ಯತಿ ಸ್ವಂತೀ -22
22-1-2018
ತೋಟದಿ ಹೂಗಳು ಅರಳುವ ಮುನ್ನ, ನನ್ನ ನಿನ್ನ ಕಂಗಳ ಮಿಲನದ ಮುನ್ನ ಎಲ್ಲಿ ಇಂಥ ಮಾತು, ಇಂಥ ಭೇಟಿ, ಇಂಥ ರಾತ್ರಿಗಳು...
ಅಬ್ಬಾ... ಈ ಚಿತ್ರ ಗೀತೆಯನ್ನು ನಾನು ಕೇಳುತ್ತಿರುವುದು ಎಷ್ಟು ಸಾವಿರದ ಸಲವೋ..! ಆದರೂ ನನ್ನ ಮನಸ್ಸಿನ್ನೂ ತಣಿದಿಲ್ಲ. ಕೇಳುತ್ತಲೇ ಇರಬೇಕೆನ್ನಿಸುವಂತಹ ಹಾಡು.
ಗೊತ್ತಾಗಲಿಲ್ವಾ? ನಾನು ಕನ್ನಡದಲ್ಲಿ ಭಾವಾನುವಾದ ಮಾಡಿದ ಹಿಂದೀ ಹಾಡಿದು. 1969ರ ಸಿನಿಮಾ.
‘ಬಾಗೋಮೆ ಫೂಲೋಂಕೆ ಖಿಲ್‍ನೆಸೆ ಪೆಹಲೆ, ತೆರೆ ಮೆರೆ ನೈನೋಂಕೆ ಮಿಲ್‍ನೆಸೆ ಪೆಹಲೆ, ಕಹಾಂಕಿ ಎ ಬಾತೇ ಮುಲಾಕಾತೇ ಐಸೀ ರಾತೇ...’ ಓದಿದಾಗ ಹಾಡಾವುದೆಂಬುದರ ಸುಳಿವು ಸಿಕ್ಕಿತಾ?
ಉಹೂಂ? ಹೌದು... ಖಾಲಿ ಕಾಗದ ಈ ಮನ ನನ್ನ, ಬರೆದೆ ನೀನು ಹೆಸರ ಅದರಲಿ ನಿನ್ನ... ಕೋರಾ ಕಾಗಝ್ ಥಾ ಎ ಮನ್ ಮೇರಾ ಲಿಖ್ ಲಿಯಾ ನಾಂ ಇಸ್ ಪೇ ತೇರಾ...
ಆರಾಧನಾ ಚಿತ್ರದ ಎಸ್‍ಡಿ ಬರ್ಮನ್ ಸಂಗೀತದ ಲತಾ ಕಿಶೋರ್ ಸ್ವರದ ಸುಂದರ ಕಾಶ್ಮೀರದ ಚಿತ್ರಣವಿರುವ ಸ್ಟೈಲಿಶ್ ರಾಜೇಶ್ ಖನ್ನಾ, ಬಂಗಾಳದ ಸುಂದರಿ ಶರ್ಮಿಲಾ ಟಾಗೋರ್ ಅಭಿನಯದ ಹಾಡು.
ಈ ಹಾಡು ಪಹಾಡಿ ರಾಗದ ಮೇಲೆ ಆಧಾರಗೊಂಡಿದೆ ಎಂದು ಓದಿದೆ. ಇದೊಂದು ವಿಶಿಷ್ಟ ರಾಗ. ಜ್ಯೂಯೆಲ್ ಥೀಫ್ ಚಿತ್ರದಲ್ಲಿ ಕೂಡ ಒಂದು ಪಹಾಡಿ ರಾಗದ ಹಾಡಿದೆ. ಇದರಲ್ಲಿಯೂ ಎಸ್‍ಡಿ ಬರ್ಮನ್ ಮತ್ತು ಲತಾ ಇದ್ದಾರೆ. ಆದರೆ ಗಂಡು ಧ್ವನಿ ಮಹಮ್ಮದ್ ರಫಿಯದು.
