ಯತಿ ಸ್ವಂತೀ -23


23-01-2018
ಈ ಅಮರ್‍ಪ್ರೇಮ್ ಸಿನಿಮಾ ಯಾಕೋ ನನ್ನನ್ನು ಕಾಡ್ತಾ ಇದೆ. ಮತ್ತೊಮ್ಮೆ ಮಗದೊಮ್ಮೆ ನೋಡಬೇಕೆನ್ನಿಸುತ್ತಿದೆ. ಅದು ಮೊದಲ ಸಲ ಬಂದಾಗ ನನಗೆ ಹದಿನಾಲ್ಕು ವರ್ಷ. ಕಿಶೋರಾವಸ್ಥೆಯಲ್ಲಿ ನನ್ನ ಮೇಲೆ ಈ ಸಿನಿಮಾ ಮಹಾನ್ ಪ್ರಭಾವ ಬೀರಿತು.
ಮತ್ತೆ ಅದೆಷ್ಟು ಸಲ ನೋಡಿರುವೆನೋ ನೆನಪಿಲ್ಲ. ನಾವು ರಾಜರಾಜೇಶ್ವರಿನಗರಕ್ಕೆ ಬಂದು ನೆಲೆಸಿದಾಗ ನನ್ನ ಮಕ್ಕಳು ಬಹಳ ಚಿಕ್ಕವರು. ಅಮರ್‍ಪ್ರೇಮ್ ಬಂದಿತ್ತು ಟಿ.ವಿ.ಯಲ್ಲಿ. ಕಣ್ಣೀರು ಸುರಿಸುತ್ತಾ ಒಂದಿಷ್ಟೂ ‘ಆನಂದಿ’ಸಲಾಗಲಿಲ್ಲ. ಮತ್ತೊಮ್ಮೆ ನಾನು, ನನ್ನ ಪತ್ನಿ ಇಬ್ಬರೇ ಮನೆಯಲ್ಲಿದ್ದಾಗ ಈ ಸಿನಿಮಾ ಮತ್ತೆ ಪ್ರಸಾರವಾಗಿತ್ತು. ಇಬ್ಬರೂ ಮೌನವಾಗಿ ನೋಡಿ ದುಃಖಿಸಿದ್ದೆವು. ಕೊನೆಯನ್ನು ನೋಡುವಾಗಲಂತೂ ನನ್ನ ಗಂಟಲು ಉಬ್ಬಿ ಬರುತ್ತದೆ, ಪ್ರತಿ ಸಲ, ವಿಥೌಟ್ ಫೆಯ್ಲ್.
ಹಳ್ಳಿಯ ಯುವತಿ. ದುಷ್ಟ ಪತಿ. ಮನೆಯಿಂದ ಓಡಿಸಿದಾಗ ಊರಿನ ಒಬ್ಬ ‘ದೊಡ್ಡ’ ಮನುಷ್ಯ ಅವಳನ್ನು ಕಲ್ಕತ್ತಾದ ವೇಶ್ಯಾವಾಟಿಕೆಗೆ ಸೇರಿಸಿಬಿಡುತ್ತಾನೆ. ಅಲ್ಲಿ ಅವಳು ಸಂಗೀತ ಕಲಿಯುತ್ತಾಳೆ. ಒಂದು ದಿನ ಅವಳ ಹಾಡು ಕೇಳಿ ಒಬ್ಬ ಶ್ರೀಮಂತ ಮಹಡಿ ಹತ್ತಿ ಬಂದಾಗ ಅವಳು ಹಾಡು ನಿಲ್ಲಿಸಿದಾಗ, ‘ಸುಮ್ಮನಾದೆಯೇಕೆ? ಹಾಡು’ ಎನ್ನುತ್ತಾನೆ. ‘ವಿರಹದಿಂದ ಪೆಟ್ಟು ತಿಂದ ಪ್ರೇಮದ ಹುಚ್ಚಿ, ತನು ಮನ ಬಾಯಾರಿದೆ, ಕಣ್ಣುಗಳಲ್ಲಿ ನೀರು’ ಎಂದು ಅವಳು ಹಾಡುವಾಗ ನನಗೆ ಇಂದು ಕೂಡ ಕಣ್ಣೀರು ತುಂಬಿಕೊಳ್ಳುತ್ತದೆ. ನಂತರ ರಾಜೇಶ್ ಖನ್ನನ ‘ರೋ ಮತ್ ಪುಷ್ಪಾ. ಐ ಹೇಟ್ ಟಿಯರ್ಸ್’ ನೆನಪಾಗುತ್ತದೆ.
