ಯತಿ ಸ್ವಂತೀ -19
19-1-2018
ನಾವು ಒಂದು ರೈಲು ನಿಲ್ದಾಣ ಎಂದುಕೊಂಡರೆ ನಮ್ಮ ಜೀವನದಲ್ಲಿ ಹಾದು ಹೋಗುವ ಪ್ರತಿಯೊಬ್ಬರನ್ನೂ ಒಂದು ರೈಲುಗಾಡಿ ಎಂದುಕೊಳ್ಳಬಹುದು. ಕೆಲವು ಗಾಡಿಗಳು ನಮ್ಮ ನಿಲ್ದಾಣದಲ್ಲಿ ಸ್ವಲ್ಪ ಹೆಚ್ಚು ಕಾಲ ನಿಲ್ಲುತ್ತವೆ. ಮತ್ತೆ ಕೆಲವು ಬಹುಬೇಗ ಹೊರಟುಹೋಗುತ್ತವೆ. ಬಹುಶಃ ನಮ್ಮದು ಪಾಸಿಂಗ್ ಸ್ಟೇಷನ್ ಇರಬಹುದು!
ನನ್ನ ಜೀವನದಲ್ಲಿ ನನ್ನ 20ನೇ ವರ್ಷದವರೆಗೂ ರೈಲು ಎನ್ನುವುದು ಹಾಸು ಹೊಕ್ಕಾಗಿತ್ತು. ಅದಲ್ಲೇ ರೈಲಿನ ಉದಾಹರಣೆಗಳು ಬಹಳ ಸಲ ನುಸುಳುತ್ತವೆ.
ಅರವತ್ತು ವರ್ಷಗಳನ್ನು ನುಂಗಿರುವ ಈ ದೇಹವನ್ನು ಒಂದು ಹಳೆಯ ರೈಲು ನಿಲ್ದಾಣವೆಂದು ಬಗೆದರೆ ಅಲ್ಲಿ ನಿಂತ, ನಿಲ್ಲದೇ ಹೊರಟುಹೋದ ರೈಲುಗಾಡಿಗಳಿಗೆ ಲೆಕ್ಕವಿಲ್ಲ.
ಗೆಳೆಯರು ಮತ್ತು ನೆಂಟರು ಇದರ ಮುಖ್ಯ ರೈಲುಗಳು. ಅಪರಿಚಿತರು ಕೂಡ ಉಂಟು. ಅನೇಕ ಅಪರಿಚಿತರು ಗೆಳೆಯರಾಗಿ ನಿಂತಂತೆ, ಅನೇಕ ಗೆಳೆಯರು ಗುರುತೇ ಇಲ್ಲವೇನೋ ಎಂಬಂತೆ ಹೊರಟುಹೋಗಿದ್ದಾರೆ.
ಆದರೆ ಒಂದು ಒಳ್ಳೆಯ ಪಾಠವನ್ನು ಎಲ್ಲರೂ ಸೇರಿ ನನಗೆ ಕಲಿಸಿದ್ದಾರೆ.
ಬಹಳವೇ ಎಮೋಷನಲ್ ಆಗಿದ್ದವನು ನಾನು. ಬರಬೇಕಾದವರು ಬರದಿರುವುದಿರಲಿ, ಅವರು ಕನಿಷ್ಠಪಕ್ಷ ದೂರವಾಣಿ ಕರೆ ಮಾಡದಿದ್ದರೆ ತಹತಹಿಸುತ್ತಿದ್ದ ಕಾಲವಿತ್ತು. ಈಗಂತೂ ವಾಟ್ಸ್ಯಾಪ್‍ನಲ್ಲಿ ಕೆಲವರ ಸಂದೇಶ ಬರದಿದ್ದರೆ, ಅವರು ನಮ್ಮ ಸಂದೇಶಗಳಿಗೆ ಏಕ ಪದದ ಉತ್ತರವನ್ನಾದರೂ ನೀಡದಿದ್ದರೂ ಪರದಾಡಿದ ಕಾಲವೂ ಇತ್ತು.
ಫೆಬ್ರವರಿ 14, 2016.
ಅಂದು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಕೆಂಪೇಗೌಡನಗರಕ್ಕೆ ಹೋದೆ. ಅಲ್ಲಿಗೆ ಬಂದಿದ್ದ ಶ್ರೀ ಜಮೀಲ್ ನನ್ನನ್ನು ಮಾತಾಡಿಸಿದರು. ‘ನಿಮ್ಮ ಉದಯವಾಣಿ ಜೋಶ್ ಧಾರಾವಾಹಿ ಚೆನ್ನಾಗಿದೆ’ ಎಂದರು. ನನಗೊಂದು ಪುಸ್ತಕ ಬರೆದುಕೊಡು ಎಂದರು.
ಯಾವುದೆಂದು ಕೇಳಿ ನನ್ನ ಮೈ ಬೆವರಿತು. ಭಗವದ್ಗೀತೆಯ ಬಗ್ಗೆ ಬರೆದುಕೊಡು ಎಂದಿದ್ದರು ಅವರು!
