ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ.
ನನ್ನ ದೊಡ್ಡಮ್ಮನ ಮಗ ಸಮುದಾಯ ನಾಟಕ ತಂಡದಲ್ಲಿದ್ದವರು. ಅವರು ಕೂಡ ಮಾಲ್ಗುಡಿ ಡೇಸ್‍ನಲ್ಲಿ ಒಂದು ಪಾತ್ರದಲ್ಲಿ ಅಭಿನಯಿಸಿದ್ದಾರೆ. ಎನ್. ಲಕ್ಷ್ಮೀನಾರಾಯಣ್‍ರವರ ಮುಯ್ಯಿಯಿಂದ ಹಿಡಿದು ಗೋಧಿ ಬಣ್ಣ ಸಾಧಾರಣ ಮೈಕಟ್ಟು ವರೆಗೂ ಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ, ನಾಟಕಗಳಲ್ಲಿ ಅಭಿನಯಿರುವ ಹೆಗ್ಗಳಿಕೆ ಅವರದು. ಅನೇಕ ಕಥೆಗಳನ್ನು ನಾಟಕಗಳಿಗೆ ಅಳವಡಿಸಿದ್ದಾರೆ. ಒಳಸುಳಿ ಎನ್ನುವ ಕಾದಂಬರಿಯನ್ನೂ ರಚಿಸಿದ್ದಾರೆ.
ಅವರ ನಾಟಕ ‘ಕುರಿ’ ನೋಡಿದ್ದೆ ಒಮ್ಮೆ ಮೈಸೂರಲ್ಲಿ. ಎಂ. ಎಸ್. ಸತ್ಯು ಅವರ ನಿರ್ದೇಶನ. ನಾಟಕ ನೆನಪಿಲ್ಲ. ಒಂದು ದೃಶ್ಯ ನೆನಪಿದೆ. ಅದೊಂದು ಚಾವಡಿ. ಸುಮಾರು ಜನ ಹಳ್ಳಿ ಹೆಂಗಸರು ಇಳಕಲ್ ಸೀರೆ ಉಟ್ಟುಕೊಂಡು, ಎಲೆ ಅಡಿಕೆ ಜಗಿಯುತ್ತಾ ಕಮೆಂಟುಗಳನ್ನು ಮಾಡುತ್ತಿರುತ್ತಾರೆ. (ಫೇಸ್‍ಬುಕ್‍ದಲ್ಲ ಮಾರಾಯ/ಮಾರಾಯ್ತೀ! ಆಗ ಫೇಸ್‍ಬುಕ್ ಇರಲಿಲ್ಲ!). ಮಧ್ಯಂತರದಲ್ಲಿ ನನ್ನಣ್ಣನನ್ನು ಮಾತಾಡಿಸಲು ಗ್ರೀನ್‍ರೂಮಿಗೆ ಹೋದೆ. ಅಲ್ಲಿ ಒಂದು ಆಘಾತ ನನಗೆ ಕಾದಿತ್ತು. ಆ ಹಳ್ಳಿ ಹೆಂಗಸರೆಲ್ಲಾ ಸ್ವಚ್ಛವಾದ ಇಂಗ್ಲೀಷ್ ಮಾತಾಡುತ್ತಿದ್ದರು! ಎಂತಹ ಸರ್ರಿಯಲಿಸ್ಟಿಕ್ ದೃಶ್ಯ ಅದು!
1990ರಲ್ಲಿ ಒಮ್ಮೆ ಶೃಂಗೇರಿಯಿಂದ ಆಗುಂಬೆಯ ಮೇಲೆ ಉಡುಪಿಗೆ ಬರುತ್ತಿದ್ದೆವು. ಹಿರಿಯಡ್ಕ ಎನ್ನುವ ಊರು ಬಂತು. ರಸ್ತೆಯ ಇಕ್ಕೆಲಗಳಲ್ಲಿ ಹೆಂಚಿನ ಪುಟ್ಟ ಮನೆಗಳು. ಆ ಊರು ದಾಟಿ ಮುಂದಿನ ಊರಿಗೆ ಬಂದೊಡನೆ ಬೆಚ್ಚುವಂತಾಗಿತ್ತು. ಇಡೀ ಊರೇ ಯಾವುದೋ ಸಿನಿಮಾ ಸೆಟ್‍ನಂತಿತ್ತು. ಪಟಗಳಲ್ಲಿ ಕಂಡ ನ್ಯೂಯಾರ್ಕ್‍ನ ಮ್ಯಾನ್‍ಹಟನ್‍ನಂತೆ ಕಂಡಿತ್ತು. ನಂತರ ಗೊತ್ತಾಯಿತು ಅದು ಮಣಿಪಾಲ ಎಂಬ ಮಹಾಗ್ರಾಮ ಎಂದು! ಎಂತಹ ಸರ್ರಿಯಲಿಸ್ಟಿಕ್ ದೃಶ್ಯ ಅದು!
Comments
Post a Comment