ಯತಿ ಸ್ವಂತೀ -24
24-1-2018
ಸಿನಿಮಾದ ಬಹು ಮುಖ್ಯ ಬಲ ಯಾವುದೆನ್ನುತ್ತೀರಿ? ನನ್ನ ಪ್ರಕಾರ ಕಥೆ. ಅತ್ಯಂತ ಜನಪ್ರಿಯ ನಟರು ಕೆಟ್ಟ ಕಥೆಯ ಸಿನಿಮಾವನ್ನು ಒಮ್ಮೆ ಅವರ ಭುಜಗಳ ಮೇಲೆ ಹೊತ್ತು ಯಶಸ್ಸಿನತ್ತ ದಾಪುಗಾಲು ಹಾಕಬಹುದು. ಆದರೆ ಅದು ಪ್ರತಿ ಸಲ ನಡೆಯುವುದಿಲ್ಲ.
ಮರ್ದ್, ಅಕೇಲಾ, ಮೃತ್ಯುದಾತ ಇವೆಲ್ಲವೂ ಕಳೆದ ಶತಮಾನದ ಅತ್ಯಂತ ಜನಪ್ರಿಯ ನಟನ ವಿಫಲಗೊಂಡ ಚಿತ್ರಗಳು. ಕಥೆ ಚೆನ್ನಾಗಿರಬೇಕು. ಅದಕ್ಕೂ ಹೆಚ್ಚಿಗೆ ಚಿತ್ರನಾಟಕ ಇನ್ನೂ ಚೆನ್ನಾಗಿರಬೇಕು.
ಪುಟ್ಟಣ್ಣ ಕಣಗಾಲ್ ಅವರ ‘ಗೆಜ್ಜೆಪೂಜೆ’ ಚಿತ್ರನಾಟಕಕ್ಕೆ ಪ್ರಶಸ್ತಿ ಗಳಿಸಿದರೆಂದು ನೆನಪು.
ನನಗೆ ಕೆಲವು ಸಿನಿಮಾಗಳು ಬಹಳ ಇಷ್ಟ, ಅವುಗಳ ಚಿತ್ರನಾಟಕದ ಕಾರಣದಿಂದಾಗಿ.
ಇವುಗಳಲ್ಲಿ ಮೊದಲನೆಯದು ಕಟಿ ಪತಂಗ್. ರಾಜೇಶ್‍ಖನ್ನ, ಆಶಾಪಾರೇಖ್ ಚಿತ್ರ. ಶಕ್ತಿಸಾಮಂತ ಅವರ ಸಿನಿಮಾ.
ರಾಜೇಶ ಆಶಾಪಾರೇಖಳನ್ನು ನೋಡದೆಯೇ ಮದುವೆಯಾಗಲು ಬರುತ್ತಾನೆ. ಅವಳು ಅಂದೇ ರಾತ್ರಿ ತನ್ನ ಪ್ರೇಮಿ ಪ್ರೇಮ್‍ಛೋಪ್ರಾನನ್ನು ನೋಡಲು ಮದುವೆ ಮನೆಯಿಂದ ಓಡಿಬಿಡುತ್ತಾಳೆ. ಪ್ರೇಮ್ ಕೆಟ್ಟವನೆಂದು ಅರಿವಾಗಿ, ತನ್ನ ಚಿಕ್ಕಪ್ಪ ತನ್ನನ್ನು ಹುಡುಕುತ್ತಿರುವುದರ ಅರಿವಾಗಿ ರೈಲು ಹತ್ತುತ್ತಾಳೆ. ಅಲ್ಲಿ ಅವಳ ಗೆಳತಿ ಪೂನಂ ಸಿಗುತ್ತಾಳೆ. ಅವಳು ನೈನಿತಾಲ್‍ನ ಶ್ರೀಮಂತನ ಮಗನ ವಿಧವೆ. ಶ್ರೀಮಂತನ ಮಗ ತಂದೆಯಿಂದ ಬೇರೆಯಾಗಿ ಪೂನಂಳನ್ನು ಮದುವೆಯಾಗಿರುತ್ತಾನೆ. ಆದರೆ ಅವನು ಸತ್ತು ಹೋದಾಗ ಮಗುವಿನೊಂದಿಗೆ ಸೊಸೆಯನ್ನು ಮನೆಗೆ ಆಹ್ವಾನಿಸುತ್ತಾನೆ ಶ್ರೀಮಂತ. ಅವಳು ನೈನಿತಾಲ್‍ಗೆ ಹೋಗುವಾಗ ಪೂನಂ ರೈಲಿನಲ್ಲಿ ಸಿಗುತ್ತಾಳೆ. ತನ್ನ ಕಥೆ ಹೇಳುತ್ತಾಳೆ. ರೈಲು ಅಪಘಾತಕ್ಕೆ ತುತ್ತಾಗಿ ಆಶಾ ಮತ್ತು ಪೂನಂಳ ಮಗು ಉಳಿದುಕೊಳ್ಳುತ್ತಾರೆ. ಪೂನಂ ಆಶಾಳನ್ನು ತನ್ನ ಜಾಗವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿ ಸಾಯುತ್ತಾಳೆ. ಬಿಳಿ ಸೀರೆ ಉಟ್ಟ ಆಶಾ ಪೂನಂ ಆಗುತ್ತಾಳೆ. ರೈಲಿಳಿದು ಟ್ಯಾಕ್ಸಿಯಲ್ಲಿ ಹೋಗುವಾಗ ಕಳ್ಳನೊಬ್ಬ ಎದುರಾದಾಗ ರಾಜೇಶ್ ಬಂದು ಕಾಪಾಡುತ್ತಾನೆ. ಅವಳೇ ತನ್ನ ವಧುವಾಗಬೇಕಾದವಳು ಎಂದು ಅವನಿಗೆ ತಿಳಿಯದು. ಅವನ ಗೆಳೆಯ ಸತ್ತು ಹೋದ ಪೂನಂಳ ಗಂಡ. ಈಗ ಪೂನಂಳ (ಆಶಾ)ಮೇಲೆ ಇಷ್ಟವಾಗುತ್ತದೆ ರಾಜೇಶ್‍ಗೆ. ಅವನೇ ತನ್ನ ಗಂಡ ಆಗಬಹುದಾಗಿದ್ದವನು ಎಂದು ತಿಳಿಯದೇ ಆಶಾ ಅವನನ್ನು ಪ್ರೇಮಿಸುತ್ತಾಳೆ. ವಿಧವೆಯ ಮದುವೆ! ಎಲ್ಲರೂ ನಕಾರ ಸೂಚಿಸುವಾಗ ಪ್ರೇಮ್ ಮತ್ತೆ ಬಂದು ಆಶಾಳನ್ನು ಬೆದರಿಸುತ್ತಾನೆ. ನಂತರ ಸುಖಾಂತ. ಗುಲ್ಷನ್ ನಂದಾ ಅವರ ಈ ಕಾದಂಬರಿ ತರಂಗದಲ್ಲಿ ಧಾರಾವಾಹಿ ಕೂಡ ಆಗಿತ್ತು. ಮಧುರಾತಿಮಧುರ ಹಾಡುಗಳು. ಏ ಜೋ ಮೊಹಬ್ಬತ್ ಹೈ, ನಾ ಕೊಯೀ ಉಮಂಗ್ ಹೈ, ಏ ಶಾಮ್ ಮಸ್‍ತಾನೀ, ಜಿಸ್ ಗಲೀ ಮೆ ತೆರಾ ಘರ್ ನ ಹೋ ಬಾಲಮಾ, ಪ್ಯಾರ್ ದೀವಾನಾ ಹೋತಾಹೈ, ಖೇಲೇಂಗೆ ಹಮ್ ಹೋಲಿ ಮತ್ತು ಮೇರಾ ನಾಮ್ ಹೈ ಶಬ್ನಂ. ಚಿತ್ರಕಥೆ ಎಂದರೆ ಹೀಗಿರಬೇಕು ಎನ್ನಿಸದಿರದು ಚಿತ್ರ ನೋಡುವಾಗ.
ಶರ್ಮಿಲಾ ಟ್ಯಾಗೋರ್ ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಬೇಕಿತ್ತಂತೆ. ಈಗಾಗಲೇ ಶಕ್ತಿ ಸಾಮಂತ ಅವರ ಆರಾಧನಾ ಮತ್ತು ಅಮರ್‍ಪ್ರೇಂ ರಾಜೇಶ್ ಶರ್ಮಿಲಾ ಜೋಡಿಯಲ್ಲಿಯೇ ಬಂದು ಗೋಲ್ಡನ್ ಜ್ಯೂಬಿಲೀ ಆಚರಿಸಿದ್ದವು. ಶರ್ಮಿಲಾ ಬಿಳಿ ಸೀರೆ ಉಡಲು ನಿರಾಕರಿಸಿದ್ದಕ್ಕೆ ಆಶಾ ಪಾರೇಖಳ ಪಾಲಾಯಿತು ಕಟಿ ಪತಂಗ್ ಚಿತ್ರ ಎಂದು ಓದಿದ ನೆನಪು. ಅದೂ ಗೋಲ್ಡನ್ ಜ್ಯೂಬಿಲೀ ಚಿತ್ರ.
Comments
Post a Comment