ಯತಿ ಸ್ವಂತೀ -21
21-1-2018
ಬರೆಯಲು ನೂರಾರು ವಿಷಯಗಳಿದ್ದರೂ ಏನು ಬರೆಯಲಿ ಎಂದು ಪರಪರ ತಲೆ ಕೆರೆದುಕೊಳ್ಳುವುದು ಇದ್ದೇ ಇದೆ.
ನನ್ನ ಮೊದಲ ನಾಲ್ಕು ವರ್ಷಗಳ ವಿದ್ಯಾಭ್ಯಾಸ ಮನೆಯಿಂದ ಎರಡು ಫರ್ಲಾಂಗ್ ದೂರದ ಸರ್ಕಾರಿ ಶಾಲೆಯಲ್ಲಾಯಿತು. ಅಲ್ಲಿ ಹುಡುಗರು ಮತ್ತು ಹುಡುಗಿಯರು ಇಬ್ಬರಿಗೂ ಶಿಕ್ಷಣ ಪಡೆಯಲು ಅವಕಾಶವಿತ್ತು.
ನಮ್ಮ ಮನೆಯ ಜೋಡಿ ಮನೆ ಬಷೀರುಲ್ಲಾಖಾನ್ ಅವರದು. ಅವರ ಮನೆಯ ಪಕ್ಕ ಒಂದು ಸೈಟ್ ಖಾಲಿ ಇತ್ತು. ಅದರಾಚೆಗೆ ಮತ್ತೊಂದು ಜೋಡಿ ಮನೆ. ಬೂಬಮ್ಮ ಅಂದರೆ ಬಷೀರುಲ್ಲಾ ಖಾನ್ ಹೆಂಡತಿ. ಅವರ ಹೆಸರು ಮಾಜೋಬೀ ಇರಬಹುದು ಎಂಬ ಅಸ್ಪಷ್ಟ ನೆನಪು. ನಾವು ಬೂಬಮ್ಮ ಎಂದೇ ಕರೆಯುತ್ತಿದ್ದೆವು.
ಹಿಂದೆ ಒಂದು ಕನ್ಸರ್ವೆನ್ಸಿ. ಅದನ್ನು ದಾಟಿದರೆ ಮತ್ತೊಂದು ಸಾಲು ಮನೆ. ಅದರಾಚೆ ಒಂದು ರಸ್ತೆ. ದೊಡ್ಡ ಮನೆಗಳ ಸಾಲು. ಅದೋ, ಅಲ್ಲಿ ಆ ಕೊನೆ ಮನೆಯ ಪಕ್ಕದಲ್ಲಿ ನಮ್ಮ ಶಾಲೆಯ ಕಾಂಪೌಂಡು. ನಮ್ಮ ಶಾಲೆಯ ಮುಂಭಾಗದಲ್ಲಿ ಒಂದಿಷ್ಟು ಖಾಲಿ ಜಾಗ. ಅದರಾಚೆಗೆ ರೈಲ್ವೇ ಕಂಬಿಗಳು. ನಮ್ಮ ಶಾಲೆಯ ಮುಂದೆಯೇ ಬೆಂಗಳೂರು ಮತ್ತು ಅರಸೀಕೆರೆಗಳಿಗೆ ರೈಲುಗಳು ಓಡಾಡುತ್ತಿದ್ದವು.
ಮೊದಲು ಸ್ಟೀಮ್ ಎಂಜಿನ್ ಇತ್ತು. ವೈಎಲ್, ವೈಡಿ ನೆನಪಿರುವ ಹೆಸರುಗಳು. ಜುಷ್ ಝುಕ್ ಜುಷ್ ಝುಕ್ ಎನ್ನುವ ಸಪ್ಪಳ ನಮಗೆ ಶಾಲೆಯಲ್ಲಿ ಕೂಡ ಕೇಳಿಸುತ್ತಿತ್ತು. ಹೆಂಚು ಹೊದೆಸಿದ ಉದ್ದದ ಕಟ್ಟಡ. ನೆಲಕ್ಕೆ ಕಡಪ ಕಲ್ಲು ಹಾಸಲ್ಪಟ್ಟಿತ್ತು.
ಹೆಡ್‍ಮೇಡಂ ನೆನಪಿದ್ದಾರೆ. ಜೊತೆಗೆ ಕೆ.ಎಸ್. ನಾಗಲಕ್ಷ್ಮಮ್ಮ ಕೂಡ ಸ್ವಲ್ಪ ಹೆಚ್ಚು ನೆನಪಿದ್ದಾರೆ. ಕೆ.ಎಸ್.ಎನ್. ಏಕೆ ಹೆಚ್ಚು ನೆನಪಿದ್ದಾರೆ ಎಂಬುದನ್ನು ಇನ್ನೊಮ್ಮೆ ಹೇಳುತ್ತೇನೆ.
