ಯತಿ ಸ್ವಂತೀ -20
20-1-2018
ಸ್ವಾಮಿ ವಿಶ್ವಪ್ರಿಯರು ಶ್ರೀ ವಿಷ್ಣು ಸಹಸ್ರನಾಮದ ಬಗ್ಗೆ ನೀಡಿರುವ ವ್ಯಾಖ್ಯಾನವು ಹತ್ತು ಸಿ.ಡಿ.ಗಳಲ್ಲಿದೆ. ಅಂದರೆ ಪ್ರತಿ ಸಿ.ಡಿ.ಯಲ್ಲಿ ನೂರು ನಾಮಗಳ ವಿಶ್ಲೇಷಣೆ.
ಬಹಳ ಸುಂದರವಾದ ನಿರೂಪಣೆ. ಅವರ ಸಟ್ಲ್ ಹ್ಯೂಮರ್ ಅಲ್ಲಲ್ಲಿ ಕಚಗುಳಿ ಇಡುತ್ತದೆ. ಒಟ್ಟಿನಲ್ಲಿ ಸಹಸ್ರನಾಮದ ಬಗ್ಗೆ ಒಂದು ಸಮಗ್ರ ಚಿತ್ರಣ ಎನ್ನಬಹುದೇನೋ..!
ಅವರು ಅದರಲ್ಲಿ ಹೇಳಿದ ಒಂದು ಸಂಗತಿ ನಾನಿನ್ನೂ ಮರೆತಿಲ್ಲ. ನಾನು ಅವನ್ನು ಕೇಳಿ ಬಹಳ ವರ್ಷಗಳಾಗಿವೆ. ಆದರೂ ಆ ಒಂದು ವಿಷಯ ಆಗಾಗ ನೆನಪಾಗುತ್ತದೆ.
ಅವರು ಕೈಗಳ ಬಗ್ಗೆ ವಿಶೇಷವಾದ ವಿವರಣೆ ನೀಡುತ್ತಾರೆ.
‘ನನ್ನ ಕೈಲಿ ನೋಡಕ್ಕಾಗೋಲ್ಲ’, ‘ನನ್ನ ಕೈಲಿ ನಡೆಯೋಕ್ಕಾಗಲ್ಲ’ ಎನ್ನುವ ಮಾತುಗಳನ್ನು ಅವರಲ್ಲಿ ಉದಾಹರಣೆಯಾಗಿ ನೀಡುತ್ತಾರೆ.
ಕೈಯಲ್ಲಿ ನೋಡುವುದೆಂದರೇನು? ಕೈಯಲ್ಲಿ ನಡೆಯುವುದೆಂದರೇನು? ಎನ್ನುವುದಕ್ಕೆ ಅದ್ಭುತ ವಿವರಣೆ ನೀಡಿದ್ದಾರೆ.
ನಮ್ಮ ಕೈಗಳನ್ನು ನಮ್ಮ ಎರಡನೆಯ ಕಣ್ಣುಗಳೆನ್ನಬಹುದಲ್ಲವಾ?
ಅತ್ಯಂತ ಕಡು ಕತ್ತಲೆಯಲ್ಲಿಯೂ ನಾವು ವಸ್ತುಗಳನ್ನು ಮುಟ್ಟಿ ‘ನೋಡಿ’ ಕಂಡುಹಿಡಿಯಬಲ್ಲೆವು! ಮುಟ್ಟಿ ನೋಡುವುದು ಅಲ್ಲವೇ?
ಭೈರಪ್ಪನವರ ಕಾದಂಬರಿಗಳಲ್ಲಿ ‘ಅವರ ಕೈಲಿ ಹೇಳಿ ಕಳಿಸುತ್ತೀನಿ’ ಎನ್ನುವ ಮಾತನ್ನು ಓದಿದ ನೆನಪು.
ಯಂಡಮೂರಿಯವರ ವ್ಯಕ್ತಿತ್ವ ವಿಕಾಸನದ ಪುಸ್ತಕದಲ್ಲಿ ಭಗವಂತ ತನ್ನ ಪತ್ನಿಯೊಂದಿಗೆ ಮಾತಾಡುವ ಒಂದು ಕಥೆ ಇದೆ.
‘ದೇವೀ, ಇದುವರೆಗೆ ನಾನು ಸೃಷ್ಟಿ ಮಾಡಿರದ ಒಂದು ಪ್ರಾಣಿಯನ್ನು ಸಿದ್ಧ ಮಾಡುತ್ತಿದ್ದೇನೆ. ಅದರ ಕೈ ಬೆರಳುಗಳು ಒಂದಕ್ಕೊಂದು ಅಂಟಿಕೊಂಡಿರುವುದಿಲ್ಲ’ ಎನ್ನುವ ಸಂಭಾಷಣೆ ಭಗವಂತನಿಂದ ಹೇಳಿಸುತ್ತಾರೆ.