ಶ್ರೀಮಂತ ಆನಂದ ಮತ್ತು ವೇಶ್ಯೆ ಪುಷ್ಪಾ ನಡುವೆ ಸಂಬಂಧ ಬೆಳೆಯುತ್ತದೆ. ಅವನು ಕೂಡ ಮನೆಯಲ್ಲಿರದೇ ಸದಾ ಪಾರ್ಟಿ ಎಂದು ಸುತ್ತುವ ಪತ್ನಿಯ ಪತಿ. ಇವರ ನಡುವೆ ಬರುವ ಮತ್ತೊಂದು ಪಾತ್ರ ನಂದೂ. ನಂದೂ ಪುಷ್ಪಾಳ ಮನೆಯ ಎದುರು ಮನೆಯ ಹುಡುಗ. ಅವನ ತಂದೆಯೂ, ಪುಷ್ಪಾಳೂ ಒಂದೇ ಊರಿನವರು. ನಂದುವಿಗೆ ಮಲತಾಯಿ ಇರುತ್ತಾಳೆ. ಈ ಹುಡುಗನನ್ನು ಗೋಳು ಹುಯ್ದುಕೊಳ್ಳುತ್ತಿರುತ್ತಾಳೆ. ಪುಷ್ಪಳೊಂದಿಗೆ ನಂದೂವಿನ ಅನುಬಂಧ ಉಂಟಾಗುತ್ತದೆ.
ಅವನನ್ನು ಲಾಲಿಸಿ, ಪಾಲಿಸುತ್ತಾಳೆ. ಅವನಿಗೆ ಜ್ವರ ಬಂದಾಗ ತಾನೇ ಚಿಕಿತ್ಸೆ ಕೊಡಿಸುತ್ತಾಳೆ. ರಾತ್ರಿರಾಣಿ ಹೂವಿನ ಗಿಡವೊಂದನ್ನು ನಂದೂ ಅವಳ ಮನೆಯ ಅಂಗಳದಲ್ಲಿ ನೆಟ್ಟು ನೋಡಿಕೋ ಎಂದಿರುತ್ತಾನೆ. ಒಂದು ದಿನ ನಂದೂ ಬೇರೆ ಊರಿಗೆ ಹೊರಟುಹೋಗುತ್ತಾನೆ...
ಅನೇಕ ವರ್ಷಗಳು ಕಳೆದಿವೆ. ನಂದೂ ಈಗ ಒಂದು ಮಗುವಿನ ತಂದೆ. ಆ ರಾತ್ರಿರಾಣಿಯ ಗಿಡ ಈಗ ದೊಡ್ಡದಾಗಿ ಬೆಳೆದಿರುತ್ತದೆ. ಪುಷ್ಪಾಳನ್ನು ಹುಡುಕುತ್ತಾನೆ. ಒಂದು ದಿನ ಒಂದು ಚಾಳ್‍ನಲ್ಲಿ ಅವಳು ಪಾತ್ರೆ ತೊಳೆಯುವುದು ಕಾಣಿಸುತ್ತದೆ. ಯಾದೃಚ್ಛಿಕವಾಗಿ ಆನಂದ್ ಕೂಡ ಅಲ್ಲಿಗೆ ಬರುತ್ತಾನೆ. ಇಬ್ಬರಿಗೂ ಈಗ ವಯಸ್ಸಾಗಿಬಿಟ್ಟಿರುತ್ತದೆ.