ಹೆಡ್‍ಮೇಡಂ ಆಗಾಗ ನಮಗೆ ಪಾಠ ತಗೊಳ್ಳುತ್ತಿದ್ದರು. ನಮ್ಮ ಶಾಲೆಯ ಮೇಲ್ಛಾವಣಿ ಹೆಂಚು ಎಂದು ಹೇಳಿದ್ದೆನಲ್ಲ! ಒಂದೂವರೆಗೆ ನಮ್ಮ ಲಂಚ್ ಅವರ್. ನಮಗೆ ಆಗೆಲ್ಲ ವಾಚ್ ಕಟ್ಟಿಕೊಳ್ಳುವುದೇ ತಿಳಿದಿರಲಿಲ್ಲ! (1962-64). ದಿನವೂ ನಮ್ಮ ಶಾಲೆಯ ಬೆಲ್ ಹೊಡೆಯುವುದನ್ನು ಗಮನಿಸಿದ್ದೆವು. ಒಂದು ರೈಲು ಕಂಬಿಯ ತುಂಡು. ಅದರ ಪಕ್ಕ ಒಂದು ಕಬ್ಬಿಣದ ರಾಡ್ ಇರುತ್ತಿತ್ತು. ರಾಡ್‍ನಿಂದ ಕಂಬಿಯ ತುಂಡಿನ ಮೇಲೆ ಬಾರಿಸುತ್ತಿದ್ದ ನಮ್ಮ ಶಾಲೆಯ ಪೀವನ್. (ಪ್ಯೂನ್ ಅನ್ನೋದು ಆಂಗ್ಲಪದ ಅಂತ ತಿಳಿದಿದ್ದು ಕೆಲವು ವರ್ಷಗಳ ನಂತರ!)
ಹ್ಞಾಂ... ಬೆಲ್ ಹೊಡೆಯುವುದಕ್ಕೆ ಸರಿಯಾಗಿ ನಮ್ಮ ತರಗತಿಯ ಹೆಂಚಿನ ಸಂದಿನಿಂದ ಒಂದು ಸೂರ್ಯ ರಶ್ಮಿ ಒಳಗೆ ತೂರಿ ನಮ್ಮ ತರಗತಿಯ ನೆಲದ ಮೇಲೆ ಒಂದು ಕೋಳಿಮೊಟ್ಟೆಯನ್ನು ಸೃಷ್ಟಿಸುತ್ತಿತ್ತು. ಶಾಲೆಯ ಊಟದ ಬೆಲ್ ಹೊಡೆಯುವಾಗ ಆ ಮೊಟ್ಟೆ ಎಲ್ಲಿರುವುದೆಂದು ಗಮನಿಸಿ ಆ ಜಾಗದಲ್ಲಿ ಇಂಕ್ ಪೆನ್ನಿನಿಂದ ಒಂದು ಗುರುತು ಮಾಡಿದ್ದೆವು.
ಆವತ್ತು ಹೆಡ್‍ಮೇಡಂ ಕ್ಲಾಸು. ಲಂಚಿಗೆ ಮುಂಚಿನದು. ಹಸಿವೆ ಆಗ್ತಿದೆ. ಮೇಡಂ ಮಾತಾಡ್ತಾನೇ ಇದ್ದರು. ಗಂಟೆ ಹೊಡೆದಿಲ್ಲ. ಮೊಟ್ಟೆಯು ಇಂಕಿನ ಮಾರ್ಕ್ ಮೇಲೆ ಬಂದು ಮೆಲ್ಲನೆ ಮುಂದಕ್ಕೆ ಸರಿಯಲಾರಂಭಿಸಿದಾಗ ಹೆಚ್ಚು ಕಡಿಮೆ ಎಲ್ಲರೂ ಎದ್ದು ನಿಂತಿದ್ದೆವು.
ವಿಷಯ ಏನೆಂದು ಕೇಳಿ, ಅದು ಅರ್ಥವಾದಾಗ, ‘ಥೂ ಮುಂಡೇವಾ, ಅದೆಷ್ಟು ಜಾಣರೋ ನೀವು’ ಎಂದು ಬೈದರೋ, ಹೊಗಳಿದರೋ ತಿಳಿಯದು! ಗಂಟೆ ಹೊಡೆದ ಪೀವನ್ ಸ್ವಲ್ಪ ತಡವಾಗಿ.
ಮನೆಗೆ ಒಂದೇ ಓಟ ಓಡಿದೆವು.
Comments
Post a Comment