ವಿಜ್ಞಾನಿಗಳು ಮನುಷ್ಯನ ಪ್ರತಿರೂಪವನ್ನು ಯಥಾವತ್ತಾಗಿ ಮಾಡಿದರೂ, ಈ ಕೈ ಬೆರಳುಗಳನ್ನು ಮಾತ್ರ ಶತ ಪ್ರತಿಶತ ನಕಲು ಮಾಡಲು ಸಾಧ್ಯವಾಗಿಲ್ಲವೇನೇ ಎಂದೆನಿಸುತ್ತದೆ ಸಿನಿಮಾಗಳಲ್ಲಿ, ವೀಡಿಯೋಗಳಲ್ಲಿ ತೋರಿಸುವ ರೋಬೋ(ಟ್)ಗಳನ್ನು ಕಂಡಾಗ.
ಪಾಣಿಗ್ರಹಣ ಎಂದರೆ ಕೈಯನ್ನು ಹಿಡಿಯುವುದು, ಇದು ಮದುವೆಗಳಲ್ಲಿ ಪತಿ ಪತ್ನಿ ನಡೆಸುವ ಒಂದು ಕ್ರಿಯೆ, ಒಬ್ಬರ ಕೈ ಒಬ್ಬರು ಹಿಡಿಯುವುದು.
ಬಾವಿಗೆ ಬಿದ್ದಿದ್ದವಳನ್ನು ಮೇಲೆತ್ತಿದಾಗ ಅವಳು ಯಯಾತಿ ಮಹಾರಾಜನಿಗೆ ಹೇಳಿದ್ದು, ‘ನೀನು ನನ್ನ ಬಲಗೈ ಹಿಡಿದಿದ್ದೀ. ಆದ್ದರಿಂದ ನೀನು ನನ್ನನ್ನು ಮದುವೆಯಾದಂತೆಯೇ’ ಎಂದು.
ಕೈ ಬರವಣಿಗೆಯನ್ನು ಹಸ್ತಪ್ರತಿ ಎನ್ನುತ್ತಿದ್ದರು. ಈಗ ಕಂಪ್ಯೂಟರ್‍ನಲ್ಲಿ ‘ಬರೆದರೂ’ ಅದು ಮುದ್ರಣಕ್ಕೆ ಹೋಗುವವರೆಗೂ ಹಸ್ತಪ್ರತಿಯೇ. ಹಸ್ತಾ ಎನ್ನುವ ನಕ್ಷತ್ರವಿದೆ.
ಗನ್ ಹಿಡಿದ ಕೈ ದೇಶವನ್ನು ಕಾಪಾಡುತ್ತದೆ. ಪೆನ್ ಹಿಡಿದ ಕೈ ಜನರಿಗೆ ಜ್ಞಾನವನ್ನು ನೀಡುತ್ತದೆ.
ಒಂದು ವಿಷಯವನ್ನು ಇನ್ನೊಬ್ಬರೂ ಇಷ್ಟ ಪಟ್ಟರೆ ಮಾಡುವ ಕೆಲಸ ಹೈಫೈ. ಅದು ಇಬ್ಬರು ತಮ್ಮಿಬ್ಬರ ಒಂದೊಂದು ಕೈಗಳನ್ನು ಮೇಲೆತ್ತಿ ತಟ್ಟುವ ಕೆಲಸ.
ಭಾಷೆ ನೀಡುವಾಗ ಮುಂದೆ ಬರುವುದು ಕೈ. ಒಗ್ಗಟ್ಟನ್ನು ಪ್ರತಿಬಿಂಬಿಸಲು ಎಲ್ಲರೂ ಅವರವರ ಕೈಗಳನ್ನು ಒಂದರ ಮೇಲೊಂದರಂತೆ ಜೋಡಿಸಿ ಪ್ರಮಾಣ ಮಾಡುತ್ತಾರೆ.
ನಾಯಿ ನನ್ನನ್ನು ಅಟ್ಟಿಸಿಕೊಂಡು ಬಂದರೆ, ನನಗೆ ಓಡಲಾಗದಿದ್ದರೆ, ನಾನು ರಕ್ಷಿಸಿಕೊಳ್ಳುವುದು ನನ್ನ ಕೈ ಬೆರಳುಗಳನ್ನು. ಅವು ನಾಯಿಯ ಬಾಯಿಗೆ ಸಿಗದಂತೆ ಎತ್ತಿ ಹಿಡಿದಿಟ್ಟುಕೊಳ್ಳುತ್ತೇನೆ. ನನ್ನ ಕೈಗಳು ನನಗೆ ಬಹಳ ಪ್ರೆಷಿಯಸ್.
Comments
Post a Comment