ಪುಷ್ಪಳನ್ನು ಅಲ್ಲಿರುವ ಜನ ಛೀ, ಥೂ... ಮಾಡುತ್ತಿರುವಾಗ ‘ಕರೆದೊಯ್ಯಿ ಅವಳನ್ನು ನಿನ್ನ ಮನೆಗೆ. ಅವಳ ಮಮತೆಯ ಋಣ ತೀರಿಸುವ ಸಮಯ ಬಂದಿದೆ’ ಎನ್ನುತ್ತಾನೆ ಆನಂದ್ ನಂದೂಗೆ. ನಂದೂ, ಪುಷ್ಪಾ ಗಾಡಿಯಲ್ಲಿ ಹೊರಡುತ್ತಾರೆ. ಇದೇ ಅಮರ ಪ್ರೇಮ ಎಂಬ ಶೀರ್ಷಿಕೆ ಬರುತ್ತದೆ.
ಅಬ್ಬಾ, ಎಂತಹ ಅದ್ಭುತ ನಟನೆ ರಾಜೇಶ್ ಖನ್ನ, ಶರ್ಮಿಳಾ ಟಾಗೋರ್ ಮತ್ತು ವಿನೋದ್ ಮೆಹ್ರಾದು. ಹಾಡುಗಳಂತೂ ಅಮೋಘ.
ಪ್ರಭಾವಚಿತ್ರ ಎಂಬ ಶೀರ್ಷಿಕೆಯಡಿಯಲ್ಲಿ ವಿಶ್ವವಾಣಿಯಲ್ಲಿ ಬರೆದಿದ್ದೆ ಈ ಚಿತ್ರದ ಬಗ್ಗೆ.
ಆ ಸಮಯದಲ್ಲಿ (1969-72)ರಾಜೇಶ್ ಮುಟ್ಟಿದ್ದೆಲ್ಲಾ ಚಿನ್ನ. ಅವನ ಹದಿನೈದು ಚಿತ್ರಗಳು ಒಂದಾದ ಮೇಲೊಂದು ಸೂಪರ್ ಹಿಟ್ ಆಗಿದ್ದವು. ಈ ದಿನ ಕೂಡ ಆ ದಾಖಲೆ ಯಾರೂ ಮುರಿಯಲಾಗಿಲ್ಲ. ಅಮರ್‍ಪ್ರೇಮ್ ಹೆಚ್ಚು ಕಡಿಮೆ ರಾತ್ರಿಯೇ ಚಿತ್ರೀಕರಣ ಆಗಿದೆ. ಏಕೆಂದರೆ ರಾಜೇಶ್‍ಗೆ ಇದನ್ನು ಬಿಡಲು ಇಷ್ಟವಿರಲಿಲ್ಲ. ಆದರೆ ಬಹಳ ಬ್ಯುಸಿ ಬೆಳಗ್ಗೆಗಳು ಬೇರೆ ಸಿನಿಮಾಗಳಲ್ಲಿ. ಕಲ್ಕತ್ತಾದ ಹೌರಾ ಸೇತುವೆ ಕೆಳಗೆ ಹೂಗ್ಲಿ ನದಿಯಲ್ಲಿ ಚಿಂಗಾರಿ ಕೊಯೀ ಬಢಕೇ ಚಿತ್ರೀಕರಣಕ್ಕೆ ಹೋಗಲು ಅವನಿಗೆ ಸಾಧ್ಯ ಆಗಲಿಲ್ಲ. ಅದಕ್ಕೇ ಮುಂಬೈನ ಪೊವಾಯ್ ಲೇಕ್‍ನಲ್ಲಿ ಬ್ರಿಡ್ಜ್ ಒಂದನ್ನು ಸ್ಥಾಪಿಸಿ ಅಲ್ಲಿ ಚಿತ್ರೀಕರಣ ನಡೆಸಲಾಯಿತು. ಈಗಿನ ಕಾಲವಾಗಿದ್ದರೆ ಗ್ರಾಫಿಕ್ಸ್‍ನಲ್ಲಿ ಹೌರಾ ಬ್ರಿಡ್ಜೇ ಮುಂಬೈಯಲ್ಲಿ ಇರಬಹುದಿತ್ತು!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102