ಓದಿದ್ದುಂಟು. ಒಂದು ಪುಸ್ತಕವನ್ನು ತೆಲುಗಿನಿಂದ ಅನುವಾದಿಸಿದ್ದು ಕೂಡ ಉಂಟು.
ಆದರೆ ಅದರ ಬಗ್ಗೆ ಬರೆಯುವುದು! ಅಬ್ಬಾ... ಎರಡು ಮೂರು ದಿನಗಳ ಕಾಲ ಪರದಾಡಿದೆ. ಇವರಿಗೆ ಇಲ್ಲ ಎನ್ನುವುದು ಹೇಗೆ ಎನ್ನುವ ಒಂದು ತುಮುಲವಾದರೆ, ಬರೆಯುವುದೇ ಆದಲ್ಲಿ ಏನು ಬರೆಯಬೇಕು ಎನ್ನುವುದು ಮತ್ತೊಂದು ಸಮಸ್ಯೆ.
ಹಿಂದೊಮ್ಮೆ ನನ್ನ ಗುರು ಸಮಾನರಾದ ಡಾ. ಬಾಬು ಕೃಷ್ಣಮೂರ್ತಿಯವರು ‘ಮಲ್ಲಾರ’ ಮಾಸಿಕಕ್ಕೆ ತತ್ತ್ವದ ಬಗ್ಗೆ ಬರೆದು ಕೊಡು ಎಂದಾಗ ‘ನಾನಷ್ಟು ದೊಡ್ಡವನಲ್ಲ ಸರ್’ ಎಂದಿದ್ದೆ. ಆ ನಂತರ ನನ್ನ ‘ಮಾಸದ ದಾಸವಾಣಿ’ ಪುಸ್ತಕ ನೀಡಿದೆ. ಅದನ್ನೇ ಪ್ರಕಟಿಸಿದ್ದು ಅವರ ದೊಡ್ಡ ಗುಣ. ಅದರಲ್ಲಿ ನಾನು ಪುರಂದರ ದಾಸರ ದೇವರನಾಮಗಳು ಕೆಲವನ್ನು ಆರಿಸಿ, ನನ್ನದೇ ರೀತಿಯಲ್ಲಿ ಅದಕ್ಕೆ ವಿವರಣೆ ನೀಡಿದ್ದೆ.
ಈಗ ಅವರ ಪತ್ರಿಕೆಯಲ್ಲಿ ಶ್ರೀ ವಿಷ್ಣು ಸಹಸ್ರನಾಮದ ಬಗ್ಗೆ ಬರೆಯುತ್ತಿದ್ದೇನೆ. ಸಹಸ್ರನಾಮದಲ್ಲಿರುವ ನಾರಾಯಣನ ಗುಣಗಳಲ್ಲಿ ಮನುಷ್ಯರಿಗೂ ಅನ್ವಯವಾಗುವಂತಹ ಗುಣವಾಚಕಗಳನ್ನು ಆರಿಸಿ ಬರೆದಿರುವ ಲೇಖನಮಾಲೆ ಇದು.
ಹ್ಞಾಂ... ಈ ಗೀತೆ ಬಚ್ಚಿಟ್ಟಿದ್ದ ಬದುಕಿನ ಪಾಠಗಳು ಬರೆಯುವುದಕ್ಕಾಗಿ, ನಾನು ಕೇವಲ ಹದಿನೆಂಟು ಶ್ಲೋಕಗಳನ್ನು ಆರಿಸಿಕೊಂಡಿದ್ದರೂ (ಹದಿನೆಂಟೇ ಏಕೆ? ತಿಳಿಸಬಲ್ಲಿರಾ?) ಅವುಗಳ ಬಗ್ಗೆ ಬರೆಯಲು ಅನೇಕ ದಾರ್ಶನಿಕರ, ಲೇಖಕರ ಗೀತೆಯ ಭಾಷ್ಯಗಳನ್ನು ಓದಿದೆ.
ಇದರ ಪರಿಣಾಮ ನನ್ನ ಬದುಕಿನ ಮೇಲೂ ಆಯಿತು. ನನ್ನ ಸಿದ್ಧಾಂತವೀಗ ಬಹಳ ಸರಳ.
ಭೂತಕ್ಕೆ ವಿಷಾದ ಬೇಡ; ಭವಿಷ್ಯದ ಬಗ್ಗೆ ಆತಂಕ ಬೇಡ. ವರ್ತಮಾನ ನನ್ನದು. ಅದರಲ್ಲಿ ಬದುಕಿದರೆ ಯಾವುದೇ ದುಃಖವಿಲ್ಲ. ಭಗವಂತನ ವಾಣಿಯಾದ ಗೀತೆಯಲ್ಲಿನ ಸಾಂಖ್ಯಯೋಗವಾದ ಎರಡನೆ ಅಧ್ಯಾಯದ 56ನೇ ಶ್ಲೋಕವನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳಲು ನಿರಂತರ ಪ್ರಯತ್ನ ನಡೆಸಿದ್ದೇನೆ.
Comments
Post a Comment