ದಿಲ್ ಪುಕಾರೆ ಆರೆ ಆರೆ ಆರೆ ಅಭಿ ನ ಜಾ ಮೆರೆ ಸಾಥಿ ಎಂದು ಆರಂಭವಾಗುವ ಹಾಡು ... ಇದು ಕೂಡ ಮಾಧುರ್ಯದ ಅಪರಾವತಾರದ ಹಾಡು. ಮೆಹಬೂಬಾ ಚಿತ್ರದಲ್ಲಿ ‘ಪರ್ಬತ್ ಕೆ ಪೀಛೇ... ಚಂಬೇ ದಾ ಗಾಂವ್... ಗಾಂವ್ ಮೆ ದೋ ಪ್ರೇಮೀ ರಹತೇ ಹೈ’ ಲತಾ ಕಿಶೋರ್ ಗಾಯನದ ಆರ್‍ಡಿ ಬರ್ಮನ್ ಸಂಗೀತದ ಪಹಾಡಿ ರಾಗದ ಹಾಡು. ಇನ್ನೂ ಬಹಳ ಹಾಡುಗಳಿವೆ. ಆದರೆ ಇವು ಮೂರು ನನ್ನ ಬಲು ಇಷ್ಟದ ಹಾಡುಗಳು.
ಬರುತ್ತದೋ ಬಿಡುತ್ತದೋ ಜೊತೆಯಲ್ಲಿ ಹಾಡಲು ಪ್ರಯತ್ನಿಸುತ್ತೇನೆ.
ಕೋರಾ ಕಾಗಝ್ ಥಾ ... ಹಾಡಿನಲ್ಲಿ ಕಿಶೋರನ ಏಹೇ ಆಹಾ ಎನ್ನುವ ಹಮ್ಮಿಂಗ್ ಈ ಪ್ರಪಂಚದ್ದಲ್ಲವೇ ಅಲ್ಲ. ಎಲ್ಲಿನದೋ ದೇವ ಸಂಗೀತದಂತಿದೆ.
ಚಿತ್ರವನ್ನು ನೋಡಿದಾಗ ನನಗೆ ಹನ್ನೆರಡು ವರ್ಷಗಳು. ಮತ್ತೊಮ್ಮೆ ಯಾವಾಗಲೋ 1970ರ ದಶಕದಲ್ಲಿ ಸಾಗರ್ ಥಿಯೇಟರಿಗೆ ಒಬ್ಬನೇ ಮಾರ್ನಿಂಗ್ ಷೋ ಹೋದ ನೆನಪಿದೆ.
ಬಹಳ ವಿಷಯಗಳಲ್ಲಿ ಟಾಪ್ ಕ್ಲಾಸ್ ಸಿನಿಮಾ. ಇನ್ನೂ ಅದ್ಭುತವಾದ ನಾಲ್ಕೈದು ಹಾಡುಗಳೂ ಇವೆ.
ಆರಾಧನಾ ಚಿತ್ರವನ್ನು ನನ್ನ ಮಗ ಅವನ ಒಂಬತ್ತನೆಯ ವಯಸ್ಸಿನಲ್ಲಿ ಟಿವಿಯಲ್ಲಿ ನೋಡಿದ್ದ. ಶರ್ಮಿಲಾ ಜೈಲಿನ ಕೊಠಡಿಗೆ ಬಂದು ಕಿಟಕಿಯ ಪರದೆಯನ್ನು ಸರಿಸಿದಾಗ ಫ್ಲ್ಯಾಷ್‍ಬ್ಯಾಕ್‍ಗೆ ಹೋಗುತ್ತಾಳೆ. ಮೆರೆ ಸಪನೋಂಕಿ ರಾನಿ ಕಬ್ ಆಯೇಗೀ ತೂ ಶುರುವಾಗುತ್ತದೆ. ಪ್ರತಿಸಲ ಹಾಡು ಬಂದಾಗಲೂ ಕೆಲವು ವರ್ಷಗಳ ಕಾಲ ‘ಅಪ್ಪಾ, ಫ್ಲ್ಯಾಷ್‍ಬ್ಯಾಕ್ ಶುರು ಮ್ಯೂಸಿಕ್ ಇದು’ ಎನ್ನುತ್ತಿದ್ದ.
ಅವನು ಕೋರಾ ಕಾಗಝ್ ಥಾ ಎ ಮನ್ ಮೇರಾ ಹಾಡನ್ನು ಮೊದಲ ಸಲ ಅವನ ಒಂಬತ್ತನೇ ವಯಸ್ಸಿನಲ್ಲಿ ಕೇಳಿದಾಗ ‘ಅಪ್ಪಾ ಎಷ್ಟು ಮೆಲೋಡಿಯಸ್ ಆಗಿದೆ ಅಲ್ವಾಪ್ಪಾ ಈ ಹಾಡು!’ ಎಂದಿದ್ದ.
ಅದು ಆ ಹಾಡಿನ ಪವರ್!
Comments
Post a Comment